ಭಾರತದವರಷ್ಟೇ ಅಲ್ಲ ನಾಸಾದ ಖಗೋಳ ಶಾಸ್ತ್ರಜ್ಞರಿಗೂ ಯಕ್ಷ ಪ್ರಶ್ನೆಯಾಗಿ ಕಾಡಿದ್ದ ಚಂದ್ರಯಾನ-2 ವಿಕ್ರಂ ಲ್ಯಾಂಡರ್ ನ ಅವಶೇಷಗಳನ್ನು ಭಾರತೀಯ ಹವ್ಯಾಸಿ ಖಗೋಳ ಶಾಸ್ತ್ರಜ್ಞ ಷಣ್ಮುಖ ಸುಬ್ರಮಣ್ಯನ್ ಪತ್ತೆ ಮಾಡಿದ್ದಾರೆ.
ಭಾರತದ ಬಹುನಿರೀಕ್ಷೆಯ ವಿಕ್ರಂ ಲ್ಯಾಂಡರ್ ಸಂಪರ್ಕ ತಪ್ಪಿ ಚಂದ್ರನಂಗಳದಲ್ಲಿ ಕಳೆದುಹೋಗಿತ್ತು. ಅದರ ಅವಶೇಷಗಳ ಪತ್ತೆಗೆ ಭಾರತ ಮತ್ತು ನಾಸಾದ ವಿಜ್ಞಾನಿಗಳು ಕಳೆದೆರಡು ತಿಂಗಳಿಂದ ಹಗಲಿರುಳೂ ಶ್ರಮಿಸುತ್ತಿದ್ದರು.
ಈ ಮಧ್ಯೆ, ನಾಸಾ ಕಳೆದ ಸೆಪ್ಟಂಬರ್ 26 ರಂದು ಚಂದ್ರನ ಚಿತ್ರವನ್ನು ಬಿಡುಗಡೆ ಮಾಡಿತ್ತು. ಈ ಚಿತ್ರವನ್ನು ಪಡೆದುಕೊಂಡ ತಮಿಳುನಾಡಿನ ಸುಬ್ರಮಣ್ಯನ್ ಅವರು ಅಂದಿನಿಂದ ಸಂಪರ್ಕ ಕಳೆದುಕೊಂಡಿದ್ದ ವಿಕ್ರಂ ಲ್ಯಾಂಡರ್ ನ ಇರುವಿಕೆಯ ಬಗ್ಗೆ ಅಧ್ಯಯನ ನಡೆಸಿದ್ದರು. ಹೀಗೆ ಅಧ್ಯಯನ ಮಾಡುವ ಸಂದರ್ಭದಲ್ಲಿ ಸುಬ್ರಮಣ್ಯನ್ ಅವರು ವಿಕ್ರಂ ಇರುವಿಕೆಯ ಕುರುಹನ್ನು ಪತ್ತೆ ಮಾಡಿದ್ದರು. ಅಕ್ಟೋಬರ್ 14 ಮತ್ತು ನವೆಂಬರ್ 11 ರಂದು ನಾಸಾ ಬಿಡುಗಡೆ ಮಾಡಿದ ಕೆಲವು ಚಿತ್ರಗಳಲ್ಲಿಯೂ ಸುಬ್ರಮಣ್ಯನ್ ವಿಕ್ರಂ ಅವಶೇಷಗಳನ್ನು ಗುರುತು ಮಾಡಿದ್ದರು.
ಈ ಖಗೋಳ ಶಾಸ್ತ್ರಜ್ಞ ಷಣ್ಮುಖ ಸುಬ್ರಮಣ್ಯನ್ ಅವರು ಅವಶೇಷಗಳನ್ನು ಪತ್ತೆ ಮಾಡಲು ಐದಾರು ರಾತ್ರಿಗಳ ಕಾಲ ಚಂದ್ರನ ಮೇಲೆ ಕಣ್ಣಿಟ್ಟಿದ್ದರು. ಅದೂ ಅಲ್ಲದೇ ಪ್ರತಿ ದಿನ ರಾತ್ರಿ ಸುಮಾರು ಏಳೆಂಟು ಗಂಟೆಗಳ ಕಾಲ ಅವರ ಕಣ್ಣು ಚಂದ್ರನ ಮೇಲೆಯೇ ಇತ್ತು.
ಹೀಗೆ ನಿರಂತರವಾಗಿ ಚಂದ್ರನ ಮೇಲೆ ಕಣ್ಣಿಟುತ್ತಾ ಬಂದಾಗ ಚಂದ್ರನ ಮೇಲ್ಮೈನ ಒಂದು ಭಾಗದಲ್ಲಿ ಕುತೂಹಲಕಾರಿ ವಸ್ತುವೊಂದು ಕಂಡಿದೆ. ಈ ಬಗ್ಗೆ ಕುತೂಹಲ ಮತ್ತು ಸಂದೇಹ ಉಂಟಾಗಿ ಇನ್ನೂ ಒಳಹೊಕ್ಕು ಹೋದಾಗ ಷಣ್ಮುಖ ಅವರಿಗೆ ವಸ್ತುವಿನ ಆಜುಬಾಜಿನಲ್ಲಿ ಇನ್ನೂ ಕೆಲವು ಚೂರುಗಳು ಕಾಣಿಸಿವೆ. ಈ ಬಗ್ಗೆ ಅಧ್ಯಯನ ನಡೆಸಿದ ಅವರಿಗೆ ಇದು ವಿಕ್ರಂ ಲ್ಯಾಂಡರ್ ನ ಅವಶೇಷ ಎಂಬುದು ಖಾತರಿಯಾಗಿದೆ.
ಸುಬ್ರಮಣ್ಯನ್ ಅವರು ಈ ಬಗ್ಗೆ ನಾಸಾ ವಿಜ್ಞಾನಿಗಳಿಗೆ ಸುಳಿವು ನೀಡಿದ ಆಧಾರದ ಮೇಲೆ ಮತ್ತಷ್ಟು ಅಧ್ಯಯನ ನಡೆಸಿದ ವಿಜ್ಞಾನಿಗಳು ಇದು ವಿಕ್ರಂನ ಅವಶೇಷ ಎಂಬುದನ್ನು ದೃಢಪಡಿಸಿದ್ದು, ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ನಾಸಾದ ವೆಬ್ ಸೈಟ್ ನಲ್ಲಿ ಹಾಕಿದ್ದಾರೆ.
ಚಂದ್ರನ ಮೇಲೆ ನೀಲಿ ಮತ್ತು ಹಸಿರು ಬಣ್ಣದ ಚುಕ್ಕೆಗಳನ್ನು ತೋರಿಸಲಾಗಿದೆ. ವಿಕ್ರಂ ಲ್ಯಾಂಡರ್ ಅವಶೇಷ ಬಿದ್ದುದರಿಂದ ಈ ಪರಿಣಾಮ ಉಂಟಾಗಿದೆ ಎಂದು ನಾಸಾ ತಿಳಿಸಿದೆ.