ಬೆಂಗಳೂರು: ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನಿ ನರೇಂದ್ರ ಮೋದಿ (PM Modi) ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (DK Shivakumar) ನಡುವಿನ ಆತ್ಮೀಯ ಮಾತುಕತೆ ತೀವ್ರ ಕುತೂಹಲ ಕೆರಳಿಸಿತ್ತು. ಈ ಕುರಿತು ಇಂದು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಪ್ರಧಾನಿ ಜೊತೆಗಿನ ತಮ್ಮ ಮಾತುಕತೆಯ ಸಂಪೂರ್ಣ ವಿವರಗಳನ್ನು ಹಂಚಿಕೊಂಡಿದ್ದಾರೆ.
ಅಭಿವೃದ್ಧಿ ವಿಚಾರದಲ್ಲಿ ರಾಜಕೀಯವಿಲ್ಲ
ಪ್ರಧಾನಿ ನರೇಂದ್ರ ಮೋದಿ ಅವರೊಂದಿಗಿನ ಆತ್ಮೀಯತೆಯ ಕುರಿತು ಮಾತನಾಡಿದ ಅವರು, ನಾವು ರಾಜಕೀಯ ಮಾಡುವಾಗ ಮಾತ್ರ ರಾಜಕೀಯ ಮಾಡುತ್ತೇವೆ. ಅಭಿವೃದ್ಧಿ ವಿಚಾರ ಬಂದಾಗ ನಾವಿಬ್ಬರೂ ಒಟ್ಟಾಗಿ ಕೆಲಸ ಮಾಡಬೇಕಾಗುತ್ತದೆ. ರಾಜಕಾರಣದಲ್ಲಿ ಪೈಪೋಟಿ ಇರುತ್ತದೆ, ಆದರೆ ಅಭಿವೃದ್ಧಿ ವಿಚಾರದಲ್ಲಿ ಕೇಂದ್ರದೊಂದಿಗೆ ಪರಸ್ಪರ ಸಹಕಾರ ನೀಡುತ್ತೇವೆ ಎಂದು ಸ್ಪಷ್ಟಪಡಿಸಿದ್ದಾರೆ.
ಮೇಕೆದಾಟು ಯೋಜನೆಗೆ ಸರ್ವಪಕ್ಷಗಳ ಬೆಂಬಲ
ರಾಜ್ಯದ ಬಹುಮುಖ್ಯ ಬೇಡಿಕೆಯಾದ ಮೇಕೆದಾಟು ಯೋಜನೆಯ ಕುರಿತು ಪ್ರಧಾನಿ ಬಳಿ ಪ್ರಸ್ತಾಪಿಸಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ. ಮೇಕೆದಾಟು ವಿಚಾರದಲ್ಲಿ ಸುಪ್ರೀಂ ಕೋರ್ಟ್ ಆದೇಶವಿದ್ದು, ನಮಗೆ ಕೇವಲ ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮತಿಯಷ್ಟೇ ಬಾಕಿ ಇದೆ. ಇದಕ್ಕಾಗಿ ಅಗತ್ಯವಿರುವ ಎಲ್ಲಾ ದಾಖಲೆಗಳನ್ನು ಕೇಂದ್ರಕ್ಕೆ ಕಳುಹಿಸಲಾಗುತ್ತಿದೆ. ಈ ವಿಚಾರವಾಗಿ ಚರ್ಚಿಸಲು ರಾಜ್ಯದ ಎಲ್ಲಾ ಪಕ್ಷದ ಮುಖಂಡರು ಒಟ್ಟಾಗಿ ತೆರಳಲು ಒಪ್ಪಿಕೊಂಡಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಬೆಂಗಳೂರು ಅಭಿವೃದ್ಧಿಗೆ ಸಂಬಂಧಿಸಿದಂತೆ ಮೆಟ್ರೋ ಯೋಜನೆಯಲ್ಲಿ ರಾಜ್ಯಕ್ಕೆ ಸಮಾನ ಪಾಲು (ಈಕ್ವಲ್ ಶೇರ್) ಸಿಗಬೇಕು ಎಂದು ಪ್ರಧಾನಿಗಳಿಗೆ ಒತ್ತಾಯಿಸಲಾಗಿದೆ. ಇದಕ್ಕಾಗಿ ತಾಂತ್ರಿಕ ಸಮಿತಿಯೊಂದನ್ನು ರಚಿಸುವಂತೆ ಹಾಗೂ ಮೆಟ್ರೋ ಪಿಂಕ್ ಲೈನ್ ಅನ್ನು ಇನ್ನಷ್ಟು ವಿಸ್ತರಿಸುವ ಬಗ್ಗೆಯೂ ಚರ್ಚಿಸಲಾಗಿದೆ. ಇದಲ್ಲದೆ ಡಬಲ್ ಡೆಕ್ಕರ್ ಫ್ಲೈಓವರ್ ನಿರ್ಮಾಣಕ್ಕೆ ಮೊದಲಿದ್ದ ವಿರೋಧಗಳ ಬಗ್ಗೆ ಸಚಿವ ಕೃಷ್ಣ ಬೈರೇಗೌಡ ಅವರ ಜೊತೆಗೂಡಿ ಖುದ್ದಾಗಿ ಪ್ರಧಾನಿಯವರಿಗೆ ವಾಸ್ತವ ಸ್ಥಿತಿಯನ್ನು ವಿವರಿಸಲಾಗಿದೆ ಎಂದು ಮುಖ್ಯಮಂತ್ರಿಗಳು ಸ್ಪಷ್ಟಪಡಿಸಿದ್ದಾರೆ.
ಆನ್ಲೈನ್ ಶಾಪಿಂಗ್ ಮಾಡುವಾಗ ಎಚ್ಚರ : ಗ್ರಾಹಕರನ್ನು ವಂಚಿಸುವ 8 ತಂತ್ರಗಳಿವು; ಖರೀದಿಗೂ ಮುನ್ನ ತಿಳಿದುಕೊಳ್ಳಿ






