• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, November 5, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home Top Story

ಬುದ್ಧ ಬೇಕು ! ಏಕೆ-ಹೇಗೆ-ಯಾರಿಗೆ ? 

ಶಾಂತಿ ಸಹನೆ ಸಂಯಮ ನಿಶ್ಶೇಷವಾಗುತ್ತಿರುವ ಕಾಲಘಟ್ಟದಲ್ಲಿ ಬುದ್ಧನ ಕೂರಿಸುವುದೆಲ್ಲಿ ?

ಪ್ರತಿಧ್ವನಿ by ಪ್ರತಿಧ್ವನಿ
October 26, 2026
in Top Story, ವಿಶೇಷ
0
We need the Buddha! Why—how—for whom?
Share on WhatsAppShare on FacebookShare on Telegram
ADVERTISEMENT

ನಾ ದಿವಾಕರ

ಭಾಗ 1

ʼಎಲ್ಲರಿಗೂ ಬೇಕಾಗಿ ಯಾರಿಗೂ ಬೇಡವಾಗುವ ʼ ಒಂದು ವಿಲಕ್ಷಣ ಸ್ಥಿತಿ ಅಸಂಗತ ಎನಿಸಿದರೂ ಸಮಕಾಲೀನ ಭಾರತೀಯ ಸಮಾಜದಲ್ಲಿ ಇದು ಪದೇಪದೇ ಮರುಕಳಿಸುವ ವಿದ್ಯಮಾನ. ಈ ವಿಲಕ್ಷಣ ಸ್ಥಿತಿಗೆ ಒಳಗಾದವರನ್ನು ಹುಡುಕುತ್ತಾ ಹೋದಾಗ ನಮಗೆ ಮುಖ್ಯವಾಗಿ ಕಾಣಿಸುವುದು ಆಧುನಿಕ ಯುಗದ ಗಾಂಧಿ ಮತ್ತು ಅಂಬೇಡ್ಕರ್. ಮಧ್ಯಕಾಲೀನ ಯುಗದ ಬಸವ ಮತ್ತು ಕ್ರಿಸ್ತಪೂರ್ವ ಯುಗದ ಬುದ್ಧ. ಇತ್ತೀಚಿನ ಸಾಹಿತ್ಯದಲ್ಲಿ ಗೌತಮ ಬುದ್ಧನನ್ನು ʼ ಬುದ್ಧರು ʼ ಎಂದು ಸಂಬೋಧಿಸುವುದು ಸಾಮಾನ್ಯ. ಬಹುಶಃ ಆಚಾರ್ಯತ್ರಯರಿಗೆ ಬಳಸುವ ಬಹುವಚನ ಸೂಚಕವನ್ನೇ ಬುದ್ಧನಿಗೂ ಬಳಸುವ ಇಂಗಿತ ಇರಬಹುದು. ಇಲ್ಲವಾದರೆ ʼ ಬುದ್ಧರು ʼ ಎನ್ನುವುದು ಹಲವು ಬುದ್ಧರನ್ನು (Many Buddhas) ಸೂಚಿಸುವ ಪದಬಳಕೆಯಾಗುತ್ತದೆ. (ಈ ವಾದ ಅಪ್ರಸ್ತುತ ವ್ಯಾಕರಣ ಪಂಡಿತರಿಗೆ ಬಿಟ್ಟಿದ್ದು)

ಆದರೆಭಾರತೀಯ ಸಮಾಜವನ್ನು ಭೌತವಾದದ (Materialişm) ದೃಷ್ಟಿಯಿಂದ ನೋಡಿದ , ಸಮ ಸಮಾಜದ ಕಲ್ಪನೆಯನ್ನು ಸಾರ್ವತ್ರೀಕರಿಸಿದ (Universalise) ಮೊದಲ ದಾರ್ಶನಿಕನಾಗಿ ಬುದ್ಧ , ಡಿಜಿಟಲ್ ಯುಗದಲ್ಲಿ ನಮಗೆ ಹೇಗೆ ಕಾಣಬೇಕು ಎಂಬ ಪ್ರಶ್ನೆ ಕಾಡಲೇಬೇಕು. ಕಳೆದ ಎರಡು-ಮೂರು ದಶಕಗಳಲ್ಲಿ ಬುದ್ಧ ಭಾರತದ ಸಾಮಾಜಿಕ ಸಂಕಥನಗಳಲ್ಲಿ ಪ್ರಧಾನ ಸ್ಥಾನ ಪಡೆದಿರುವುದನ್ನು ಗಮನಿಸಬೇಕು. ದಲಿತ ಚಳುವಳಿಗಳ ನಡುವೆ ಅಂಬೇಡ್ಕರ್ ಅವರ ಸಾಹಿತ್ಯದ ಪ್ರಸರಣ ಆಳವಾದಷ್ಟೂ ʼ ಬುದ್ಧ ಪ್ರಜ್ಞೆ ʼ ದಲಿತರ ನಡುವೆ ಹೆಚ್ಚು ಚಾಲ್ತಿಯಲ್ಲಿರುವ ಪರಿಕಲ್ಪನೆಯಾಗಿ ಕಾಣುತ್ತಿದೆ. ಈ ʼ ಬುದ್ಧ ಪ್ರಜ್ಞೆ ʼ ಎಂದರೆ ಏನು ? ಬುದ್ಧನ ಭೋದನೆಗಳನ್ನು ಜೀವನದಲ್ಲಿ ಪ್ರಜ್ಞಾಪೂರ್ವಕವಾಗಿ ಅಳವಡಿಸಿಕೊಂಡು ವ್ಯಕ್ತಿಗತ ಆಲೋಚನೆಗಳ ಮೂಲಕ ವ್ಯಕ್ತಪಡಿಸುವ ಸ್ವಂತ ಚಿಂತನೆಗಳೋ ? ಅಥವಾ 2500 ವರ್ಷಗಳ ಮುನ್ನ ಬುದ್ಧ ತನ್ನ ಶಿಷ್ಯರ ಮುಖಾಂತರ ವಿಶಾಲ ಜಗತ್ತಿಗೆ ತಲುಪಿಸಿದ ಚಿಂತನೆಗಳೋ ?

ಸಾರ್ವಜನಿಕ ಪ್ರಜ್ಞೆಯಾಗಿ ಬುದ್ಧ

ಈ ಜಿಜ್ಞಾಸೆಯೊಂದಿಗೇ ಗಮನಿಸಬಹುದಾದ ಮತ್ತೊಂದು ಬೆಳವಣಿಗೆ ಎಂದರೆ ಬುದ್ಧ ಈಗ ಕೇವಲ ಅಂಬೇಡ್ಕರ್ವಾದಿ ಚಳುವಳಿಗಳನ್ನು ಅಲಂಕರಿಸುವುದಿಲ್ಲ. ತಮ್ಮ ವಿದೇಶ ಪ್ರವಾಸಗಳ ಸಂದರ್ಭದಲ್ಲಿ ಪ್ರಧಾನಮಂತ್ರಿಗಳೂ ʼ ಭಾರತ ಬುದ್ಧನ ನಾಡು ʼ ಎಂದು ಘೋಷಿಸುವ ಮೂಲಕ ವಿಶ್ವ ಶಾಂತಿಯ ಸಂದೇಶ ರವಾನಿಸುತ್ತಾರೆ. ಭಾರತದ ಪ್ರಜಾಪ್ರಭುತ್ವವನ್ನು ನಿಯಂತ್ರಿಸುವ ಚುನಾಯಿತ ಸರ್ಕಾರಗಳಿಗೆ ಬುದ್ಧ ಏಕೆ ಬೇಕು ? “ ನಮ್ಮ ಸರ್ಕಾರ ಶಾಂತಿ ಬಯಸುತ್ತದೆ ” ಎಂಬ ಸಂದೇಶವನ್ನು ರವಾನಿಸುವ ಸಲುವಾಗಿ. ಆದರೆ ʼ ಶಾಂತಿ ʼ ಎಂಬ ಉದಾತ್ತ ಕಲ್ಪನೆ ʼ ಯುದ್ಧ ʼ ಎಂಬ ಕ್ರೌರ್ಯಕ್ಕೆ ಪ್ರತಿ ಸಂವಾದಿ ಅಲ್ಲ. “ ಯುದ್ಧ ಬೇಡ ಶಾಂತಿ ಬೇಕು ” ಎನ್ನುವುದು ಕೇವಲ ಘೋಷಣೆಯಷ್ಟೆ. ಸಮಾಜದ ಎಲ್ಲ ಸ್ತರಗಳಲ್ಲೂ, ಎಲ್ಲ ಮಗ್ಗುಲುಗಳಲ್ಲೂ ʼ ಶಾಂತಿ ʼ ಅಗತ್ಯ. ಅಂದರೆ ಸಾಮಾಜಿಕ ಸ್ವಾಸ್ಥ್ಯ ಕಾಪಾಡುವಂತಹ ಸಹಬಾಳ್ವೆಯ ಮನಸ್ಥಿತಿ ಇರಬೇಕು.

ಆದರೆ ಸರ್ಕಾರಗಳ ದೃಷ್ಟಿಯಲ್ಲಿ ಶಾಂತಿ ಕಾಪಾಡುವ ಜವಾಬ್ದಾರಿ ಇರುವುದು ಜನತೆಯ ಮೇಲೆ. ಶಾಂತಿಯುತ ಪ್ರತಿಭಟನೆ ಸರ್ಕಾರಗಳ ಕಾನೂನಾತ್ಮಕ ಅಪೇಕ್ಷೆಯಾಗಿರುತ್ತದೆ. ಆದರೆ ಪ್ರತಿರೋಧವನ್ನು ಹತ್ತಿಕ್ಕುವ ಹೊತ್ತಿನಲ್ಲಿ, ವಯೋಮಾನ-ಲಿಂಗತ್ವ ಭೇದವಿಲ್ಲದೆ ತಮ್ಮ ಅಸಹನೆ ಮತ್ತು ಕ್ರೌರ್ಯವನ್ನು ಪ್ರದರ್ಶಿಸುವ ಪೊಲೀಸ್ ಸಿಬ್ಬಂದಿಯಲ್ಲಿ ಬುದ್ಧನನ್ನು ಹೇಗೆ ಕಾಣುವುದು ? ದೌರ್ಜನ್ಯಗಳ ನಡುವೆ ʼ ಬುದ್ಧ ಪ್ರಜ್ಞೆ ʼ ಇವರಲ್ಲಿ ಇರಬೇಕಲ್ಲವೇ ? ಖಂಡಿತವಾಗಿಯೂ ಇರುವುದಿಲ್ಲ. ಏಕೆಂದರೆ ರಾಜಕೀಯ ಅಧಿಕಾರ ಕೇಂದ್ರಗಳು ಮತ್ತು ಆಡಳಿತ ವ್ಯವಸ್ಥೆಗೆ ಬುದ್ಧ ಬೇಕಿರುವುದು ಆಲಂಕಾರಿಕ-ಅಮೂರ್ತ ಸ್ವರೂಪದಲ್ಲಿ ಮಾತ್ರ. ಆಳುವ ವರ್ಗಗಳಿಗೆ ಬುದ್ಧ ಬೇಕಾಗುತ್ತಾನೆ ಆದರೆ ಎಲ್ಲ ಸಂದರ್ಭಗಳಲ್ಲೂ ಬೇಕಾಗುವುದಿಲ್ಲ. ಈ ದ್ವಂದ್ವವನ್ನು ಹೇಗೆ ಗ್ರಹಿಸುವುದು ?

ಸಾಮಾಜಿಕ ಚಳುವಳಿಗಳ ನಡುವೆ

ಬಾಹ್ಯ ಸಮಾಜದಲ್ಲಿ ಪ್ರಧಾನವಾಗಿ ದಲಿತ ಚಳುವಳಿಗಳು ಮತ್ತಿತರ ಪ್ರಗತಿಪರ ಹೋರಾಟಗಳು ಬುದ್ಧನನ್ನು ಒಂದು Icon ಆಗಿ ಬಳಸುವುದು ರೂಢಿಗತವಾಗಿದೆ. ʼ ಬುದ್ಧ-ಬಸವ-ಅಂಬೇಡ್ಕರ್ ʼ ತ್ರಿವಳಿ ಚಿತ್ರಗಳು ಹೋರಾಟಗಳ ಅಮೂರ್ತ ಅಭಿವ್ಯಕ್ತಿಯಾಗಿ ಸ್ಥಾಪಿತವಾಗಿದೆ. ಇಲ್ಲಿ ಬುದ್ಧ ಬಹುಶಃ ಎಲ್ಲ ಶೋಷಿತ, ಅನ್ಯಾಯಕ್ಕೊಳಗಾದ, ಅವಕಾಶವಂಚಿತ ಜನಸಮುದಾಯಗಳಿಗೆ ಬೇಕು ಎನಿಸುತ್ತಾನೆ. ಹೇಗೆ ಎನ್ನುವುದೇ ಪ್ರಶ್ನೆ. ಬ್ಯಾನರ್ಗಳನ್ನು ಅಲಂಕರಿಸುವ ʼ ಮುಖತೋರಣ ʼಗಳಲ್ಲಿ ಅಂಬೇಡ್ಕರ್ ಮತ್ತು ಬುದ್ಧ ಕಡ್ಡಾಯವಾಗಿ ಕಾಣುತ್ತಾರೆ. “ ಬುದ್ಧ-ಬಸವ-ಅಂಬೇಡ್ಕರ್ ” ಎಂಬ Template ಸಾಮಾನ್ಯವಾಗಿಬಿಟ್ಟಿದೆ. ಈ ಆಲಂಕಾರಿಕ ಅಭಿವ್ಯಕ್ತಿಯನ್ನು ಭೇದಿಸಿ ನೋಡಿದಾಗ ಮತ್ತೊಮ್ಮೆ ʼ ಬುದ್ಧ ಪ್ರಜ್ಞೆ ʼ ಪ್ರಶ್ನೆಗೊಳಗಾಗುತ್ತದೆ. ಹೋರಾಟಗಳ ನಡುವೆ ಇರುವ ಬುದ್ಧ ಯಾರಿಗೆ ಬೇಕು, ಏತಕ್ಕಾಗಿ ಬೇಕು, ಯಾವ ರೂಪದಲ್ಲಿ ಬೇಕು ?

ಈ ಪ್ರಶ್ನೆಗೆ ಉತ್ತರಿಸುವಾಗ ನಮಗೆ ಅಂಬೇಡ್ಕರ್ ಕಾಣುತ್ತಾರೆ. ಬೌದ್ಧ ಧಮ್ಮ ಸ್ವೀಕಾರದ ಮೂಲಕ ಅಸ್ಪೃಶ್ಯತೆಯ ಕಳಂಕವನ್ನು ಅಳಿಸಿಹಾಕುವ ಚಾರಿತ್ರಿಕ ನಿರ್ಣಯ ಕೈಗೊಂಡ ಅಂಬೇಡ್ಕರ್ ಸ್ವತಃ ಬೌದ್ಧರಾಗಿ ಮತಾಂತರಗೊಂಡು 70 ವರ್ಷಗಳು ಕಳೆದಿವೆ. ದಲಿತ ಸಂಘಟನೆಗಳು ಈ ಸಂದರ್ಭವನ್ನು ವೈಭವದಿಂದ ಸಂಭ್ರಮಿಸುತ್ತಿವೆ. ಇದು ಸ್ವಾಗತಾರ್ಹ. ಆದರೆ ಈ ಸಾರ್ವಜನಿಕ ಪ್ರದರ್ಶನಗಳ (Public Spectacles) ನಡುವೆ ಬುದ್ಧನನ್ನು ಎಲ್ಲಿ ನಿಲ್ಲಿಸುವುದು ? ನವಯಾನ ಬೌದ್ಧ ಧಮ್ಮದ ವಾರಸುದಾರಿಕೆ ವಹಿಸಿರುವ ಸಮವಸ್ತ್ರಧಾರಿಗಳ ನಡುವೆಯೋ ? ಇವರ ಬೌದ್ಧೋಪನ್ಯಾಸಗಳಿಂದ ಪುನೀತರಾಗುವ ತಳಸಮಾಜದ ಶೋಷಿತರ ನಡುವೆಯೋ ? ಅಥವಾ ಶ್ರೇಣೀಕರಣಕ್ಕೊಳಗಾದ ಬೌದ್ಧ ಸಮಾಜದಲ್ಲಿ ಅತ್ಯಂತ ತಳಸ್ತರದಲ್ಲಿರುವ ವಂಚಿತ ಸಮುದಾಯಗಳ ನಡುವೆಯೋ ? ಈ ಪ್ರಶ್ನೆಗಳಿಗೆ ಉತ್ತರಿಸುವಾಗ ಪುನಃ ಬುದ್ಧ ಏಕೆ ಬೇಕು, ಹೇಗೆ ಬೇಕು ಎಂಬ ಜಟಿಲ ಪ್ರಶ್ನೆಗಳೂ ಹುಟ್ಟಿಕೊಳ್ಳುತ್ತವೆ.

ಜೆನ್ ಝಿಗಳ ನಡುವೆ ಜಂಗಮನಾಗಿ

ವರ್ತಮಾನದ ಸಮಾಜಕ್ಕೆ, ಜಟಿಲ ಸಿಕ್ಕುಗಳ ನಡುವೆ ಸಿಲುಕಿ ಹೊಸ ಹಾದಿಗಳನ್ನು ಹುಡುಕುತ್ತಿರುವ ಜೆನ್ಝಿ, ಜೆನ್ ಅಲ್ಫಾ, ಮಿಲೆನಿಯಲ್ ಇತ್ಯಾದಿ ಯುವ ಜನತೆಗೆ ಬುದ್ಧನ ಅವಶ್ಯಕತೆ ಖಂಡಿತವಾಗಿಯೂ ಇದೆ. ಈ ಯುವ ಜಗತ್ತು ಮತ್ತು ಬಾಹ್ಯ ಲೋಕ ಎದುರಿಸುತ್ತಿರುವ ಎಲ್ಲ ಸವಾಲುಗಳಿಗೂ ಬುದ್ಧನಲ್ಲಿ ಪರಿಹಾರ ಇದೆ ಎನ್ನುವ ದಾರ್ಷ್ಟ್ಯವನ್ನು ಬದಿಗಿಟ್ಟು, ವಸ್ತುನಿಷ್ಠವಾಗಿ ಯೋಚಿಸಿದಾಗ, ಜೀವನ ಮೌಲ್ಯವಾಗಿ, ವ್ಯಕ್ತಿತ್ವ ನಿರ್ಮಾಣದ ಸಾಧನವಾಗಿ, ಮುನ್ನಡೆಯ ಹಾದಿಗೆ ದೀವಿಗೆಯಾಗಿ ಬುದ್ಧ ನೆರವಾಗುತ್ತಾನೆ. ಆದರೆ ಈ ದಾರ್ಶನಿಕನನ್ನು ನಾವು ಎಲ್ಲಿ ನಿಲ್ಲಿಸಬೇಕು ? ಸ್ಥೂಪಗಳ ನಾಲ್ಕು ಗೋಡೆಗಳ ನಡುವೆಯೋ, ಸುಂದರ ಶಿಲಾ ಪ್ರತಿಮೆಗಳಲ್ಲೋ , ಸಾಮಾನ್ಯರಿಗೆ ಅರ್ಥವಾಗದ ಪಾಲಿ ಭಾಷೆಯ ಪ್ರಾರ್ಥನೆ-ಉಪನ್ಯಾಸಗಳಲ್ಲೋ ಅಥವಾ ಧಮ್ಮ ದೀಕ್ಷೆಯ ಧ್ಯಾನ ಕೇಂದ್ರಗಳಲ್ಲೋ ? ಬುದ್ಧ ಸಂತೆಯಲ್ಲಿ ನಿಂತ ಕಬೀರನಂತೆ ಕಾಣಬೇಕೋ ಅಥವಾ ಸಾಂಸ್ಥಿಕ ಆಚರಣೆಗಳ ಸರಳುಗಳ ಹಿಂದಿರುವ ಆರಾಧನಾ ಮೂರ್ತಿಯ ರೂಪದಲ್ಲಿರಬೇಕೋ ? ಒಂದೇ ಮಾತಿನಲ್ಲಿ ಹೇಳುವುದಾದರೆ ಬುದ್ಧ ಸ್ಥಾವರವೋ ಜಂಗಮನೋ ?

ಭಾರತದ ಪ್ರಾಚೀನ ಸಾಂಸ್ಕೃತಿಕ ಆಲೋಚನಾ ವಿಧಾನಗಳಿಂದ ಇಂದಿಗೂ ಹೊರಬರಲಾಗದ ನಾವು ಎಲ್ಲ ದಾರ್ಶನಿಕರನ್ನೂ ಪ್ರತಿಮೆಗಳಲ್ಲಿ ಬಂಧಿಸಿ ಆರಾಧನೆಗೊಳಪಡಿಸಿದ್ದೇವೆ. ವಿಭಿನ್ನ ರೀತಿಗಳಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಹೀಗೆ ಮೂರ್ತಿಗಳಾಗಿ (Idols) ಸ್ಥಾವರ ಬಂಧಿಗಳಾಗಿದ್ದಾರೆ. ಬಸವಣ್ಣ ಈಗಾಗಲೇ ವೈದಿಕಶಾಹಿಯ ವಿಧಿವಿಧಾನಗಳ ಸಂಕಲೋಲೆಗಳಲ್ಲಿ ಸಿಲುಕಿ ತನ್ನ ಜಂಗಮರೂಪವನ್ನು ಕಳೆದುಕೊಂಡಿದ್ದಾನೆ. ಅಂಬೇಡ್ಕರ್ ಹಂತಹಂತವಾಗಿ ಸಾರ್ವಜನಿಕ ಆರಾಧನೆಯ ಕೇಂದ್ರವಾಗುತ್ತಿದ್ದಾರೆ. ಇತ್ತೀಚೆಗೆ ಬುದ್ಧನನ್ನೂ ಇದೇ ರೀತಿ ಆರಾಧಿಸುವ ಪರಂಪರೆ ಆಳವಾಗಿ ನೆಲೆಯೂರುತ್ತಿದೆ. ದಲಿತರು ಬೌದ್ಧರಾಗಲು ಅಂಬೇಡ್ಕರ್ ಕೆಲವು ಪ್ರತಿಜ್ಞಾವಿಧಿಗಳನ್ನು ಭೋದಿಸಿದ್ದರು ಆದರೆ ವ್ಯಕ್ತಿಗತವಾಗಿ ಬೌದ್ಧನಾಗಲು ಮತ್ತೋರ್ವರಿಂದ ದೀಕ್ಷೆ ಪಡೆಯುವಂತೆ ಸೂಚಿಸಿದ್ದರೇ ? ಅಥವಾ ಧಮ್ಮ ದೀಕ್ಷೆ ಎನ್ನುವುದು ಸ್ವ-ಪ್ರಜ್ಞೆಯೊಂದಿಗೆ ಬುದ್ಧನ ಅಷ್ಟಾಂಗ ಮಾರ್ಗ ಮತ್ತು ಪಂಚಶೀಲ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವುದೇ ? ಇದು ಚರ್ಚೆಗೊಳಗಾಗಬೇಕಾದ ವಿಚಾರ.

ಅಂಬೇಡ್ಕರ್ ಮತ್ತು ಬೌದ್ಧ ಮಾರ್ಗ

ಡಾ. ಬಿ.ಆರ್. ಅಂಬೇಡ್ಕರ್ ಬೋಧಿಸಿದ ಪ್ರತಿಜ್ಞಾ ವಿಧಿಗಳು ಸಮಕಾಲೀನ ಜಗತ್ತಿನಲ್ಲಿ ಬೌದ್ಧ ಧಮ್ಮವನ್ನು ಸ್ವೀಕರಿಸುವ ವ್ಯಕ್ತಿ ನಿತ್ಯ ಜೀವನದ ಒಂದು ಭಾಗವಾಗಿ ಅಳವಡಿಸಿಕೊಳ್ಳಬೇಕಾದ ಧಮ್ಮ ಸಂಹಿತೆಗಳಂತಾಗಿವೆ (Religious Codes) . “ ನವಯಾನ ಬೌದ್ಧರಲ್ಲಿ ಒಂದರಿಂದ ಆರು ಮತ್ತು ಎಂಟನೆ ಪ್ರತಿಜ್ಞಾವಿಧಿಯನ್ನು ತಾತ್ಸಾರದಿಂದ ಕಂಡಿರುವ ನೂರಾರು ಉದಾಹರಣೆಗಳು ನಮ್ಮ ನಡುವೆ ಇದೆ “ ಎಂದು ಯುವ ಸಂಶೋಧಕಿ, ಲೇಖಕಿ ಡಾ. ಟಿ. ಪದ್ಮಶ್ರೀ (ಸಂವಾದ ಅಕ್ಟೋಬರ್ 2026 ಪುಟ 31) ವಿಷಾದದಿಂದ ಹೇಳುತ್ತಾರೆ. ಇದು ಕೆಲವರಲ್ಲಿ ಅಸಮಾಧಾನ ಉಂಟುಮಾಡಬಹುದಾದರೂ ಆಕೆಯ ವಿಷಾದದ ಹಿಂದೆ ಅನುಭಾವಿಕ ವಾಸ್ತವ ಇರುವುದನ್ನು ಅಲ್ಲಗಳೆಯಲಾಗುವುದಿಲ್ಲ. ಮೊದಲ ಐದು ಪ್ರತಿಜ್ಞಾ ವಿಧಿಗಳು ಭಿನ್ನ ಆಯಾಮಗಳಲ್ಲಿ ದೈವನಂಬಿಕೆಯನ್ನು ಕುರಿತದ್ದಾಗಿವೆ. ಆರನೆಯದು ಮರಣೋತ್ತರ ಆಚರಣೆಗಳಾದ ತಿಥಿ ಇತ್ಯಾದಿ. ಎಂಟನೆಯದು ಬ್ರಾಹ್ಮಣರ ಸಹಾಯದಿಂದ ಧಾರ್ಮಿಕ ಕ್ರಿಯೆಗಳನ್ನು ನಡೆಸುವುದು.

ವರ್ತಮಾನದ ಪೀಳಿಗೆಯಲ್ಲಿ ಈ ದ್ವಂದ್ವ ಏಕಿದೆ ? ಸಮಾಜಶಾಸ್ತ್ರೀಯ ನೆಲೆಯಲ್ಲಿ ನೋಡಿದಾಗ ಇದು ನಮ್ಮ ಸಮಾಜದ ಎಲ್ಲ ಸ್ತರಗಳಲ್ಲೂ, ಎಲ್ಲ ಜಾತಿ ಸಮುದಾಯಗಳಲ್ಲೂ ಅಂತರ್ಗಾಮಿನಿಯಾಗಿ ಹರಿಯುತ್ತಿರುವ ಸಾಂಸ್ಕೃತಿಕ ಆಲೋಚನಾ ಕ್ರಮಗಳ ಪ್ರಭಾವ ಎನಿಸುತ್ತದೆ. ಮೇಲ್ಜಾತಿಯನ್ನು ಅನುಕರಿಸುವ ಮನೋವೃತ್ತಿಯನ್ನು ಕೇವಲ ಸಂಸ್ಕೃತೀಕರಣ (Sanskritisation) ಅಥವಾ ಬ್ರಾಹ್ಮಣೀಕರಣ ಎಂದು ಸೀಮಿತಗೊಳಿಸುವ ಬದಲು, ಬೌದ್ಧ ಮತವನ್ನು ತಾತ್ವಿಕವಾಗಿ ಒಪ್ಪಿಕೊಂಡವರಿಗೂ ವಿಶಾಲ ಸಮಾಜದ ಸ್ವೀಕೃತಿಗೊಳಗಾಗುವ (Acceptance of Broader society) ಆಚರಣೆಗಳು ಆಕರ್ಷಣೀಯವಾಗಿ ಕಾಣುವುದನ್ನು ಗಮನಿಸಬೇಕು. ಗಣಪತಿ ಹೋಮ, ಯುಗಾದಿ, ದೀಪಾವಳಿ ಗಣೇಶೋತ್ಸವದಂತಹ ಹಿಂದೂ ಧಾರ್ಮಿಕ ಹಬ್ಬಗಳನ್ನು ಆಚರಿಸುವಾಗ, ಬೌದ್ಧ ಮತೀಯರು ತಮ್ಮನ್ನು ಆ ಸಮಾಜದ ಒಂದು ಭಾಗವಾಗಿ ಗುರುತಿಸಿಕೊಳ್ಳಲು ಯತ್ನಿಸುತ್ತಿರುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಇದನ್ನು ʼ ಸಾಂಸ್ಕೃತಿಕ ʼ ಎಂಬ ಆವರಣಕ್ಕೆ ಅಳವಡಿಸಿ, ಧರ್ಮದಿಂದ ಬೇರ್ಪಡಿಸಿ ನೋಡುವ ಪ್ರತಿಪಾದನೆಯನ್ನೂ ಕಾಣಬಹುದು.

ವೈಚಾರಿಕ ಅರಿವು-ವೈಜ್ಞಾನಿಕ ಪ್ರಜ್ಞೆ

ಈ ಅಪಾಯವನ್ನು ಅರಿತಿದ್ದರಿಂದಲೇ ಅಂಬೇಡ್ಕರ್ ತಮ್ಮ ಅನುಯಾಯಿಗಳಿಗೆ ವೈಚಾರಿಕತೆ ಮತ್ತು ವೈಜ್ಞಾನಿಕ ಪ್ರಜ್ಞೆಯನ್ನು ರೂಢಿಸಿಕೊಳ್ಳಲು ಕರೆ ನೀಡುತ್ತಾರೆ. ಆದರೆ ದೈವತ್ವ ಅಥವಾ ಅತೀತ ಶಕ್ತಿಯನ್ನೇ ಸಂಪೂರ್ಣವಾಗಿ ನಿರಾಕರಿಸುವ, ತನ್ಮೂಲಕ ಈ ಶಕ್ತಿಕೇಂದ್ರಗಳನ್ನಾಧರಿಸಿದ ಧಾರ್ಮಿಕ-ಸಾಂಸ್ಕೃತಿಕ ಆಚರಣೆಗಳನ್ನು ಧಿಕ್ಕರಿಸುವ ವೈಜ್ಞಾನಿಕ ನಾಸ್ತಿಕತೆಯನ್ನು (Scientific Atheism) ಅಂಬೇಡ್ಕರ್ ಬೋಧಿಸಲಿಲ್ಲ. ಅಥವಾ ಕೇವಲ ಪ್ರತಿಜ್ಞಾವಿಧಿಯನ್ನು ಆಚರಣಾತ್ಮಕವಾಗಿ (Ritualistic) ಪಠಿಸುವುದರಿಂದ ಸಾಮಾನ್ಯ ಜನರ ನಿತ್ಯ ಬದುಕಿನ ಚಟುವಟಿಕೆಗಳು ಪ್ರಭಾವಕ್ಕೊಳಗಾಗುವುದಿಲ್ಲ ಎಂಬ ವಾಸ್ತವವನ್ನೂ ಅಂಬೇಡ್ಕರ್ ಗ್ರಹಿಸದೆ ಹೋಗಿರಬಹುದು. ಬೌದ್ಧ ಧಮ್ಮವನ್ನು, ಸಾಂಸ್ಥಿಕ ಮತ ಎನಿಸಿಕೊಳ್ಳದೆ ಜನಮಾನಸದ ಜೀವನಶೈಲಿಯಲ್ಲಿ ಆಳಕ್ಕಿಳಿಯಬೇಕಾದ ಒಂದು ಉದಾತ್ತ ಚಿಂತನೆಯಾಗಿ ಬೆಳೆಸುವ ಮಹತ್ವಾಕಾಂಕ್ಷೆ ಅಂಬೇಡ್ಕರ್ ಅವರಲ್ಲಿ ಇದ್ದಿರಬಹುದು.

ಆದರೆ ಭವಿಷ್ಯದ ನೀಲ ನಕ್ಷೆಯನ್ನು ಸಿದ್ಧಪಡಿಸುವಷ್ಟು ಸಮಯ ಅವರಿಗೆ ಒದಗಿಬರಲಿಲ್ಲ. ಜಾತಿ ವಿನಾಶಕ್ಕಾಗಿ (Annihilation of caste) ಹೇಗೆ ಯಾವುದೇ ನಿರ್ದಿಷ್ಟ ಕಾರ್ಯಸೂಚಿ-ಕಾರ್ಯಕ್ರಮ ಹಾಕಿಕೊಟ್ಟಿಲ್ಲವೋ ಹಾಗೆಯೇ ಬೌದ್ಧ ಧಮ್ಮದ ಅನುಯಾಯಿಗಳಿಗೂ ಅಂಬೇಡ್ಕರ್ ಕೊಟ್ಟಿಲ್ಲ. ಇದನ್ನು ಅಪವಾದ ಎಂದು ಭಾವಿಸಬೇಕಿಲ್ಲ. ತಾವು ಬೋಧಿಸಿದ ಪ್ರತಿಜ್ಞಾವಿಧಿಗಳನ್ನೂ ದಾಟಿ ನೋಡುವ ಪ್ರೌಢಿಮೆ ತಮ್ಮ ಅನುಯಾಯಿಗಳು ರೂಢಿಸಿಕೊಳ್ಳಬಹುದು ಎಂಬ ಭರವಸೆ ಅವರಲ್ಲಿದ್ದಿರಲು ಸಾಧ್ಯ. ಆದರೆ ಭಾರತೀಯ ಸಮಾಜ ಮತ್ತು ಅದರ ಸಾಂಸ್ಕೃತಿಕ ಅಂತಃಶಕ್ತಿ ಈ ಭರವಸೆಯನ್ನು ಹುಸಿಗೊಳಿಸುವಷ್ಟು ಬಲಿಷ್ಠವಾಗಿದೆ ಎನ್ನುವುದನ್ನು ಈಗಲೂ ಕಾಣಬಹುದು. ಇದರ ಪರಿಣಾಮವೇ ಬುದ್ಧ ತನ್ನ ಜಂಗಮ ಸ್ಥಿತಿಯನ್ನು ಕಳೆದುಕೊಂಡು ಸ್ಥಾವರವಾಸಿಯಾಗಿದ್ದಾನೆ. ಆರಾಧನಾ ಮೂರ್ತಿ, ಉತ್ಸವ ಮೂರ್ತಿಯಾಗಿದ್ದಾನೆ.

ಮುಂದುವರೆಯುತ್ತದೆ….

Tags: BuddhaWe needwhom
Previous Post

ಸಿನಿಮಾ ಟಿಕೆಟ್‌ನಲ್ಲಿ ಸಮಯವೊಂದು, ಚಿತ್ರ ಆರಂಭವಾಗುವುದು ಮತ್ತೊಂದು! ಜಾಹೀರಾತು ವಿಳಂಬಕ್ಕೆ ಥಿಯೇಟರ್‌ ವಿರುದ್ಧ ದೂರು ನೀಡಬಹುದೇ?

Next Post

₹631 ಕೋಟಿ ವೆಚ್ಚದ ಎಸ್.ಎಂ. ಕೃಷ್ಣ ರಸ್ತೆಯಲ್ಲಿ ನಾಲ್ಕೇ ತಿಂಗಳಿಗೆ ಗುಂಡಿ! ಬಿಡಿಎ ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ

Related Posts

A shock for passengers during the Diwali season: KSRTC and BMTC bus ticket fares hiked suddenly
Top Story

ದೀಪಾವಳಿ ಹೊತ್ತಲ್ಲೇ ಪ್ರಯಾಣಿಕರಿಗೆ ಶಾಕ್: ಕೆಎಸ್‌ಆರ್‌ಟಿಸಿ, ಬಿಎಂಟಿಸಿ ಬಸ್ ಟಿಕೆಟ್ ದರ ದಿಢೀರ್ ಏರಿಕೆ

by Shivakumar
November 4, 2026
0

ಬೆಂಗಳೂರು :  ದೀಪಾವಳಿ (Deepavali) ಹಬ್ಬದ ಸಂಭ್ರಮದಲ್ಲಿದ್ದ ರಾಜ್ಯದ ಜನಸಾಮಾನ್ಯರಿಗೆ ರಾಜ್ಯ ಸರ್ಕಾರ ಭಾರಿ ಆಘಾತ ನೀಡಿದೆ. ಇತ್ತೀಚೆಗಷ್ಟೇ ಹಾಲು ಮತ್ತು ಮೊಸರಿನ ದರ ಏರಿಕೆ ಮಾಡಿದ್ದ...

Read moreDetails
22 ವರ್ಷಗಳ ಹಿಂದೆ ಉಡಾವಣೆಯಾಗಿದ್ದ ಬಾಹ್ಯಾಕಾಶ ವೀಕ್ಷಣಾಲಯ ಭೂಮಿಯತ್ತ! ಭಾರತದ ನಗರಗಳ ಮೇಲೆ ಅವಶೇಷ ಬೀಳುವ ಸಾಧ್ಯತೆ?

22 ವರ್ಷಗಳ ಹಿಂದೆ ಉಡಾವಣೆಯಾಗಿದ್ದ ಬಾಹ್ಯಾಕಾಶ ವೀಕ್ಷಣಾಲಯ ಭೂಮಿಯತ್ತ! ಭಾರತದ ನಗರಗಳ ಮೇಲೆ ಅವಶೇಷ ಬೀಳುವ ಸಾಧ್ಯತೆ?

November 4, 2026
ಹೂಡಿಕೆದಾರರೇ ಗಮನಿಸಿ; ದೀಪಾವಳಿ ದಿನ ಷೇರು ಖರೀದಿ-ಮಾರಾಟಕ್ಕೆ ಇಲ್ಲಿದೆ ಸಮಯ

ಹೂಡಿಕೆದಾರರೇ ಗಮನಿಸಿ; ದೀಪಾವಳಿ ದಿನ ಷೇರು ಖರೀದಿ-ಮಾರಾಟಕ್ಕೆ ಇಲ್ಲಿದೆ ಸಮಯ

November 3, 2026
Praja Seva Andolana' (People's Service Movement) organized with the objective of providing solutions to people's problems: Minister Santosh S. Lad

ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸುವ ಉದ್ದೇಶದಿಂದ ಪ್ರಜಾಸೇವಾ ಆಂದೋಲನ ಆಯೋಜನೆ: ಸಚಿವ ಸಂತೋಷ ಎಸ್. ಲಾಡ್

November 3, 2026
Sites to be allotted this year to 5 lakh poor people in the state who do not own a home: CM D.K. Shivakumar announces

ರಾಜ್ಯದಲ್ಲಿ ಸ್ವಂತ ಸೂರು ಇಲ್ಲದ 5 ಲಕ್ಷ ಬಡವರಿಗೆ ಈ ವರ್ಷವೇ ಸೈಟ್ ಹಂಚಿಕೆ : ಸಿಎಂ ಡಿ.ಕೆ. ಶಿವಕುಮಾರ್ ಘೋಷಣೆ

November 3, 2026
Next Post
₹631 ಕೋಟಿ ವೆಚ್ಚದ ಎಸ್.ಎಂ. ಕೃಷ್ಣ ರಸ್ತೆಯಲ್ಲಿ ನಾಲ್ಕೇ ತಿಂಗಳಿಗೆ ಗುಂಡಿ! ಬಿಡಿಎ ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ

₹631 ಕೋಟಿ ವೆಚ್ಚದ ಎಸ್.ಎಂ. ಕೃಷ್ಣ ರಸ್ತೆಯಲ್ಲಿ ನಾಲ್ಕೇ ತಿಂಗಳಿಗೆ ಗುಂಡಿ! ಬಿಡಿಎ ಕಾಮಗಾರಿಯ ಗುಣಮಟ್ಟದ ಬಗ್ಗೆ ಪ್ರಶ್ನೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada