ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರ ಚಂಡೀಗಢದ ಕ್ಯಾಂಪ್ ಕಚೇರಿ ಮೇಲೆ ಕೇಂದ್ರ ತನಿಖಾ ದಳ (CBI) ಮಂಗಳವಾರ ಶೋಧ ನಡೆಸಿದೆ. ಮುಖ್ಯಮಂತ್ರಿ ಅವರ ವಿಶೇಷ ಕರ್ತವ್ಯಾಧಿಕಾರಿ (OSD) ರಾಜ್ಬೀರ್ ಸಿಂಗ್ ಘುಮನ್ ವಿರುದ್ಧ ಕೇಳಿಬಂದಿರುವ ಭ್ರಷ್ಟಾಚಾರ ಆರೋಪಗಳ ತನಿಖೆಯ ಭಾಗವಾಗಿ ಈ ದಾಳಿ ನಡೆದಿದೆ ಎಂದು ವರದಿಯಾಗಿದೆ.
ಚಂಡೀಗಢದ ಸೆಕ್ಟರ್-2ರ ಹೌಸ್ ನಂಬರ್ 50ರಲ್ಲಿ ಸಿಬಿಐ ಅಧಿಕಾರಿಗಳು ಶೋಧ ನಡೆಸಿದ್ದಾರೆ. ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನೀಡಿದ್ದ ನಿರ್ದೇಶನದ ಹಿನ್ನೆಲೆಯಲ್ಲಿ ಈ ಶೋಧ ಕಾರ್ಯ ನಡೆದಿದೆ ಎನ್ನಲಾಗಿದೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಮುಖ್ಯಮಂತ್ರಿ ಭಗವಂತ್ ಮಾನ್, ಕೇಂದ್ರ ಸರ್ಕಾರ ಹಾಗೂ ಬಿಜೆಪಿಯ ವಿರುದ್ಧ ಆರೋಪ ಮಾಡಿದ್ದಾರೆ. ಬಿಜೆಪಿ ತನ್ನ ರಾಜಕೀಯ ಉದ್ದೇಶಗಳಿಗಾಗಿ ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಮತ್ತು ಜಾರಿ ನಿರ್ದೇಶನಾಲಯ (ED)ವನ್ನು ಬಳಸಿಕೊಳ್ಳುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯಿಸಿರುವ ಮಾನ್, ಪಂಜಾಬ್ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಬಿಜೆಪಿ ಈಗಿನಿಂದಲೇ ಸಿದ್ಧತೆ ಆರಂಭಿಸಿದೆ ಎಂದು ಆರೋಪಿಸಿದ್ದಾರೆ. ತಮ್ಮ ಕ್ಯಾಂಪ್ ಕಚೇರಿ ಮೇಲೆ ಸಿಬಿಐ ದಾಳಿ ನಡೆಸಿರುವುದು ಇದೇ ಉದ್ದೇಶದ ಭಾಗವಾಗಿದೆ ಎಂದು ಅವರು ಹೇಳಿದ್ದಾರೆ.

ಭಗವಂತ್ ಮಾನ್ ಅವರ OSD ರಾಜ್ಬೀರ್ ಸಿಂಗ್ ಘುಮನ್ ವಿರುದ್ಧ ಕೇಳಿಬಂದಿದ್ದ ಭ್ರಷ್ಟಾಚಾರ ಆರೋಪಗಳ ಕುರಿತು ಸಿಬಿಐ ತನಿಖೆ ನಡೆಸುವಂತೆ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ನಿರ್ದೇಶನ ನೀಡಿತ್ತು.
ಮುಖ್ಯಮಂತ್ರಿ ಕಚೇರಿಯ ಕಾರ್ಯವೈಖರಿ ಕುರಿತು ಕೇಳಿಬಂದಿರುವ ಆರೋಪಗಳ ಹಿನ್ನೆಲೆಯಲ್ಲಿ ನ್ಯಾಯಾಲಯ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿತ್ತು. ತನಿಖೆಯನ್ನು ಪೂರ್ಣಗೊಳಿಸಿ ಎರಡು ತಿಂಗಳೊಳಗೆ ವರದಿ ಸಲ್ಲಿಸುವಂತೆ ಸಿಬಿಐಗೆ ಸೂಚಿಸಲಾಗಿದೆ.

ಜಾರಿ ನಿರ್ದೇಶನಾಲಯ ಮುಂದಿಟ್ಟಿದ್ದ ಆರೋಪಗಳ ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಕೋರಿ ವಕೀಲ ನಿಖಿಲ್ ಸರಾಫ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ವಿಚಾರಣೆ ವೇಳೆ ನ್ಯಾಯಾಲಯ ಈ ನಿರ್ದೇಶನ ನೀಡಿತ್ತು.
ಇದಕ್ಕೂ ಮುನ್ನ ಬಿಜೆಪಿ ನಾಯಕ ರವ್ನೀತ್ ಸಿಂಗ್ ಬಿಟ್ಟು ಅವರು ಮುಖ್ಯಮಂತ್ರಿ ಭಗವಂತ್ ಮಾನ್ ವಿರುದ್ಧ ತೀವ್ರ ಟೀಕೆ ಮಾಡಿದ್ದರು. ಪ್ರಕರಣದ ಬೆಳವಣಿಗೆಯನ್ನು ಉಲ್ಲೇಖಿಸಿ ಮಾನ್ ವಿರುದ್ಧ ಹಲವು ಆರೋಪಗಳನ್ನು ಮಾಡಿದ್ದ ಅವರು, ಈ ಪ್ರಕರಣವನ್ನು ಕೇವಲ OSDಗೆ ಸಂಬಂಧಿಸಿದ ವಿಚಾರವಾಗಿ ನೋಡಬಾರದು. ಮುಖ್ಯಮಂತ್ರಿ ಕಚೇರಿಯ ಗೌರವಕ್ಕೂ ಇದು ಸಂಬಂಧಿಸಿದೆ ಎಂದು ಹೇಳಿದ್ದರು.
ಇಡಿಗೆ 200 ಪುಟಗಳ ದಾಖಲೆಗಳನ್ನು ಸಲ್ಲಿಸಿರುವ ವಕೀಲರನ್ನು ಅಭಿನಂದಿಸುವುದಾಗಿ ಬಿಟ್ಟು ಹೇಳಿದ್ದರು. ಇದೇ ವೇಳೆ, ಮುಖ್ಯಮಂತ್ರಿ ಕಚೇರಿಯಲ್ಲಿ ಇಂತಹ ಬೆಳವಣಿಗೆ ಹಿಂದೆ ನಡೆದಿರಲಿಲ್ಲ ಎಂದು ಅವರು ಆರೋಪಿಸಿದ್ದರು.
ಸಿಬಿಐ ದಾಳಿ, ಹೈಕೋರ್ಟ್ ನಿರ್ದೇಶನ ಮತ್ತು ಆಡಳಿತಾರೂಢ ಸರ್ಕಾರದ ವಿರುದ್ಧದ ರಾಜಕೀಯ ಆರೋಪಗಳಿಂದಾಗಿ ಪಂಜಾಬ್‌ನಲ್ಲಿ ಈ ಪ್ರಕರಣ ಮತ್ತಷ್ಟು ಚರ್ಚೆಗೆ ಗ್ರಾಸವಾಗಿದೆ.





