ಬಳ್ಳಾರಿ: ತಮ್ಮ ಜಿಲ್ಲೆಗೆ ಸಿಕ್ಕಿದ್ದ ಸಚಿವ ಸ್ಥಾನ ಕಳೆದುಕೊಂಡು ಸಂಕಟ ಪಡುತ್ತಿರುವ ಬಳ್ಳಾರಿ ಜಿಲ್ಲೆಯ ಜನರು ಮತ್ತೊಮ್ಮೆ ದ್ವೇಷ ರಾಜಕಾರಣದ ಸುಳಿಗೆ ಬಲಿಯಾಗುವ ಲಕ್ಷಣಗಳು ಮತ್ತೊಮ್ಮೆ ಕಾಣುತ್ತಿವೆ. ಹೌದು, ಸಚಿವ ಬಿ ನಾಗೇಂದ್ರರಿಂದ ತೆರವಾದ ಸಚಿವ ಸ್ಥಾನ ಬಳ್ಳಾರಿ ಜಿಲ್ಲೆಯ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಅವರಿಗೆ ದಕ್ಕುವ ಚರ್ಚೆಗಳು ಜೋರಾಗೇ ನಡೆಯುತ್ತಿರುವ ಈ ಹೊತ್ತಿನಲ್ಲಿ ಮತ್ತೊಮ್ಮೆ ಸುಳ್ಳು ಆರೋಪಗಳು, ಆಧಾರ ರಹಿತ ಆಪಾದನೆಗಳು ಸದ್ದು ಮಾಡುತ್ತಿವೆ ಎನ್ನುವ ಆರೋಪಗಳು ಕೇಳಿ ಬಂದಿದೆ.


ಬಳ್ಳಾರಿ ಜಿಲ್ಲೆ ಸಂಡೂರು ದಕ್ಷಿಣ ವಲಯದ ಸುಮಾರು 1096.79 ಎಕರೆಯ ಅರಣ್ಯ ಭೂಮಿಯನ್ನು ರಾಜ್ಯ ಸರ್ಕಾರ ಖರಾಬ್ ಭೂಮಿಯಾಗಿ ಪರಿಗಣಿಸಿ ಗಣಿಗಾರಿಕೆಗೆ ನೀಡಲಿದೆ ಎಂಬ ಸುದ್ದ ಕಳೆದ ಎರಡು ದಿನಗಳಿಂದ ಜಿಲ್ಲೆಯಷ್ಟೇ ಅಲ್ಲದೇ ರಾಜ್ಯದಾದ್ಯಂತ ತೀವ್ರ ಸಂಚಲನ ಉಂಟುಮಾಡಿತ್ತು. ಇದರಲ್ಲಿ ನೇರವಾಗಿ ಬಳ್ಳಾರಿ ಸಂಸದ ಈ ತುಕಾರಾಂ ಹಾಗೂ ಸಂಡೂರು ಶಾಸಕಿ ಅನ್ನಪೂರ್ಣ ತುಕಾರಾಂ ಅವರ ಹೆಸರನ್ನು ಸಾಮಾಜಿಕ ಹೋರಾಟಗಾರ ಎಂದು ಹೇಳಿಕೊಳ್ಳುವ ದಿನೇಶ್ ಕಲ್ಲಹಳ್ಳಿ ಆರೋಪಿಸುತ್ತಿದ್ದಾರೆ. ಆದರೆ ಈಗ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದ್ದು, ಪ್ರಸ್ತುತ ದಿನೇಶ್ ಕಲ್ಲಹಳ್ಳಿ ಅವರ ಆರೋಪದಂತೆ ಯಾವುದೇ ಭೂಮಿಯನ್ನು ಗಣಿಗಾರಿಕೆ ನೀಡಲಾಗಿಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳೇ ಸ್ಪಷ್ಟ ಪಡಿಸಿದ್ದಾರೆ.

“ಹಲವು ಮಾಧ್ಯಮಗಳಲ್ಲಿ ಅದ್ಯಾವ ಉದ್ದೇಶ ಇಟ್ಟುಕೊಂಡು ಈ ರೀತಿ ಆರೋಪ ಮಾಡಲಾಗ್ತಿದೆ ಎಂಬುದು ಅರ್ಥವಾಗುತ್ತಿಲ್ಲ, ದಿನೇಶ್ ಕಲ್ಲಹಳ್ಳಿ ಆರೋಪಿಸುತ್ತಿರುವಂತೆ ಸಂಡೂರು ದಕ್ಷಿಣ ವಲಯದ ಸುಮಾರು 1096.79 ಎಕರೆ ಖರಾಬ್ ಭೂಮಿಯು ಅರಣ್ಯ ಇಲಾಖೆ ಸುಪರ್ದಿಯಲ್ಲೇ ಇದ್ದು, ಯಾವ ರೀತಿಯ ಗಣಿಗಾರಿಕೆಗೂ ಭೂಮಿ ಪರಭಾರೆ ಮಾಡಲಾಗಿದಲ್ಲ, ಇದೊಂದು ಶುದ್ಧ ರಾಜಕೀಯ ಪ್ರೇರಿತ ಆರೋಪವಾಗಿದ್ದು, ಸತ್ಯಕ್ಕೆ ದೂರವಾಗಿದೆ” ಎಂದು ಅರಣ್ಯ ಇಲಾಖೆ ಅಧಿಕಾರಿಗಳು ದಾಖಲೆ ಸಮೇತ ಸ್ಪಷ್ಟ ಪಡಿಸಿದ್ದಾರೆ. ಈ ಎಲ್ಲ ಬೆಳವಣಿಗೆಗಳನ್ನು ನೋಡಿದರೆ ಜಿಲ್ಲೆಯ ಶಾಸಕಿಯೊಬ್ಬರಿಗೆ ಸಿಗುತ್ತಿರುವ ಸಚಿವ ಸ್ಥಾನವನ್ನು ತಪ್ಪಿಸಲು ನಡೆಯುತ್ತಿರುವ ಶಡ್ಯಂತ್ರ ಎಂಬುದು ಜಗಜ್ಜಾಹೀರಾಗಿದೆ ಎನ್ನುವುದು ಜಿಲ್ಲಾ ಕಾಂಗ್ರೆಸ್ ನಾಯಕರ ಹಾಗೂ ಕಾರ್ಯಕರ್ತರ ಆರೋಪವಾಗಿದೆ.







