ಬಾಲಿವುಡ್ನ ಬಹುನಿರೀಕ್ಷಿತ ಹಾಗೂ ಬಿಗ್ ಬಜೆಟ್ ಸಿನಿಮಾ ‘ರಾಮಾಯಣ’ ಈಗಾಗಲೇ ಟ್ರೇಲರ್ ಮೂಲಕ ಭಾರೀ ನಿರೀಕ್ಷೆ ಮೂಡಿಸಿದೆ. ಹಾಲಿವುಡ್ ಮಟ್ಟದ ತಂತ್ರಜ್ಞಾನ ಹಾಗೂ ಅದ್ಧೂರಿ VFX ಬಳಸಿ ನಿರ್ಮಾಣವಾಗುತ್ತಿರುವ ಈ ಚಿತ್ರವನ್ನು ಜಾಗತಿಕ ಮಟ್ಟದಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ. ಇದೇ ವೇಳೆ ಚಿತ್ರದ ಬಿಡುಗಡೆ ದಿನಾಂಕದಲ್ಲಿ ಕೊಂಚ ಬದಲಾವಣೆ ಮಾಡಲಾಗಿದೆ.
ಈ ಹಿಂದೆ ‘ರಾಮಾಯಣ’ ನವೆಂಬರ್ 6ರಂದು ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಘೋಷಿಸಿತ್ತು. ಆದರೆ ಇದೀಗ ಭಾರತದಲ್ಲಿ ಚಿತ್ರ ನವೆಂಬರ್ 6ರಂದು ಬಿಡುಗಡೆಯಾಗುವುದಿಲ್ಲ ಎಂಬುದು ಸ್ಪಷ್ಟವಾಗಿದೆ. ನಿರ್ಮಾಪಕ ನಮಿತ್ ಮಲ್ಹೋತ್ರಾ ಈ ಕುರಿತು ಮಾಹಿತಿ ನೀಡಿದ್ದು, ಭಾರತದಲ್ಲಿ ದೀಪಾವಳಿ ಸಂದರ್ಭದಲ್ಲಿ ಚಿತ್ರವನ್ನು ತೆರೆಗೆ ತರಲು ಯೋಜಿಸಲಾಗಿದೆ ಎಂದು ತಿಳಿಸಿದ್ದಾರೆ.

ಮುಂಬೈನ ದಾದಾಸಾಹೇಬ್ ಫಾಲ್ಕೆ ಚಿತ್ರನಗರಿಯಲ್ಲಿ ನಡೆದ ಪ್ರೈಮ್ ಫೋಕಸ್ ಸ್ಟುಡಿಯೋಸ್ನ ಹಂತ-1 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ನಮಿತ್ ಮಲ್ಹೋತ್ರಾ, ವಿದೇಶಿ ಮಾರುಕಟ್ಟೆಯಲ್ಲಿ ನವೆಂಬರ್ 6ರಂದು ಚಿತ್ರ ಬಿಡುಗಡೆಯಾಗಲಿದ್ದು, ಭಾರತದಲ್ಲಿ ನವೆಂಬರ್ 8ರಂದು ತೆರೆಗೆ ಬರಲಿದೆ ಎಂದು ಹೇಳಿದ್ದಾರೆ. ಅಂತಾರಾಷ್ಟ್ರೀಯ ಮಾರುಕಟ್ಟೆಯನ್ನು ಗಮನದಲ್ಲಿಟ್ಟುಕೊಂಡು ವಿದೇಶದಲ್ಲಿ ಎರಡು ದಿನ ಮೊದಲೇ ಚಿತ್ರವನ್ನು ಬಿಡುಗಡೆ ಮಾಡಲು ನಿರ್ಧರಿಸಲಾಗಿದೆ. ಭಾರತದಲ್ಲಿ ದೀಪಾವಳಿ ಹಬ್ಬದ ಸಂದರ್ಭದಲ್ಲೇ ಚಿತ್ರವನ್ನು ಪ್ರೇಕ್ಷಕರಿಗೆ ತಲುಪಿಸುವ ಉದ್ದೇಶದಿಂದ ನವೆಂಬರ್ 8ರ ದಿನಾಂಕವನ್ನು ಆಯ್ಕೆ ಮಾಡಲಾಗಿದೆ.

ನಿರ್ಮಾಣವಾಗುತ್ತಿರುವ ‘ರಾಮಾಯಣ’ 2026ರ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದಾಗಿದೆ. ಚಿತ್ರದಲ್ಲಿ ನಿರ್ಮಾಣ, ಪ್ರಮಾಣ ಹಾಗೂ VFXಗೆ ಯಾವುದೇ ರಾಜಿ ಮಾಡಿಕೊಂಡಿಲ್ಲ ಎಂದು ಚಿತ್ರತಂಡ ಹೇಳಿಕೊಂಡಿದೆ.ಚಿತ್ರದಲ್ಲಿ ರಣಬೀರ್ ಕಪೂರ್ ಶ್ರೀರಾಮ ಹಾಗೂ ಪರಶುರಾಮನ ಪಾತ್ರದಲ್ಲಿ, ಸಾಯಿ ಪಲ್ಲವಿ ಸೀತೆಯಾಗಿ ಹಾಗೂ ಕನ್ನಡದ ನಟ ಯಶ್ ರಾವಣನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸನ್ನಿ ಡಿಯೋಲ್ ಹನುಮಂತನ ಪಾತ್ರದಲ್ಲಿ ನಟಿಸುತ್ತಿದ್ದಾರೆ.
ರವಿ ದುಬೆ, ಲಾರಾ ದತ್ತಾ, ಅರುಣ್ ಗೋವಿಲ್, ಕಾಜಲ್ ಅಗರ್ವಾಲ್, ರಕುಲ್ ಪ್ರೀತ್ ಸಿಂಗ್, ವಿವೇಕ್ ಒಬೆರಾಯ್, ಕುನಾಲ್ ಕಪೂರ್, ರಾಘವ್ ಜುಯಲ್, ಶೀಬಾ ಚಡ್ಡಾ ಹಾಗೂ ಇಂದಿರಾ ಕೃಷ್ಣನ್ ಸೇರಿದಂತೆ ಹಲವು ಪ್ರಮುಖ ಕಲಾವಿದರು ಚಿತ್ರದಲ್ಲಿ ಅಭಿನಯಿಸಿದ್ದಾರೆ. ಜಟಾಯು ಪಾತ್ರಕ್ಕೆ ಅನುಪಮ್ ಖೇರ್ ಧ್ವನಿ ನೀಡಿದ್ದಾರೆ.

ಇನ್ನು ಚಿತ್ರದ ಸಂಗೀತದ ಜವಾಬ್ದಾರಿಯನ್ನು ಆಸ್ಕರ್ ವಿಜೇತ ಸಂಗೀತ ನಿರ್ದೇಶಕರಾದ ಹ್ಯಾನ್ಸ್ ಝಿಮ್ಮರ್ ಮತ್ತು ಎ.ಆರ್. ರೆಹಮಾನ್ ಒಟ್ಟಾಗಿ ವಹಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಇಬ್ಬರು ಖ್ಯಾತ ಸಂಗೀತ ನಿರ್ದೇಶಕರು ಒಂದೇ ಸಿನಿಮಾಕ್ಕಾಗಿ ಜೊತೆಯಾಗಿ ಕೆಲಸ ಮಾಡುತ್ತಿರುವುದು ಚಿತ್ರದ ಮತ್ತೊಂದು ವಿಶೇಷತೆಯಾಗಿದೆ.






