ತಿರುಮಲ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಮೊದಲ ಆರತಿ ಸೇವೆಯಲ್ಲಿ ಕರ್ನಾಟಕದ ಜನಪ್ರತಿನಿಧಿಗಳಿಗೆ ವಿಶೇಷ ಅವಕಾಶ ಕಲ್ಪಿಸುವ ಕುರಿತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ನವದೆಹಲಿಯಲ್ಲಿ ಮಾತನಾಡಿದ ಅವರು, ಡಿ.ಕೆ. ಶಿವಕುಮಾರ್ ಒಂದೇ ವಿಷಯದ ಕುರಿತು ಪರಸ್ಪರ ವಿರೋಧಾಭಾಸದ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಟೀಕಿಸಿದರು.
“ಒಂದು ಕಡೆ ದೇವರ ಮುಂದೆ ಎಲ್ಲರೂ ಸಮಾನರು ಎಂದು ಹೇಳುತ್ತಾರೆ. ಮತ್ತೊಂದು ಕಡೆ ಜನಪ್ರತಿನಿಧಿಗಳಿಗೆ ವಿಶೇಷ ಆದ್ಯತೆ ನೀಡಬೇಕು ಎಂದು ಹೇಳುತ್ತಾರೆ. ನಿಜವಾಗಿಯೂ ಎಲ್ಲರೂ ಸಮಾನರು ಎಂಬ ನಂಬಿಕೆ ಇದ್ದಿದ್ದರೆ ಆರಂಭದಲ್ಲೇ ಇಂತಹ ಪ್ರಸ್ತಾಪ ಮಾಡಬಾರದಿತ್ತು. ಸಾರ್ವಜನಿಕ ಟೀಕೆ ಎದುರಾದ ಬಳಿಕ ತಮ್ಮ ಹೇಳಿಕೆಯನ್ನು ಸಮರ್ಥಿಸಿಕೊಳ್ಳಲು ಈಗ ಎಲ್ಲರೂ ಸಮಾನರು ಎಂದು ಹೇಳುತ್ತಿದ್ದಾರೆ” ಎಂದು ಬೊಮ್ಮಾಯಿ ಹೇಳಿದರು.

ತಿರುಮಲ ದೇವಸ್ಥಾನದಲ್ಲಿ ಪ್ರತಿದಿನ ನಡೆಯುವ ಮೊದಲ ಆರತಿ ಸೇವೆಯಲ್ಲಿ ಕರ್ನಾಟಕದ ಜನಪ್ರತಿನಿಧಿಗಳಿಗೆ ವಿಶೇಷ ಶಿಷ್ಟಾಚಾರ ಕಲ್ಪಿಸುವ ಕುರಿತು ಡಿ.ಕೆ. ಶಿವಕುಮಾರ್ ನೀಡಿದ್ದ ಹೇಳಿಕೆಯನ್ನು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿಯೂ ಈಗಾಗಲೇ ತಳ್ಳಿಹಾಕಿದೆ. ದೇವಾಲಯದ ಸಂಪ್ರದಾಯಗಳಲ್ಲಿ ಏಕಪಕ್ಷೀಯ ಬದಲಾವಣೆ ಸಾಧ್ಯವಿಲ್ಲ. ಈ ಕುರಿತು ಟಿಟಿಡಿ ಮಂಡಳಿಯ ಸಭೆಯಲ್ಲಿ ಚರ್ಚಿಸಿ ಮಾತ್ರ ನಿರ್ಧಾರ ಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದೆ.

ತಿರುಮಲದ ಮೊದಲ ಆರತಿ ಸಂಪ್ರದಾಯದ ಕುರಿತು ಮಾತನಾಡಿದ ಬೊಮ್ಮಾಯಿ, “ಈ ಆಚರಣೆಗೆ ಶತಮಾನಗಳ ಇತಿಹಾಸವಿದೆ. ವಿಜಯನಗರ ಸಾಮ್ರಾಟ ಶ್ರೀಕೃಷ್ಣದೇವರಾಯರು ಹಾಗೂ ಮೈಸೂರು ಒಡೆಯರ್ಗಳು ತಿರುಮಲ ದೇವಸ್ಥಾನಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ವಿಶೇಷವಾಗಿ ಮೈಸೂರು ರಾಜಮನೆತನವು ದೇವಾಲಯಕ್ಕೆ ಹಲವು ಆಭರಣಗಳನ್ನು ಕಾಣಿಕೆಯಾಗಿ ಸಲ್ಲಿಸಿದ್ದರಿಂದ ಮೊದಲ ಆರತಿಯನ್ನು ಮೈಸೂರು ಮಹಾರಾಜರಿಗೆ ಅರ್ಪಿಸುವ ಸಂಪ್ರದಾಯ ಬೆಳೆದು ಬಂದಿದೆ” ಎಂದು ಹೇಳಿದರು.
ರಾಜಪ್ರಭುತ್ವ ಅಂತ್ಯಗೊಂಡ ಬಳಿಕ ಈ ಗೌರವ ಕರ್ನಾಟಕ ಸರ್ಕಾರಕ್ಕೆ ವರ್ಗಾಯಿಸಲಾಯಿತು. ಸರ್ಕಾರದ ಪರವಾಗಿ ನೇಮಕಗೊಂಡ ವಿಶೇಷ ಅಧಿಕಾರಿಯೊಬ್ಬರು ಅಧಿಕೃತ ಪ್ರತಿನಿಧಿಯಾಗಿ ಮೊದಲ ಆರತಿ ಸ್ವೀಕರಿಸುತ್ತಾರೆ. ಶಾಸಕರು, ಸಂಸದರು ಅಥವಾ ಇತರ ಜನಪ್ರತಿನಿಧಿಗಳು ಸರ್ಕಾರದ ಅಧಿಕೃತ ಪ್ರತಿನಿಧಿಗಳಲ್ಲ. ಆದ್ದರಿಂದ ವಿಶೇಷ ಅಧಿಕಾರಿಯೇ ಈ ಸಂಪ್ರದಾಯವನ್ನು ಮುಂದುವರಿಸುವುದು ಸೂಕ್ತ ಎಂದು ಅವರು ಅಭಿಪ್ರಾಯಪಟ್ಟರು.
ಡಿ.ಕೆ. ಶಿವಕುಮಾರ್ ಅವರು ಅನಗತ್ಯವಾಗಿ ವಿವಾದಾತ್ಮಕ ವಿಷಯಗಳನ್ನು ಕೆದಕಿ ಸಾರ್ವಜನಿಕರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ ಎಂದು ಆರೋಪಿಸಿದ ಬೊಮ್ಮಾಯಿ, ವರ್ಷಗಳಿಂದ ನಡೆದುಕೊಂಡು ಬಂದಿರುವ ಧಾರ್ಮಿಕ ಸಂಪ್ರದಾಯಗಳನ್ನು ಬದಲಾಯಿಸುವ ಅಗತ್ಯವಿಲ್ಲ. ದೇವರ ಮುಂದೆ ಎಲ್ಲರೂ ಸಮಾನರು ಎಂಬ ತತ್ವವನ್ನು ಗೌರವಿಸಿ, ಐತಿಹಾಸಿಕ ಪರಂಪರೆ ಮುಂದುವರಿಯಬೇಕು ಎಂದು ಹೇಳಿದರು.






