ದಕ್ಷಿಣ ಭಾರತದ ಸಂಗೀತ ಲೋಕದ ದಿಗ್ಗಜ ಗಾಯಕಿ, ಗಾನಕೋಗಿಲೆ ಎಸ್. ಜಾನಕಿ ಅವರ ನಿಧನ ಸಂಗೀತಾಭಿಮಾನಿಗಳಿಗೆ ತೀವ್ರ ಆಘಾತ ಉಂಟುಮಾಡಿದೆ. ತಮ್ಮ ಸುಮಧುರ ಕಂಠದ ಮೂಲಕ ಆರು ದಶಕಗಳ ಕಾಲ ಕೋಟ್ಯಂತರ ಜನರ ಮನಸ್ಸನ್ನು ಗೆದ್ದಿದ್ದ ಜಾನಕಿ ಅಮ್ಮ ಅವರ ಜೀವನದ ಕೊನೆಯ ದಿನಗಳು ಮಾತ್ರ ದುಃಖ ಮತ್ತು ಏಕಾಂತದಿಂದ ಕೂಡಿದ್ದವು.88ನೇ ವಯಸ್ಸಿನಲ್ಲಿ ಜೀವನದ ಸಂಧ್ಯಾಕಾಲವನ್ನು ಎದುರಿಸುತ್ತಿದ್ದ ಜಾನಕಿ ಅವರಿಗೆ ದೊಡ್ಡ ಆಘಾತವಾಗಿದ್ದು, ತಮ್ಮ ಏಕೈಕ ಪುತ್ರ ಮುರಳಿ ಕೃಷ್ಣ (65) ಅವರ ಅಕಾಲಿಕ ನಿಧನ. ಮಗನ ಸಾವಿನ ದುಃಖದಿಂದ ಅವರು ಸಂಪೂರ್ಣವಾಗಿ ಕುಗ್ಗಿಹೋಗಿದ್ದು, ಅದೇ ನೋವಿನಲ್ಲೇ ತಮ್ಮ ಅಂತಿಮ ದಿನಗಳನ್ನು ಕಳೆದಿದ್ದರು.
ಆಂಧ್ರಪ್ರದೇಶದ ಗುಂಟೂರು ಮೂಲದ ಎಸ್. ಜಾನಕಿ ಅವರು 1950ರ ದಶಕದಲ್ಲಿ ಚಿತ್ರರಂಗ ಪ್ರವೇಶಿಸಿ ಬಳಿಕ ಚೆನ್ನೈನಲ್ಲಿ ನೆಲೆಸಿದ್ದರು. ಅವರ ಪತಿ ರಾಮ್ ಪ್ರಸಾದ್ ಅವರೊಂದಿಗೆ ದಾಂಪತ್ಯ ಜೀವನ ನಡೆಸಿದ ಜಾನಕಿ ಅವರಿಗೆ ಮುರಳಿ ಕೃಷ್ಣ ಎಂಬ ಒಬ್ಬನೇ ಮಗನಿದ್ದರು.ತಾಯಿಯಂತೆ ಕಲೆಯತ್ತ ಆಸಕ್ತಿ ಹೊಂದಿದ್ದ ಮುರಳಿ ಕೃಷ್ಣ ತಮಿಳು ಹಾಗೂ ತೆಲುಗು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದರು. ಅವರು ಪ್ರಸಿದ್ಧ ಭರತನಾಟ್ಯ ಕಲಾವಿದರೂ ಆಗಿದ್ದರು. ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ತಾಯಿಯ ಆರೈಕೆಯನ್ನು ಅವರು ಅತ್ಯಂತ ಪ್ರೀತಿಯಿಂದ ಮಾಡುತ್ತಿದ್ದರು.

ಭರತನಾಟ್ಯ ಕಲಿಯುವ ಸಂದರ್ಭದಲ್ಲಿ ತಮ್ಮ ಗುರು ಉಮಾ ಅವರನ್ನು ಪ್ರೀತಿಸಿ ಮುರಳಿ ಕೃಷ್ಣ ವಿವಾಹವಾಗಿದ್ದರು. ದಂಪತಿಗೆ ಇಬ್ಬರು ಪುತ್ರಿಯರು ಜನಿಸಿದ್ದರೂ, ನಂತರ ವೈಯಕ್ತಿಕ ಭಿನ್ನಾಭಿಪ್ರಾಯಗಳಿಂದ ವಿಚ್ಛೇದನವಾಗಿತ್ತು. ವಿಚ್ಛೇದನದ ಬಳಿಕ ಮಕ್ಕಳು ತಾಯಿಯೊಂದಿಗೆ ತೆರಳಿದರೆ, ಮುರಳಿ ಕೃಷ್ಣ ತಮ್ಮ ತಾಯಿ ಎಸ್. ಜಾನಕಿ ಅವರೊಂದಿಗೆ ಉಳಿದು ಅವರ ಜೀವನಕ್ಕೆ ಬೆನ್ನೆಲುಬಾಗಿ ನಿಂತಿದ್ದರು.ಈ ವರ್ಷದ ಜನವರಿಯಲ್ಲಿ ಮುರಳಿ ಕೃಷ್ಣ ಅವರಿಗೆ ಹಠಾತ್ ಹೃದಯಾಘಾತ ಸಂಭವಿಸಿ ಅವರು ನಿಧನರಾದರು. ಇಳಿವಯಸ್ಸಿನಲ್ಲಿ ತನ್ನ ಕಣ್ಣೆದುರೇ ಮಗನನ್ನು ಕಳೆದುಕೊಂಡ ಜಾನಕಿ ಅಮ್ಮ ಆ ದುಃಖವನ್ನು ಸಹಿಸಲಾಗದೆ ಮಾನಸಿಕವಾಗಿ ತೀವ್ರವಾಗಿ ಕುಗ್ಗಿದ್ದರು. “ಹೆತ್ತ ಮಗನನ್ನು ಸ್ಮಶಾನಕ್ಕೆ ಕಳುಹಿಸುವ ನೋವು ಯಾವ ತಾಯಿಗೂ ಬರಬಾರದು” ಎಂದು ಆಗ ಚಿತ್ರರಂಗದ ಅನೇಕ ಗಣ್ಯರು ಸಂತಾಪ ಸೂಚಿಸಿದ್ದರು.
ಮಗನ ಅಗಲಿಕೆಯ ಕೆಲವೇ ತಿಂಗಳುಗಳ ಬಳಿಕ ಎಸ್. ಜಾನಕಿ ಕೂಡ ಇಹಲೋಕ ತ್ಯಜಿಸಿದ್ದಾರೆ. ಸಂಗೀತವನ್ನೇ ಜೀವನವನ್ನಾಗಿಸಿಕೊಂಡಿದ್ದ ಅವರು ತಮ್ಮ ಅಪರೂಪದ ಧ್ವನಿ ವೈವಿಧ್ಯತೆಯಿಂದ ಭಾರತೀಯ ಸಂಗೀತ ಕ್ಷೇತ್ರದಲ್ಲಿ ಅಜರಾಮರರಾಗಿದ್ದಾರೆ.ಸಣ್ಣ ಮಗುವಿನ ಧ್ವನಿಯಿಂದ ಹಿಡಿದು ಪ್ರೌಢ ಮಹಿಳೆಯ ಭಾವಪೂರ್ಣ ಕಂಠದವರೆಗೆ ಕ್ಷಣಾರ್ಧದಲ್ಲಿ ಧ್ವನಿಯನ್ನು ಬದಲಾಯಿಸುವ ಅಪೂರ್ವ ಸಾಮರ್ಥ್ಯ ಅವರಲ್ಲಿತ್ತು. ಹಾಡಿನಲ್ಲೇ ಪಾತ್ರಗಳ ಭಾವನೆಗಳನ್ನು ಜೀವಂತಗೊಳಿಸುವ ಅವರ ಗಾಯನ ಶೈಲಿಯಿಂದಲೇ ಅವರು ಭಾರತೀಯ ಚಿತ್ರಸಂಗೀತದ ಇತಿಹಾಸದಲ್ಲಿ ಅಪ್ರತಿಮ ಗಾಯಕಿಯಾಗಿ ಗುರುತಿಸಿಕೊಂಡರು.ಎಸ್. ಜಾನಕಿ ಅವರ ನಿಧನ ಕೇವಲ ಒಬ್ಬ ಮಹಾನ್ ಗಾಯಕಿಯ ಅಗಲಿಕೆಯಲ್ಲ, ಭಾರತೀಯ ಸಂಗೀತದ ಒಂದು ಸುವರ್ಣಯುಗದ ಅಂತ್ಯವಾಗಿದೆ.








