ಲಕ್ನೋ: ಅಯೋಧ್ಯೆಯ ರಾಮಮಂದಿರ ಕಾಣಿಕೆ ಕಳ್ಳತನ ಪ್ರಕರಣದ ತನಿಖೆಯಲ್ಲಿ ಹೊಸ ಮಾಹಿತಿಗಳು ಹೊರಬರುತ್ತಿವೆ. ಪ್ರಕರಣದಲ್ಲಿ ಟಿನ್ನು ಯಾದವ್ ಪ್ರಮುಖ ಪಾತ್ರ ವಹಿಸಿದ್ದಾನೆ ಎನ್ನುವ ಆರೋಪ ಕೇಳಿಬಂದಿದೆ.

ರಾಮಶಂಕರ್ ಯಾದವ್ ಅಲಿಯಾಸ್ ಟಿನ್ನು ಯಾದವ್, ರಾಮಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರ ಚಾಲಕನಾಗಿಯೂ ಕೆಲಸ ಮಾಡಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆದ ವಿಚಾರಣೆಯಲ್ಲಿ ಟಿನ್ನು ಯಾದವ್ ಪ್ರಮುಖ ಪಾತ್ರಧಾರಿ ಎಂದು ಚಂಪತ್ ರಾಯ್ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಇದೇ ವೇಳೆ, ಪೊಲೀಸರ ಕೈಗೆ ಸಿಕ್ಕಿಬೀಳುವ ಮುನ್ನ ಟಿನ್ನು ಯಾದವ್ ಪ್ರಕರಣದ ಮಾಹಿತಿಯನ್ನು ಸಮಾಜವಾದಿ ಪಕ್ಷದ ನಾಯಕರೊಬ್ಬರಿಗೆ ಸೋರಿಕೆ ಮಾಡಿದ್ದಾನೆ ಎಂಬ ಆರೋಪವೂ ಕೇಳಿಬಂದಿದೆ.

ಈ ಪ್ರಕರಣದಲ್ಲಿ ಇದುವರೆಗೆ ಎಂಟು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಲ್ಲಿ ಟಿನ್ನು ಯಾದವ್, ಅವಿನಾಶ್ ಶುಕ್ಲಾ, ಅನುಕಲ್ಪ್ ಮಿಶ್ರಾ, ಲವ್ ಕುಶ್ ಮಿಶ್ರಾ, ಮನೀಶ್ ಕುಮಾರ್ ಯಾದವ್, ಕರುಣೇಶ್ ಪಾಂಡೆ, ರಾಮಶಂಕರ್ ಮಿಶ್ರಾ ಹಾಗೂ ಸುಭಾಷ್ ಶ್ರೀವಾಸ್ತವ ಸೇರಿದ್ದಾರೆ. ಪ್ರಕರಣದ ಕುರಿತು ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದು, ಇನ್ನಷ್ಟು ಮಾಹಿತಿ ಹೊರಬೀಳುವ ಸಾಧ್ಯತೆಯಿದೆ.






