ಬೆಂಗಳೂರು: ಪ್ರತೀಕಾರಾತ್ಮಕ ಅಶ್ಲೀಲತೆ (Revenge Pornography), ಸೆಕ್ಸ್‌ಟಾರ್ಷನ್ (Sextortion) ಹಾಗೂ ಖಾಸಗಿ ವಿಡಿಯೋಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡುವ ಪ್ರಕರಣಗಳಲ್ಲಿ ಕಡ್ಡಾಯವಾಗಿ ಎಫ್‌ಐಆರ್ ದಾಖಲಿಸುವಂತೆ ಕರ್ನಾಟಕ ಪೊಲೀಸ್ ಇಲಾಖೆ ರಾಜ್ಯದ ಎಲ್ಲಾ ಪೊಲೀಸ್ ಅಧಿಕಾರಿಗಳಿಗೆ ಮಹತ್ವದ ನಿರ್ದೇಶನ ನೀಡಿದೆ.ಈ ಸಂಬಂಧ ಹೊರಡಿಸಿರುವ ಸ್ಥಾಯಿ ಆದೇಶದಲ್ಲಿ, ಯಾವುದೇ ಫೋಟೋ ಅಥವಾ ವಿಡಿಯೋವನ್ನು ದಾಖಲಿಸಲು ವ್ಯಕ್ತಿಯು ನೀಡಿದ ಒಪ್ಪಿಗೆಯನ್ನು ಅದನ್ನು ಇತರರಿಗೆ ಹಂಚಿಕೊಳ್ಳಲು ಅಥವಾ ಸಾರ್ವಜನಿಕವಾಗಿ ಪ್ರಸಾರ ಮಾಡಲು ನೀಡಿದ ಒಪ್ಪಿಗೆಯೆಂದು ಪರಿಗಣಿಸಲಾಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ.

ಸಂಬಂಧಿತ ವ್ಯಕ್ತಿಯ ಅನುಮತಿಯಿಲ್ಲದೆ ಖಾಸಗಿ ಫೋಟೋ, ವಿಡಿಯೋ ಅಥವಾ ಇತರ ವೈಯಕ್ತಿಕ ಮಾಹಿತಿಯನ್ನು ಹಂಚುವುದು, ಫಾರ್ವರ್ಡ್ ಮಾಡುವುದು, ಪ್ರಕಟಿಸುವುದು ಅಥವಾ ಪ್ರಸಾರ ಮಾಡುವುದು ಸಂಜ್ಞೇಯ ಅಪರಾಧವಾಗಿದ್ದು, ಮೂಲತಃ ಆ ವಿಷಯವನ್ನು ಒಪ್ಪಿಗೆಯೊಂದಿಗೆ ದಾಖಲಿಸಲಾಗಿದ್ದರೂ ಸಹ ಅದು ಕಾನೂನುಬಾಹಿರ ಕೃತ್ಯವೇ ಆಗಿರುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.ರಿವೆಂಜ್ ಪೋರ್ನೋಗ್ರಫಿ, ಸೆಕ್ಸ್‌ಟಾರ್ಷನ್ ಹಾಗೂ ಬ್ಲ್ಯಾಕ್‌ಮೇಲ್ ವಿಡಿಯೋ ಪ್ರಕರಣಗಳಲ್ಲಿ ಭಾರತೀಯ ನ್ಯಾಯ ಸಂಹಿತೆ (BNS)–2023 ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆ (IT Act)–2000ರ ಅನ್ವಯ ವಿಧಿಗಳಡಿ ಪ್ರಕರಣ ದಾಖಲಿಸಬೇಕು ಎಂದು ಸೂಚಿಸಲಾಗಿದೆ. ಅಗತ್ಯವಿದ್ದಲ್ಲಿ BNS ಸೆಕ್ಷನ್ 77 ಹಾಗೂ ಐಟಿ ಕಾಯ್ದೆಯ 66E, 67 ಮತ್ತು 67A ವಿಧಿಗಳನ್ನು ಅನ್ವಯಿಸಬೇಕು ಎಂದು ತಿಳಿಸಲಾಗಿದೆ.

ವಿಡಿಯೋ ಅಥವಾ ಫೋಟೋ ದಾಖಲಿಸಲು ಹಿಂದೆ ಒಪ್ಪಿಗೆ ನೀಡಲಾಗಿತ್ತು ಎಂಬ ಕಾರಣ ನೀಡಿ ದೂರು ದಾಖಲಿಸಲು ನಿರಾಕರಿಸುವುದು ಅಥವಾ ವಿಳಂಬ ಮಾಡುವುದು ಸಂಪೂರ್ಣ ಅಸಮಂಜಸ ಎಂದು ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ. ಬೆದರಿಕೆ, ಸುಲಿಗೆ ಅಥವಾ ಲೈಂಗಿಕ ಅನುಕೂಲತೆಗಾಗಿ ಒತ್ತಡ ಹೇರುವ ಪ್ರಕರಣಗಳಲ್ಲಿ ಹೆಚ್ಚುವರಿ ಅಪರಾಧ ವಿಧಿಗಳನ್ನೂ ಸೇರಿಸಬೇಕು ಎಂದು ಸೂಚಿಸಲಾಗಿದೆ.ಪ್ರಕರಣದ ವ್ಯಾಪ್ತಿಗೆ ಸಂಬಂಧಿಸಿದ ಗೊಂದಲ ಉಂಟಾದರೆ ಮೊದಲು ‘ಜೀರೋ ಎಫ್‌ಐಆರ್’ ದಾಖಲಿಸಿ, ಬಳಿಕ ಸೂಕ್ತ ಪೊಲೀಸ್ ಠಾಣೆಗೆ ವರ್ಗಾಯಿಸುವಂತೆ ಆದೇಶಿಸಲಾಗಿದೆ.
ಇದಲ್ಲದೆ, ಆಕ್ಷೇಪಾರ್ಹ ವಿಷಯವನ್ನು ತಕ್ಷಣವೇ ಸಾಮಾಜಿಕ ಜಾಲತಾಣಗಳು ಅಥವಾ ಡಿಜಿಟಲ್ ವೇದಿಕೆಗಳಿಂದ ತೆಗೆದುಹಾಕಲು ಕ್ರಮ ಕೈಗೊಳ್ಳುವುದು, ಎಲೆಕ್ಟ್ರಾನಿಕ್ ಸಾಕ್ಷ್ಯಗಳನ್ನು ಸುರಕ್ಷಿತಗೊಳಿಸುವುದು ಹಾಗೂ ಸೈಬರ್ ಕ್ರೈಂ ವಿಭಾಗದೊಂದಿಗೆ ಸಮನ್ವಯ ಸಾಧಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಸಂತ್ರಸ್ತರ ಗೌಪ್ಯತೆ ಮತ್ತು ಗೌರವವನ್ನು ಕಾಪಾಡುವುದು ಅತ್ಯಗತ್ಯ ಎಂದು ಒತ್ತಿ ಹೇಳಿರುವ ಆದೇಶ, ಅವರ ಗುರುತನ್ನು ರಹಸ್ಯವಾಗಿಡಬೇಕು ಹಾಗೂ ಸಂತ್ರಸ್ತರನ್ನೇ ದೂಷಿಸುವ ವರ್ತನೆಗೆ ಅವಕಾಶ ನೀಡಬಾರದು ಎಂದು ತಿಳಿಸಿದೆ. ಮಹಿಳಾ ಸಂತ್ರಸ್ತರ ದೂರುಗಳನ್ನು ಸಾಧ್ಯವಾದಷ್ಟು ಮಹಿಳಾ ಅಧಿಕಾರಿಗಳ ಮೂಲಕವೇ ದಾಖಲಿಸಬೇಕು ಎಂದು ನಿರ್ದೇಶನ ನೀಡಲಾಗಿದೆ.
‘ಹಿಂದೆ ಒಪ್ಪಿಗೆ ಇತ್ತು’ ಎಂಬ ನೆಪ ನೀಡಿ ಎಫ್‌ಐಆರ್ ದಾಖಲಿಸಲು ವಿಫಲವಾದರೆ ಅಥವಾ ಅನಗತ್ಯ ವಿಳಂಬ ಮಾಡಿದರೆ ಸಂಬಂಧಿತ ಅಧಿಕಾರಿಗಳ ವಿರುದ್ಧ ಇಲಾಖಾ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಲಾಗಿದೆ.ಈ ಕ್ರಮವು ನಾಗರಿಕರ ಖಾಸಗಿತನದ ಹಕ್ಕುಗಳನ್ನು ಮತ್ತಷ್ಟು ಬಲಪಡಿಸುವುದರ ಜೊತೆಗೆ, ರಾಜ್ಯದಾದ್ಯಂತ ಇಂತಹ ಪ್ರಕರಣಗಳಲ್ಲಿ ಏಕರೂಪ ಹಾಗೂ ಕಾನೂನುಬದ್ಧ ಕ್ರಮ ಖಚಿತಪಡಿಸುವ ಉದ್ದೇಶ ಹೊಂದಿದೆ.





