ಬೆಂಗಳೂರು: ರಾಜ್ಯದಲ್ಲಿ ಮಳೆ, ಪ್ರವಾಹ ಸೇರಿದಂತೆ ನೈಸರ್ಗಿಕ ವಿಕೋಪಗಳ ಪರಿಣಾಮಕಾರಿ ನಿರ್ವಹಣೆ ಹಾಗೂ ಮೇಲ್ವಿಚಾರಣೆಗಾಗಿ ಕರ್ನಾಟಕ ಸರ್ಕಾರ ಮಹತ್ವದ ಕ್ರಮ ಕೈಗೊಂಡಿದೆ. ಈ ಸಂಬಂಧ ಉಪ ಮುಖ್ಯಮಂತ್ರಿಗಳು ಹಾಗೂ ಸಚಿವರನ್ನು ವಿವಿಧ ಜಿಲ್ಲೆಗಳಿಗೆ ಉಸ್ತುವಾರಿಗಳನ್ನಾಗಿ ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.ತಕ್ಷಣದಿಂದಲೇ ಜಾರಿಗೆ ಬಂದಿರುವ ಈ ಆದೇಶ ಮುಂದಿನ ಸೂಚನೆವರೆಗೆ ಅನ್ವಯವಾಗಲಿದೆ. ನೇಮಕಗೊಂಡಿರುವ ಸಚಿವರು ತಮಗೆ ಹಂಚಿಕೆ ಮಾಡಲಾದ ಜಿಲ್ಲೆಗಳಲ್ಲಿ ವಿಕೋಪ ನಿರ್ವಹಣೆ, ಪರಿಹಾರ ಕಾರ್ಯಾಚರಣೆಗಳು ಹಾಗೂ ಅಧಿಕಾರಿಗಳ ಕಾರ್ಯಚಟುವಟಿಕೆಗಳ ಮೇಲ್ವಿಚಾರಣೆ ನಡೆಸಲಿದ್ದಾರೆ.

ಸರ್ಕಾರದ ಆದೇಶದಂತೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರಿಗೆ ತುಮಕೂರು ಮತ್ತು ಚಿತ್ರದುರ್ಗ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ. ಕೆ.ಹೆಚ್. ಮುನಿಯಪ್ಪ ಅವರಿಗೆ ಬೆಂಗಳೂರು ಗ್ರಾಮಾಂತರ, ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳ ಉಸ್ತುವಾರಿ ವಹಿಸಲಾಗಿದೆ. ರಾಮಲಿಂಗಾರೆಡ್ಡಿ ಅವರಿಗೆ ಬೆಂಗಳೂರು ದಕ್ಷಿಣ ಮತ್ತು ಮಂಡ್ಯ ಜಿಲ್ಲೆಗಳು, ಎಂ.ಬಿ. ಪಾಟೀಲ ಅವರಿಗೆ ವಿಜಯಪುರ ಹಾಗೂ ಬಾಗಲಕೋಟೆ ಜಿಲ್ಲೆಗಳ ಹೊಣೆಗಾರಿಕೆ ನೀಡಲಾಗಿದೆ.
ಕೆ.ಜೆ. ಜಾರ್ಜ್ ಅವರಿಗೆ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ದಾವಣಗೆರೆ ಜಿಲ್ಲೆಗಳು, ಕೃಷ್ಣ ಬೈರೇಗೌಡ ಅವರಿಗೆ ಬೆಂಗಳೂರು ನಗರ ಹಾಗೂ ಹಾಸನ ಜಿಲ್ಲೆಗಳು, ಈಶ್ವರ್ ಖಂಡ್ರೆ ಅವರಿಗೆ ಬೀದರ್ ಮತ್ತು ಗದಗ ಜಿಲ್ಲೆಗಳು ಹಂಚಿಕೆ ಮಾಡಲಾಗಿದೆ.ಸತೀಶ್ ಜಾರಕಿಹೊಳಿ ಅವರಿಗೆ ಬೆಳಗಾವಿ, ಧಾರವಾಡ ಹಾಗೂ ಹಾವೇರಿ, ಪ್ರಿಯಾಂಕ್ ಖರ್ಗೆ ಅವರಿಗೆ ಕಲಬುರಗಿ ಮತ್ತು ಯಾದಗಿರಿ, ಶರಣಪ್ರಕಾಶ್ ಪಾಟೀಲ ಅವರಿಗೆ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ.

ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಉಡುಪಿ, ಕೊಡಗು, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಉಸ್ತುವಾರಿ ನೀಡಲಾಗಿದ್ದು, ಭೈರತಿ ಸುರೇಶ್ ಅವರಿಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ, ಡಾ. ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ಜವಾಬ್ದಾರಿ ನೀಡಲಾಗಿದೆ.ರಾಜ್ಯದಲ್ಲಿ ಮುಂಗಾರು ಚುರುಕುಗೊಂಡಿರುವ ಹಿನ್ನೆಲೆಯಲ್ಲಿ ಯಾವುದೇ ತುರ್ತು ಪರಿಸ್ಥಿತಿಯನ್ನು ಸಮರ್ಥವಾಗಿ ಎದುರಿಸಲು ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸರ್ಕಾರ ತಿಳಿಸಿದೆ.






