ಕರ್ನಾಟಕ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ ತಮ್ಮ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡುವುದಾಗಿ ಘೋಷಿಸಿದ್ದಾರೆ. ಬೆಳಿಗ್ಗೆ ತಮ್ಮ ಅಧಿಕೃತ ನಿವಾಸದಲ್ಲಿ ನಡೆದ ಮಹತ್ವದ ಉಪಹಾರ ಸಭೆಯಲ್ಲಿ ಸಚಿವರ ಸಮ್ಮುಖದಲ್ಲೇ ಈ ನಿರ್ಧಾರವನ್ನು ಪ್ರಕಟಿಸಿದ್ದು, ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ದೆಹಲಿ ಮಟ್ಟದಲ್ಲಿ ಕಾಂಗ್ರೆಸ್ ಹೈಕಮಾಂಡ್ ನಡೆಸಿದ ಸರಣಿ ಸಭೆಗಳ ಬಳಿಕ ನಾಯಕತ್ವ ಬದಲಾವಣೆಯ ತೀರ್ಮಾನ ಅಂತಿಮಗೊಂಡಿದೆ ಎನ್ನಲಾಗುತ್ತಿದೆ. ಇಂದು ನಡೆದ ಉಪಹಾರ ಸಭೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ, “ಪಕ್ಷದ ಶಿಸ್ತಿನ ಸಿಪಾಯಿಯಾಗಿ ಹೈಕಮಾಂಡ್ ತೀರ್ಮಾನವನ್ನು ಗೌರವಿಸುತ್ತೇನೆ” ಎಂದು ಹೇಳಿ, ಮಧ್ಯಾಹ್ನ 3 ಗಂಟೆಗೆ ರಾಜ್ಯಪಾಲರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ಸಲ್ಲಿಸುವುದಾಗಿ ಸಚಿವರಿಗೆ ತಿಳಿಸಿದ್ದಾರೆ.

ಈ ವೇಳೆ ಕಳೆದ ಮೂರು ವರ್ಷಗಳ ಆಡಳಿತ ಅವಧಿಯಲ್ಲಿ ಸಹಕರಿಸಿದ ಎಲ್ಲ ಸಚಿವರಿಗೆ ಸಿಎಂ ಧನ್ಯವಾದ ತಿಳಿಸಿದರೆಂದು ಮೂಲಗಳು ಹೇಳುತ್ತಿವೆ. ಸಭೆಯಲ್ಲಿ ಕೆಲ ಸಚಿವರು ಭಾವುಕರಾದ ದೃಶ್ಯಗಳೂ ಕಂಡುಬಂದಿವೆ ಎನ್ನಲಾಗಿದೆ.
ಡಿಕೆ ಶಿವಕುಮಾರ್ ಮುಂದಿನ ಸಿಎಂ?
ಸಿದ್ದರಾಮಯ್ಯ ರಾಜೀನಾಮೆ ಬಳಿಕ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ. ಮೇ 30ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದ್ದು, ಅಲ್ಲಿ ಡಿಕೆ ಶಿವಕುಮಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಾಗಿದೆ.

ನಾಯಕತ್ವ ಬದಲಾವಣೆ ಸುದ್ದಿಯ ಬೆನ್ನಲ್ಲೇ ಬೆಂಗಳೂರಿನಲ್ಲಿ ರಾಜಕೀಯ ಚಟುವಟಿಕೆಗಳು ವೇಗ ಪಡೆದಿವೆ. ಸಿದ್ದರಾಮಯ್ಯ ಹಾಗೂ ಡಿಕೆ ಶಿವಕುಮಾರ್ ನಿವಾಸಗಳ ಬಳಿ ಸಚಿವರು, ಶಾಸಕರು ಹಾಗೂ ಬೆಂಬಲಿಗರ ಓಡಾಟ ಹೆಚ್ಚಾಗಿದೆ. ಮುಂದಿನ ಸಚಿವ ಸಂಪುಟ ಪುನರ್‌ರಚನೆ ಕುರಿತು ತೆರೆಮರೆಯ ಮಾತುಕತೆಗಳು ಕೂಡ ಆರಂಭವಾಗಿವೆ ಎನ್ನಲಾಗುತ್ತಿದೆ.ಇನ್ನೊಂದೆಡೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇಂದು ಮಧ್ಯಾಹ್ನ 2.30ಕ್ಕೆ ಲೋಕಭವನಕ್ಕೆ ಭೇಟಿ ನೀಡಲಿದ್ದು, ಬಳಿಕ ಮಧ್ಯಾಹ್ನ 3 ಗಂಟೆಗೆ ಗೃಹ ಕಚೇರಿ ‘ಕೃಷ್ಣಾ’ದಲ್ಲಿ ಮಹತ್ವದ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.




