ಪ್ರಧಾನಿ ನರೇಂದ್ರ ಮೋದಿ ಹಾಗೂ ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ನಡುವಿನ ಆತ್ಮೀಯ ಬಾಂಧವ್ಯ ಇದೀಗ ಜಾಗತಿಕ ರಾಜತಾಂತ್ರಿಕ ವಲಯದಲ್ಲೇ ಭಾರಿ ಚರ್ಚೆಗೆ ಕಾರಣವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ‘ಮೆಲೋಡಿ’ (Melodi) ಹೆಸರಿನಲ್ಲಿ ವೈರಲ್ ಆಗಿದ್ದ ಈ ಜೋಡಿ, ಈಗ ಭಾರತ-ಇಟಲಿ ಸಂಬಂಧಗಳನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿರುವ ಪ್ರಮುಖ ರಾಜತಾಂತ್ರಿಕ ಶಕ್ತಿಯಾಗಿದೆ ಎಂದು ಅಂತರರಾಷ್ಟ್ರೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.

ಇತ್ತೀಚೆಗೆ ಪ್ರಧಾನಿ ಮೋದಿ ಐದು ರಾಷ್ಟ್ರಗಳ ಪ್ರವಾಸದ ಕೊನೆಯ ಹಂತವಾಗಿ ರೋಮ್ಗೆ ಭೇಟಿ ನೀಡಿದ್ದ ವೇಳೆ, ಇಟಲಿ ಪ್ರಧಾನಿ ಮೆಲೋನಿ ಅವರು ನೀಡಿದ ವಿಶೇಷ ಆತಿಥ್ಯ ಮತ್ತು ಇಬ್ಬರ ನಡುವಿನ ಆತ್ಮೀಯತೆ ಮತ್ತೊಮ್ಮೆ ಜಗತ್ತಿನ ಗಮನ ಸೆಳೆದಿತ್ತು. ರಾತ್ರಿ ಭೋಜನ, ಕಾರು ಪ್ರಯಾಣ, ಕೊಲೋಸಿಯಮ್ ಸ್ಮಾರಕ ವೀಕ್ಷಣೆ ಸೇರಿದಂತೆ ಹಲವು ಕ್ಷಣಗಳ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದವು.ಆದರೆ ಇದು ಕೇವಲ ವೈಯಕ್ತಿಕ ಸ್ನೇಹವಲ್ಲ. ಇದರ ಹಿಂದೆ ದೊಡ್ಡ ಮಟ್ಟದ ಜಾಗತಿಕ ರಾಜತಾಂತ್ರಿಕ ಲೆಕ್ಕಾಚಾರ ಅಡಗಿದೆ ಎನ್ನಲಾಗುತ್ತಿದೆ.
ರಷ್ಯಾ-ಉಕ್ರೇನ್ ಯುದ್ಧ, ಚೀನಾ ಪ್ರಭಾವ, ಮಧ್ಯಪ್ರಾಚ್ಯದ ಉದ್ವಿಗ್ನತೆಗಳ ನಡುವೆ ಭಾರತ ತನ್ನ ಯುರೋಪ್ ತಂತ್ರವನ್ನು ಹೊಸದಾಗಿ ರೂಪಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇಟಲಿ ಭಾರತಕ್ಕೆ ಪ್ರಮುಖ ಪಾಲುದಾರ ರಾಷ್ಟ್ರವಾಗಿ ಹೊರಹೊಮ್ಮಿದೆ.
ಯುರೋಪಿಯನ್ ಯೂನಿಯನ್ನ ಪ್ರಮುಖ ಆರ್ಥಿಕ ಶಕ್ತಿಗಳಲ್ಲೊಂದಾದ ಇಟಲಿ, ರಕ್ಷಣಾ ಉತ್ಪಾದನೆ, ಹಸಿರು ಇಂಧನ, ತಂತ್ರಜ್ಞಾನ, ಸೆಮಿಕಂಡಕ್ಟರ್, ಬಂದರು ಅಭಿವೃದ್ಧಿ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಕೈಜೋಡಿಸಲು ಉತ್ಸುಕವಾಗಿದೆ. ವಿಶೇಷವಾಗಿ ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ (IMEC) ಯೋಜನೆಯಲ್ಲಿ ಇಟಲಿಯ ಪಾತ್ರ ಮಹತ್ವದ್ದಾಗಿದೆ.

ದುಬೈನಲ್ಲಿ ನಡೆದ COP28 ಶೃಂಗಸಭೆಯಲ್ಲಿ ಮೆಲೋನಿ ಹಾಗೂ ಮೋದಿ ಒಟ್ಟಿಗೆ ಸೆಲ್ಫಿ ತೆಗೆದುಕೊಂಡು “Good friends at COP28” ಎಂದು ಪೋಸ್ಟ್ ಮಾಡಿದ್ದ ಕ್ಷಣವೇ ‘Melodi’ ಟ್ರೆಂಡ್ ಹುಟ್ಟಿಕೊಂಡಿತ್ತು. ನಂತರ ಹಲವು ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಇಬ್ಬರೂ ಆತ್ಮೀಯವಾಗಿ ಕಾಣಿಸಿಕೊಂಡಿರುವುದು ಜಾಗತಿಕ ರಾಜಕೀಯದಲ್ಲೇ ಕುತೂಹಲ ಕೆರಳಿಸಿತ್ತು.
ವಿಶ್ಲೇಷಕರ ಪ್ರಕಾರ, ರಾಷ್ಟ್ರವಾದಿ ಹಾಗೂ ಬಲಪಂಥೀಯ ರಾಜಕೀಯ ಧೋರಣೆಯಲ್ಲಿ ಇಬ್ಬರಿಗೂ ಕೆಲವು ಸಾಮ್ಯತೆಗಳಿವೆ. ಇದೇ ಕಾರಣಕ್ಕೆ ಭಾರತ-ಇಟಲಿ ಸಂಬಂಧಗಳು ವೇಗವಾಗಿ ಗಟ್ಟಿಯಾಗುತ್ತಿವೆ ಎನ್ನಲಾಗುತ್ತಿದೆ.
ಇಟಲಿ ಈಗ ಭಾರತದಲ್ಲಿ ರಕ್ಷಣಾ ತಂತ್ರಜ್ಞಾನ ಹೂಡಿಕೆ ಹೆಚ್ಚಿಸಲು ಆಸಕ್ತಿ ತೋರಿದೆ. ಡ್ರೋನ್, ನೌಕಾಪಡೆ ತಂತ್ರಜ್ಞಾನ, ಹೈ-ಎಂಡ್ ಮ್ಯಾನುಫ್ಯಾಕ್ಚರಿಂಗ್ ಕ್ಷೇತ್ರಗಳಲ್ಲಿ ಉಭಯ ರಾಷ್ಟ್ರಗಳ ನಡುವೆ ಸಹಕಾರ ಹೆಚ್ಚಾಗುವ ನಿರೀಕ್ಷೆಯಿದೆ.ಇದರ ಜೊತೆಗೆ ಯುರೋಪಿಯನ್ ಮಾರುಕಟ್ಟೆಯಲ್ಲಿ ಭಾರತದ ಪ್ರಭಾವ ಹೆಚ್ಚಿಸಲು ಇಟಲಿ ಪ್ರಮುಖ ದ್ವಾರವಾಗಬಹುದು ಎಂಬ ಲೆಕ್ಕಾಚಾರ ದೆಹಲಿಯಲ್ಲಿದೆ.
ಅಮೆರಿಕ-ಚೀನಾ ಪೈಪೋಟಿ, ರಷ್ಯಾ ಯುದ್ಧ, ಮಧ್ಯಪ್ರಾಚ್ಯದ ಅಶಾಂತಿ ನಡುವಿನ ಕಾಲಘಟ್ಟದಲ್ಲಿ ಭಾರತ ಬಹುಮುಖ ರಾಜತಾಂತ್ರಿಕ ನೀತಿಯನ್ನು ಅನುಸರಿಸುತ್ತಿದೆ. ಆ ನೀತಿಯಲ್ಲಿ ಈಗ ಇಟಲಿ ಪ್ರಮುಖ ಸ್ಥಾನ ಪಡೆದಿದ್ದು, ಮೋದಿ-ಮೆಲೋನಿ ಬಾಂಧವ್ಯ ಅದರ ಕೇಂದ್ರಬಿಂದುವಾಗಿದೆ.ಸಾಮಾಜಿಕ ಜಾಲತಾಣಗಳಲ್ಲಿ ಆರಂಭವಾದ ‘ಮೆಲೋಡಿ’ ಟ್ರೆಂಡ್ ಈಗ ಜಾಗತಿಕ ರಾಜಕೀಯದ ಗಂಭೀರ ಚರ್ಚೆಯ ವಿಷಯವಾಗಿ ರೂಪಾಂತರಗೊಂಡಿದೆ.






