ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ 49ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಹೈದರಾಬಾದ್‌ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಡೆಯಲಿರುವ ಈ ಪಂದ್ಯ ಉಭಯ ತಂಡಗಳಿಗೆ ನಿರ್ಣಾಯಕವಾಗಿದೆ.ಸತತ ಗೆಲುವುಗಳ ಬಳಿಕ ಇತ್ತೀಚೆಗೆ ಹಿನ್ನಡೆ ಕಂಡಿರುವ ಎರಡೂ ತಂಡಗಳು ಪ್ಲೇಆಫ್ ಪ್ರವೇಶದ ಗಡಿಯಲ್ಲಿ ನಿಂತಿವೆ. ಹೀಗಾಗಿ ಈ ಪಂದ್ಯದಲ್ಲಿ ಜಯ ಸಾಧಿಸುವುದು ಅತ್ಯಂತ ಮುಖ್ಯವಾಗಿದೆ. ಗೆಲ್ಲುವ ತಂಡ ಪ್ಲೇಆಫ್‌ಗೆ ಒಂದು ಹೆಜ್ಜೆ ಹತ್ತಿರವಾಗಲಿದ್ದು, ಕುತೂಹಲ ಹೆಚ್ಚಿಸಿದೆ.

ಪಂಜಾಬ್ ಕಿಂಗ್ಸ್ ಗೆದ್ದರೆ 15 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಳ್ಳುವ ಸಾಧ್ಯತೆ ಇದೆ. ಮತ್ತೊಂದೆಡೆ, ಸನ್‌ರೈಸರ್ಸ್ ಹೈದರಾಬಾದ್ ಗೆದ್ದರೆ 14 ಅಂಕಗಳೊಂದಿಗೆ ಅಗ್ರಸ್ಥಾನಕ್ಕೇರುವ ಅವಕಾಶ ಸಿಗಲಿದೆ.ಈ ಪಂದ್ಯವು ಕೇವಲ ಈ ಎರಡು ತಂಡಗಳಿಗಷ್ಟೇ ಅಲ್ಲ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೂ ಮಹತ್ವದ್ದಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಆರ್‌ಸಿಬಿ ಅಭಿಮಾನಿಗಳು ಈ ಪಂದ್ಯದ ಫಲಿತಾಂಶ ತಮ್ಮ ತಂಡದ ಟಾಪ್-2 ಕನಸಿಗೆ ಹೇಗೆ ಪರಿಣಾಮ ಬೀರುತ್ತದೆ ಎಂಬ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ವಿಶೇಷವಾಗಿ, ಈ ಪಂದ್ಯದಲ್ಲಿ ಹೈದರಾಬಾದ್ ಗೆದ್ದರೆ ಆರ್‌ಸಿಬಿಗೆ ಹೆಚ್ಚು ಅನುಕೂಲವಾಗಲಿದೆ. ಏಕೆಂದರೆ ಪಂಜಾಬ್ ಸೋತರೆ ಟಾಪ್-2 ಸ್ಥಾನಕ್ಕಾಗಿ ಪೈಪೋಟಿ ಇನ್ನಷ್ಟು ತೀವ್ರವಾಗುತ್ತದೆ. ಹೀಗಾಗಿ ಈ ಕದನ ಅಂಕಪಟ್ಟಿಯಲ್ಲಿ ದೊಡ್ಡ ತಿರುವು ತರಬಹುದೆಂಬ ನಿರೀಕ್ಷೆ ಇದೆ.






