ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದ ಗಡಿ ಭಾಗದಲ್ಲಿ ಉದ್ವಿಗ್ನತೆ ದಿನದಿಂದ ದಿನಕ್ಕೆ ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಇತ್ತೀಚೆಗೆ ಪಾಕಿಸ್ತಾನ ಸೇನೆ ಗಡಿಯುದ್ದಕ್ಕೂ ವೈಮಾನಿಕ ದಾಳಿ ನಡೆಸಿದ್ದು, ಪರಿಸ್ಥಿತಿ ಮತ್ತಷ್ಟು ತೀವ್ರಗೊಂಡಿದೆ.ಪಾಕಿಸ್ತಾನದ ಹೇಳಿಕೆಯ ಪ್ರಕಾರ, ತಮ್ಮ ದೇಶದೊಳಗೆ ನಡೆಯುತ್ತಿರುವ ಭಯೋತ್ಪಾದಕ ಚಟುವಟಿಕೆಗಳಿಗೆ ಅಫ್ಘಾನಿಸ್ತಾನದ ನೆಲವನ್ನು ಬಳಸಲಾಗುತ್ತಿದೆ ಎಂಬ ಆರೋಪದ ಮೇರೆಗೆ ಈ ದಾಳಿ ನಡೆಸಲಾಗಿದೆ.

ಈ ಹಿನ್ನೆಲೆಯಲ್ಲಿ ಗಡಿ ದಾಟಿ ಗುಂಡಿನ ದಾಳಿ ಕೂಡ ನಡೆದಿರುವುದಾಗಿ ವರದಿಯಾಗಿದೆ.ವಿಶೇಷವಾಗಿ ಅಫ್ಘಾನಿಸ್ತಾನದ ಪೆಕ್ಟಿಕಾ ಮತ್ತು ಖೋಸ್ಟ್ ಪ್ರಾಂತ್ಯಗಳಲ್ಲಿ ಉಗ್ರರ ಅಡಗುದಾಣಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ. ದಾಳಿಯಲ್ಲಿ ಕೆಲವರ ಸಾವಿನ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ನಿಖರ ಮಾಹಿತಿ ಇನ್ನಷ್ಟೇ ಬಹಿರಂಗವಾಗಬೇಕಿದೆ.ಇದಕ್ಕೆ ಪ್ರತಿಕ್ರಿಯೆ ನೀಡಿರುವ ತಾಲಿಬಾನ್ ಆಡಳಿತ, ಪಾಕಿಸ್ತಾನದ ಕ್ರಮವನ್ನು ತೀವ್ರವಾಗಿ ಖಂಡಿಸಿದೆ. “ಇದು ನಮ್ಮ ಸಾರ್ವಭೌಮತ್ವದ ಮೇಲಿನ ನೇರ ದಾಳಿ.

ಇಂತಹ ಕ್ರಮಗಳು ಅನಿರೀಕ್ಷಿತ ಪರಿಣಾಮಗಳಿಗೆ ಕಾರಣವಾಗಬಹುದು” ಎಂದು ತಾಲಿಬಾನ್ ವಕ್ತಾರರು ಎಚ್ಚರಿಕೆ ನೀಡಿದ್ದಾರೆ.ಹಾಗೆಯೇ ಪರಿಸ್ಥಿತಿ ಮತ್ತಷ್ಟು ಹದಗೆಡದಂತೆ ನೋಡಿಕೊಳ್ಳಲು ತಕ್ಷಣವೇ ಸಂಘರ್ಷ ನಿಲ್ಲಿಸಿ, ಮಾತುಕತೆಯ ಮೂಲಕ ಸಮಸ್ಯೆ ಬಗೆಹರಿಸಿಕೊಳ್ಳುವಂತೆ ತಾಲಿಬಾನ್ ಸರ್ಕಾರ ಪಾಕಿಸ್ತಾನಕ್ಕೆ ಮನವಿ ಮಾಡಿದೆ.ಈ ಬೆಳವಣಿಗೆಗಳು ದಕ್ಷಿಣ ಏಷ್ಯಾದ ಭದ್ರತಾ ಪರಿಸ್ಥಿತಿಗೆ ಹೊಸ ಸವಾಲುಗಳನ್ನು ಉಂಟುಮಾಡುವ ಸಾಧ್ಯತೆ ಇದ್ದು, ಅಂತರರಾಷ್ಟ್ರೀಯ ಸಮುದಾಯದ ಗಮನವೂ ಈ ಗಡಿ ವಿವಾದದತ್ತ ಸೆಳೆಯುತ್ತಿದೆ.






