ಅಹಮದಾಬಾದ್ನ ಚಾಂದ್ಖೇಡಾ ಪ್ರದೇಶದಲ್ಲಿ ದೋಸೆ ಹಿಟ್ಟು ಸೇವನೆಯ ಬಳಿಕ ಇಬ್ಬರು ಮಕ್ಕಳು ಮೃತಪಟ್ಟಿರುವ ಪ್ರಕರಣಕ್ಕೆ ಇದೀಗ ಹೊಸ ತಿರುವು ದೊರೆತಿದೆ. ಪ್ರಾರಂಭದಲ್ಲಿ ಆಹಾರ ವಿಷಬಾಧೆ ಎಂದು ಭಾವಿಸಲಾಗಿದ್ದ ಈ ಘಟನೆ ಇದೀಗ ಆತ್ಮಹತ್ಯೆ ಶಂಕೆಯತ್ತ ತಿರುಗಿದ್ದು, ತನಿಖೆ ಗಂಭೀರ ಹಂತಕ್ಕೆ ತಲುಪಿದೆ.

ವಿಮಲ್ ಪ್ರಜಾಪತಿ ಮತ್ತು ಭಾವನಾ ಪ್ರಜಾಪತಿ ದಂಪತಿಗಳು ಸ್ಥಳೀಯ ಡೈರಿಯಿಂದ ದೋಸೆ ಹಿಟ್ಟು ಖರೀದಿಸಿ ಮನೆಗೆ ತಂದಿದ್ದರು. ಇದನ್ನು ಸೇವಿಸಿದ ಬಳಿಕ ಕುಟುಂಬದ ಎಲ್ಲರೂ ತೀವ್ರ ಅಸ್ವಸ್ಥರಾಗಿದ್ದು, ವಾಂತಿ-ಭೇದಿ ಲಕ್ಷಣಗಳು ಕಾಣಿಸಿಕೊಂಡಿವೆ. ಈ ಘಟನೆಯಲ್ಲಿ ಮೂರು ತಿಂಗಳ ಶಿಶು ರಾಹಾ ಹಾಗೂ ನಾಲ್ಕು ವರ್ಷದ ಮಗಳು ಮಿಶ್ರಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ದಂಪತಿಗಳು ಆಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

ಮೂರು ತಿಂಗಳ ಶಿಶುವಿಗೆ ದೋಸೆಹಿಟ್ಟಿನಂತಹ ಆಹಾರ ನೀಡಲಾಗುವುದಿಲ್ಲ ಎಂಬ ವಿಚಾರ ಹಿನ್ನೆಲೆ, ಈ ಸಾವಿನ ಬಗ್ಗೆ ಮೊದಲಿನಿಂದಲೇ ಅನುಮಾನಗಳು ವ್ಯಕ್ತವಾಗಿದ್ದವು. ತಾಯಿ ವಿಷಾಹಾರಕ್ಕೆ ಒಳಗಾದ ಬಳಿಕ ಮಗುವಿಗೆ ಸ್ತನ್ಯಪಾನ ಮಾಡಿಸಿದ್ದರಿಂದ ಪರಿಣಾಮವಾಗಿರಬಹುದು ಎಂಬ ಶಂಕೆಯೂ ವ್ಯಕ್ತವಾಗಿತ್ತು.ಆದರೆ ತನಿಖೆಯಲ್ಲಿ ಮಹತ್ವದ ಮಾಹಿತಿ ಹೊರಬಿದ್ದಿದ್ದು, ದಂಪತಿಗಳ ರಕ್ತದ ಮಾದರಿಗಳಲ್ಲಿ ಅಪಾಯಕಾರಿ ಕೀಟನಾಶಕವಾದ ಅಲ್ಯೂಮಿನಿಯಂ ಫಾಸ್ಫೈಡ್ ಪತ್ತೆಯಾಗಿದೆ ಎಂದು ವಿಧಿವಿಜ್ಞಾನ ಪ್ರಯೋಗಾಲಯದ ಪ್ರಾಥಮಿಕ ವರದಿ ತಿಳಿಸಿದೆ. ಇದರಿಂದ ದೋಸೆ ಹಿಟ್ಟಿನಲ್ಲಿ ವಿಷ ಮಿಶ್ರಣದ ಬಗ್ಗೆ ಪ್ರಶ್ನೆಗಳು ಎದ್ದಿದ್ದು, ಪ್ರಕರಣಕ್ಕೆ ಹೊಸ ಆಯಾಮ ಸಿಕ್ಕಿದೆ.

ಇನ್ನೊಂದೆಡೆ, ದಂಪತಿಗಳು ಘಟನೆಗೆ ಸಂಬಂಧಿಸಿದಂತೆ ನೀಡುತ್ತಿರುವ ಹೇಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದ್ದು, ಪೊಲೀಸರಲ್ಲಿ ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಸುಮಾರು 200ಕ್ಕೂ ಹೆಚ್ಚು ಜನರಿಗೆ ಮಾರಾಟವಾದ ದೋಸೆ ಹಿಟ್ಟು ಒಂದೇ ಕುಟುಂಬಕ್ಕೆ ಮಾತ್ರ ಹಾನಿ ಉಂಟು ಮಾಡಿರುವುದು ಕೂಡ ಸಂಶಯಕ್ಕೆ ಕಾರಣವಾಗಿದೆ.

ಮೂರು ತಿಂಗಳ ಮಗುವಿನ ಅಂತ್ಯಕ್ರಿಯೆಯನ್ನು ಕುಟುಂಬವು ರಹಸ್ಯವಾಗಿ ನಡೆಸಿರುವ ವಿಚಾರವೂ ಬೆಳಕಿಗೆ ಬಂದಿದೆ. ನಂತರ ನಾಲ್ಕು ವರ್ಷದ ಮಗಳು ಸಾವನ್ನಪ್ಪಿದ ಬಳಿಕವೇ ಪ್ರಕರಣ ಬಹಿರಂಗವಾಗಿದೆ. ಈ ಹಿನ್ನೆಲೆ, ಇಡೀ ಕುಟುಂಬ ಆತ್ಮಹತ್ಯೆಗೆ ಯತ್ನಿಸಿತ್ತೇ ಎಂಬ ಪ್ರಶ್ನೆ ಉದ್ಭವಿಸಿದೆ.
ಪ್ರಕರಣದ ನಿಖರ ಕಾರಣ ತಿಳಿಯಲು ಅಂತಿಮ ಫೋರೆನ್ಸಿಕ್ ವರದಿ ನಿರೀಕ್ಷಿಸಲಾಗುತ್ತಿದೆ. ಮಕ್ಕಳ ದೇಹದಲ್ಲಿ ಪತ್ತೆಯಾದ ವಿಷಕಾರಿ ಅಂಶಗಳು ದೋಸೆ ಹಿಟ್ಟಿನಿಂದಲೇ ಬಂದವೆಯೋ ಅಥವಾ ಬೇರೆ ಮೂಲದಿಂದಲೋ ಎಂಬುದು ವರದಿ ಬಳಿಕ ಸ್ಪಷ್ಟವಾಗಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.





