• {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy
Thursday, April 30, 2026
  • Login
Pratidhvani
No Result
View All Result
No Result
View All Result
Pratidhvani
No Result
View All Result
Home ಅಂಕಣ

ಐಕ್ಯತೆಯ ಹೊತ್ತಿನಲ್ಲಿ ವಿಘಟನೆಯ ಸದ್ದು

ಹೊರಳುದಾರಿಯಲ್ಲಿರುವ ಭಾರತಲ್ಲಿ ತಳಸಮಾಜದ ವಿಘಟನೆ ಅನಾಹುತಕಾರಿಯಾಗುತ್ತದೆ

ಪ್ರತಿಧ್ವನಿ by ಪ್ರತಿಧ್ವನಿ
April 3, 2026
in ಅಂಕಣ
0
ಬೆಂಗಳೂರುದಲ್ಲಿ ಅನುಮಾನಾಸ್ಪದ ಬೊಲೆರೋ ಕಾರು : ಆತಂಕದ ವೈರಲ್ ವಿಡಿಯೋಗೆ ಪೊಲೀಸ್ ಪರಿಶೀಲನೆ
Share on WhatsAppShare on FacebookShare on Telegram

-ನಾ ದಿವಾಕರ

ADVERTISEMENT

( ಕರ್ನಾಟಕದಲ್ಲಿ ನಡೆಯುತ್ತಿರುವ ಒಳಮೀಸಲಾತಿ ಹೋರಾಟಗಳು ಮೂರು ಕವಲುಗಳಾಗಿ ಹರಿಯುತ್ತಿದ್ದು , ಈ ಹೋರಾಟಗಳಲ್ಲಿ ಮುನ್ನಲೆಗೆ ಬಾರದ ತಾತ್ವಿಕ ಅಂಶಗಳನ್ನು ನಾಲ್ಕು ಭಾಗದ ಲೇಖನದಲ್ಲಿ ಚರ್ಚಿಸಲಾಗಿದೆ. ಅನುಪಾತ, ಶೇಕಡಾವಾರು ಹಂಚಿಕೆ ಇತ್ಯಾದಿ ಅಂಕಿ ಸಂಖ್ಯೆಗಳನ್ನು ಹೊರಗಿಟ್ಟು ಸಮಾಜದ ವಾಸ್ತವ ನೆಲೆಗಟ್ಟಿನಲ್ಲಿ ವಿಷಯ ಮಂಡಿಸಲಾಗಿದೆ. )
ಈ ಸರಣಿಯ ಮೂರನೆಯ ಭಾಗ ಇಲ್ಲಿದೆ.
ಭಾಗ 3

ಈಗ ಹಿರಿಯ ದಲಿತ ಚಿಂತಕರಿಂದ, ದಲಿತೇತರ ವ್ಯಕ್ತಿ-ಸಂಘಟನೆಗಳಿಂದ ಹಾಗೂ ಬುದ್ಧಿಜೀವಿ ವಲಯದಿಂದ ಮೂರು ದಿಕ್ಕುಗಳಲ್ಲಿ ಸಾಗುತ್ತಿರುವ ದಲಿತ ಚಳುವಳಿಯನ್ನು ʼ ಒಂದುಗೂಡಿಸುವ ʼ ಪ್ರಯತ್ನಗಳು ನಡೆಯುತ್ತಿವೆ. ಇದು ಸ್ವಾಗತಾರ್ಹ. ಆದರೆ ಒಂದುಗೂಡಿಸಬೇಕಿರುವುದು ಯಾರನ್ನು ಮತ್ತು ಏನನ್ನು ಎನ್ನುವ ಸ್ಪಷ್ಟತೆ ನಮಗಿರಬೇಕು. 50 ವರ್ಷಗಳಿಂದಲೂ ನಿರಂತರ ವಿಘಟನೆಗೊಳಗಾಗುತ್ತಿರುವ ದಲಿತ ಚಳುವಳಿಯಲ್ಲಿ ಈ ಕವಲುಗಳಿಗೆ ಕಾರಣ ತಾತ್ವಿಕವೂ ಅಲ್ಲ, ಸೈದ್ಧಾಂತಿಕವೂ ಅಲ್ಲ. ಅಷ್ಟೇಕೆ ಹೋರಾಟದ ಮಾರ್ಗಗಳೂ ಅಲ್ಲ. ಎಲ್ಲ ಬಣಗಳೂ ಅನುಸರಿಸುವುದು ಒಂದೇ ಮಾರ್ಗ ಎಂದರೆ , ಸಂಘಟನೆ, ವಿಷಯಾಧಾರಿತ ಪ್ರತಿಭಟನೆ, ಹಕ್ಕೊತ್ತಾಯ ಹೋರಾಟ, ಸರ್ಕಾರಗಳ ಮೇಲೆ ಒತ್ತಡ ಮತ್ತು ಈ ಪ್ರಕ್ರಿಯೆಯ ಭಾಗವಾಗಿ ಒಂದು ವಿಚಾರ ಸಂಕಿರಣ (Seminar). ತದನಂತರ ಏನು ????

ದಲಿತ ಸಮುದಾಯಗಳು ದೈನಂದಿನ ಜೀವನದಲ್ಲಿ ಎದುರಿಸುವ ಸಮಸ್ಯೆಗಳು ನೂರಾರು. ಜಾತಿ ತಾರತಮ್ಯಗಳು ವಿವಿಧ ಸಾಮಾಜಿಕ ಸ್ತರಗಳಲ್ಲಿ ವಿವಿಧ ರೂಪದಲ್ಲಿ ನಡೆಯುತ್ತಲೇ ಇರುತ್ತವೆ. ಶೋಷಣೆ ರೂಪಾಂತರಗೊಂಡಿದೆ. ಅಪಮಾನಗಳು ತೆರೆಮರೆಯಲ್ಲಿ ನಡೆಯುತ್ತವೆ. ಸಾಮಾಜಿಕ ಪ್ರತ್ಯೇಕತೆ ಸಮಾಜದ ಒಳಪದರಗಳಲ್ಲಿ ಹಾಸುಹೊಕ್ಕಾಗಿದ್ದರೂ, ಮೇಲ್ನೋಟಕ್ಕೆ ಕಾಣದಂತಿದೆ. ಜಾತಿ ತಾರತಮ್ಯವನ್ನು ಅನುಸರಿಸಲು ಅಥವಾ ಅಂತರ ಕಾಪಾಡಲು ಹೊಸ ಮಾರ್ಗಗಳನ್ನು ಶೋಧಿಸಲಾಗಿದೆ. ಸಾರ್ವಜನಿಕ ಸ್ಥಳಗಳಲ್ಲಿ ಅನುಸರಿಸಲಾಗದ ಜಾತಿ ಅಂತರವನ್ನು ಬಾಡಿಗೆ ಮನೆಗಳಲ್ಲಿ, ನಿವೇಶನಗಳ ಮಾರಾಟದಲ್ಲಿ ಅನುಸರಿಸಲಾಗುತ್ತಿದೆ. ಈ ಸಮಸ್ಯೆಗಳೆಲ್ಲವೂ ತಳಸ್ತರದ ಮೇಲ್ವರ್ಗಗಳು ಎದುರಿಸುವ ಸವಾಲುಗಳಾಗಿವೆ. ಆದರೆ ತಳಸಮಾಜದಲ್ಲಿ ಪರಿಸ್ಥಿತಿ ಭಿನ್ನವಾಗಿದೆ. ನಿರುದ್ಯೋಗ, ದುಬಾರಿ ಶಿಕ್ಷಣ, ಅತ್ಯಾಚಾರ, ಮಹಿಳಾ ದೌರ್ಜನ್ಯ, ಸಾಮಾಜಿಕ ಬಹಿಷ್ಕಾರ, ಮರ್ಯಾದೆಗೇಡು ಹತ್ಯೆ, ಅಸ್ಪೃಶ್ಯತೆ, ಅಪಮಾನ ಇತ್ಯಾದಿ ಸಮಸ್ಯೆಗಳು ನಿತ್ಯ ಬದುಕಿನ ವಿದ್ಯಮಾನಗಳಾಗಿವೆ.

ದಲಿತ ಚಳುವಳಿಯ ಭೂತ-ವರ್ತಮಾನ
ಹಾಗಾಗಿ ಯಾವುದೇ ಸಂಘಟನೆ ಅಥವಾ ಬಣ ಆದರೂ ಪೂರ್ಣಾವಧಿಯ ಕ್ರಿಯಾಶೀಲತೆಯನ್ನು ಹೊಂದಿರುವುದು ಅನಿವಾರ್ಯ. ಈ ದೃಷ್ಟಿಯಿಂದ ನೋಡಿದಾಗ 50 ವರ್ಷಗಳಿಂದಲೂ ದಲಿತ ಚಳುವಳಿ ನಿರಂತರ ಹೋರಾಟಗಳಲ್ಲಿ ತೊಡಗಿ, ಅಂತಿಮವಾಗಿ ಒತ್ತಡದ ಗುಂಪುಗಳಾಗಿಯೇ (Pressure Groups) ನಡೆದುಬಂದಿವೆ. ಈ ನಡುವೆ ಬಹುಶಃ ಮೊದಲ 25-30 ವರ್ಷಗಳ ಅವಧಿಯಲ್ಲಿ, ಅಂದರೆ 2000ನೆ ಇಸವಿಯವರೆಗೂ, ದಲಿತ ಸಂಘಟನೆಗಳು ಯುವಜನರಿಗೆ ಅಧ್ಯಯನ ಶಿಬಿರಗಳನ್ನು ಏರ್ಪಡಿಸುತ್ತಿದ್ದವು. ಆದರೆ ಕಳೆದ 25 ವರ್ಷಗಳಲ್ಲಿ ಇದು ಮರೆಯಾಗಿದೆ. ದಲಿತ ಹೋರಾಟಗಳಲ್ಲಿರುವ ನಾಯಕರ ಮತ್ತು ಕಾರ್ಯಕರ್ತರ ವರ್ತಮಾನದ ಅರಿವು, ಚಾರಿತ್ರಿಕ ಪ್ರಜ್ಞೆ ಹಾಗೂ ಸಾಮಾಜಿಕ ತಿಳುವಳಿಕೆಯನ್ನು ಮೊನಚುಗೊಳಿಸುವುದು ಈ ಶಿಬಿರಗಳ ಉದ್ದೇಶವಾಗಿರುತ್ತಿತ್ತು. ಯುವ ಸಮೂಹದಲ್ಲಿ ಸೈದ್ಧಾಂತಿಕ ಅರಿವು ಮೂಡಿಸುವುದರೊಂದಿಗೇ, ವರ್ತಮಾನದ ಸಮಸ್ಯೆಗಳಿಗೆ ಕಾರಣವಾಗುವ ರಾಜಕೀಯ ಸ್ಥಿತ್ಯಂತರಗಳು, ಬದಲಾದ ಸನ್ನಿವೇಶದಲ್ಲಿ ನಿರ್ಣಾಯಕವಾಗುವ ಸೈದ್ಧಾಂತಿಕ ತಿರುವುಗಳು ಹಾಗೂ ಆರ್ಥಿಕತೆಯ ವ್ಯತ್ಯಯಗಳಿಗೆ ಕಾರಣವಾಗುವ ಮಾರುಕಟ್ಟೆ ತಂತ್ರಗಾರಿಕೆಗಳನ್ನು ಯುವ ಸಮೂಹಕ್ಕೆ ಪರಿಚಯಿಸುವುದು ಈ ಶಿಬಿರಗಳ ಉದ್ದೇಶವಾಗಿತ್ತು. ಜಾಗತೀಕರಣದ ಆರಂಭದ ಹಂತಗಳಲ್ಲಿ ಈ ರೀತಿಯ ಶಿಬಿರಗಳು ನಡೆದಿದ್ದರಿಂದಲೇ ಅಂದಿನ ಯುವ ಸಮೂಹ, ಅಂದರೆ ಇಂದಿನ ವಯಸ್ಕರು ದಲಿತ ಚಳುವಳಿಯ ಗುರಿ ಮತ್ತು ಆದ್ಯತೆಗಳ ಬಗ್ಗೆ ಸ್ಪಷ್ಟತೆ ಹೊಂದಿರಲು ಸಾಧ್ಯವಾಯಿತು.
ದಲಿತ ಚಳುವಳಿಯ ವಿಘಟನೆ ನಿರಂತರವಾಗಿ ಆಗುತ್ತಲೇ ಇದ್ದರೂ ಈ ಅರಿವು ಮೂಡಿಸುವ ಪ್ರಕ್ರಿಯೆಗೆ ಅಡ್ಡಿಯಾಗಿರಲಿಲ್ಲ. ಸಂವಹನ ಕ್ಷೇತ್ರದಲ್ಲಿ ತಂತ್ರಜ್ಞಾನದ ಪ್ರವೇಶ ಸೀಮಿತವಾಗಿದ್ದುದರಿಂದ, ಸ್ಮಾರ್ಟ್‌ಫೋನ್‌ನಂತಹ ಆಧುನಿಕ ಉಪಕರಣಗಳು ಇಲ್ಲದೆ ಇದ್ದುದರಿಂದ, ಯುವ ಸಮೂಹದಲ್ಲಿ ಓದುವ, ಓದಿಸುವ ಮತ್ತು ಕುಳಿತು ಕೇಳಿಸಿಕೊಳ್ಳುವ ವ್ಯವಧಾನ ಸಹಜವಾಗಿ ಬೆಳೆದಿತ್ತು. ಸೆಮಿನಾರ್‌ ಹಾಲ್‌ಗಳಲ್ಲಿ ವಿಚಾರ ಮಂಡನೆಯನ್ನು ತಮ್ಮ ಬಳಿ ಇರುತ್ತಿದ್ದ ನೋಟ್‌ ಪ್ಯಾಡ್‌ಗಳಲ್ಲಿ ಟಿಪ್ಪಣಿ ಮಾಡಿಕೊಳ್ಳುತ್ತಿದ್ದವರ ಸಂಖ್ಯೆ ಹೆಚ್ಚಾಗಿತ್ತು. ವಿಶ್ವವಿದ್ಯಾಲಯದ ವಿದ್ಯಾರ್ಥಿ-ಸಂಶೋಧಕರು ಹೆಚ್ಚು ಗುಂಪು ಚರ್ಚೆಗಳನ್ನು ಮಾಡುತ್ತಿದ್ದರು. ಪಠ್ಯದಿಂದಾಚೆಗೆ ಸಾಮಾಜಿಕ-ರಾಜಕೀಯ-ಆರ್ಥಿಕ ವಿದ್ಯಮಾನಗಳನ್ನು ಅರಿಯುವ ಮೂಲಕ, ರಾಜಕೀಯ ಪ್ರಜ್ಞೆಯನ್ನು ಮೊನಚುಗೊಳಿಸಿಕೊಳ್ಳುವ ಪ್ರಕ್ರಿಯೆ ಸಾಮಾನ್ಯವಾಗಿತ್ತು.

ಬದಲಾದ ಸನ್ನಿವೇಶದಲ್ಲಿ ಚಳುವಳಿಗಳು
21ನೆ ಶತಮಾನದಲ್ಲಿ ಈ ಪ್ರಕ್ರಿಯೆಗಳೇ ಇಲ್ಲವಾಗಿವೆ. ಸಂವಹನ ಕ್ರಾಂತಿಯ ಪರಿಣಾಮ ಎಂದು ಹೇಳಬಹುದಾದರೂ, ದಲಿತ ಸಂಘಟನೆಗಳು ಯುವ ಜನಾಂಗವನ್ನು ಒಂದೆಡೆ ಸೇರಿಸಿ, ತಾಲ್ಲೂಕು/ಜಿಲ್ಲಾ ಕೇಂದ್ರಗಳಲ್ಲಿ ಅಧ್ಯಯನ ಶಿಬಿರಗಳನ್ನು ನಡೆಸುವ ಪರಂಪರೆಗೆ ತಿಲಾಂಜಲಿ ಹಾಡಿದ್ದು ಪ್ರಮುಖ ಕಾರಣ. ಈ 25 ವರ್ಷಗಳಲ್ಲಿ ನಡೆದಿರಬಹುದಾದ ಸಾವಿರಾರು ಸೆಮಿನಾರ್‌ಗಳು ಯುವ ಸಮೂಹವನ್ನು ಸಾಂದರ್ಭಿಕವಾಗಿ ಆಕರ್ಷಿಸಿದ್ದರೂ, ಅದರಿಂದ ಸಾಮಾಜಿಕ-ರಾಜಕೀಯ ಅರಿವು ಮೂಡಿರುವುದೆಷ್ಟು ಎಂಬ ಪ್ರಶ್ನೆ ಉಳಿಯುತ್ತದೆ. ಕಳೆದ 10-15 ವರ್ಷಗಳಲ್ಲಿ ಸ್ಮಾರ್ಟ್‌ ಫೋನ್‌ ಯುಗ ಆರಂಭವಾದಾಗಿನಿಂದ, ವಿದ್ಯಾರ್ಥಿ ಯುವ ಸಮೂಹದಲ್ಲಿ, ಎಲ್ಲವೂ ಅಂತರ್ಜಾಲದಲ್ಲೇ ಸಿಗುತ್ತದೆ, ಪ್ರತ್ಯೇಕ ಓದು, ಚರ್ಚೆ, ಅಧ್ಯಯನದ ಅವಶ್ಯಕತೆ ಇಲ್ಲ ಎಂಬ ಮನೋಭಾವ ಮೂಡಿರಲಿಕ್ಕೂ ಸಾಧ್ಯ.

ಈ ಮನಸ್ಥಿತಿಯನ್ನು ಬದಲಿಸುವ ದೃಷ್ಟಿಯಿಂದಾದರೂ ಅಧ್ಯಯನ ಶಿಬಿರಗಳು ಅವಶ್ಯವಾಗಿತ್ತು. ದಲಿತ ಚಳುವಳಿಯಷ್ಟೇ ಅಲ್ಲ, ಎಡಪಕ್ಷಗಳಲ್ಲೂ ಈ ಕೊರತೆಯನ್ನು ಗುರುತಿಸಬಹುದು. ಇದರ ಪರಿಣಾಮ ಏನಾಯಿತು ? ಮಿಲೆನಿಯಂ ಸಮೂಹದಲ್ಲಿ ಗಂಭೀರ ಚರ್ಚೆಗಳಲ್ಲಿ ತೊಡಗುವ ಮನೋಭಾವವೇ ನಶಿಸುತ್ತಾ ಹೋಯಿತು. ಅಂಬೇಡ್ಕರ್‌, ಕುವೆಂಪು ಮತ್ತು ಇತ್ತೀಚಿನದೆಂದರೆ ಲಂಕೇಶ್‌ ಅವರ ಚಿಂತನೆಗಳಿಗೇ ಜೋತುಬೀಳುವ ಮತ್ತು ಸೃಜನಶೀಲ ಅಧ್ಯಯನಕ್ಕೆ ವಿಮುಖವಾಗುವ ಒಂದು ಧೋರಣೆಯನ್ನು ಈ ಅವಧಿಯಲ್ಲಿ ಗುರುತಿಸಬಹುದು. ಈ ಮಹನೀಯರ ಆಲೋಚನೆಗಳನ್ನು ವರ್ತಮಾನದ ಸಂಕೀರ್ಣತೆಗಳ ನಡುವೆ ಇಷ್ಟು ವಿಚಾರ ಮಂಥನ ಮಾಡುವ ಪ್ರಯತ್ನಗಳೂ ನಡೆಯಬೇಕಿದೆ. ಹಾಗೆ ಮಾಡಬೇಕಾದರೆ, ಈ ಸೀಮಿತ ಚೌಕಟ್ಟನ್ನು ದಾಟಿ ನೋಡಬೇಕಾಗುತ್ತದೆ, ಇತರ ದರ್ಶನಗಳ ಕಡೆ ಗಮನ ಹರಿಸಬೇಕಾಗುತ್ತದೆ.

ದಲಿತ ಚಳುವಳಿಗಳಿಗೆ ಇದು ಆದ್ಯತೆಯಾಗಬೇಕಿತ್ತು. ಹೋರಾಟಗಳ ಜೊತೆಜೊತೆಗೇ ಜಿಲ್ಲೆಗೊಂದು ಖಾಸಗಿ ಅಧ್ಯಯನ ಸಂಸ್ಥೆ ಅಥವಾ ಸಂಘಟನೆಯನ್ನು ಸ್ಥಾಪಿಸಿ, ಆಯಾ ಜಿಲ್ಲೆಗಳಲ್ಲಿರುವ ಯುವ ಸಮೂಹವನ್ನು ತೊಡಗಿಸಿಕೊಂಡು ಹಲವು ರೀತಿಯ ಸಂಶೋಧನಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಬಹುದಿತ್ತು. ಜಯಂತಿ, ಆರಾಧನೆ, ಉತ್ಸವ, ಮೆರವಣಿಗೆ, ವಿಚಾರ ಸಂಕಿರಣಗಳು ಇವೆಲ್ಲವನ್ನೂ ಸರಳೀಕರಿಸಿ, ಅದ್ಧೂರಿಯ ಹಪಹಪಿಯಿಂದ ಮುಕ್ತವಾಗಿ, ಸಂಗ್ರಹವಾಗುತ್ತಿದ್ದ ಹಣವನ್ನು ಕೆಲವು ಬೌದ್ಧಿಕ ಚಟುವಟಿಕೆಗಳಿಗೆ ಬಳಸುವ ಆಲೋಚನೆ ಮಾಡಬಹುದಿತ್ತು. ಕಳೆದ 25 ವರ್ಷಗಳಲ್ಲೇ ದಲಿತ ಚಳುವಳಿ 20 ಬಣಗಳಾಗಿ ಒಡೆದಿದ್ದರೂ, ಸಂಘಟಿತವಾಗಿ ಈ ಬೌದ್ಧಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಸಾಧ್ಯತೆಗಳಿದ್ದವು. ಆಗ 1990ರ ದಶಕದವರೆಗಿನ ಬೌದ್ಧಿಕ ಸಂಪನ್ಮೂಲಗಳನ್ನು 21ನೆ ಶತಮಾನದ ಮಿಲೆನಿಯಂ ಸಮಾಜಕ್ಕೆ ದಾಟಿಸುವುದು ಸಾಧ್ಯವಾಗುತ್ತಿದೆ.

ದತ್ತಾಂಶಗಳ ಶೋಧ-ಮರುಶೋಧ
ಮೀಸಲಾತಿಯೇ ಮುಂತಾದ ಸಾಂವಿಧಾನಿಕ ಸೌಲಭ್ಯಗಳು ಎಷ್ಟರ ಮಟ್ಟಿಗೆ ಸಮಾಜವನ್ನು ತಲುಪುತ್ತಿವೆ ? ಸಾಮಾಜಿಕ ಪಿರಮಿಡ್ಡಿನ ತಳಪಾಯದಲ್ಲಿರುವ ವರ್ಗಗಳಿಗೆ ಎಷ್ಟು ಪ್ರಮಾಣದಲ್ಲಿ ತಲುಪಿದೆ ? ಶಿಕ್ಷಣ ಮತ್ತು ಉದ್ಯೋಗಾವಕಾಶಗಳು ತಳಮಟ್ಟದವರೆಗೆ ವ್ಯಾಪಿಸಲು ಸಾಧ್ಯವಾಗಿದೆಯೇ ? ಇಲ್ಲವಾದರೆ ಏಕೆ ತಲುಪಿಲ್ಲ ? ಫಲಾನುಭವಿ ಸಮಾಜಗಳೇ ಹೆಚ್ಚು ಅವಕಾಶಗಳನ್ನು ಪಡೆದಿವೆಯೇ ? ಸಾಮಾಜಿಕ ಉನ್ನತೀಕರಣ, ಆರ್ಥಿಕ ಸಬಲೀಕರಣಗೊಂಡ ಸಮಾಜಗಳಲ್ಲಿ ಜಾತಿ ಶೋಷಣೆ, ದೌರ್ಜನ್ಯ, ತಾರತಮ್ಯಗಳು ಇವೆಯೇ ಇದ್ದರೆ ಯಾವ ರೀತಿಯಲ್ಲಿ ವ್ಯಕ್ತವಾಗುತ್ತಿದೆ ? ಈ ಬಲಾಢ್ಯ ಸಮಾಜಗಳೇ ತಮಗಿಂತಲೂ ಕೆಳಸ್ತರದಲ್ಲಿರುವ ಸಮುದಾಯಗಳನ್ನು ಶೋಷಣೆ ಮಾಡುತ್ತಿವೆಯೇ ? ಹಾಗಿದ್ದರೆ ವರ್ಗ ಪ್ರಜ್ಞೆಯ ನೆಲೆಯಲ್ಲಿ ಇದನ್ನು ವ್ಯಾಖ್ಯಾನಿಸುವುದು ಹೇಗೆ ? ಮೀಸಲಾತಿ ಸೌಲಭ್ಯವು ಸಂವಿಧಾನದ ನಿಯಮಗಳ ಚೌಕಟ್ಟಿನಲ್ಲೇ ಜಾರಿಯಾಗುತ್ತಿದ್ದರೂ, ತಳಮಟ್ಟದ ಜನಸಾಮಾನ್ಯರ ದೃಷ್ಟಿಯಿಂದ ಇದು ಸಾಂವಿಧಾನಿಕ ಆಶಯಗಳನ್ನು ಈಡೇರಿಸುತ್ತಿದೆಯೇ ?

ಈ ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಸ್ವತಂತ್ರ ಅಧ್ಯಯನ-ಸಂಶೋಧನೆಗಳು ನಡೆದಿದ್ದರೆ, ಬಹುಶಃ ಇಂದು ಸರ್ಕಾರ ಒದಗಿಸುವ ಅಧಿಕೃತ ಅಂಕಿ ಅಂಶಗಳನ್ನೇ ಅಂತಿಮ ಎಂದು ಪರಿಗಣಿಸುವ ಸಂದರ್ಭ ಒದಗಿಬರುತ್ತಿರಲಿಲ್ಲ. ದಲಿತ ಚಳುವಳಿಯ ಈ ಬೌದ್ಧಿಕ ವೈಫಲ್ಯವನ್ನು ವಸ್ತುನಿಷ್ಠವಾಗಿ ಮರುವಿಮರ್ಶೆಗೊಳಪಡಿಸಬೇಕಿದೆ. ಹಿರಿಯ ತಲೆಮಾರಿನ ನಾಯಕರನ್ನು-ಚಿಂತಕರನ್ನು ಸವಕಲು ನಾಣ್ಯಗಳು ಎಂದು ಜರೆಯುವ ಮಾತುಗಳೂ ವಾಟ್ಸಾಪ್‌ ವಿಶ್ವವಿದ್ಯಾಲಯದ ಪ್ರಗತಿಪರ ವಿಭಾಗಗಳಲ್ಲಿ ಕೇಳಿಬರುತ್ತಿದೆ. ಈ ರೀತಿಯ ಪರಿಭಾಷೆ ಯುವ ಸಮಾಜದ ಹತಾಶೆಯನ್ನು ತೋರುತ್ತದೆ. ಈಗ ಸವಕಲಾಗಿ ಕಾಣುವ ನಾಣ್ಯಗಳೇ ಇಂದಿನ ಹೋರಾಟಗಳಿಗೆ ಚೈತನ್ಯ ತುಂಬುವ ಸುಭದ್ರ ಅಡಿಪಾಯ ನಿರ್ಮಿಸಿದ್ದನ್ನು ಯುವ ಪೀಳಿಗೆ ಮರೆತುಹೋಗುತ್ತದೆ. ಇದು ವೈಯುಕ್ತಿಕ ದೋಷವಲ್ಲ. ಈ ಯುವ ಪೀಳಿಗೆಯಲ್ಲಿ ವರ್ತಮಾನವನ್ನು ವಿಶಾಲ ದೃಷ್ಟಿಯಿಂದ ನೋಡುವ ಕ್ಷಮತೆಯನ್ನು ಬೆಳೆಸುವಲ್ಲಿ ದಲಿತ ಚಳುವಳಿಗಳು ಸೋತಿವೆ.

ಈಗ ಎದುರಾಗಿರುವ ಸಮಸ್ಯೆ ವಿಭಿನ್ನವೂ, ಜಟಿಲವೂ ಆಗಿದೆ. ಏಕೆಂದರೆ ಈ ಮೂರು ಕವಲುಗಳ ಹೋರಾಟಗಳಲ್ಲಿ ನಿರ್ಣಾಯಕವಾಗಿರುವುದು ಇಡೀ ಸಮುದಾಯಗಳು. ಸರ್ಕಾರ ನೀಡುವ ಅಧಿಕೃತ ಅಂಕಿ ಸಂಖ್ಯೆಗಳು ಮತ್ತು ದತ್ತಾಂಶಗಳನ್ನು ಆಧರಿಸಿ ಬಲಗೈ-ಎಡಗೈ ಸಮುದಾಯಗಳು, ಅಲೆಮಾರಿಗಳು ತಮ್ಮ ಹಕ್ಕುಗಳಿಗಾಗಿ ಹೋರಾಡುತ್ತಿವೆ. ತಮಗೆ ಲಭ್ಯವಾಗಬೇಕಾದ ಅವಕಾಶಗಳಲ್ಲಿ ಒಂದಂಶವನ್ನು ಇತರ ಜಾತಿಗಳಿಗೆ ಹಂಚುವುದಕ್ಕೆ ವಿರೋಧ ವ್ಯಕ್ತವಾಗುತ್ತಿದೆ. ಈ ಅಂಕಿಸಂಖ್ಯೆಗಳ ಹೊರನಿಂತು ನೋಡಿದಾಗ, ಈಗಾಗಲೇ ಸೌಲಭ್ಯ ಪಡೆದವರು ಅಥವಾ ಫಲಾನುಭವಿಗಳು, ಈವರೆಗೂ ಪಡೆಯದಿರುವ ಅಥವಾ ಪ್ರಮಾಣಾನುಗುಣವಾಗಿ ಪಡೆಯದಿರುವ ಜನಸಂಖ್ಯೆಗೆ ಬಿಟ್ಟುಕೊಡಲು ನಿರಾಕರಿಸುತ್ತಿರುವುದು ಕಾಣುತ್ತದೆ. ಬಿಟ್ಟುಕೊಡಿ ಎಂದು ಹೇಳುವುದೇ ವಿಶ್ವಾಸ ದ್ರೋಹದಂತೆ ಕಾಣುತ್ತಿದೆ.

ಸಬಲೀಕರಣ ಮತ್ತು ದುರವಸ್ಥೆ
ಸಮಾಜಶಾಸ್ತ್ರೀಯ ದೃಷ್ಟಿಯಿಂದ ನೋಡಿದಾಗ, ಸಾಮಾಜಿಕವಾಗಿ-ಆರ್ಥಿಕವಾಗಿ ತಳಸ್ತರದಲ್ಲಿರುವ ಸಮುದಾಯಗಳಲ್ಲಿ, ಕಾಲಕ್ರಮೇಣ ಅಭಿವೃದ್ಧಿಯ ಫಲಾನುಭವಿಗಳಾಗಿ ಸಬಲೀಕರಣಗೊಂಡು ತಮ್ಮ ಸಾಮಾಜಿಕ-ಆರ್ಥಿಕ ಸ್ಥಾನಮಾನಗಳು ಉನ್ನತೀಕರಣಗೊಂಡಾಗ ಅಲ್ಲೊಂದು ವರ್ಗ ಸೃಷ್ಟಿಯಾಗುತ್ತದೆ. ಈ ವರ್ಗಗಳು ಮೇಲ್ವರ್ಗಗಳ ಅಥವಾ ಮೇಲ್ಜಾತಿಗಳ ಜೀವನಶೈಲಿ ಮತ್ತು ಆಚರಣೆಗಳನ್ನು ಅನುಕರಿಸುವ ಮೂಲಕ, ಆಧುನಿಕತೆಗೆ ತೆರೆದುಕೊಂಡು, ತಮ್ಮೊಳಗೆ ಪ್ರತ್ಯೇಕತೆಯ ಭಾವನೆಯನ್ನು ಬೆಳೆಸಿಕೊಳ್ಳುತ್ತವೆ. ಬಂಡವಾಳಶಾಹಿ ಆರ್ಥಿಕತೆಯಲ್ಲಿ ಈ ವರ್ಗಗಳೇ ರಾಜಕೀಯವಾಗಿ ಬಲಾಢ್ಯ ವರ್ಗಗಳಾಗಿ ಪರಿವರ್ತನೆಯಾಗುತ್ತವೆ. ಭಾರತದ ಅಭಿವೃದ್ಧಿ ಪಥದಲ್ಲಿ, ಏಳು ದಶಕಗಳಲ್ಲಿ ಮೂರು ಪೀಳಿಗೆ ಈ ರೀತಿಯ ಮನ್ವಂತರಕ್ಕೆ ಒಳಗಾಗಿದ್ದು, ಅದರೊಳಗಿನಿಂದಲೇ ʼ ಹಕ್ಕುಗಳನ್ನು ಬಿಟ್ಟುಕೊಡದ ʼ ದನಿ ಕೇಳಿಬರುತ್ತಿದೆ.

ಈಗ ಇದೇ ಬಲಾಢ್ಯ ವರ್ಗಗಳಲ್ಲೂ ಸಹ ನಾಲ್ಕನೆ ಪೀಳಿಗೆಗೆ ಅಂದರೆ ಮಿಲೆನಿಯಂ ಯುವ ಸಮೂಹಕ್ಕೆ ಉದ್ಯೋಗವೇ ಮರೀಚಿಕೆಯಾಗುತ್ತಿದೆ. ಸಾಂವಿಧಾನಿಕ ಕಟ್ಟುಪಾಡುಗಳಿಗೆ ಒಳಪಡುವಂತಹ ಉದ್ಯೋಗಾವಕಾಶಗಳನ್ನೇ ಸೃಷ್ಟಿಸದ ಮಾರುಕಟ್ಟೆ ಆರ್ಥಿಕತೆಯು ಪರಾವಲಂಬಿ ಯುವ ಸಮಾಜವನ್ನು ತನ್ನ ಮರ್ಜಿಯಂತೆ ಬಳಸಿಕೊಳ್ಳುವ ಅಧಿಕಾರವನ್ನು ಸರ್ಕಾರಗಳಿಂದಲೇ ಪಡೆದುಕೊಳ್ಳುತ್ತದೆ. ಗಿಗ್‌ ಕಾರ್ಮಿಕರು ಒಂದು ಜ್ವಲಂತ ನಿದರ್ಶನ. ಈ ಪೀಳಿಗೆಯ ಯುವ ಜನಾಂಗ ಸಾಂವಿಧಾನಿಕ ಮೀಸಲಾತಿಯನ್ನು ಹೇಗೆ ನೋಡಬೇಕು ? 77 ವರ್ಷಗಳಲ್ಲಿ ಯಾವ ಸವಲತ್ತನ್ನೂ ಪೂರ್ಣಪ್ರಮಾಣದಲ್ಲಿ ಅಥವಾ ಕಿಂಚಿತ್ತೂ ಪಡೆಯದ ಸಮುದಾಯಗಳು ಏನು ಮಾಡಬೇಕು ? ಈ ಅವಕಾಶವಂಚಿತರ ಸಂಖ್ಯೆ ಎಷ್ಟಿದೆ ಎಂಬ ನಿಖರ ಮಾಹಿತಿ ಯಾವ ಪಕ್ಷ/ಸಂಘಟನೆಗಳ ಬಳಿಯಾದರೂ ಇದೆಯೇ ? ಇಲ್ಲ ಎಂದರೆ, ಅದು ದಲಿತ ಚಳುವಳಿಯ ಬೌದ್ಧಿಕ ವೈಫಲ್ಯ ಎಂದೇ ಭಾವಿಸಬೇಕಾಗುತ್ತದೆ.

ಈ ಅವಕಾಶವಂಚಿತ ಜನಸಮೂಹಗಳ ಹತಾಶೆಗೆ ಸ್ಪಂದಿಸಲು ಸರ್ಕಾರಗಳು, ಮೀಸಲಾತಿ ಕ್ಷೇತ್ರಗಳಿಂದ ಚುನಾಯಿತರಾಗಿರುವ ಪ್ರತಿನಿಧಿಗಳು ಎಂದೋ ಯೋಚಿಸಬೇಕಿತ್ತು. ತಮ್ಮ ತಮ್ಮ ಮತಕ್ಷೇತ್ರ ಮತ್ತು ಜಾತಿ ಮತಬ್ಯಾಂಕ್‌ಗಳಿಂದಾಚೆ ನೋಡುವ ವಿಶಾಲ ದೃಷ್ಟಿಕೋನವನ್ನು ಎಂದೋ ಕಳೆದುಕೊಂಡಿರುವ ರಾಜಕೀಯ ನಾಯಕರ ದೂರದೃಷ್ಟಿಯ ಕೊರತೆಯೇ ಇಂದು ನಡೆಯುತ್ತಿರುವ ಸಂಘರ್ಷಕ್ಕೆ ಒಂದು ಕಾರಣ ಎನ್ನುವುದು ಸುಸ್ಪಷ್ಟ. ಅಂಬೇಡ್ಕರ್‌ ಅವರನ್ನು ಪ್ರಾಮಾಣಿಕವಾಗಿ ಅನುಸರಿಸುವವರೇ ಆಗಿದ್ದರೆ, ಅವರ ಗಮನ ಫಲಾನುಭವಿ-ಹಿತವಲಯದ ಮತದಾರರ ಮೇಲಿರುತ್ತಿರಲಿಲ್ಲ. ಅವಕಾಶವಂಚಿತ ನಿರ್ಲಕ್ಷಿತ ಜನರ ಮೇಲಿರುತ್ತಿತ್ತು. ಆದರೆ ಬಂಡವಾಳಶಾಹಿ ಆರ್ಥಿಕತೆಯ ಮಾರುಕಟ್ಟೆ ಒತ್ತಡಗಳು ರಾಜಕೀಯ ಪಕ್ಷಗಳನ್ನು, ನಾಯಕರನ್ನು, ತಳಮಟ್ಟದ ಸಮಾಜದ ಕಡೆ ನೋಡದಂತೆ ತಡೆಯುತ್ತವೆ. ತಮ್ಮೊಳಗಿನ ಈ ಕೊರತೆಯನ್ನು ನೀಗಿಸಲೆಂದೇ ಸಂವಿಧಾನದ ವೈಭವೀಕರಣ, ಪೀಠಿಕೆಯ ನಿತ್ಯ ಪಠಣ ಇತ್ಯಾದಿಗಳ ಮೊರೆ ಹೋಗುತ್ತಿರುವುದನ್ನು ಗಮನಿಸಬೇಕಿದೆ.

ಜಾತಿ ಅಸ್ಮಿತೆಯ ವರ್ಗ ಹಿತಾಸಕ್ತಿ
ಈ ಧೋರಣೆಗೆ ಕಾರಣ ರಾಜಕೀಯ ಜನಪ್ರತಿನಿಧಿಗಳಲ್ಲಿ ಮತ್ತು ನಾಯಕರಲ್ಲಿರುವ ವರ್ಗ ಹಿತಾಸಕ್ತಿಯ ಪ್ರಜ್ಞೆ. ಎಲ್ಲ ಬಂಡವಾಳಿಗ ಸರ್ಕಾರಗಳೂ (Bourgeois Governments) ಮೂಲತಃ ಇದೇ ವರ್ಗಹಿತಾಸಕ್ತಿಯನ್ನೇ ಪ್ರತಿನಿಧಿಸುವುದರಿಂದ, ಮೇಲ್ಜಾತಿಯ, ಮೇಲ್ವರ್ಗದ, ಅನ್ಯ ಜಾತಿಗಳ ಮೇಲ್ಪದರದ ಸಮಾಜಗಳನ್ನೇ ಕೇಂದ್ರೀಕರಿಸಿರುತ್ತವೆ. ಈ ಆಳ್ವಿಕೆಗಳಲ್ಲಿ ಅವಕಾಶವಂಚಿತ ಶೋಷಿತರು ನಗಣ್ಯರಾಗಿಬಿಡುತ್ತಾರೆ, ಕೆಲವೊಮ್ಮೆ ಅಗೋಚರವಾಗುತ್ತಾರೆ. ಇವರ ಮತಗಳನ್ನು ಪಡೆಯಲು ಸಮುದಾಯದೊಳಗಿನ ಬಲಾಢ್ಯ ವರ್ಗಗಳು ನೆರವಾಗುತ್ತವೆ. ರಾಜ್ಯದಲ್ಲಿ ಒಳಮೀಸಲಾತಿ ಒಂದು ವಿವಾದಾಸ್ಪದ ವಿಷಯವಾಗಿರುವ ಮತ್ತು ಮೂರು ಕವಲುಗಳಲ್ಲಿ ನಡೆಯುತ್ತಿರುವ ಹೋರಾಟಗಳಿಗೆ ಈ ಪಕ್ಷಗಳಿಂದ ಸಾಂವಿಧಾನಿಕ ಸ್ಪಂದನೆಯೂ ಕಾಣದಿರುವುದು ಇದನ್ನೇ ಸೂಚಿಸುತ್ತದೆ.

ಮೀಸಲಾತಿ ನೀತಿ ಜಾರಿಯಾದ ದಿನದಿಂದ ಇವತ್ತಿನವರೆಗೂ ಫಲಾನುಭವಿಗಳ ಸಂಖ್ಯೆ ಅಧಿಕೃತವಾಗಿ ದೊರೆಯುತ್ತದೆ. ಆದರೆ ಏಳು ದಶಕಗಳ ನಂತರದಲ್ಲಿ ವೈಜ್ಞಾನಿಕವಾಗಿ ಈ ವಿಚಾರವನ್ನು ಚರ್ಚೆ ಮಾಡಬೇಕಾದರೆ ಇನ್ನೂ ಆಳವಾಗಿ ಸಂಶೋಧನೆ ಮಾಡಬೇಕಾಗುತ್ತದೆ. ಕೆನೆಪದರ (Creamy Layer) ವಿವಾದವೂ ಚಾಲ್ತಿಯಲ್ಲಿರುವುದಿಂದ, ಇದರ ಬೇಕು ಬೇಡಗಳನ್ನು ಬದಿಗಿಟ್ಟು, ಫಲಾನುಭವಿ ಸಮುದಾಯಗಳ ಪೈಕಿ ಎರಡನೆ, ಮೂರನೆ ಮತ್ತು ಭವಿಷ್ಯದ ನಾಲ್ಕನೆ ಪೀಳಿಗೆಯವರ ಸಂಖ್ಯಾ ಪ್ರಮಾಣವನ್ನು ಸಂಶೋಧಿಸಬೇಕಿದೆ. ಹಾಗೆಯೇ ಉದ್ಯೋಗ, ಶಿಕ್ಷಣ ಮತ್ತು ಇನ್ನಿತರ ಸಾಂವಿಧಾನಿಕ ಸೌಲಭ್ಯ/ಸವಲತ್ತುಗಳು ಪ್ರತಿಯೊಂದು ಜಾತಿಯಲ್ಲೂ ಎಷ್ಟು ಜನರನ್ನು ತಲುಪಿಲ್ಲ, ಏಕೆ ತಲುಪಿಲ್ಲ, ಈ ಅವಕಾಶಗಳು ಯಾರ ಪಾಲಾಗುತ್ತಿವೆ ಎಂಬ ಅಂಶಗಳನ್ನೂ ಶೋಧಿಸಬೇಕಿದೆ.

ಮತ್ತೊಂದೆಡೆ ಈವರೆಗೂ ತಮ್ಮ ಜನಸಂಖ್ಯೆಯ ಅನುಗುಣವಾಗಿಯಾದರೂ, ಈ ಸೌಲಭ್ಯಗಳನ್ನು ಮತ್ತು ಪ್ರಾತಿನಿಧಿತ್ವವನ್ನೂ ಪಡೆಯದ ಹಲವು ಕೆಳಸ್ತರದ ಸಮುದಾಯಗಳಿವೆ. ಅಲೆಮಾರಿ, ಬುಡಕಟ್ಟು ಸಮಾಜಗಳಿವೆ. ಈ ಸಮಾಜಗಳು ಏಕೆ ವಂಚಿತವಾಗುತ್ತಿವೆ, ಈ ಸಮುದಾಯಗಳ ಮೂಲ ಕೊರತೆ ಶಿಕ್ಷಣವೋ, ಹೊರಜಗತ್ತಿನ ಸಂಪರ್ಕವೋ, ಸಾಂಸ್ಕೃತಿಕ ಸಂಕುಚಿತತೆಯೋ ಎನ್ನುವುದನ್ನು ಶೋಧಿಸಬೇಕಿದೆ. ಈ ಕೊರತೆಗಳುಂಟಾಗಲು ಕಾರಣಗಳೇನು ? ಸರ್ಕಾರಗಳು/ಸರ್ಕಾರಿ ಸಂಸ್ಥೆಗಳು ಏಕೆ ಅಲಕ್ಷಿಸಿವೆ ಎಂಬ ಮಾಹಿತಿಯನ್ನು ಕಲೆ ಹಾಕಬೇಕು. ತದನಂತರ ಈ ಸಮಾಜಗಳಲ್ಲಿ ಸಾಂವಿಧಾನಿಕ ಸೌಲಭ್ಯ/ಸವಲತ್ತುಗಳಿಗೆ ಅರ್ಹರಾಗಿರುವವರ ಸಂಖ್ಯೆ ಎಷ್ಟಿದೆ ? ಅವರಲ್ಲಿ ಮಹಿಳೆಯರೆಷ್ಟು, ಯುವಜನರು ಎಷ್ಟು, ಉನ್ನತ ಶಿಕ್ಷಣ ಪಡೆದವರೆಷ್ಟು ಈ ದತ್ತಾಂಶಗಳನ್ನೂ ಸಂಗ್ರಹಿಸಬೇಕಾಗುತ್ತದೆ. ಈ ರೀತಿಯ ಮಾಹಿತಿಗಳು ವಿಶ್ವವಿದ್ಯಾಲಯಗಳ ಪಿಎಚ್‌ಡಿ ಪ್ರಬಂಧಗಳಲ್ಲಿ ಬಂಧಿಯಾಗಿ, ಕಪಾಟುಗಳನ್ನು ಸೇರಿರಬಹುದು ಆದರೆ ಇದು ತಳಮಟ್ಟದ ಸಮಾಜಕ್ಕೆ ಮತ್ತು ಅವಕಾಶವಂಚಿತರಿಗೆ ತಲುಪಿದೆಯೇ ? ಇಲ್ಲಿ ವೈಜ್ಞಾನಿಕ ವರದಿಯ ಅಗತ್ಯತೆ ಎದ್ದುಕಾಣುತ್ತದೆ.

ಈ ಪ್ರಶ್ನೆಯನ್ನು ಚರ್ಚೆ ಮಾಡಬೇಕಿರುವುದು ಈಗಾಗಲೇ ಸಂವಿಧಾನದ ಫಲ ಉಂಡಿರುವ ಹಿರಿಯ ಪೀಳಿಗೆಯ ನಡುವೆ ಅಲ್ಲ. ಇದನ್ನು ಅನಿಶ್ಚಿತ ಭವಿಷ್ಯ ಎದುರಿಸುತ್ತಿರುವ ಯುವ ಸಮಾಜದ ನಡುವೆ ಚರ್ಚಿಸಬೇಕು. ವಿದ್ಯಾರ್ಥಿ ಸಂಘಟನೆಗಳಲ್ಲೂ ಬಲಗೈ ಹೋರಾಟಕ್ಕೆ ಬೆಂಬಲ ಸಿಗುತ್ತಿದೆ ಎಂದು ಎದೆತಟ್ಟಿಕೊಳ್ಳುವ ಮುನ್ನ, ಈ ವಿದ್ಯಾರ್ಥಿಗಳಿಗೆ ತಮ್ಮ ಮುಂದಿರುವ ಸವಾಲುಗಳ ಆಳ-ವಿಸ್ತಾರದ ಅರಿವಾಗಿದೆಯೇ ಎಂದು ಚರ್ಚೆ ಮಾಡಬೇಕಲ್ಲವೇ ? ತಮ್ಮನ್ನು ಅವಕಾಶಗಳಿಂದ ವಂಚಿಸುತ್ತಿರುವವರು ಯಾರು ಅಥವಾ ಸಾಂಸ್ಥಿಕವಾಗಿ ಯಾವುದು, ಆರ್ಥಿಕವಾಗಿ ಏನು ಎನ್ನುವುದನ್ನು ಈ ಜನಾಂಗ ಅರಿತುಕೊಳ್ಳಬೇಕಲ್ಲವೇ ? ಇದು ಪುನಃ ನವ ಉದಾರವಾದಿ ಆರ್ಥಿಕತೆಯ ಕಡೆಗೆ ಬೊಟ್ಟು ಮಾಡುತ್ತದೆ. ಈ ಚರ್ಚೆಯನ್ನು ನಾವು, ಅಂದರೆ ಹಿರಿಯ ತಲೆಮಾರು, ವಿಶ್ವವಿದ್ಯಾಲಯಗಳ ಕ್ಯಾಂಪಸ್‌ ಒಳಗೆ ಕೊಂಡೊಯ್ದಿದ್ದೇವೆಯೇ ?
ಇಲ್ಲ ಎಂದಾದರೆ ಈ ಲೋಪದ ಜವಾಬ್ದಾರಿ ಹೊರುವವರು ಯಾರು ?
ಅಂತಿಮ ದಾರಿ – ಮುಂದಿನ ಭಾಗದಲ್ಲಿ
-೦-೦-೦-೦-

 

 

 

 

 

 

 

 

 

 

 

 

 

 

 

 

 

 

Tags: Ambedkar Thoughtcaste systemDalit MovementEconomic EmpowermentEquality StruggleIntellectual DiscourseInternal ReservationKarnataka SocietyMarginalized Communitiespolitical analysisReservation PolicySocial Inequalitysocial JusticeSociologyYouth
Previous Post

41 ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲೆ ಕಸ್ಟಮ್ ಸುಂಕ ರದ್ದು – ಇನ್ನು ಈ ವಸ್ತುಗಳು ಅಗ್ಗ!

Next Post

ರಿಷಭ್ ಅನ್‌ಫಾಲೋ ವಿವಾದ: ಇಲ್ಲಿದೆ ಸ್ನೇಹಿತರ ಸ್ಪಷ್ಟನೆ, ಕುತೂಹಲ ಹೆಚ್ಚಿಸಿದ ನಟನ ನಡೆ

Related Posts

ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ
ಅಂಕಣ

ಅಹಿಂದ ಚಳುವಳಿಯ ಐತಿಹಾಸಿಕ ಪಯಣ, ರಜತ ಸಂಭ್ರಮ ಮತ್ತು ಭವಿಷ್ಯದ ಪಥ

by ಪ್ರತಿಧ್ವನಿ
April 30, 2026
0

ಭಾರತದ ಸಾಮಾಜಿಕ ಮತ್ತು ರಾಜಕೀಯ ಭೂಪಟದಲ್ಲಿ ಕರ್ನಾಟಕವು ಸಾಮಾಜಿಕ ನ್ಯಾಯದ ಪ್ರಯೋಗಶಾಲೆ ಎಂದು ಗುರುತಿಸಲ್ಪಟ್ಟಿದೆ. ಸಹಸ್ರಾರು ವರ್ಷಗಳ ಕಾಲ ಶ್ರೇಣೀಕೃತ ಜಾತಿ ವ್ಯವಸ್ಥೆಯಿಂದ ತುಳಿತಕ್ಕೊಳಗಾದ ಸಮುದಾಯಗಳಿಗೆ ಸಮಾನ...

Read moreDetails
ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

ದುಡಿಯುವ ವರ್ಗಗಳ ಅನಿಶ್ಚಿತ ಬದುಕು ಮತ್ತು ಮಾರುಕಟ್ಟೆ

April 30, 2026
ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

ಸಾಮಾಜಿಕ ವ್ಯಸನದ ಸಾಂಸ್ಕೃತಿಕ ಆಯಾಮ

April 29, 2026
ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

ಪಕ್ಷ ರಾಜಕಾರಣ ಮತ್ತು ಮಹಿಳಾ ಮೀಸಲಾತಿ

April 28, 2026
ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

ರಾಜಸ್ಥಾನ ಕೃಷಿ ಕ್ರಾಂತಿಗೆ ಕೈಜೋಡಿಸಿ: ಕರ್ನಾಟಕಕ್ಕೆ ರಾಜಸ್ಥಾನ ಮುಖ್ಯಮಂತ್ರಿ ಆಹ್ವಾನ

April 27, 2026
Next Post
ರಿಷಭ್ ಅನ್‌ಫಾಲೋ ವಿವಾದ: ಇಲ್ಲಿದೆ ಸ್ನೇಹಿತರ ಸ್ಪಷ್ಟನೆ, ಕುತೂಹಲ ಹೆಚ್ಚಿಸಿದ ನಟನ ನಡೆ

ರಿಷಭ್ ಅನ್‌ಫಾಲೋ ವಿವಾದ: ಇಲ್ಲಿದೆ ಸ್ನೇಹಿತರ ಸ್ಪಷ್ಟನೆ, ಕುತೂಹಲ ಹೆಚ್ಚಿಸಿದ ನಟನ ನಡೆ

https://www.youtube.com/watch?v=1mlC4BzAl-w

Browse by Category

  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada

Welcome Back!

OR

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected !!
No Result
View All Result
  • {TEST_TITLE}
  • About Us
  • Blog
  • Company Ethical Policies
  • Fact Checking Policy
  • Home
  • Home 2
  • Home 3
  • Home 4
  • Home 5
  • Home 6
  • Pratidhvani
  • Pratidhvani.com
  • Privacy Policy

© 2024 www.pratidhvani.com - Analytical News, Opinions, Investigative Stories and Videos in Kannada