ನವದೆಹಲಿ :
ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನತೆ, ವಿಶೇಷವಾಗಿ ಇರಾನ್ ಹಾಗೂ ಇಸ್ರೇಲ್–ಅಮೆರಿಕಾ ನಡುವಿನ ಪರಿಸ್ಥಿತಿಯಿಂದ ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟಾಗಿದೆ. ಹಾರ್ಮುಜ್ ಜಲಸಂಧಿ ಮುಚ್ಚಲ್ಪಟ್ಟ ಹಿನ್ನೆಲೆ ಕಚ್ಚಾ ತೈಲ ಪೂರೈಕೆ ವ್ಯತ್ಯಯಗೊಂಡಿದ್ದು, ತೈಲ ಬೆಲೆ ಬ್ಯಾರೆಲ್‌ಗೆ $122ರವರೆಗೆ ಏರಿಕೆಯಾಗಿದೆ.

ಈ ಪರಿಸ್ಥಿತಿಯ ಪರಿಣಾಮವಾಗಿ ಸಾಮಾನ್ಯ ಜನರ ಮೇಲೆ ಬೆಲೆಭಾರ ಬಾರದಂತೆ ನೋಡಿಕೊಳ್ಳಲು ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 41 ಪ್ರಮುಖ ಪೆಟ್ರೋಕೆಮಿಕಲ್ ಉತ್ಪನ್ನಗಳ ಮೇಲಿನ ಕಸ್ಟಮ್ ಸುಂಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ.
ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, ಈ ವಿನಾಯಿತಿ ಏಪ್ರಿಲ್ 2, 2026ರಿಂದ ಜೂನ್ 30, 2026ರವರೆಗೆ ಜಾರಿಯಲ್ಲಿರಲಿದೆ. ಇದರೊಂದಿಗೆ ಪ್ಲಾಸ್ಟಿಕ್, ಪ್ಯಾಕೇಜಿಂಗ್, ಜವಳಿ, ಔಷಧೋದ್ಯಮ, ರಾಸಾಯನಿಕ ಹಾಗೂ ವಾಹನ ಭಾಗಗಳ ಉತ್ಪಾದನೆಗೆ ಅಗತ್ಯವಿರುವ ಕಚ್ಚಾ ವಸ್ತುಗಳು ಅಗ್ಗವಾಗಲಿದ್ದು, ದಿನನಿತ್ಯ ಬಳಕೆಯ ವಸ್ತುಗಳ ಬೆಲೆಯಲ್ಲಿ ಇಳಿಕೆ ಕಾಣುವ ಸಾಧ್ಯತೆ ಇದೆ.

ಈ ನಡುವೆ, ಇಂಧನ ಬೆಲೆ ಏರಿಕೆಯ ಆತಂಕದ ನಡುವೆಯೇ ಕೇಂದ್ರ ಸರ್ಕಾರ ಈಗಾಗಲೇ ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ ₹10ರಷ್ಟು ಕಡಿತಗೊಳಿಸಿರುವುದು ಗಮನಾರ್ಹ.ಹಾರ್ಮುಜ್ ಜಲಸಂಧಿಯಲ್ಲಿನ ಉದ್ವಿಗ್ನತೆ ಜಾಗತಿಕ ಪೂರೈಕೆ ಸರಪಳಿಗೆ ಅಡ್ಡಿಪಡಿಸಿದ್ದು, ಅನೇಕ ರಾಷ್ಟ್ರಗಳಲ್ಲಿ ಇಂಧನ ಕೊರತೆಯ ಭೀತಿ ಮೂಡಿಸಿದೆ. ಈ ಹಿನ್ನೆಲೆ ಮೆಥನಾಲ್, ಫೀನಾಲ್, ಅಸಿಟಿಕ್ ಆಮ್ಲ, ಪಿವಿಸಿ, ಪಾಲಿಥಿಲೀನ್ ಸೇರಿದಂತೆ 40ಕ್ಕೂ ಹೆಚ್ಚು ಪ್ರಮುಖ ವಸ್ತುಗಳನ್ನು ಸುಂಕ ರಹಿತಗೊಳಿಸಲಾಗಿದೆ.
ಈ ವಸ್ತುಗಳು ಪ್ಲಾಸ್ಟಿಕ್ ಉತ್ಪನ್ನಗಳು, ಪ್ಯಾಕೇಜಿಂಗ್ ವಸ್ತುಗಳು, ಔಷಧಗಳು, ಎಲೆಕ್ಟ್ರಾನಿಕ್ಸ್ ಹಾಗೂ ವಾಹನ ಭಾಗಗಳ ತಯಾರಿಕೆಯಲ್ಲಿ ವ್ಯಾಪಕವಾಗಿ ಬಳಸಲಾಗುತ್ತವೆ. ಹೀಗಾಗಿ ಈ ನಿರ್ಧಾರವು ಕೈಗಾರಿಕೆಗಳಿಗೆ ತಾತ್ಕಾಲಿಕ ನೆರವಾಗುವುದರ ಜೊತೆಗೆ ಮಾರುಕಟ್ಟೆಯಲ್ಲಿ ಬೆಲೆ ಸ್ಥಿರತೆಗೆ ಸಹಕಾರಿಯಾಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.ಜೂನ್ 30ರವರೆಗೆ ಜಾರಿಯಲ್ಲಿರುವ ಈ ಕ್ರಮವು ದೇಶೀಯ ಉತ್ಪಾದನಾ ವಲಯಗಳಿಗೆ ತಕ್ಕಮಟ್ಟಿನ ಉತ್ಸಾಹ ನೀಡುವ ನಿರೀಕ್ಷೆ ವ್ಯಕ್ತವಾಗಿದೆ.






