ಡಿಜಿಟಲ್ ವಹಿವಾಟುಗಳ ಬಳಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸೈಬರ್ ವಂಚನೆಗಳ ಆತಂಕವೂ ಹೆಚ್ಚುತ್ತಿದೆ. ಈ ಹಿನ್ನೆಲೆ ಗ್ರಾಹಕರ ಹಣದ ಸುರಕ್ಷತೆಯನ್ನು ಹೆಚ್ಚಿಸಲು ಭಾರತೀಯ ರಿಸರ್ವ್ ಬ್ಯಾಂಕ್ (RBI) ಏಪ್ರಿಲ್ 1ರಿಂದ ಹೊಸ ಭದ್ರತಾ ನಿಯಮಗಳನ್ನು ಜಾರಿಗೆ ತರುತ್ತಿದೆ.ಹೊಸ ನಿಯಮದ ಪ್ರಕಾರ, ಆನ್ಲೈನ್ ಹಣ ವರ್ಗಾವಣೆಗೆ ಎರಡು ಹಂತದ ದೃಢೀಕರಣ (Two-Factor Authentication) ಕಡ್ಡಾಯವಾಗಲಿದೆ. ಇದುವರೆಗೆ ಬಳಕೆಯಲ್ಲಿದ್ದ ಸ್ಟ್ಯಾಟಿಕ್ ಪಿನ್ ಮೂಲಕ ಮಾತ್ರ ಹಣ ವರ್ಗಾವಣೆ ಮಾಡುವ ವ್ಯವಸ್ಥೆಗೆ ಬದಲಾಗಿ, ಇನ್ನುಮುಂದೆ ಹೆಚ್ಚುವರಿ ಭದ್ರತಾ ಕ್ರಮಗಳನ್ನು ಅನುಸರಿಸಬೇಕಾಗುತ್ತದೆ.

ಈ ಹೊಸ ವ್ಯವಸ್ಥೆಯಲ್ಲಿ ಪ್ರತಿಯೊಂದು ವಹಿವಾಟಿಗೂ ವಿಭಿನ್ನ ಭದ್ರತಾ ಕೋಡ್ ಬಳಸಲಾಗುತ್ತದೆ. ಸಾಮಾನ್ಯ ಪಿನ್ ಜೊತೆಗೆ ಮೊಬೈಲ್ಗೆ ಬರುವ ಒಟಿಪಿ (OTP) ನಮೂದಿಸುವುದು ಅಥವಾ ಫಿಂಗರ್ಪ್ರಿಂಟ್, ಫೇಸ್ ಐಡಿ ಸೇರಿದಂತೆ ಬಯೋಮೆಟ್ರಿಕ್ ದೃಢೀಕರಣವನ್ನು ಬಳಸಬೇಕಾಗುತ್ತದೆ. ಇದರಿಂದ ಸೈಬರ್ ಅಪರಾಧಿಗಳನ್ನು ತಡೆಗಟ್ಟಲು ನೆರವಾಗಲಿದೆ.ಇದಲ್ಲದೆ, ಈ ನಿಯಮಗಳ ಅನುಷ್ಠಾನದಲ್ಲಿ ಯಾವುದೇ ಲೋಪದಿಂದ ಗ್ರಾಹಕರು ಹಣ ಕಳೆದುಕೊಂಡರೆ, ಅದರ ಹೊಣೆಗಾರಿಕೆಯನ್ನು ಬ್ಯಾಂಕ್ಗಳು ಮತ್ತು ಸೇವಾ ಪೂರೈಕೆದಾರರು ಹೊರುವಂತೆ ಆರ್ಬಿಐ ಸೂಚಿಸಿದೆ. ಇದರಿಂದ ಬ್ಯಾಂಕುಗಳು ತಮ್ಮ ಭದ್ರತಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವತ್ತ ಮುಂದಾಗಿವೆ.

ಈ ಹೊಸ ನಿಯಮಗಳು ದೇಶೀಯ ವಹಿವಾಟುಗಳಿಗೆ ಏಪ್ರಿಲ್ 1ರಿಂದ ಅನ್ವಯವಾಗಲಿದ್ದು, ಅಂತಾರಾಷ್ಟ್ರೀಯ ವಹಿವಾಟುಗಳಿಗೆ ಅಕ್ಟೋಬರ್ 1ರಿಂದ ಜಾರಿಗೆ ಬರಲಿವೆ. ಈ ಕ್ರಮದಿಂದ ಪಾವತಿ ಪ್ರಕ್ರಿಯೆ ಸ್ವಲ್ಪ ನಿಧಾನವಾಗುವ ಸಾಧ್ಯತೆ ಇದ್ದರೂ, ಗ್ರಾಹಕರ ಹಣದ ಭದ್ರತೆ ಹೆಚ್ಚಿಸುವುದು ಮುಖ್ಯ ಉದ್ದೇಶವಾಗಿದೆ.ಗ್ರಾಹಕರು ತಮ್ಮ ಬ್ಯಾಂಕ್ ಖಾತೆ ವಿವರಗಳು ಹಾಗೂ ಮೊಬೈಲ್ ಸಂಖ್ಯೆಯನ್ನು ನವೀಕರಿಸಿಕೊಳ್ಳುವಂತೆ ಅಧಿಕಾರಿಗಳು ಸಲಹೆ ನೀಡಿದೆ.






