ಸುರಕ್ಷಿತ ಹೂಡಿಕೆ ಮತ್ತು ಖಚಿತ ಆದಾಯವನ್ನು ಬಯಸುವವರಿಗೆ ಭಾರತೀಯ ಅಂಚೆ ಇಲಾಖೆಯ ಟೈಮ್ ಡೆಪಾಸಿಟ್ (TD) ಯೋಜನೆ ಮತ್ತೊಮ್ಮೆ ಗಮನ ಸೆಳೆದಿದೆ. ಮಾರುಕಟ್ಟೆಯ ಏರಿಳಿತಗಳ ಆತಂಕವಿಲ್ಲದೆ, ಸರ್ಕಾರದ ಭರವಸೆಯೊಂದಿಗೆ ಹಣವನ್ನು ಸುರಕ್ಷಿತವಾಗಿ ಬೆಳೆಸಲು ಈ ಯೋಜನೆ ಅನುಕೂಲಕರವಾಗಿದೆ.

ಬ್ಯಾಕ್ ಫಿಕ್ಸೆಡ್ ಡೆಪಾಸಿಟ್ ಮಾದರಿಯಲ್ಲಿರುವ ಈ ಯೋಜನೆ 1, 2, 3 ಮತ್ತು 5 ವರ್ಷಗಳ ಅವಧಿಯಲ್ಲಿ ಲಭ್ಯವಿದ್ದು, ಹೂಡಿಕೆದಾರರು ತಮ್ಮ ಆಯ್ಕೆಯ ಅವಧಿಗೆ ಹಣ ಹೂಡಿಕೆ ಮಾಡಬಹುದು. ವಿಶೇಷವಾಗಿ 5 ವರ್ಷಗಳ ಅವಧಿಯ ಯೋಜನೆಯಲ್ಲಿ ಹೂಡಿಕೆ ಮಾಡಿದರೆ ಉತ್ತಮ ಲಾಭ ಪಡೆಯುವ ಅವಕಾಶವಿದೆ.

ಪ್ರಸ್ತುತ ಬಡ್ಡಿದರಗಳ ಪ್ರಕಾರ, 5 ವರ್ಷಗಳ ಅವಧಿಗೆ ವಾರ್ಷಿಕ 7.5% ಬಡ್ಡಿ ನೀಡಲಾಗುತ್ತಿದೆ. ಈ ದರದಂತೆ ₹1 ಲಕ್ಷ ಹೂಡಿಕೆ ಮಾಡಿದರೆ, ಚಕ್ರಬಡ್ಡಿ ಆಧಾರದಲ್ಲಿ ಸುಮಾರು ₹45 ಸಾವಿರದವರೆಗೆ ಬಡ್ಡಿ ಲಾಭ ದೊರೆಯಲಿದೆ. ಅವಧಿ ಮುಗಿದ ಬಳಿಕ ಒಟ್ಟು ಮೊತ್ತವು ಸುಮಾರು ₹1.45 ಲಕ್ಷವಾಗಲಿದೆ.

ಈ ಯೋಜನೆಯ ಪ್ರಮುಖ ಆಕರ್ಷಣೆಯೆಂದರೆ ಸರ್ಕಾರದ ಸಂಪೂರ್ಣ ಭದ್ರತೆ. ಜೊತೆಗೆ, 5 ವರ್ಷಗಳ ಟೈಮ್ ಡೆಪಾಸಿಟ್ಗೆ ಆದಾಯ ತೆರಿಗೆ ಕಾಯ್ದೆ 80C ಅಡಿಯಲ್ಲಿ ತೆರಿಗೆ ವಿನಾಯಿತಿ ಸಿಗುತ್ತದೆ. ಒಬ್ಬರು ಅಥವಾ ಜಂಟಿ ಖಾತೆ ಮೂಲಕ ಹೂಡಿಕೆ ಮಾಡಲು ಅವಕಾಶವಿದ್ದು, ಅಪ್ರಾಪ್ತ ಮಕ್ಕಳ ಹೆಸರಿನಲ್ಲೂ ಖಾತೆ ತೆರೆಯಬಹುದು.
ಕೇವಲ ₹1,000ರಿಂದ ಹೂಡಿಕೆ ಆರಂಭಿಸಬಹುದಾದ ಈ ಯೋಜನೆಗೆ ಗರಿಷ್ಠ ಮಿತಿಯಿಲ್ಲ. ಹತ್ತಿರದ ಅಂಚೆ ಕಚೇರಿಯಲ್ಲಿ ಕೆವೈಸಿ ದಾಖಲೆಗಳನ್ನು ಸಲ್ಲಿಸುವ ಮೂಲಕ ಸುಲಭವಾಗಿ ಖಾತೆ ತೆರೆಯಬಹುದಾಗಿದೆ. ತುರ್ತು ಅವಶ್ಯಕತೆಯಿದ್ದರೆ 6 ತಿಂಗಳ ಬಳಿಕ ಹಣ ಹಿಂಪಡೆಯುವ ಸೌಲಭ್ಯವೂ ಲಭ್ಯವಿದೆ.ಷೇರು ಮಾರುಕಟ್ಟೆಯ ರಿಸ್ಕ್ ತೆಗೆದುಕೊಳ್ಳಲು ಇಷ್ಟವಿಲ್ಲದವರಿಗೆ ಹಾಗೂ ಭವಿಷ್ಯಕ್ಕಾಗಿ ಹಣ ಸಂಗ್ರಹಿಸಲು ಬಯಸುವವರಿಗೆ ಪೋಸ್ಟ್ ಆಫೀಸ್ ಟೈಮ್ ಡೆಪಾಸಿಟ್ ಯೋಜನೆ ಭದ್ರ ಮತ್ತು ಲಾಭದಾಯಕ ಆಯ್ಕೆಯಾಗಿದೆ.






