ನವದೆಹಲಿ, ಮಾ. 28:
ದೇಶದಲ್ಲಿ ಲಾಕ್‌ಡೌನ್ ಜಾರಿಯಾಗಲಿದೆ ಎಂಬ ವದಂತಿಗಳಿಗೆ ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಿದ್ದು, ಇವು ಸಂಪೂರ್ಣ ಆಧಾರರಹಿತ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಖಂಡಿಸಿದ್ದಾರೆ. ಮಧ್ಯಪ್ರಾಚ್ಯದ ಸಂಘರ್ಷ ಹಿನ್ನೆಲೆ ಇಂಧನ ಕೊರತೆ ಹಾಗೂ ಆರ್ಥಿಕ ಆತಂಕಗಳಿಂದ ಈ ರೀತಿಯ ಸುಳ್ಳು ಸುದ್ದಿಗಳು ಹರಡುತ್ತಿರುವುದಾಗಿ ಅವರು ತಿಳಿಸಿದ್ದಾರೆ.

ರಾಜ್ಯಸಭೆಯಲ್ಲಿ ಮಾತನಾಡಿದ ಸಚಿವೆ, “ಭಾರತದಲ್ಲಿ ಲಾಕ್‌ಡೌನ್ ಜಾರಿಗೆ ಯಾವುದೇ ಅವಕಾಶ ಇಲ್ಲ. ಇಂತಹ ವದಂತಿಗಳನ್ನು ಹರಡುವುದು ತಪ್ಪು” ಎಂದು ಸ್ಪಷ್ಟಪಡಿಸಿದರು. ಇದೇ ವೇಳೆ, ಪಾಕಿಸ್ತಾನದಲ್ಲಿ ಇಂಧನ ದರ ಏರಿಕೆ ಹಿನ್ನೆಲೆ ಕೆಲವು ನಿರ್ಬಂಧಗಳು ಜಾರಿಯಾಗಿರುವುದನ್ನು ಉಲ್ಲೇಖಿಸಿ, “ಅಂತಹ ಪರಿಸ್ಥಿತಿ ಭಾರತದಲ್ಲಿಲ್ಲ, ಅದು ಪಾಕಿಸ್ತಾನದಲ್ಲಿ ನಡೆಯುತ್ತಿದೆ” ಎಂದು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದರು.

ಮಧ್ಯಪ್ರಾಚ್ಯದ ಯುದ್ಧದ ಪರಿಣಾಮವಾಗಿ ಜಾಗತಿಕವಾಗಿ ಕಚ್ಚಾ ತೈಲ ಬೆಲೆ ಏರಿಕೆಯಾಗಿದ್ದು, ಇದರಿಂದ ಕೆಲವು ವಲಯಗಳಲ್ಲಿ ಆತಂಕ ಸೃಷ್ಟಿಯಾಗಿದೆ. ಆದರೆ ಭಾರತದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ನಿಯಂತ್ರಣದಲ್ಲಿಡಲು ಸರ್ಕಾರ ಕ್ರಮ ಕೈಗೊಂಡಿದ್ದು, ಜನರಿಗೆ ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳಲಾಗುತ್ತಿದೆ ಎಂದು ಅವರು ಭರವಸೆ ನೀಡಿದ್ದಾರೆ. ಇದೇ ವೇಳೆ, ಕೇಂದ್ರ ಸಚಿವರು ಹಾಗೂ ಸರ್ಕಾರದ ಇತರ ಅಧಿಕಾರಿಗಳು ಸಹ ಲಾಕ್‌ಡೌನ್ ಕುರಿತ ಸುದ್ದಿಗಳನ್ನು “ಹಾನಿಕಾರಕ ಮತ್ತು ಸುಳ್ಳು” ಎಂದು ತಳ್ಳಿಹಾಕಿ, ಜನರು ವದಂತಿಗಳಿಗೆ ಒಳಗಾಗಬಾರದು ಎಂದು ಮನವಿ ಮಾಡಿದ್ದಾರೆ.

ದೇಶದಲ್ಲಿ ಲಾಕ್‌ಡೌನ್ ಜಾರಿಗೆ ಯಾವುದೇ ಯೋಜನೆ ಇಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರಡುವ ತಪ್ಪು ಮಾಹಿತಿಯಿಂದ ಜನರು ಎಚ್ಚರಿಕೆಯಿಂದ ಇರಬೇಕೆಂದು ಸೂಚಿಸಿದೆ.






