ಅಸ್ಸಾಂ:
ವಿಧಾನಸಭೆ ಚುನಾವಣೆ ಸನ್ನಿವೇಶದಲ್ಲೇ ಕಾಂಗ್ರೆಸ್ ಪಕ್ಷಕ್ಕೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ಅಸ್ಸಾಂ ರಾಜ್ಯದ ನಾಗಾವ್ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಸಂಸದ ಪ್ರದ್ಯುತ್ ಬೋರ್ಡೊಲೊಯ್ ಅವರು ಪಕ್ಷದ ಎಲ್ಲಾ ಹುದ್ದೆಗಳು ಹಾಗೂ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ. ಹಾಗೂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ನೇತೃತ್ವದಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.

ಪಕ್ಷದೊಳಗಿನ ಪರಿಸ್ಥಿತಿಯಿಂದ ಉಸಿರುಗಟ್ಟುವಂತಾಗಿದ್ದು, ಹಿರಿಯ ನಾಯಕರ ಸಮ್ಮುಖದಲ್ಲೇ ತನ್ನ ಮಾತಿಗೆ ಬೆಲೆ ಸಿಗದಂತಾಯಿತು, ಇದೇ ಕಾರಣಕ್ಕೆ ಪಕ್ಷ ತೊರೆದಿರುವುದಾಗಿ ತಿಳಿಸಿದ್ದಾರೆ.ಕ್ರಿಮಿನಲ್ ಹಿನ್ನೆಲೆಯುಳ್ಳವರ ಬಗ್ಗೆ ನೀಡಿದ ಪುರಾವೆಗಳನ್ನು ಕಟ್ಟುಕಥೆ ಎಂದು ತಳ್ಳಿ ಹಾಕಿದಾಗಲೂ ಪಕ್ಷದ ಅಧ್ಯಕ್ಷರು ಮೌನವಾಗಿದ್ದರು. ಸ್ವಾಭಿಮಾನಕ್ಕಿಂತ ದೊಡ್ಡದು ಯಾವುದೂ ಇಲ್ಲ ಎಂದು ಪ್ರದ್ಯುತ್ ಬೋರ್ಡೊಲೊಯ್ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ.

ಟಿಕೆಟ್ ಮುಖ್ಯವಲ್ಲ ಎಂದು ಸ್ಪಷ್ಟಪಡಿಸಿದ ಅವರು, ಸಂಸದನಾಗಿ ಇನ್ನೂ ಮೂರು ವರ್ಷಗಳ ಅವಧಿ ಬಾಕಿ ಇದ್ದರೂ ಅವಮಾನ ಸಹಿಸಿಕೊಂಡು ಮುಂದುವರಿಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.ತಮ್ಮ ರಾಜೀನಾಮೆ ಪತ್ರದಲ್ಲಿ, “ಬಹಳ ದುಃಖದಿಂದ ನಾನು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಎಲ್ಲಾ ಹುದ್ದೆಗಳು, ಸವಲತ್ತುಗಳು ಮತ್ತು ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ” ಎಂದು ಅವರು ಉಲ್ಲೇಖಿಸಿದ್ದಾರೆ. ಜೊತೆಗೆ ಪಕ್ಷದ ಭವಿಷ್ಯಕ್ಕೆ ಶುಭಾಶಯಗಳನ್ನು ಕೋರಿದ್ದಾರೆ.ಈ ಕುರಿತು ಅವರು ತಮ್ಮ ರಾಜೀನಾಮೆ ಪತ್ರವನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಲ್ಲಿಸಿರುವುದಾಗಿ ತಿಳಿದುಬಂದಿದೆ.

ಅಸ್ಸಾಂ ರಾಜ್ಯದ 126 ಸದಸ್ಯರ ವಿಧಾನಸಭೆಗೆ ಏಪ್ರಿಲ್ 9ರಂದು ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಕಾಂಗ್ರೆಸ್ ಈಗಾಗಲೇ ಅಭ್ಯರ್ಥಿಗಳ ಎರಡು ಪಟ್ಟಿಗಳನ್ನು ಬಿಡುಗಡೆ ಮಾಡಿ ಚುನಾವಣಾ ಸಿದ್ಧತೆಯಲ್ಲಿ ತೊಡಗಿದೆ. ರಾಜ್ಯ ಚುನಾವಣಾ ಉಸ್ತುವಾರಿಯಾಗಿ ಡಿ ಕೆ ಶಿವಕುಮಾರ್ ಅವರನ್ನು ನೇಮಕ ಮಾಡಲಾಗಿದೆ.ಇದಕ್ಕೂ ಮೊದಲು ಅಸ್ಸಾಂ ಕಾಂಗ್ರೆಸ್ ರಾಜ್ಯ ಘಟಕದ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಅವರು ಫೆಬ್ರವರಿ 22ರಂದು ಬಿಜೆಪಿ ಸೇರ್ಪಡೆಯಾಗಿದ್ದರು. ಇದೀಗ ಸಂಸದ ಬೋರ್ಡೊಲೊಯ್ ರಾಜೀನಾಮೆ ನೀಡಿರುವುದು ಕಾಂಗ್ರೆಸ್ಗೆ ಮತ್ತೊಂದು ಹಿನ್ನಡೆಯಾಗಿದೆ.ಒಟ್ಟಾರೆ, ಪ್ರಮುಖ ನಾಯಕರ ನಿರ್ಗಮನದಿಂದ ಅಸ್ಸಾಂದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಚುನಾವಣೆಗೆ ಮುನ್ನ ಸಂಕಷ್ಟ ಹೆಚ್ಚುತ್ತಿರುವುದು ಸ್ಪಷ್ಟವಾಗಿದೆ.

ಅಸ್ಸಾಂ ವಿಧಾನಸಭೆ ಚುನಾವಣಾ ವೇಳಾಪಟ್ಟಿ :
- ಮಾರ್ಚ್ 16 : ಅಧಿಸೂಚನೆ ಪ್ರಕಟ
- ಮಾರ್ಚ್ 23 : ನಾಮಪತ್ರ ಸಲ್ಲಿಕೆ ಕೊನೆ ದಿನ
- ಮಾರ್ಚ್ 24 : ನಾಮಪತ್ರಗಳ ಪರಿಶೀಲನೆ
- ಮಾರ್ಚ್ 26 : ನಾಮಪತ್ರ ಹಿಂಪಡೆಯುವ ಕೊನೆ ದಿನ
- ಏಪ್ರಿಲ್ 9 : ಮತದಾನ
- ಮೇ 4 : ಮತ ಎಣಿಕೆ






