ಆರಂಭವಾದ ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧ, ಜಾಗತಿಕ ಮಾರುಕಟ್ಟೆಯ ಮೇಲೆ ಭಾರೀ ಪರಿಣಾಮ ಬೀರಿದೆ.ಷೇರು ಮಾರುಕಟ್ಟೆ ಕಳೆದ ಮೂರು ದಿನಗಳಿಂದ ಕುಸಿತದಲ್ಲೇ ಇದೆ.

ಯುಎಸ್-ಇರಾನ್ ಯುದ್ಧದ ಭೀತಿ ಹೆಚ್ಚಾಗುತ್ತಿದ್ದಂತೆ, ದಲಾಲ್ ಸ್ಟ್ರೀಟ್‌ನಲ್ಲಿ ಹೂಡಿಕೆದಾರರು ಅಪಾಯಕಾರಿ ಷೇರುಗಳನ್ನು ಮಾರಾಟ ಮಾಡಿದ್ದರಿಂದ, ಭಾರತೀಯ ಷೇರು ಮಾರುಕಟ್ಟೆ ತೀವ್ರ ನಷ್ಟವನ್ನು ಅನುಭವಿಸಿತು. ಇದು ಮಾರುಕಟ್ಟೆಯಲ್ಲಿ ‘ಬ್ಲಡ್‌ಬಾತ್ ವಹಿವಾಟಿ’ಗೆ ಕಾರಣವಾಗಿದೆ. ಜಿಯೋಜಿತ್ ಇನ್ವೆಸ್ಟ್‌ಮೆಂಟ್ಸ್ ಲಿಮಿಟೆಡ್‌ನ ಮುಖ್ಯ ಹೂಡಿಕೆ ತಂತ್ರಜ್ಞ ವಿ.ಕೆ. ವಿಜಯಕುಮಾರ್ ಈ ಕುರಿತು ಮಾತನಾಡಿದ್ದು, ‘ಯುದ್ಧ ತೀವ್ರವಾಗಿ, ಕಚ್ಚಾ ತೈಲ ಬೆಲೆ ಏರುತ್ತಿರುವಾಗ, ಮಾರುಕಟ್ಟೆಯಲ್ಲೂ ಭಾರೀ ಕುಸಿತ ಕಾಣುತ್ತಿದೆ.’ ಎಂದು ಹೇಳಿದ್ದಾರೆ.

ಇಂದು ಬುಧವಾರದಂದು, ಭಾರತೀಯ ಷೇರು ಮಾರುಕಟ್ಟೆಯಲ್ಲಿ (Stock Market Crash) ಭಾರೀ ಕುಸಿತವಾಗಿದೆ. ಸೆನ್ಸೆಕ್ಸ್ 1,750 ಅಂಕಗಳನ್ನು (ಶೇ 2.2) ಇಳಿಕೆಯಾಗಿ ಆರಂಭಿಕ ವಹಿವಾಟಿನಲ್ಲಿ, ದಿನದ ಕನಿಷ್ಠ ಮಟ್ಟ 78,480.63ಕ್ಕೆ ಇಳಿದರೆ, ನಿಫ್ಟಿ 50 (Nifty 50) ಸಹ 500 ಅಂಕಗಳನ್ನು (ಶೇ 2.1) ಕಳೆದುಕೊಂಡು 24,334.85ರ ಕನಿಷ್ಠ ಮಟ್ಟದಲ್ಲಿ ವಹಿವಾಟು ನಡೆಸುತ್ತಿದೆ. ಈ ಕುಸಿತದಿಂದ ಹೂಡಿಕೆದಾರರಿಗೆ ಕೆಲವೇ ನಿಮಿಷಗಳಲ್ಲಿ ₹9 ಲಕ್ಷ ಕೋಟಿ ಸಂಪತ್ತು ನಷ್ಟವಾಗಿದೆ.
ಬಿಎಸ್ ಇ, ಎನ್ ಎಸ್ ಇ ನಿಫ್ಟಿ ಕುಸಿತದ ನಡುವೆ ಕೋಲ್ ಇಂಡಿಯಾ, ಭಾರ್ತಿ ಏರ್ ಟೆಲ್, ಇನ್ಫೋಸಿಸ್, ಟೆಕ್ ಮಹೀಂದ್ರ ಷೇರುಗಳು ಲಾಭಗಳಿಸಿದೆ. ಟಾಟಾ ಸ್ಟೀಲ್, ಟಾಟಾ ಮೋಟಾರ್ಸ್ ಪ್ಯಾಸೆಂಜರ್ ವೆಹಿಕಲ್ಸ್, ಎಸ್ ಬಿಐ ಲೈಫ್ ಇನ್ಸೂರೆನ್ಸ್, ಎಲ್& ಟಿ, ಜೆಎಸ್ ಡಬ್ಲ್ಯು ಸ್ಟೀಲ್ ಷೇರುಗಳು ನಷ್ಟ ಕಂಡಿದೆ.
ಬುಧವಾರ ಬೆಳಿಗ್ಗೆ 9:20ರ ಸುಮಾರಿಗೆ ಬಿಎಸ್‌ಇ-ಲಿಸ್ಟೆಡ್ ಸಂಸ್ಥೆಗಳ ಒಟ್ಟಾರೆ ಮಾರುಕಟ್ಟೆ ಬಂಡವಾಳ ₹448 ಲಕ್ಷ ಕೋಟಿಗೆ ಕುಸಿತ ಕಂಡಿತು. ಇದು ಹಿಂದಿನ ಸೆಷನ್‌ನಲ್ಲಿದ್ದ ₹457 ಲಕ್ಷ ಕೋಟಿಗೆ ಹೋಲಿಸಿದರೆ ಸುಮಾರು ₹9 ಲಕ್ಷ ಕೋಟಿ ಕಡಿಮೆಯಾಗಿದೆ ಎಂದು ವರದಿಯಾಗಿದೆ. ಈ ಪರಿಣಾಮ ಸದ್ಯ ಹೂಡಿಕೆದಾರರು ಭಾರೀ ನಷ್ಟದಲ್ಲಿದ್ದಾರೆ.ಯುಎಸ್-ಇರಾನ್ ಯುದ್ಧದಿಂದ ಉಂಟಾದ ಹಣದುಬ್ಬರದ ನಡುವೆ, ಯುಎಸ್ ಡಾಲರ್ ಇಂಡೆಕ್ಸ್ ಬಹು-ತಿಂಗಳ ಗರಿಷ್ಠ ಮಟ್ಟಕ್ಕೆ ಏರಿತು. ಇದರಿಂದ ಬುಧವಾರ ಭಾರತೀಯ ರೂಪಾಯಿ 66 ಪೈಸೆ ಕುಸಿದು, ಯುಎಸ್ ಡಾಲರ್ ವಿರುದ್ಧ 92.15 ರ ಸಾರ್ವಕಾಲಿಕ ಕನಿಷ್ಠಕ್ಕೆ ತಲುಪಿದೆ.






