ನವದೆಹಲಿ : ಮೂರನೇ ಜಾಗತಿಕ ಯುದ್ಧಕ್ಕೆ ಅಮೆರಿಕ ರಣಕಹಳ ಮೊಳಗಿಸಿದೆ. ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಭೀಕರ ದಾಳಿ ನಡೆಸಿವೆ. ಇರಾನ್ ರಾಜಧಾನಿ ಟೆಹರಾನ್ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ ನಡೆಸಿದೆ. ಇರಾನ್‌ನ ಸರ್ವೋಚ್ಚ ನಾಯಕ ಮತ್ತು ಅಧ್ಯಕ್ಷರ ಭವನಗಳನ್ನು ಗುರಿಯಾಗಿಸಿಕೊಂಡು ನಗರದಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ.

ಪ್ರಮುಖವಾಗಿ ಆಪರೇಷನ್ ಶೀಲ್ಡ್ ಆಫ್ ಜುದಾ ಎಂಬ ಹೆಸರಿನಲ್ಲಿ ನಡೆಯುತ್ತಿರುವ ಈ ದಾಳಿಯಿಂದ ಇರಾನ್ ತತ್ತರಿಸಿದೆ. ಸರ್ಕಾರಿ ಕಟ್ಟಡಗಳು ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಟಾರ್ಗೆಟ್ ಮಾಡಿ ದಾಳಿ ಮುಂದುವರೆಯುತ್ತಿದೆ.
ಮುನ್ನೆಚ್ಚರಿಕಾ ಕ್ರಮವಾಗಿ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರಂತರವಾಗಿ ಖಮೇಲಿ ಮೇಲೆ ಕೆಂಡ ಕಾರುತ್ತಲೇ ಇದ್ದಾರೆ. ಖಮೇನಿಯನ್ನು ಸುಮ್ಮನೇ ಬಿಡುವುದಿಲ್ಲ ಎಂದು ಈ ಹಿಂದೆಯೂ ಹೇಳಿದ್ದರು. ಆದರೆ ದಾಳಿಯ ಬೆನ್ನಲ್ಲೇ ಖುದ್ದು ಟ್ರಂಪ್ ನಾವು ಇರಾನ್ ಮೇಲೆ ದಾಳಿ ನಡೆಸಿದ್ದೇವೆ ಎಂದು ಘೋಷಿಸುವ ಮೂಲಕ ಅಧಿಕೃತವಾಗಿ ಕದನಕ್ಕೆ ಇಳಿದಿದ್ದಾರೆ.
ಪರಮಾಣು ಒಪ್ಪಂದದ ವಿಚಾರದಲ್ಲಿ ಅಮೆರಿಕ ಹಾಗೂ ಇರಾನ್‌ಗಳ ನಡುವೆ ರಾಜತಾಂತ್ರಿಕ ಪ್ರಕ್ರಿಯೆಗಳ ಹೊತ್ತಿನಲ್ಲೇ ಅಮೆರಿಕದ ದಾಳಿ ಇರಾನ್ ಇನ್ನಷ್ಟು ಕಂಗೆಡಲು ಕಾರಣವಾಗಿದೆ. ಹೀಗಾಗಿ ಅಮೆರಿಕದ ವಾಯು ನೆಲೆಗಳ ಮೇಲೆ ಇರಾನ್ ಪ್ರತಿದಾಳಿ ನಡೆಸಿದೆ. ಈ ಎಲ್ಲ ಬೆಳವಣಿಗೆಗಳಿಂದ ಮಧ್ಯ ಪ್ರಾಚ್ಯದ ಭಾಗದಲ್ಲಿ ಉದ್ವಿಗ್ನತೆ ನಿರ್ಮಾಣವಾಗಿದೆ.
ತತ್ತರಿಸಿದ ಟೆಹರಾನ್, ಮೊಬೈಲ್ ಸಂಪರ್ಕ ಕಡಿತ..!
ಅಲ್ಲದೆ ಇರಾನ್ ರಾಜಧಾನಿ ಟೆಹರಾನ್‌ನ ಪೂರ್ವ ಮತ್ತು ಪಶ್ಚಿಮ ಭಾಗದಲ್ಲಿ ಮೊಬೈಲ್ ಸೇವೆಗಳನ್ನು ಕಡಿತಗೊಳಿಸಲಾಗಿದ್ದು, ಇರಾನ್ ಏರ್ ಬೇಸ್ ಸೇವೆಯನ್ನೂ ಬಂದ್ ಮಾಡಲಾಗಿದೆ. ಇದರಿಂದ ಇರಾನ್‌ನಲ್ಲಿ ತುರ್ತು ಪರಿಸ್ಥಿತಿಯಂತಹ ವಾತಾವರಣ ಸೃಷ್ಟಿಯಾಗಿದೆ.
ಇನ್ನೂ ಕಳೆದ ಜೂನ್ 2025ರಲ್ಲಿ ಇಸ್ರೇಲ್ ಹಾಗೂ ಇರಾನ್ ನಡುವೆ ಎರಡು ವಾರಗಳ ಕಾಲ ಏರ್‌ಸ್ಟ್ರೈಕ್ ಗಳು ನಡೆದಿದ್ದವು. ಇದಾದ ಹಲವು ತಿಂಗಳುಗಳ ಬಳಿಕ ನಡೆದಿರುವ ದಾಳಿಯು ಭೀಕರತೆಯ ಸ್ವರೂಪ ಪಡೆದುಕೊಂಡಿದೆ. ಮುಖ್ಯವಾಗಿ ಹಲವು ವರ್ಷಗಳಿಂದ ವೈರಿಗಳಾಗಿರುವ ಎರಡು ದೇಶಗಳ ನಡುವೆ ನೇರಾ ನೇರವಾಗಿ ನಡೆದಿರುವ ಯುದ್ಧ ಇದಾಗಿದೆ. ಇರಾನ್ ತನ್ನ ಬಲಿಷ್ಠ ಪರಮಾಣು ಹಾಗೂ ಬ್ಯಾಲಿಸ್ಟಿಕ್ ಮಿಸೈಲ್‌ಗಳನ್ನು ಬಳಸಿಕೊಂಡು ಪ್ರತಿದಾಳಿ ನಡೆಸುತ್ತಿದೆ. ಇದು ಹೀಗೆ ಮುಂದುವರೆದರೆ ವೈಮಾನಿಕ ದಾಳಿಯ ಜೊತೆಗೆ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸುತ್ತೇವೆ ಎಂದು ಅಮೆರಿಕ ಹಾಗೂ ಇಸ್ರೇಲ್ ರಾಷ್ಟ್ರಗಳು ಇರಾನ್‌ಗೆ ಎಚ್ಚರಿಕೆ ನೀಡಿವೆ.
ಇರಾನ್‌ಗೆ ಆರಂಭದಲ್ಲೇ ದೊಡ್ಡ ಪೆಟ್ಟು..?
ಉಭಯ ದೇಶಗಳ ದಾಳಿಯಿಂದ ಇರಾನ್ ಸೇನಾ ಮುಖ್ಯಸ್ಥ ಅಮೀರ್ ಹತಾಮಿ ಹತರಾಗಿದ್ದಾರೆ ಎಂದು ಇಸ್ರೇಲಿ ಮಾಧ್ಯಮಗಳು ವರದಿ ಮಾಡಿವೆ. ಆದರೆ ಇರಾನ್ ಸರ್ಕಾರ ಅಥವಾ ಇಸ್ರೇಲಿ ಮಿಲಿಟರಿ ಅಧಿಕೃತವಾಗಿ ಹತಾಮಿಯ ಸಾವನ್ನು ದೃಢಪಡಿಸಿಲ್ಲ. ಮುಖ್ಯವಾಗಿ ಹತಾಮಿ ಇರಾನ್‌ನ ಮಿಲಿಟರಿಗೆ ಹಾಗೂ ಡಿಫೆನ್ಸ್ ವ್ಯವಸ್ಥೆಯ ಕುರಿತು ಹೆಚ್ಚಿನ ಕಾಳಜಿ ಹೊಂದಿದ್ದರು. ಕ್ಷಿಪಣಿ, ಡ್ರೋನ್ ಸೌಕರ್ಯಗಳನ್ನು ಬಲಪಡಿಸಿ ಇರಾನ್ ಸೇನೆಗೆ ಹಾಗೂ ರಕ್ಷಣಾ ಕೇತ್ರದ ಗಟ್ಟಿತನಕ್ಕೆ ಶ್ರಮಿಸಿದ್ದರು.
ಇರಾನ್ ಕ್ಷಿಪಣಿ ಕೇಂದ್ರಿತವಾಗಿರುವ ರಕ್ಷಣಾ ನೀತಿಯ ಮೇಲೆ ಅಪಾರ ನಂಬಿಕ ಇಟ್ಟುಕೊಂಡಿರುವ ಅಧಿಕಾರಿ.ಇರಾನ್ ದೇಶದ ಸಾರ್ವಭೌಮತೆಯನ್ನು ಉಳಿಸಿಕೊಳ್ಳಲು ಕ್ಷಿಪಣಿ ಕ್ಷೇತ್ರದ ಶಕ್ತಿಯನ್ನು ಬಲಪಡಿಸಬೇಕೆಂದು ಪ್ರತಿಪಾದಿಸುತ್ತಿದ್ದರು. ಇರಾನ್‌ನ ರಕ್ಷಣಾ ಸಚಿವರಾಗಿಯೂ ಸೇವೆ ಸಲ್ಲಿಸಿದ್ದ ಹತಾಮಿ, ರಕ್ಷಣಾ ವಲಯದ ಬಗ್ಗೆ ಆಳವಾದ ಜ್ಷಾನವನ್ನು ಹೊಂದಿದ್ದವರು. ಒಂದು ವೇಳೆ ಇಸ್ರೇಲ್ ಹಾಗೂ ಅಮೆರಿಕದ ದಾಳಿಯಲ್ಲಿ ಅಮಿರ್ ಹತಾಮಿಯ ಸಾವಿನ ಸುದ್ಧಿ ಸತ್ಯವಾಗಿದ್ದೇ ಆದರೆ ಅದು ಇರಾನ್‌ಗೆ ಹಾಗೂ ಅದರ ರಕ್ಷಣಾ ಕ್ಷೇತ್ರಕ್ಕೆ ದೊಡ್ಡ ಪೆಟ್ಟು ಬಿದ್ದಂತಾಗುತ್ತದೆ.






