ಆರೋಗ್ಯ ಇಲಾಖೆಯು ಉರ್ದು ಭಾಷೆಯಲ್ಲಿ ಜಾಹೀರಾತು ನಿಡಿದೆ ಎಂಬ ಚರ್ಚೆ ಪರ ವಿರೋಧಗಳು ಉಂಟಾಗಿತ್ತು. ಈ ಜಾಹೀರಾತಿಗೆ ಕನ್ನಡಪರ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸಿದ್ದವು ಆದರೆ ಈ ಜಾಹೀರಾತನ್ನು ಕರ್ನಾಟಕ ಕಾಂಗ್ರೆಸ್ ಸರ್ಕಾರವು ಸಮರ್ಥಿಸಿಕೊಂಡಿದೆ.

ವಿಚಾರವಾಗಿ ಟ್ವೀಟ್ ಮಾಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಈ ಕುರಿತು ಸಾಮಾಜಿಕ ಮಾಧ್ಯಮದಲ್ಲಿ ಹೀಗೆ ಬರೆದುಕೊಂಡಿದ್ದಾರೆ:ಉರ್ದುವಿನಲ್ಲಿ “ಆಮಂತ್ರಣ ಪತ್ರಿಕೆ” ಮುದ್ರಿಸಲಾಗಿದೆ ಎಂಬಂತೆ ಕೆಲವು ಟಿವಿ ಮಾಧ್ಯಮಗಳು ಪುನಃ ಪುನಃ ಸುಳ್ಳು ಸುದ್ದಿಯನ್ನು ಪ್ರಸಾರ ಮಾಡುತ್ತಿರುವುದು ಅತ್ಯಂತ ಆಘಾತಕಾರಿ ಎಂದು ಹೇಳಿದ್ದಾರೆ.

ಮಾಧ್ಯಮಗಳಿಗೆ ಸತ್ಯಾಸತ್ಯತೆ ಪರಿಶೀಲಿಸುವ ಜವಾಬ್ದಾರಿ ಇಲ್ಲವೇ? ಸ್ಪಷ್ಟಪಡಿಸಬೇಕಾದ ಸಂಗತಿ ಏನೆಂದರೆ ,ಇದು ಆಮಂತ್ರಣ ಪತ್ರಿಕೆ ಅಲ್ಲ. ಇದು ಒಂದು ಪತ್ರಿಕಾ ಜಾಹೀರಾತು ಮಾತ್ರ. ಕನ್ನಡ, ಇಂಗ್ಲಿಷ್ ಸೇರಿದಂತೆ ಇತರೆ ಭಾಷಾ ಪತ್ರಿಕೆಗಳಲ್ಲಿಯೂ ಸರ್ಕಾರಗಳು ಜಾಹೀರಾತು ನೀಡುವಂತೆ, ಉರ್ದು ದಿನಪತ್ರಿಕೆಗಳಲ್ಲಿಯೂ ಎಲ್ಲಾ ಸರ್ಕಾರಗಳು ಬಿಜೆಪಿ, ಜೆಡಿಎಸ್ ಸೇರಿದಂತೆ ವರ್ಷಗಳಿಂದ ಜಾಹೀರಾತು ನೀಡುತ್ತಲೇ ಬಂದಿವೆ. ಇದರಲ್ಲಿ ಹೊಸದೇನೂ ಇಲ್ಲ.

ಜಾಹೀರಾತನ್ನು ಉದ್ದೇಶಪೂರ್ವಕವಾಗಿ “ಆಮಂತ್ರಣ” ಎಂದು ತಪ್ಪಾಗಿ ಪ್ರಚಾರ ಮಾಡುವುದು ತಪ್ಪು ಮಾತ್ರವಲ್ಲ, ಅದು ಜನರನ್ನು ತಪ್ಪು ದಾರಿಗೆಳೆವ ಕಾರ್ಯ. ಮಾಧ್ಯಮ ಸ್ವಾತಂತ್ರ್ಯ ಅತ್ಯಂತ ಮಹತ್ವದ್ದು. ಆದರೆ ಅದರ ಜೊತೆಗೆ ಜವಾಬ್ದಾರಿಯೂ ಅಷ್ಟೇ ಮಹತ್ವದ್ದು. ಸತ್ಯವನ್ನು ತಿರುವುಮಾಡಿ ಸಂಚಲನ ಸೃಷ್ಟಿಸುವುದು ಜನರ ನಂಬಿಕೆಗೆ ಧಕ್ಕೆ ತರುತ್ತದೆ. ಜವಾಬ್ದಾರಿಯುತ ಪತ್ರಿಕೋದ್ಯಮವೇ ಪ್ರಜಾಪ್ರಭುತ್ವದ ಬಲ ಎಂದು ಗುಂಡುರಾವ್ ಹೇಳಿದ್ದಾರೆ.






