
ಖ್ಯಾತ ವೈದ್ಯನ ಹತ್ಯೆಗೆ ಸಂಚು..? : ಸುನೀಲ್ ಕುಮಾರ್ ಹೆಬ್ಬಿ ಕ್ಲಿನಿಕ್‌ಗೆ ನುಗ್ಗಿದವರಾರು..?

ಬೆಂಗಳೂರು : ಮೊಬೈಲ್ ಕ್ಲಿನಿಕ್ ಖ್ಯಾತಿಯ ವೈದ್ಯ ಡಾ. ಸುನೀಲ್ ಕುಮಾರ್ ಹೆಬ್ಬಿಯವರ ಕೊಲೆಗೆ ಸಂಚು ರೂಪಿಸಿರುವ ಆರೋಪ ಕೇಳಿ ಬಂದಿದೆ. ಈ ಕುರಿತು ಖುದ್ದು ಹೆಬ್ಬಿ ಸಂಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇಂದು ಬೆಳಿಗ್ಗೆ 9 ಗಂಟೆ 28 ನಿಮಿಷಕ್ಕೆ ನಗರದ ಭದ್ರಪ್ಪ ಲೇಔಟ್‌ನ ನಾಗಶೆಟ್ಟಿ ಹಳ್ಳಿಯಲ್ಲಿರುವ ಹೆಬ್ಬಿ ಕ್ಲಿನಿಕ್‌ಗೆ ಇಬ್ಬರು ಮಾಸ್ಕ್‌ಧಾರಿಗಳು ನುಗ್ಗಿ ನಮ್ಮ ತಾಯಿಗೆ ಹುಷಾರಿಲ್ಲ ಎಂದು ಹೇಳುತ್ತಾರೆ.

ಆಗ ಸುನೀಲ್ ಕುಮಾರ್ ಹೆಬ್ಬಿ, ಕರೆದುಕೊಂಡು ಬನ್ನಿ ಎನ್ನುತ್ತಾರೆ. ಆದರೆ ಯುವಕರು ಅಲ್ಲೇ ನಿಂತುಕೊಳ್ಳುತ್ತಾರೆ, ಅನುಮಾನಗೊಂಡ ವೈದ್ಯ ಸುನೀಲ್ ಕುಮಾರ್ ಅವರ ಬಗ್ಗೆ ವಿಚಾರಿಸುತ್ತಿದ್ದಂತೆ ಅಲ್ಲಿಂದ ಓಡಿಹೋಗುತ್ತಾರೆ. ಈ ವೇಳೆ ಅವರ ಬಳಿ ತಲ್ವಾರ್ ಇದ್ದದ್ದು ಕಾಣಿಸಿದೆ ಎಂದು ಹೆಬ್ಬಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಾಮಾಜಿಕ ಹೋರಾಟಗಾರರೂ ಆಗಿರುವ ಸುನೀಲ್ ಕುಮಾರ್ ಹೆಬ್ಬಿ ಈಗಾಗಲೇ ಹಲವು ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತದಲ್ಲಿ ಪ್ರಕರಣಗಳನ್ನು ದಾಖಲಿಸಿದ್ದಾರೆ. ಅಲ್ಲದೆ ಈ ಹಿಂದಿನ ವಿಧಾನಸಭಾ ಚುನಾವಣೆಯಲ್ಲಿಯೂ ಹೆಬ್ಬಿ ಸ್ಪರ್ಧಿಸಿದ್ದರು. ಹೀಗಾಗಿ ರಾಜಕೀಯ ಶತ್ರುಗಳು ಹಾಗೂ ಭ್ರಷ್ಟರು ಈ ರೀತಿಯ ಕೊಲೆ ಸಂಚನ್ನು ರೂಪಿಸಿದ್ದಾರಾ ಎಂಬ ಅನುಮಾನವೂ ವೈದ್ಯ ಸುನೀಲ್ ಕುಮಾರ್ ಹೆಬ್ಬಿಗೆ ಕಾಡುತ್ತಿದೆ.
ಇನ್ನೂ ರಾಜ್ಯದಲ್ಲಿನ ಮೆಡಿಕಲ್ ಮಾಫಿಯಾ ವಿರುದ್ಧವೂ ಎದೆಗಾರಿಕೆಯಿಂದ ಧ್ವನಿ ಎತ್ತುತ್ತಿರುವ ಈ ವೈದ್ಯನಿಗೆ ಆ ವಲಯದಿಂದಲೇ ಕಂಟಕ ಶುರುವಾಗಿದೆಯಾ ಎಂಬ ಪ್ರಶ್ನೆಯೂ ಮೂಡಿದೆ. ಸದ್ಯ ಸುನೀಲ್ ಕುಮಾರ್ ಹೆಬ್ಬಿ ಸಂಜಯನಗರ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆಯ ಬಳಿಕವೇ ಹತ್ಯೆಯ ಸಂಚಿನ ಅಸಲಿಯತ್ತು ಬಯಲಾಗಲಿದೆ.







