ಕೊಪ್ಪಳ: ಬಲ್ಡೋಟಾ ಕಾರ್ಖಾನೆ ಶಾಶ್ವತ ಬಂದ್ಗೆ ಆಗ್ರಹಿಸಿ ಕಳೆದ ಒಂದು ವರ್ಷದಿಂದ ನಡೆಯುತ್ತಿರುವ ಪ್ರತಿಭಟನೆಗೆ ರಾಜ್ಯ ಸರ್ಕಾರ ಹಾಗೂ ಅಧಿಕಾರಿಗಳು ಸರಿಯಾದ ರೀತಿಯಲ್ಲಿ ಸ್ಪಂದಿಸದ ಹಿನ್ನಲೆಯಲ್ಲಿ ನಾಳೆ ಕೊಪ್ಪಳದಲ್ಲಿ ಸ್ವಯಂಪ್ರೇರಿತ ಬಂದ್ಗೆ ಕರೆ ನೀಡಲಾಗಿದೆ.


ಜಿಲ್ಲಾ ಬಚಾವೋ ಆಂದೋಲನ ಸಮಿತಿ ಮತ್ತು ಪರಿಸರ ಹಿತರಕ್ಷಣಾ ಸಮಿತಿ ಸಂಯುಕ್ತವಾಗಿ ಬಂದ್ಗೆ ಕರೆ ನೀಡಿವೆ. ಹೋರಾಟದ ಸಂಚಾಲಕ ಮಂಜುನಾಥ್ ಗೊಂಡಬಾಳ ಮಾಹಿತಿ ನೀಡಿದ್ದು, ಕಬಲ್ಡೋಟಾ ಕಾರ್ಖಾನೆ ವಿರೋಧಿ ಹೋರಾಟಕ್ಕೆ ಒಂದು ವರ್ಷ ಪೂರೈಸಿದ ಹಿನ್ನೆಲೆ ನಾಳೆ ಕೊಪ್ಪಳದಲ್ಲಿ ಸ್ವಯಂಪ್ರೇರಿತ ಬಂದ್ಗೆ ಕರೆ ನೀಡಲಾಗಿದೆ ಎಂದು ತಿಳಿಸಿದ್ದಾರೆ.

ನಾಳೆ ಬೆಳಿಗ್ಗೆ 7 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಂದ್ ನಡೆಯಲಿದ್ದು, ಬೆಳಿಗ್ಗೆ 7 ಗಂಟೆಗೆ ಭಾಗ್ಯನಗರದಲ್ಲಿ ಬೈಕ್ ಮತ್ತು ಆಟೋ ರ್ಯಾಲಿ ನಡೆಯಲಿದೆ. ಬಳಿಕ 10 ಗಂಟೆಗೆ ಗವಿ ಮಠದಿಂದ ರ್ಯಾಲಿ ಪ್ರಾರಂಭವಾಗಲಿದ್ದು, ಗಡಿಯಾರ ಕಂಬ, ಅಶೋಕ ವೃತ್ತ ಮೂಲಕ ನಗರಸಭೆ ಪ್ರತಿಭಟನಾ ಸ್ಥಳಕ್ಕೆ ಮೆರವಣಿಗೆ ಸಾಗಿ ನಗರಸಭೆ ಮುಂಭಾಗ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ವಿವಿಧ ಮಠಾಧೀಶರು ಮತ್ತು ಹೋರಾಟಗಾರರು ಭಾಗವಹಿಸಲಿದ್ದಾರೆ.

ಬಂದ್ಗೆ ಖಾಸಗಿ ಶಾಲೆಗಳ ಒಕ್ಕೂಟ ಬಂದ್ಗೆ ಬೆಂಬಲ ನೀಡಿದ್ದು, ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಹಾಗೂ ಕೊಪ್ಪಳ ವಿಶ್ವವಿದ್ಯಾಲಯದ ಸ್ನಾತಕೋತ್ತರ ಪ್ರಥಮ ಸೆಮಿಸ್ಟರ್ ಪರೀಕ್ಷೆಗಳು ಮುಂದೂಡಲ್ಪಟ್ಟಿವೆ. ಇನ್ನು ಹತ್ತನೇ ತರಗತಿ ಪೂರ್ವ ಸಿದ್ಧತಾ ಪರೀಕ್ಷೆಗಳು ನಿಗದಿಯಂತೆ ನಡೆಯಲಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.






