ಬೆಂಗಳೂರು: ದಿನ ಬೆಳಗಾದರೆ ಸಾಕು ಹೊಸ ದಿನದ ಶುಭ ಸುದ್ದಿಗಾಗಿ ಪತ್ರಿಕೆ ಅಥವಾ ಟಿವಿ ಮುಂದೆ ಕುಳಿತರೆ ನೋಡುವವರ ಕಣ್ಣಿಗೆ ರಾಚುವಂತೆ ಕಾಣುವುದು ಅಪಘಾತದ ಸುದ್ದಿಗಳು. ದಿನಕ್ಕೆ ಕನಿಷ್ಠ ಹತ್ತು ಅಪಘಾತದ ಸುದ್ದಿ ಬಗ್ಗೆಯಾದರೂ ನೀವು ಕಣ್ಣು ಹಾಯಿಸಬಹುದಾಗಿದ್ದು, ಪ್ರತಿ ದಿನ ಒಂದು ಐದು ಮಂದಿಯಾದರೂ ಅಪಘಾತದಿಂದ ಸಾವನ್ನಪ್ಪುತ್ತಾರೆ ಎಂದು ಅಂದಾಜಿಸಬಹುದು. ಆದರೆ ಇದೀಗ ಆತಂಕಕಾರಿ ವಿಚಾರವೊಂದು ಹೊರಬಿದ್ದಿದ್ದು, ಕರ್ನಾಟಕದಲ್ಲಿ ಪ್ರತಿದಿನ ರಸ್ತೆ ಅಪಘಾತಕ್ಕೆ 31 ಜೀವಗಳು ಬಲಿಯಾಗುತ್ತಿದೆ ಎಂದು ವರದಿಯಾಗಿದೆ.

ಹೌದು ಕರ್ನಾಟಕದಲ್ಲಿ ರಸ್ತೆ ಅಪಘಾತಗಳ ಸಂಖ್ಯೆ ಆತಂಕಕಾರಿಯಾಗಿ ಹೆಚ್ಚುತ್ತಿದೆ. ಪ್ರತಿದಿನ ಸರಾಸರಿ 31 ಮಂದಿ ಸಾವನ್ನಪ್ಪುತ್ತಿದ್ದು, 86 ಮಂದಿ ಗಾಯಗೊಳ್ಳುತ್ತಿದ್ದಾರೆ ಎಂದು ಇತ್ತೀಚಿನ ಅಧ್ಯಯನ ವರದಿಯೊಂದು ತಿಳಿಸಿದೆ.

2025ರಲ್ಲಿ ಸಂಭವಿಸಿದ ಅಪಘಾತಗಳಲ್ಲಿ ಶೇ 62.68 ಪ್ರಕರಣಗಳು ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಲ್ಲೇ ನಡೆದಿವೆ. 2026ರ ಜನವರಿಯಲ್ಲೇ 1,009 ಮಂದಿ ಮೃತಪಟ್ಟಿದ್ದಾರೆ ಎಂದು ವರದಿ ತಿಳಿಸಿದೆ. 2025ರಲ್ಲಿ ಒಟ್ಟು 11,408 ಮಂದಿ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪಿದ್ದು, 800ಕ್ಕೂ ಹೆಚ್ಚು ಜನರು ಬೆಂಗಳೂರು ನಗರದಲ್ಲಿ ನಡೆದ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಹಾಗೂ 31,751 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ. ಬೆಳಗಾವಿ ಮತ್ತು ತುಮಕೂರು ಜಿಲ್ಲೆಗಳಲ್ಲೂ ಹೆಚ್ಚಿನ ಸಾವುಗಳು ದಾಖಲಾಗಿವೆ.

ರಸ್ತೆ ಅಪಘಾತಕ್ಕೆ ಹತ್ತಾರು ಕಾರಣಗಳಿದ್ದು, ವೇಗದ ಚಾಲನೆ, ನಿರ್ಲಕ್ಷ್ಯ ಮತ್ತು ಮೂಲಸೌಕರ್ಯ ಕೊರತೆ ಪ್ರಮುಖ ಕಾರಣಗಳಾಗಿವೆ. ಅತಿವೇಗ ಮತ್ತು ನಿರ್ಲಕ್ಷ್ಯ ಚಾಲನೆ, ಮದ್ಯಪಾನ ಮಾಡಿ ವಾಹನ ಚಾಲನೆ, ಹೆಲ್ಮೆಟ್ ಮತ್ತು ಸೀಟ್‌ಬೆಲ್ಟ್ ಬಳಕೆ ಇಲ್ಲದಿರುವುದು, ಅಪೂರ್ಣ ಹೆದ್ದಾರಿಗಳ ಕಾಮಗಾರಿಗಳು, ಸಮರ್ಪಕ ಬೆಳಕು ಹಾಗೂ ಪ್ರತಿಫಲಕ ಗುರುತುಗಳ ಕೊರತೆ, ಅವೈಜ್ಙಾನಿಕ ರಸ್ತೆ ನಿರ್ಮಾಣವೇ ಪ್ರತಿನಿತ್ಯ ಅಪಘಾತಗಳಿಗೆ ಕಾರಣವಾಗಿದೆ.

ಅಪಘಾತಗಳನ್ನು ತಡೆಯಲು ಸಂಚಾರಿ ಪೊಲೀಸರು ವಿವಿಧ ಕ್ರಮಗಳನ್ನು ಕೈಗೊಂಡರೂ ಕೂಡ ಅಪಘಾತಗಳ ಸಂಖ್ಯೆ ಕಡಿಮೆಯಾಗುತ್ತಿಲ್ಲ. ಹೀಗಾಗಿ ಸಂಚಾರಿ ಪೊಲೀಸರು ಹೆದ್ದಾರಿಗಳಲ್ಲಿ ನಿಯಮಿತ ಪೆಟ್ರೋಲಿಂಗ್ ಹೆಚ್ಚಿಸಬೇಕಾಗಿದ್ದು, ಅತಿವೇಗ ಚಾಲಕರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗಿದೆ. ಹಾಗೂ ರಸ್ತೆ ಸುರಕ್ಷತೆ ಕುರಿತು ಸಾಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಅಭಿಯಾನ ಹೆಚ್ಚಿಸಬೇಕಾಗಿದೆ.






