ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸಾರಿಗೆ ನೌಕರರು ‘ಬೆಂಗಳೂರು ಚಲೋ’ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯದ ಪ್ರಯಾಣಿಕರಿಗೆ ಸಾರಿಗೆ ಮುಷ್ಕರದ ಬಿಸಿ ತಟ್ಟುವ ಸಾಧ್ಯತೆ ಇದೆ.

ಸಾರಿಗೆ ನೌಕರರ ಕೂಟ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ನಡೆಯುತ್ತಿರುವ ಈ ಪ್ರತಿಭಟನೆಯಲ್ಲಿ ಸಾವಿರಾರು ನೌಕರರು ಭಾಗವಹಿಸುತ್ತಿದ್ದು, ಇದರಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಬೆಳಗ್ಗೆ 10 ಗಂಟೆಗೆ ಆರಂಭವಾದ ಪ್ರತಿಭಟನೆ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಅಷ್ಟರೊಳಗೆ ಸರ್ಕಾರ ಸ್ಪಂದಿಸದಿದ್ದರೆ ಹೋರಾಟವನ್ನು ತೀವ್ರಗೊಳಿಸುವುದಾಗಿ ನೌಕರರು ಎಚ್ಚರಿಕೆ ನೀಡಿದ್ದಾರೆ.

ಸಾರಿಗೆ ನೌಕರರ ಪ್ರಮುಖ ಬೇಡಿಕೆ ಹಾಗೂ ಸರ್ಕಾರದ ನಿಲುವೇನು..?
1) 38 ತಿಂಗಳ ಹಿಂಬಾಕಿ ಪಾವತಿ
38 ತಿಂಗಳ ಪೂರ್ಣ ಹಿಂಬಾಕಿ ಪಾವತಿಸಬೇಕು ಎಂದು ನೌಕರರು ಬೇಡಿಕೆಯಿಟ್ಟಿದ್ದಾರೆ. ಆದರೆ ಸರ್ಕಾರ 6 ತಿಂಗಳ ಹಿಂಬಾಕಿ ಮಾತ್ರ ನೀಡಲು ಸಿದ್ಧ ಎಂದಿದೆ. ಹೀಗಾಗಿ ನೌಕರರು ಸರ್ಕಾರದ ಪ್ರಸ್ತಾವವನ್ನು ತಿರಸ್ಕರಿಸಿದ್ದಾರೆ.

2) ವೇತನ ಪರಿಷ್ಕರಣೆ ಜಾರಿ ದಿನಾಂಕ
2024ರ ಜನವರಿ 1ರಿಂದಲೇ ಪರಿಷ್ಕೃತ ವೇತನ ಜಾರಿಗೆ ಬರಬೇಕು ಎಂದು ನೌಕರರು ಒತ್ತಾಯಿಸಿದ್ದಾರೆ. ಆದರೆ ಸರ್ಕಾರ 2025ರ ಏಪ್ರಿಲ್‌ನಿಂದ ಜಾರಿಗೆ ತರಲಾಗುತ್ತದೆ ಎಂದಿದೆ. ಹೀಗಾಗಿ ಈ ವಿಷಯದಲ್ಲೂ ಒಮ್ಮತ ಮೂಡಿಲ್ಲ.
ಈ ಹಿನ್ನೆಲೆಯಲ್ಲಿ ಇಂದು ರಾಜಧಾನಿಯಲ್ಲಿ ಸಾರಿಗೆ ನೌಕರರ ಶಕ್ತಿ ಪ್ರದರ್ಶನ ನಡೆಯುತ್ತಿದ್ದು, ಪ್ರಯಾಣಿಕರು ಮುನ್ನೆಚ್ಚರಿಕೆಯಿಂದ ತಮ್ಮ ಪ್ರಯಾಣ ಯೋಜನೆ ರೂಪಿಸಿಕೊಳ್ಳುವುದು ಸೂಕ್ತವಾಗಿದೆ.






