ಬೆಂಗಳೂರು : ಪಿಡಿಓ ಹಣದಾಹಕ್ಕೆ ಬೇಸತ್ತು ರೈತನೊಬ್ಬ ಗ್ರಾಮ ಪಂಚಾಯತಿಯಲ್ಲಿಯೇ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿ ತಾಲೂಕಿನ ಕಡಬಗೆರೆ ಪಂಚಾಯತಿಯ ಪಿಡಿಓ ಲಂಚಗುಳಿತನಕ್ಕೆ ರೈತ ರೋಸಿ ಹೋಗಿದ್ದಾನೆ. ಈ ಕಡಬಗೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಜಮೀನಿನಲ್ಲಿ ಮನೆ ಕಟ್ಟಲು ಪರವಾಣಿಗೆಗಾಗಿ ಅರ್ಜಿ ಹಾಕಿದ್ದ. ಪರವಾನಗಿಗಾಗಿ ಅನೇಕ ಸಲ ರೈತನನ್ನು ಪರವಾನಿಗೆ ನೀಡದೇ ಹಣಕ್ಕಾಗಿ ಪಿಡಿಓ ಅಲೆದಾಡಿಸಿದ್ದಾರೆ.

ಕಳೆದ ಆರು ತಿಂಗಳಿನಿಂದ ಇ-ಸ್ವತ್ತುಗಾಗಿ ರೈತ ಕೆ. ಬಸವರಾಜ್ ಗ್ರಾಮ ಪಂಚಾಯತಿಗೆ ಅರ್ಜಿ ಸಲ್ಲಿಸಿದರೂ, ಮನವಿ ಮಾಡಿಕೊಂಡರೂ ಸಹ ಅಧಿಕಾರಿಗಳು ಬೇಜವಾಬ್ದಾರಿ ತೋರಿದ್ದಾರೆ. ಹೀಗಾಗಿ ಆಕ್ರೋಶಗೊಂಡ ರೈತ ಅಸಹಾಯಕನಾಗಿ ವ್ಯವಸ್ಥೆ ವಿರುದ್ಧ ನೊಂದ ರೈತ ಬಸವರಾಜ್ ಪಿಡಿಓ ಕೃಷ್ಣಪ್ಪ ಎದುರಲ್ಲೇ ಅರ್ಧ ಲೀಟರ್ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬಳಿಕ ರೈತನನ್ನು ಪಿಡಿಓ ತಡೆದ ಘಟನೆ ನಡೆದಿದೆ.
ಇದನ್ನೂ ಓದಿ : Blackmail: ಕನ್ನಡದ ನಟಿಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್
ಮನೆ ಕಟ್ಟೋಕೆ ಪಂಚಾಯತಿ ಪರವಾನಗಿ ಇಲ್ಲದೆ ಬ್ಯಾಂಕ್‌ಗಳು ಸಾಲ ನೀಡುತ್ತಿಲ್ಲ. ಆದರೂ ಸಹ ಅಧಿಕಾರಿಗಳು ಹಣಕ್ಕಾಗಿ ಪೀಡಿಸಿ ನನಗೆ ಇ-ಸ್ವತ್ತು ಪೊರೈಸಿಲ್ಲ ಎಂದು ರೈತ ತನ್ನ ಅಳಲುತೋಡಿಕೊಂಡಿದ್ದಾರೆ. ನಾನು ಮೊದಲೇ ಬಡವ, ನನ್ನ ಬಳಿ 20 ಸಾವಿರದಷ್ಟು ಲಂಚ ಕೇಳಿದರೆ ಎಲ್ಲಿಂದ ನೀಡಲಿ ಎಂದು ಬಸವರಾಜ್ ಭ್ರಷ್ಟ ವ್ಯವಸ್ಥೆಯ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದಲ್ಲಿ ಅಧಿಕಾರಿಗಳಿಂದ ರೈತರಿಗೆ ಪದೇ ಪದೇ ಅನ್ಯಾಯಗಳು ಆಗುತ್ತಿವೆ. ಕಳೆದ ವಾರವಷ್ಟೇ ಕಂದಾಯ ಇಲಾಖೆ ಅಧಿಕಾರಿಗಳು ಲಂಚ ಕೇಳಿದ್ದಕ್ಕಾಗಿ ಬಡ ರೈತನೊಬ್ಬ ತಾನು ಬೆಳೆದ ಮೂಲಂಗಿಯನ್ನೇ ತಂದು, ಲಂಚದ ರೂಪದಲ್ಲಿ ನೀಡುವುದಕ್ಕಾಗಿ ತಂದಿದ್ದ. ಅಧಿಕಾರಿಗಳಿಗೆ ಲಂಚ ನೀಡುವುದಕ್ಕೆ ನನ್ನ ಹತ್ತಿರ ದುಡ್ಡಿಲ್ಲ, ಅದಕ್ಕೆ ಏನು ಮಾಡೋದು ಲಂಚಬಾಕರಿಗಾಗಿ ಮೂಲಂಗಿ ತಂದಿದ್ದೇನೆ ಎಂದು ತುಮಕೂರಿನಲ್ಲಿ ಭ್ರಷ್ಟರ ನಡೆಯನ್ನು ಖಂಡಿಸಿದ್ದರು. ಆ ಘಟನೆ ಮಾಸುವ ಮುನ್ನವೇ ಇದೀಗ ವಿಜಯನಗರ ಜಿಲ್ಲೆಯಲ್ಲಿ ರೈತ ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ಭ್ರಷ್ಟ ಅಧಿಕಾರಿಗಳ ಹಣಬಾಕ ತನಕ್ಕೆ ಸಾಕ್ಷಿಯಾಗಿದೆ.






