ನವದೆಹಲಿ: ಪ್ರಧಾನಿ ನರೇಂದ್ರ ಮೋದಿ(PM Narendra Modi) ಇಂದು ದೆಹಲಿಯಲ್ಲಿ ನಿರ್ಮಿಸಲಾದ ನೂತನ ಪ್ರಧಾನ ಮಂತ್ರಿ ಕಚೇರಿ ಸಂಕೀರ್ಣವನ್ನು ಉದ್ಘಾಟಿಸಿದರು. ಈ ಕಟ್ಟಡಕ್ಕೆ ಸೇವಾ ತೀರ್ಥಎಂಬ ಹೆಸರಿಡಲಾಗಿದ್ದು, ‘ನಾಗರಿಕ ದೇವೋ ಭವ’ (ಪ್ರಜೆಗಳೇ ದೇವರು) ಎಂಬ ಧ್ಯೇಯ ವಾಕ್ಯದೊಂದಿಗೆ ಸೇವಾ ತೀರ್ಥದಲ್ಲಿ ಕರ್ತವ್ಯ ನಿರ್ವಹಿಸಲಿದೆ ಎಂದು ಪ್ರಧಾನಿ ತಿಳಿಸಿದ್ದಾರೆ.

ಈ ಹೊಸ ಕಟ್ಟಡದಲ್ಲಿ ಪ್ರಧಾನಮಂತ್ರಿ ಕಚೇರಿ, ರಾಷ್ಟ್ರೀಯ ಭದ್ರತಾ ಮಂಡಳಿ ಸಚಿವಾಲಯ ಹಾಗೂ ಕ್ಯಾಬಿನೆಟ್ ಸಚಿವಾಲಯಗಳು ಕಾರ್ಯನಿರ್ವಹಿಸಲಿವೆ.

ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಈ ಸಂಕೀರ್ಣವು ಜನಸೇವೆಗೆ ಸಮರ್ಪಿತವಾಗಿದ್ದು, ಸರ್ಕಾರದ ಕಾರ್ಯಕ್ಷಮತೆಯನ್ನು ಮತ್ತಷ್ಟು ಬಲಪಡಿಸಲಿದೆ. ಅಲ್ಲದೇ ಸೇವಾ ತೀರ್ಥ’ ಎಂಬ ಹೆಸರು ಸರ್ಕಾರದ ಧ್ಯೇಯವಾದ ಜನಸೇವೆಯನ್ನು ಪ್ರತಿಬಿಂಬಿಸುತ್ತದೆ ಎಂದು ವಿವರಿಸಿದರು.

ಹೊಸ ಕಟ್ಟಡವು ಆಧುನಿಕ ಸೌಲಭ್ಯಗಳು, ಸುರಕ್ಷತಾ ವ್ಯವಸ್ಥೆಗಳು ಮತ್ತು ಡಿಜಿಟಲ್ ತಂತ್ರಜ್ಞಾನಗಳೊಂದಿಗೆ ನಿರ್ಮಾಣಗೊಂಡಿದೆ. ವಿವಿಧ ಸಚಿವಾಲಯಗಳು ಒಂದೇ ಸಂಕೀರ್ಣದಲ್ಲಿ ಕಾರ್ಯನಿರ್ವಹಿಸುವುದರಿಂದ ಆಡಳಿತಾತ್ಮಕ ಕಾರ್ಯಗಳು ವೇಗವಾಗಿ ಸಾಗಲಿವೆ ಎನ್ನಲಾಗಿದೆ. ಕಾರ್ಯಕ್ರಮದಲ್ಲಿ ಕೇಂದ್ರ ಸಚಿವರು, ಹಿರಿಯ ಅಧಿಕಾರಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಉಪಸ್ಥಿತರಿದ್ದರು.






