ನವದೆಹಲಿ:ರಾಜ್ಯ ಕಾಂಗ್ರೆಸ್ ಸರ್ಕಾರ ತನ್ನ ಅಧಿಕಾರದ ಒಂದು ಸಾವಿರ ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಹೊಸದಾಗಿ ಭೂಮಿ ಗ್ಯಾರಂಟಿ ಯೋಜನೆಯನ್ನು ಘೋಷಿಸಿದೆ. ಇದು ಸರ್ಕಾರದ ಆರನೇ ಗ್ಯಾರಂಟಿಯಾಗಿ ಜಾರಿಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ತಿಳಿಸಿದ್ದಾರೆ.

ಈ ಬಗ್ಗೆ ನವದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಡಿಸಿಎಂ ಡಿ.ಕೆ ಶಿವಕುಮಾರ್, ನಮ್ಮ ಸರ್ಕಾರದ ಸಾವಿರ ದಿನಗಳ ಸಾಧನೆ ಬಗ್ಗೆ ನಮಗೆ ಸಂತೋಷವಿದೆ. ಈ ಅಭೂತಪೂರ್ವ ಕ್ಷಣವನ್ನು ನಾವು ಸಂಭ್ರಮಿಸುತ್ತಿದ್ದು, ಈ ಸಂದರ್ಭದಲ್ಲಿ ಮತ್ತೊಂದು ಗ್ಯಾರಂಟಿ ಭೂಮಿ ಗ್ಯಾರಂಟಿಯನ್ನು ರಾಜ್ಯದ ಜನರಿಗೆ ನೀಡುತ್ತಿದ್ದೇವೆ.

ಭೂಮಿಯ ಹಕ್ಕು ಪತ್ರ ಇಲ್ಲದ ಲಕ್ಷಾಂತರ ಜನರಿಗೆ ನಾವು ಹಕ್ಕುಪತ್ರ, ಪಟ್ಟಾ ದಾಖಲೆ ನೀಡುತ್ತಿದ್ದೇವೆ. ಜೊತೆಗೆ ಜನರಿಗೆ ಪಕ್ಕಾ ಖಾತೆ ಹಂಚಿಕೆ ಮಾಡುತ್ತಿದ್ದೇವೆ. ಪಂಚ ಗ್ಯಾರಂಟಿಗಳ ಹೊರತಾಗಿ ಇದು ನಮ್ಮ ಸರ್ಕಾರದ ಮತ್ತೊಂದು ಮಹತ್ವಾಕಾಂಕ್ಷಿ ಯೋಜನೆಯಾಗಿದೆ ಎಂದು ತಿಳಿಸಿದರು.

ಸಿಎಂ ಹಾಗೂ ಡಿಸಿಎಂ ನಡುವಣ ಸಂಘರ್ಷದಿಂದ ಜನರು ನರಳುವಂತಾಗಿದೆ ಎಂಬ ಬಿಜೆಪಿ ಆರೋಪದ ಬಗ್ಗೆ ಮಾತನಾಡಿದ ಅವರು, ಸಂಘರ್ಷವಿರುವುದು ಬಿಜೆಪಿಯಲ್ಲೇ ಹೊರತು, ನಮ್ಮ ನಡುವೆಯಲ್ಲ. ನಾನು ಹಾಗೂ ಸಿಎಂ ಇಬ್ಬರೂ ಪಕ್ಷದ ತೀರ್ಮಾನದಂತೆ ನಡೆಯುತ್ತೇವೆ ಎಂದು ಹೇಳಿದ್ದಾರೆ. ಎಲ್ಲಾ ಚರ್ಚೆಗಳು ನಮ್ಮ ನಡುವೆ ಆಗಿದೆ. ಪಕ್ಷ ತೀರ್ಮಾನ ಮಾಡಲಿದೆ ಎಂದು ಸ್ಪಷ್ಟಪಡಿಸಿದರು.

ಕಾಂಗ್ರೆಸ್ ಪಕ್ಷದ ಜತೆಗೆ ಮೈತ್ರಿ ಉತ್ತಮವಾಗಿದೆ ಆದರೆ ಅಧಿಕಾರ ಹಂಚಿಕೆ ಸಾಧ್ಯವಿಲ್ಲ ಎಂಬ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರ ಹೇಳಿಕೆ ಬಗ್ಗೆ ಮಾತನಾಡಿ, ಈ ವಿಚಾರವಾಗಿ ನಾನು ಮಾತನಾಡುವುದಿಲ್ಲ, ನಮ್ಮ ಹೈಕಮಾಂಡ್ ನಾಯಕರು ಪ್ರತಿಕ್ರಿಯೆ ನೀಡಲಿದ್ದಾರೆ. ನಾವು ಇದರಲ್ಲಿ ಭಾಗಿಯಾಗಿಲ್ಲ. ಹೀಗಾಗಿ ಈ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಹೇಳಿದರು.






