ಕಾಲೇಜು ವಿಶ್ವವಿದ್ಯಾಲಯಗಳಿಂದ ಪದವಿಯೊಡನೆ, ಪಿಎಚ್‌ಡಿಯೊಂದಿಗೆ ಹೊರಬರುವ ಒಂದು ಬೃಹತ್ ಸಮಾಜ ನಮ್ಮ ನಡುವೆ ಇದೆ. ಈ ಯುವ ಸಮೂಹವು ಸಮಾಜದ ವಿಭಿನ್ನ ಸ್ತರಗಳಲ್ಲಿ ತನ್ನನ್ನು ಗುರುತಿಸಿಕೊಳ್ಳುತ್ತಾ, ಭವಿಷ್ಯವನ್ನು ಕಟ್ಟಿಕೊಳ್ಳುವ ಹಾದಿಗಳನ್ನು ಹುಡುಕಲಾರಂಭಿಸುತ್ತವೆ. ಉದ್ಯೋಗ, ವೃತ್ತಿ, ಸ್ವಯಂ ದುಡಿಮೆ, ಹೆಚ್ಚಿನ ವ್ಯಾಸಂಗ ಹೀಗೆ ಈ ಸಮಾಜ ಕಾಣುವ ಸುಂದರ ಕನಸುಗಳನ್ನು ನನಸು ಮಾಡುವ ಜವಾಬ್ದಾರಿ ಯಾರದು ? ಮೂಲತಃ ಪೋಷಕರದು. ಆದರೆ ಭವಿಷ್ಯದ ಜವಾಬ್ದಾರಿಯುತ ಪ್ರಜೆಗಳಾಗಿ ರೂಪುಗೊಳ್ಳುವ ಈ ಯುವ ಸಮಾಜವನ್ನು, ಅದರೊಳಗಿನ ಉತ್ಪಾದಕ ಶಕ್ತಿಯನ್ನು, ಕೌಶಲ ಮತ್ತು ಬುದ್ಧಿಮತ್ತೆಯನ್ನು, ಕಲೆ-ಸಾಹಿತ್ಯ-ಸಂಗೀತ ಇತ್ಯಾದಿ ಅಭಿರುಚಿಗಳನ್ನು ದೇಶದ ಸರ್ವತೋಮುಖ ಪ್ರಗತಿಗೆ ಸಮರ್ಪಕವಾಗಿ ಬಳಸಿಕೊಳ್ಳುವಂತಹ ಸಾಮಾಜಿಕ ವಾತಾವರಣ, ಆರ್ಥಿಕ ಸಂರಚನೆ ಮತ್ತು ಸಾಂಸ್ಕೃತಿಕ ಭೂಮಿಕೆಗಳನ್ನು ಸೃಷ್ಟಿಸುವ ಜವಾಬ್ದಾರಿ ಸರ್ಕಾರಗಳ ಮೇಲಿರುತ್ತದೆ.

ಪ್ರಜಾಪ್ರಭುತ್ವದಲ್ಲಿ ಮತ್ತು ಭಾರತದ ರಾಜಕೀಯ ಪ್ರತಿಪಾದಿಸುವ ʼಸಮಾಜವಾದಿʼ ಆರ್ಥಿಕತೆಯಲ್ಲಿ ಚುನಾಯಿತ ಸರ್ಕಾರಗಳು ಈ ನೈತಿಕ ಹೊಣೆ ಹೊರಬೇಕಾಗುತ್ತದೆ. ಆದರೆ 1980ರ ಜಾಗತೀಕರಣ ಮತ್ತು ವರ್ತಮಾನದ ನವ ಉದಾರವಾದಿ ಆರ್ಥಿಕತೆಯಲ್ಲಿ ಚುನಾಯಿತ ಸರ್ಕಾರಗಳು ಈ ಜವಾಬ್ದಾರಿಯಿಂದ ದೂರ ಸರಿದಿವೆ . ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗ ಈ ಮೂರೂ ಜೀವನಾವಶ್ಯ ಸೌಲಭ್ಯಗಳನ್ನು ಕಾರ್ಪೋರೇಟ್ ಮಾರುಕಟ್ಟೆ ಮತ್ತು ಬಂಡವಾಳಿಗರ ಮೂಲಕವೇ ಪಡೆಯಬೇಕಾದ ಅನಿವಾರ್ಯತೆಯನ್ನು ಯುವ ಸಮಾಜ ಎದುರಿಸುತ್ತಿದೆ. ಡಿಜಿಟಲ್ ಯುಗದಲ್ಲಿ ಮಾರುಕಟ್ಟೆ ಸೃಷ್ಟಿಸುವ ಉದ್ಯೋಗಾವಕಾಶಗಳು ಕೌಶಲಾಧಾರಿತವಾಗಿರುವುದಷ್ಟೇ ಅಲ್ಲದೆ, ಸುಸ್ಥಿರ ಬದುಕಿಗೆ ಪೂರಕವಾದ ಆರ್ಥಿಕ ಅಡಿಪಾಯವನ್ನು ಒದಗಿಸುವುದಿಲ್ಲ.

ಮತ್ತೊಂದೆಡೆ ಉನ್ನತ ವ್ಯಾಸಂಗದ ಅವಕಾಶಗಳನ್ನೂ ಸಹ ಯುವ ಸಮೂಹ ಮಾರುಕಟ್ಟೆಯ ಮೂಲಕವೇ ಪಡೆಯಬೇಕಿದೆ. ಶಿಕ್ಷಣದ ವಾಣಿಜ್ಯೀಕರಣ ಮತ್ತು ಕಾರ್ಪೋರೇಟೀಕರಣ ಪ್ರಕ್ರಿಯೆ ಬಹುಮಟ್ಟಿಗೆ ತಾರ್ಕಿಕ ಅಂತ್ಯ ತಲುಪಿದ್ದು, ಬಹುತೇಕ ರಾಜಕೀಯ ಪಕ್ಷಗಳು ಈ ನೀತಿಗೆ ಬದ್ಧವಾಗಿವೆ. ಪ್ರಾಥಮಿಕ ಹಂತದಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದೇ ದುಸ್ತರವಾಗಿರುವ ವಾತಾವರಣದಲ್ಲಿ, ಪದವಿ ಮತ್ತು ಸ್ನಾತಕೋತ್ತರ ಮತ್ತು ವೃತ್ತಿ ಶಿಕ್ಷಣ ಎಲ್ಲವೂ ಮಾರುಕಟ್ಟೆಯ ನಿಯಂತ್ರಣಕ್ಕೊಳಪಡುತ್ತಿವೆ. ಈ ವಾತಾವರಣದಲ್ಲಿ ಯುವ ಸಮೂಹ ತನ್ನ ರಾಜಕೀಯ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕಿದೆ. ಹಾಗೆಯೇ ಸಮಾಜದ ವಿವಿಧ ಸ್ತರಗಳಲ್ಲಿ, ವಿಶೇಷವಾಗಿ ತಳಸ್ತರವನ್ನು ಹೆಚ್ಚಾಗಿ ಬಾಧಿಸುವ ಮಹಿಳಾ-ಜಾತಿ ದೌರ್ಜನ್ಯಗಳ ಬಗ್ಗೆ, ಇಡೀ ಸಮಾಜವನ್ನು ಆವರಿಸಿರುವ ಮತಾಂಧತೆ, ಕೋಮುವಾದ ಮತ್ತು ದ್ವೇಷಾಸೂಯೆಗಳ ಬಗೆಗೆ ಅರಿವು ಮತ್ತು ಜಾಗ್ರತೆ ಮೂಡಿಸಿಕೊಳ್ಳಬೇಕಿದೆ.

ನವಯುಗದ ಕನಸುಗಳ ನಡುವೆ
ಈ ದುರವಸ್ಥೆಗಳ ನಡುವೆ ಹೊಸ ಯುಗದ ಪ್ರವರ್ತಕರಾಗಿ, ವಿಶಾಲ ಸಮಾಜವನ್ನು ಪ್ರವೇಶಿಸುವ ಯುವ ಸಮಾಜ ತನ್ನ ಭವಿಷ್ಯದ ಆದ್ಯತೆಗಳನ್ನು ಸ್ಪಷ್ಟವಾಗಿ ನಿರ್ವಚಿಸುವುದು ಅತ್ಯವಶ್ಯ. ಸಮಾಜ ಸುಧಾರಣೆ, ಸಾಮಾಜಿಕ ನ್ಯಾಯ, ದೌರ್ಜನ್ಯ-ಅನ್ಯಾಯಗಳ ವಿರುದ್ಧ ಹೋರಾಟ, ಚರಿತ್ರೆ ಮತ್ತು ವರ್ತಮಾನದ ಅರಿವು, ರಾಜಕೀಯ ಜವಾಬ್ದಾರಿ ಹಾಗೂ ಸಾಂಸ್ಕೃತಿಕ ಕ್ರಿಯಾಶೀಲತೆ ಈ ವೈವಿಧ್ಯಮಯ ವಿದ್ಯಮಾನಗಳನ್ನು ಯುವ ಸಮೂಹ ಗಂಭೀರವಾಗಿ ಸಂವಾದಿಸಬೇಕಾಗುತ್ತದೆ. ಮೊದಲೇ ಹೇಳಿದಂತೆ, ಈ ಅರಿವು-ಪ್ರಜ್ಞೆಯ ಹಾದಿಯಲ್ಲಿ, ಕ್ರಿಯಾಶೀಲ ಚಟುವಟಿಕೆಯ ಆವರಣದಲ್ಲಿ ಅನುಕರಿಸಬಹುದಾದ ಸಮಕಾಲೀನ ಮಾದರಿಗಳು ಕಾಣುವುದಿಲ್ಲ. ತಾತ್ವಿಕ ನೆಲೆಯಲ್ಲಿ ಗಾಂಧಿ, ಅಂಬೇಡ್ಕರ್, ಮಾರ್ಕ್ಸ್ ಮೊದಲಾದ ದಾರ್ಶನಿಕರ ಚಿಂತನೆಗಳನ್ನು ಒಳಗಿಳಿಸಿಕೊಂಡು, ಅಂತರ್ಗತ ಮಾಡಿಕೊಂಡು ತಮ್ಮ ಭವಿಷ್ಯದ ಹಾದಿಯನ್ನು ರೂಪಿಸಿಕೊಳ್ಳಬೇಕಿದೆ.

ವಿದ್ಯಾರ್ಥಿ ದೆಸೆಯಲ್ಲೇ ಸಂಘಟನೆ ಮತ್ತು ಹೋರಾಟದ ಕಲ್ಪನೆಗಳನ್ನು ರೂಢಿಸಿಕೊಂಡಿರುವ ಯುವ ಸಮೂಹಕ್ಕೆ ಒಂದು ಉದಾತ್ತ ಮಾದರಿಗಳನ್ನು ಸೃಷ್ಟಿಸುವಲ್ಲಿ ಕಳೆದ ಐದಾರು ದಶಕಗಳ ರಾಜಕಾರಣವಾಗಲೀ, ಸಾಂಸ್ಕೃತಿಕ ಚಳುವಳಿಗಳಾಗಲೀ, ಸಾಂಘಿಕ ಹೋರಾಟಗಳಾಗಲೀ ಯಶಸ್ವಿಯಾಗಿಲ್ಲ. ಖಾಯಂ ಮುಂದಾಳತ್ವ, ಶಾಶ್ವತ ನಾಯಕತ್ವ, ಸ್ವ ಹಿತಾಸಕ್ತಿ-ಏಳಿಗೆ, ಅಸ್ತಿತ್ವವಾದಿ ಧೋರಣೆ, ಮೇಲ್ಮಟ್ಟದ ನಿಯಂತ್ರಣ, ಅವಕಾಶಗಳಿಗಾಗಿ ಸ್ಥಾನಮಾನಗಳಿಗಾಗಿ ಹಂಬಲಿಸುವ ಮಹತ್ವಾಕಾಂಕ್ಷೆ, ಇದನ್ನು ಸಾಧಿಸುವ ಸಲುವಾಗಿಯೇ ರಾಜಕೀಯ ಒಡನಾಟ ಮತ್ತು ಇಲ್ಲಿ ಸೃಷ್ಟಿಯಾಗುವಂತಹ ಮೇಲರಿಮೆ, ಯಜಮಾನಿಕೆಯ ಮನೋಭಾವ ಈ ಎಲ್ಲ ಅವಗುಣಗಳು ವರ್ತಮಾನದ ಯುವ ಸಮಾಜದ ಮುಂದಿದೆ.

ಸಿದ್ದಾಂತ, ತತ್ವ ಮತ್ತು ದಾರ್ಶನಿಕ ಬೋಧನೆಗಳನ್ನು ವೈಯುಕ್ತಿಕ ಮುನ್ನಡೆಗೆ ಚಿಮ್ಮು ಹಲಗೆಗಳನ್ನಾಗಿ (Launching pad) ಬಳಸುವ ಒಂದು ವಿಧಾನವನ್ನು ಸ್ವತಂತ್ರ ಭಾರತ ಸೃಷ್ಟಿಸಿದೆ. ಮತ್ತೊಂದೆಡೆ ಈ ಸೈದ್ದಾಂತಿಕ ಚೌಕಟ್ಟಿನಲ್ಲೇ ಹುಟ್ಟಿಕೊಳ್ಳುವ ಸಂಘಟನೆಗಳಲ್ಲಿ ಮುಂದಾಳತ್ವ ವಹಿಸುತ್ತಲೇ, ಮೂಲ ಸಿದ್ಧಾಂತ-ತತ್ವಗಳನ್ನು ಹಾಗೂ ದಾರ್ಶನಿಕ ವ್ಯಕ್ತಿಗಳನ್ನು̧ ತಮ್ಮ ವೈಯುಕ್ತಿಕ ಏಳಿಗೆಗೆ ದಾಟು ಸೇತುವೆಗಳಾಗಿ ( crossing Bridge) ಬಳಸಿಕೊಳ್ಳುವ ಮಾದರಿಯನ್ನೂ ಸೃಷ್ಟಿಸಿದೆ. ಕೆಲವು ಅಪವಾದಗಳಿದ್ದರೂ, ಪ್ರಸ್ತುತ ಚಾಲ್ತಿಯಲ್ಲಿರುವ ಬಹುತೇಕ ಜನಪರ-ಪ್ರಗತಿಪರ ಚಳುವಳಿಗಳಲ್ಲಿ ಈ ಲಕ್ಷಣವನ್ನು ಢಾಳಾಗಿ ಕಾಣಬಹುದು. ಕಮ್ಯುನಿಸ್ಟ್ ಪಕ್ಷಗಳ ನಾಯಕತ್ವದಲ್ಲೂ ಸಹ ನೂರು ವರ್ಷಗಳ ಹಿಂದೆ ಸೋವಿಯತ್ ವಾತಾವರಣದಲ್ಲಿ ಲೆನಿನ್ ರೂಪಿಸಿದಂತಹ ನಿಯಮಗಳನ್ನೇ ಇಂದಿಗೂ ಕಟಿಬದ್ಧರಾಗಿ ಅನುಸರಿಸುವ ವಿಧಾನವನ್ನು ಗುರುತಿಸಬಹುದು.

ದಾರ್ಶನಿಕರ ಹಾದಿಯ ತೊಡಕುಗಳು
ತಮ್ಮ ಭವಿಷ್ಯದ ಹಾದಿಯನ್ನು ಗುರುತಿಸುವಾಗ, ಮಾರ್ಕ್ಸ್, ಲೆನಿನ್, ಗಾಂಧಿ, ಅಂಬೇಡ್ಕರ್, ಪೆರಿಯಾರ್ ಮತ್ತಿತರ ದಾರ್ಶನಿಕರನ್ನು ಪುನರ್ ವಿಮರ್ಶೆಮಾಡುವ ಅವಶ್ಯಕತೆಯನ್ನು ಯುವ ಸಮಾಜಗಳು ಮನಗಾಣಬೇಕಿದೆ. ಡಿಜಿಟಲ್ ಯುಗದಲ್ಲಿ ಆಕರ್ಷಣೀಯವೂ, ಸುಲಭಸಾಧ್ಯವೂ ಆಗಿರುವ ಸಾರ್ವಜನಿಕ ಗುರುತಿಸಿಕೊಳ್ಳುವಿಕೆ (Public Identification) ಯುವ ಸಮಾಜವನ್ನು ಸಹಜವಾಗಿ ಪ್ರಭಾವಿಸುತ್ತದೆ. ಇಲ್ಲಿ ಸೃಷ್ಟಿಯಾಗುವ ಪ್ರಚಾರ ವ್ಯಾಮೋಹ, ಪೀಠ ದಾಹ, ಅಸ್ತಿತ್ವ ಮತ್ತು ಸ್ಥಾನಮಾನದ ಅವಕಾಶಗಳು ಯುವ ಮನಸ್ಸುಗಳನ್ನು ವಿಶಾಲ ಬಯಲಿನಿಂದ ದೂರ ಸೆಳೆದು ವೇದಿಕೆಯಲ್ಲಿ ಕುಳ್ಳಿರಿಸುತ್ತವೆ. ನೆಲದ ವಾಸ್ತವಗಳನ್ನು (Ground realities) ಅರಿಯಲು ಅಗತ್ಯವಾದ ಕ್ಷೇತ್ರಾಧ್ಯಯನ ಮತ್ತು ತಳಮಟ್ಟದ ಚಟುವಟಿಕೆಗಳಿಂದ ಯುವ ಸಮಾಜ ವಿಮುಖವಾಗುತ್ತಾ ಹೋಗುತ್ತದೆ.

ಈ ನಕಾರಾತ್ಮಕ ಲಕ್ಷಣಗಳೇ ವಿದ್ಯಾರ್ಥಿ ಯುವ ಸಮೂಹವನ್ನು ಸಂಘಟನೆಯ ಹಂತದಲ್ಲೇ ವಿಘಟನೆಯ ಮಾರ್ಗಗಳಿಗೆ ಎಳೆದೊಯ್ಯುತ್ತವೆ. ಮೈಸೂರು ವಿಶ್ವವಿದ್ಯಾಲಯದ ಅಂಗಳದಲ್ಲೇ ಈ ಅಪಸವ್ಯಗಳನ್ನು ಇತ್ತೀಚಿನ ದಿನಗಳಲ್ಲಿ ಗುರುತಿಸಬಹುದು. ಗುರಿ ಸಾಧನೆಗಿಂತಲೂ ಅಸ್ತಿತ್ವ ಮತ್ತು ನಾಯಕತ್ವಗಳೇ ಪ್ರಧಾನವಾದರೆ ಸಂಘಟನೆಗಳು ಪೈಪೋಟಿಯ ಕೇಂದ್ರಗಳಾಗುತ್ತವೆ. ಸಹಜವಾಗಿಯೇ ಆಧಿಪತ್ಯ ಸಾಧಿಸುವ ಸಲುವಾಗಿಯೇ ಹಿಂಬಾಲಕ ಪಡೆಗಳನ್ನು, ಗುಂಪುಗಳನ್ನು ಸೃಷ್ಟಿಸುವ ಮನೋಭಾವ ಸೃಷ್ಟಿಯಾಗುತ್ತದೆ. ಇಲ್ಲಿ ಎಳೆಯ ವಯಸ್ಸಿನಲ್ಲೇ ದೊರೆಯುವ ಅವಕಾಶಗಳು, ಸೈದ್ಧಾಂತಿಕ ಅಧ್ಯಯನ ಮತ್ತು ತಳಮಟ್ಟದ ಕ್ಷೇತ್ರ ಚಟುವಟಿಕೆಗಳಿಂದ (Ground level Field Activities) ಯುವ ಸಮಾಜವನ್ನು ದೂರ ಇರಿಸುತ್ತವೆ.
ಸಂಘಟನೆಗಳಲ್ಲಿ ನಾಯಕತ್ವದ ಸ್ಥಾನಗಳಲ್ಲಿರುವವರು ಹಿಂಬಾಲಕರನ್ನು ಸೃಷ್ಟಿಸುವ ಮನಸ್ಥಿತಿಯಿಂದ ಮುಕ್ತರಾಗುವುದು ವರ್ತಮಾನದ ತುರ್ತು. ನಾಯಕರ ವಿಜೃಂಭಣೆ, ವೈಭವೀಕರಣ ಮತ್ತು ಪ್ರಶ್ನಾತೀತ ಆಧಿಪತ್ಯ ಸಂಘಟನೆಗಳನ್ನು ಸತ್ವಹೀನವಾಗಿಸುತ್ತದೆ. ನಾವು ನಿತ್ಯ ಗಮನಿಸುತ್ತಿರುವ ನಾಯಕರ ಹುಟ್ಟುಹಬ್ಬದ ಸಾರ್ವಜನಿಕ ಆಚರಣೆಗಳು, ಮತ್ತು ಗಜಭಾರದ ಹೂಹಾರ-ಜರತಾರಿ ಮೈಸೂರು ಪೇಟಗಳ ಸನ್ಮಾನಗಳು ಯುವ ಸಮಾಜಕ್ಕೆ ಮುನ್ನೆಚ್ಚರಿಕೆಯಾಗಿ ಕಾಣಬೇಕೇ ಹೊರತು ಅನುಕರಣೀಯ ಮಾದರಿಯಾಗಕೂಡದು. ಟಿವಿ ವಾಹಿನಿಗಳಲ್ಲಿ ಪ್ರಸಾರವಾಗುವ ರಿಯಾಲಿಟಿ ಷೋಗಳು ಎಳೆಯ ಕಲಾ ಪ್ರತಿಭೆಗಳಲ್ಲಿ ಭ್ರಮೆ ಸೃಷ್ಟಿಸಿ ಹಾದಿ ತಪ್ಪಿಸುವ ಹಾಗೆ, ಸಾರ್ವಜನಿಕ ಸನ್ಮಾನ-ಆಚರಣೆಗಳು ಯುವ ಸಮಾಜದ ಹಾದಿ ತಪ್ಪಿಸುತ್ತವೆ. ಡಿಜಿಟಲ್ ಜಗತ್ತು ಈ ನಿಟ್ಟಿನಲ್ಲಿ ವಿಪುಲ ಅವಕಾಶಗಳನ್ನು ಕಲ್ಪಿಸುವುದು ವಾಸ್ತವ.

ಆಯ್ಕೆಯ ಸ್ವಾತಂತ್ರ್ಯ ಮತ್ತು ವಿವೇಕ
ಈ ಜಟಿಲ ಸಿಕ್ಕುಗಳಿಂದ ಬಿಡಿಸಿಕೊಂಡು ಸಮಾಜದಲ್ಲಿ ನೊಂದ ಜನತೆಗಾಗಿ, ಅವಕಾಶಂಚಿತರಿಗಾಗಿ, ಅನ್ಯಾಯ-ದೌರ್ಜನ್ಯಗಳಿಗೆ ಒಳಗಾದವರಿಗಾಗಿ ಮಿಡಿಯುವ ಯುವ ಸಮಾಜ ತಾವು ಆಯ್ಕೆಮಾಡಿಕೊಳ್ಳುವ ಸೈದ್ಧಾಂತಿಕ ಮಾರ್ಗಗಳನ್ನು ಎಚ್ಚರಿಕೆಯಿಂದ ಕ್ರಮಿಸಬೇಕಾಗುತ್ತದೆ. ಸಿದ್ಧಾಂತಗಳನ್ನು ಅನುಸರಿಸುವುದಕ್ಕೂ, ಅನುಕರಿಸುವುದಕ್ಕೂ, ಅಂತರ್ಗತ ಮಾಡಿಕೊಂಡು ಆಂತರೀಕರಣಗೊಳಿಸಿಕೊಳ್ಳುವುದಕ್ಕೂ (Internalisation) ಅಪಾರ ಅಂತರ ಇರುತ್ತದೆ. ಸಮಾಜದಲ್ಲಿ ಪ್ರಚಲಿತವಾಗಿರಬಹುದಾದ ಘೋಷವಾಕ್ಯಗಳು ಅಥವಾ ಸೈದ್ದಾಂತಿಕ ಸಂಕಥನಗಳು ಯುವ ಸಮಾಜವನ್ನು ಇನ್ನೂ ಹೆಚ್ಚಿನ ಅಧ್ಯಯನ ಮತ್ತು ಶೋಧಕ್ಕೆ ಪ್ರೇರೇಪಿಸಬೇಕೇ ಹೊರತು, ಅಂಧಾನುಕರಣೆಗೆ ಆಕರಳಾಗಕೂಡದು.

ಆಗ ಸಿದ್ದಾಂತಗಳನ್ನು ಒಳಗಿಳಿಸಿಕೊಂಡು ಅದನ್ನೇ ಜೀವನ ವಿಧಾನವನ್ನಾಗಿ ಮಾಡಿಕೊಂಡು, ಸಮಾಜಮುಖಿಯಾಗಿ ಸಂವೇದನಾಶೀಲ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವುದು ಸುಲಭವಾಗುತ್ತದೆ. ಗ್ರಾಂಥಿಕ ಅಧ್ಯಯನ ಮತ್ತು ನಿತ್ಯ ಪಠಣ ಅರಿವನ್ನು ಮೂಡಿಸಿಕೊಳ್ಳಲು ನೆರವಾಗುತ್ತದೆ. ಆದರೆ ಅರಿವಿನ ವಿಸ್ತರಣೆಗೆ ನೆಲದ ವಾಸ್ತವಗಳನ್ನು (Ground realities) ಗ್ರಹಿಸುವುದು ಅತ್ಯವಶ್ಯ. ಈ ಗ್ರಹಿಸುವಿಕೆಯ ಹಾದಿಯಲ್ಲಿ ತಾವು ಅನುಸರಿಸುವ ಮಾರ್ಕ್ಸ್, ಅಂಬೇಡ್ಕರ್, ಲೋಹಿಯಾ, ಗಾಂಧಿ ತತ್ವಗಳನ್ನು ಸಮಕಾಲೀನ ಸಮಾಜದ ನಡುವೆ ಇಟ್ಟು, ಮರುವಿಮರ್ಶೆ ಮಾಡುವ ಕ್ಷಮತೆಯನ್ನು ಯುವ ಸಮಾಜ ಬೆಳೆಸಿಕೊಳ್ಳಬೇಕಾಗುತ್ತದೆ. ಯಾವುದೇ ಸಿದ್ಧಾಂತವನ್ನು ಪ್ರಶ್ನಾತೀತವಾಗಿ ನೋಡುವುದು ಯುವ ಸಮೂಹವನ್ನು ಬೌದ್ಧಿಕವಾಗಿ ಕೂಪವಾಸಿಗಳನ್ನಾಗಿ ಮಾಡುತ್ತದೆ.

ಅರಿವನ್ನು ವಿಸ್ತರಿಸುವುದು, ಜ್ಞಾನವನ್ನು ಪಸರಿಸುವುದು ಮತ್ತು ವಾಸ್ತವದ ಪ್ರಜ್ಞೆಯನ್ನು ಸಮಾಜದ ಕಟ್ಟಕಡೆಯ ವ್ಯಕ್ತಿಗೂ ತಲುಪಿಸುವುದು ಯುವ ಸಮಾಜದ ಪ್ರಧಾನ ಆದ್ಯತೆ ಮತ್ತು ಆಯ್ಕೆಯಾಗಬೇಕಿದೆ. ಕಲಿಕೆಯ ಹಂತದಲ್ಲೇ ಈ ಮನೋಭಾವವನ್ನು ರೂಢಿಸಿಕೊಳ್ಳುವ ಒಂದು ವಾತಾವರಣವನ್ನು ಶಾಲಾ ಕಾಲೇಜುಗಳಲ್ಲಿ, ವಿಶ್ವವಿದ್ಯಾಲಯಗಳಲ್ಲಿ ಸೃಷ್ಟಿಸಬೇಕಿದೆ. ಆಗ ಮಾತ್ರ ತಳಸ್ತರದ ಜನತೆಯ ನೋವು ಸಂಕಟಗಳನ್ನು, ನಾಡಿಮಿಡಿತವನ್ನು ಅರ್ಥಮಾಡಿಕೊಳ್ಳಲು ಸಾಧ್ಯ. ಹಾಗೆಯೇ ಈ ವ್ಯತ್ಯಯಗಳಿಗೆ ಕಾರಣ ಯಾರು ಎಂದು ಗ್ರಹಿಸಲೂ ಸಾಧ್ಯ. ಕಾರಣ ಯಾರು ಎಂಬ ಪ್ರಶ್ನೆಗೆ ಉತ್ತರ ಶೋಧಿಸುವಾಗ ವೈಚಾರಿಕ ಆಲೋಚನಾ ಕ್ರಮ ಮತ್ತು ವೈಜ್ಞಾನಿಕ ಧೋರಣೆ ಮುಖ್ಯವಾಗುತ್ತದೆ.
ವೈಚಾರಿಕ-ವೈಜ್ಞಾನಿಕ ಮಾದರಿಯತ್ತ
ಆದ್ದರಿಂದಲೇ ಯುವ ಸಮಾಜದಲ್ಲಿ ವೈಚಾರಿಕ-ವೈಜ್ಞಾನಿಕ ಮನೋಭಾವವನ್ನು ಸೃಷ್ಟಿಸುವುದು ಅತ್ಯವಶ್ಯವಾಗಿದೆ. ದಾರ್ಶನಿಕರ ಅಂಧಾನುಕರಣೆ ಮತ್ತು ವ್ಯಕ್ತಿ ಆರಾಧನೆ ಈ ಮನಸ್ಥಿತಿಗೆ ಬಹುದೊಡ್ಡ ತೊಡಕಾಗಿ ಪರಿಣಮಿಸುತ್ತದೆ. ಚರಿತ್ರೆಯನ್ನು ಪ್ರಶ್ನಿಸುತ್ತಲೇ ವರ್ತಮಾನವನ್ನು ಪರಿಶೋಧಿಸಿ ಭವಿಷ್ಯದ ಗುರಿಯತ್ತ ಸಾಗುವುದು ವಿವೇಕಯುತ ಕ್ರಮ. ಯುವ ಸಮಾಜ ಇದನ್ನು ಅಳವಡಿಸಿಕೊಳ್ಳಬೇಕಿದೆ. ಭಾರತೀಯ ಸಮಾಜವನ್ನು ಇಂದಿಗೂ ಆವರಿಸಿರುವ, ನಿಯಂತ್ರಿಸಿ ನಿರ್ದೇಶಿಸುವ ಸಾಂಪ್ರದಾಯಿಕತೆ ಮತ್ತು ಧಾರ್ಮಿಕ ಆಚರಣೆಗಳು ಇಲ್ಲಿ ಹಲವು ರೀತಿಯ ಅಡೆತಡೆಗಳನ್ನು ಸೃಷ್ಟಿಸುತ್ತವೆ. ಕೌಟುಂಬಿಕ ನೆಲೆಯಿಂದ ಅತ್ಯುನ್ನತ ಸಾಂಸ್ಥಿಕ ನೆಲೆಯವರೆಗೂ ಈ ಅಡ್ಡಿ ಆತಂಕಗಳನ್ನು ಎದುರಿಸುತ್ತಲೇ ಯುವ ಸಮಾಜ ಗುರಿಸಾಧನೆಯತ್ತ ಸಾಗಬೇಕಾಗುತ್ತದೆ.

ಒಂದೇ ತತ್ವ, ಒಂದೇ ಸಿದ್ಧಾಂತ , ಒಂದೇ ಮಾರ್ಗ ಎಂಬ ಏಕಮುಖಿ ಚಲನೆ ಯುವ ಸಮಾಜವನ್ನು ನಿರ್ದಿಷ್ಟ ದಿಕ್ಕಿನಲ್ಲಿ ಕೊಂಡೊಯ್ಯುತ್ತದೆ. ಆದರೆ ನವ ಭಾರತ ಎದುರಿಸುತ್ತಿರುವ ಸಾಮಾಜಿಕ-ಆರ್ಥಿಕ-ರಾಜಕೀಯ ಹಾಗೂ ಸಾಂಸ್ಕೃತಿಕ ಸವಾಲುಗಳಿಗೆ ಸಮರ್ಪಕವಾದ ಪರಿಹಾರೋಪಾಯಗಳನ್ನು ಸೂಚಿಸಲು ಸಾಧ್ಯವಾಗದಿರಬಹುದು. ಗಾಂಧಿ ಮತ್ತು ಅಂಬೇಡ್ಕರ್ ತೋರುವ ಅಹಿಂಸಾತ್ಮಕ-ಸಾಂವಿಧಾನಿಕ ಮಾರ್ಗ, ಮಾರ್ಕ್ಸ್-ಲೆನಿನ್ ತೋರುವ ಕ್ರಾಂತಿಕಾರಿ ಮಾರ್ಗ, ನಾರಾಯಣಗುರು-ವಿವೇಕಾನಂದರ ಆಧ್ಯಾತ್ಮಿಕ ಮಾರ್ಗ, ಪೆರಿಯಾರ್ ತೋರುವ ಸ್ವಾಭಿಮಾನಿ ವೈಚಾರಿಕತೆ ಇವೆಲ್ಲವೂ ಸಹ ತಮ್ಮದೇ ಆದ ರೀತಿಯಲ್ಲಿ ವರ್ತಮಾನದ ಸವಾಲುಗಳನ್ನು ಎದುರಿಸಿ ನಿಲ್ಲಲು ನೆರವಾಗುತ್ತವೆ. ಆತ್ಯಂತಿಕ ಗುರಿ ಅಥವಾ ಧ್ಯೇಯವಾಗಿ ಒಂದು ಸಿದ್ಧಾಂತವನ್ನೇ ಆಯ್ಕೆ ಮಾಡಿಕೊಂಡರೂ, ಉಳಿದೆಲ್ಲಾ ಸಿದ್ದಾಂತಗಳ ತಾತ್ವಿಕ ಅಂತಃಸತ್ವವವನ್ನು ಅರಿತುಕೊಳ್ಳುವ ವ್ಯವಧಾನವನ್ನು ವರ್ತಮಾನದ ಯುವ ಸಮಾಜ ರೂಢಿಸಿಕೊಳ್ಳಬೇಕಿದೆ.

ಇದು ಕಾಲದ ಅನಿವಾರ್ಯತೆ. 20ನೆ ಶತಮಾನದ ಪೌರ್ವಾತ್ಯ-ಪಾಶ್ಚಿಮಾತ್ಯ, ಸಾಂಪ್ರದಾಯಿಕ-ಆಧುನಿಕ ಮೊದಲಾದ ವಿಂಗಡನೆಗಳು, ಯುವ ಸಮೂಹದ ಅರಿವಿನ ವಿಸ್ತರಣೆಗೆ ಪೂರಕವಾಗುವುದಿಲ್ಲ. ಹಾಗಾಗಿ ಭಿನ್ನಮತದೊಂದಿಗೆ ಬದುಕುವ, ಭಿನ್ನಾಭಿಪ್ರಾಯಗಳನ್ನು ಸಹಿಸಿಕೊಳ್ಳುವ, ಚರ್ಚೆ-ಸಂವಾದಗಳ ಮೂಲಕ ಹೊಸ ಸಂಕಥನಗಳನ್ನು ಹುಟ್ಟುಹಾಕುವ ಒಂದು ಮಾದರಿಗೆ ಯುವ ಸಮಾಜ ಸಾಕ್ಷಿಯಾಗಬೇಕಿದೆ. ಕಳೆದ ಹತ್ತು ವರ್ಷಗಳಲ್ಲಿ ನಾವು ಕಾಣುತ್ತಿರುವ ಅಂಧಾನುಕರಣೆ ಮತ್ತು ಭಕ್ತಿ ಪರಾಕಾಷ್ಠೇ, ವ್ಯಕ್ತಿ ಆರಾಧನೆ ಭಾರತೀಯ ಸಮಾಜವನ್ನು ಪ್ರಾಚೀನತೆಗೆ ಕರೆದೊಯ್ಯುತ್ತಿರುವುದನ್ನು ಭೀಕರ ಅನಾಹುತದ ಮುನ್ಸೂಚನೆ ಎಂದೇ ಭಾವಿಸಬೇಕಿದೆ. ವೈಚಾರಿಕ ಪ್ರಜ್ಞೆ ಇಲ್ಲದ ಯಾವುದೇ ಸಮಾಜವಾದರೂ ಹಿಮ್ಮುಖ ಚಲನೆಯಲ್ಲೇ ಇರಲು ಸಾಧ್ಯ.
ಪ್ರಜ್ಞೆ ಮತ್ತು ಅರಿವಿನ ಹೊಸ ಹಂದರ
ಈ ಪ್ರಜ್ಞೆ ರೂಢಿಸಿಕೊಂಡಾಗ ಮಹಿಳಾ ದೌರ್ಜನ್ಯಗಳಿಗೆ ಪಿತೃಪ್ರಧಾನತೆಯನ್ನು, ಕಾರ್ಮಿಕರ ಶೋಷಣೆಗೆ ಊಳಿಗಮಾನ್ಯತೆಯನ್ನು, ಮತದ್ವೇಷ-ಕೋಮುವಾದಕ್ಕೆ ಸಾಂಸ್ಕೃತಿಕ ಸಾಂಪ್ರದಾಯಿಕತೆಯನ್ನು, ಜಾತಿ ದೌರ್ಜನ್ಯ-ಶೋಷಣೆಗೆ ವರ್ಗ ಹಿತಾಸಕ್ತಿ ಮತ್ತು ಜಾತಿ ಶ್ರೇಷ್ಠತೆಯನ್ನು ಕಾರಣಗಳನ್ನಾಗಿ ಗುರುತಿಸಲು ಸಾಧ್ಯ. ಜಾತಿ ಶೋಷಣೆಯಲ್ಲಿ ವರ್ಗ ಹಿತಾಸಕ್ತಿಯನ್ನು, ಮಹಿಳಾ ದೌರ್ಜನ್ಯದಲ್ಲಿ ಲಿಂಗಭೇದ ಮತ್ತು ಪುರುಷಾಧಿಪತ್ಯವನ್ನು, ಮತಭೇದದಲ್ಲಿ ಧಾರ್ಮಿಕ ಶ್ರದ್ಧಾನಂಬಿಕೆಗಳಲ್ಲಿ ಗುರುತಿಸದೆ ಹೋದರೆ, ಯುವ ಸಮಾಜ ಮನುವಾದಿ, ಬ್ರಾಹ್ಮಣ್ಯ, ಹಿಂದೂ ಮುಸ್ಲಿಂ ಮೊದಲಾದ ಕ್ಲೀಷೆಗಳಲ್ಲೇ ಕಳೆದುಹೋಗುತ್ತದೆ. ಭಾರತೀಯ ಸಮಾಜವನ್ನು ಆಳವಾಗಿ ಅರ್ಥಮಾಡಿಕೊಂಡಾಗ, ಈ ವಾಸ್ತವಗಳು ತೆರೆದುಕೊಳ್ಳುತ್ತವೆ.

ಈ ಸಿಕ್ಕುಗಳಿಂದ ಬಿಡಿಸಿಕೊಂಡು ವರ್ತಮಾನ ಭಾರತದ ಮಿಲೆನಿಯಂ ಸಮಾಜ ಮತ್ತು ಯುವ ಸಮೂಹ ಭವಿಷ್ಯದ ಗುರಿಯತ್ತ ಸಾಗಬೇಕಿದೆ. ಫಲಾಪೇಕ್ಷೆಗಳನ್ನು ತ್ಯಜಿಸುವ ವಿರಾಗಿಗಳಾಗುವ ಅವಶ್ಯಕತೆಯೇನೂ ಇಲ್ಲ. ನಿರಪೇಕ್ಷವಾಗಿ ಸಮಾಜವನ್ನು ಅವಲೋಕಿಸುವ ಔದಾತ್ಯವನ್ನು ಬೆಳೆಸಿಕೊಂಡರೆ ಸಾಕು. ಆಗ ಗಾಂಧಿ, ಅಂಬೇಡ್ಕರ್, ಮಾರ್ಕ್ಸ್ ಇನ್ನಿತರ ದಾರ್ಶನಿಕರು ಸಾಂಕೇತಿಕವಾಗಿ ಬಳಸಲ್ಪಡುವ ಸರಕುಗಳಾಗುವುದಿಲ್ಲ ಅಥವಾ ಸ್ವಾರ್ಥ ಸಾಧನೆಯ ದಾಟು ಸೇತುವೆಗಳಾಗಿ (Crossing Bridge) ಪರಿಣಮಿಸುವುದಿಲ್ಲ. ತತ್ವ ಸಿದ್ದಾಂತಗಳು ವೈಯುಕ್ತಿಕ ಏಳಿಗೆಯ ಚಿಮ್ಮು ಹಲಗೆಗಳಾಗುವುದಿಲ್ಲ (Launching Pads)̤ ಒರಗುಗೋಡೆಗಳೂ ಆಗುವುದಿಲ್ಲ. ದೌರ್ಜನ್ಯ, ಶೋಷಣೆ, ದಬ್ಬಾಳಿಕೆ ಮತ್ತು ಯಜಮಾನಿಕೆಗಳನ್ನು ವಸ್ತುನಿಷ್ಠವಾಗಿ ನೋಡುವ ಹೊಸ ದೃಷ್ಟಿಕೋನ ಬೆಳೆಯುತ್ತದೆ.

ಡಿಜಿಟಲ್ ಯುಗದ ನವ ಭಾರತ ತನ್ನ ಪ್ರಾಚೀನ ಸಾಮಾಜಿಕ ನಡವಳಿಕೆಗಳೆಲ್ಲವನ್ನೂ ಪುನರುಜ್ಜೀವನಗೊಳಿಸಿ ಯುವ ಮನಸ್ಸುಗಳಲ್ಲಿ ಪ್ರಾಚೀನ ಮೌಲ್ಯಗಳನ್ನು ವ್ಯವಸ್ಥಿತವಾಗಿ ಬಿತ್ತುತ್ತಿರುವ ಸಂದರ್ಭದಲ್ಲಿ ಯುವ ಸಮಾಜ ಈ ಸವಾಲುಗಳನ್ನು ಎದುರಿಸಬೇಕಿದೆ. ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಪಾದಿಸಿದ ” ಶಿಕ್ಷಣ ಪ್ರತಿರೋಧ ಸಂಘಟನೆ “ ಘೋಷವಾಕ್ಯವನ್ನು, ಮಾರ್ಕ್ಸ್ ಪ್ರತಿಪಾದಿಸಿದ ಶ್ರಮಜೀವಿಗಳ ಸರ್ವಾಧಿಕಾರವನ್ನು, ಪೆರಿಯಾರ್ ಪ್ರತಿಪಾದಿಸಿದ ಸ್ವ-ಗೌರವ (Self Respect) ಸ್ವಾಭಿಮಾನದ ಚಿಂತನೆಗಳನ್ನು ಮರು ವಿಮರ್ಶೆಗೊಳಪಡಿಸಿ ಸಮಕಾಲೀನಗೊಳಿಸುವ ಅನಿವಾರ್ಯತೆ ನಮ್ಮ ಮುಂದಿದೆ. ಇದಕ್ಕೆ ನೆರವಾಗುವ ಚಾರಿತ್ರಿಕ ಮಾದರಿಗಳು ನಮ್ಮ ಮುಂದಿವೆ. ಅಳವಡಿಸಿಕೊಳ್ಳುವ ವ್ಯವಧಾನವನ್ನು ಕಳೆದುಕೊಂಡಿದ್ದೇವೆ. ಈ ವ್ಯವಧಾನವನ್ನು ಮರಳಿ ಗಳಿಸುವುದು ಯುವ ಸಮಾಜದ ಪ್ರಥಮ ಆದ್ಯತೆಯಾಗಬೇಕಿದೆ.
ತದನಂತರ ಈ ಸಮಸ್ಯೆಗಳನ್ನು ನಿವಾರಿಸುವ ಆತ್ಯಂತಿಕ ಗುರಿಯೊಂದಿಗೆ, ಪ್ರಜಾಸತ್ತಾತ್ಮಕ ಮಾರ್ಗದಲ್ಲಿ ನಡೆಯುವುದು ಯುವ ಸಮಾಜದ ಬಾಧ್ಯತೆಯಾಗಿರುತ್ತದೆ.
೦-೦-೦-೦-೦-












