ಬೆಂಗಳೂರು : ಅಭಿವೃದ್ಧಿ ಶೂನ್ಯ, ಭ್ರಷ್ಟಾಚಾರ ಪೂರ್ಣ – ಇದೇ ಕಾಂಗ್ರೆಸ್ ಸಾಧನೆ! ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ದಿನದಿಂದ ದಿನಕ್ಕೆ ತನ್ನದೇ ದಾಖಲೆ ಮುರಿಯುತ್ತಾ ಸಾಗುತ್ತಿದೆ. ಇವರ ಭ್ರಷ್ಟಾಚಾರ, ಲೂಟಿ, ಹಗಲು ದರೋಡೆ ಗ್ಯಾರಂಟಿಗಳಿಂದಾಗಿ ರಾಜ್ಯದ ಜನತೆ ತತ್ತರಿಸಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕಿಡಿ ಕಾರಿದ್ದಾರೆ.
ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಸರಣಿಯ ಮುಂದಿನ ಕಂತು ಎನ್ನುವಂತೆ, ಅಬಕಾರಿ ಇಲಾಖೆಯ ಉನ್ನತ ಅಧಿಕಾರಿಗಳು ಲೋಕಾಯುಕ್ತರ ಕೈಗೆ ರೆಡ್-ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದಿದ್ದಾರೆ! ಇದು ಖಂಡಿತವಾಗಿ ವೈಯಕ್ತಿಕ ಭ್ರಷ್ಟಾಚಾರವಲ್ಲ, ಇದು ವ್ಯವಸ್ಥಿತ “ಕಲೆಕ್ಷನ್ ಮಾಫಿಯಾ”! ಎಂದು ಆರೋಪಿಸಿದ್ದಾರೆ.
ಸಿಎಲ್–7 ಲೈಸೆನ್ಸ್‌ಗೆ 80 ಲಕ್ಷ ರೂಪಾಯಿ, ಮೈಕ್ರೋ ಬ್ರಿವರಿ ಲೈಸೆನ್ಸ್‌ಗೆ 1.5 ಕೋಟಿ ರೂ. ಲಂಚ ಬೇಕು ಎಂದು ಅಧಿಕಾರಿಗಳು ಸ್ಪಷ್ಟವಾಗಿ ಕೇಳಿದ್ದರು ಎನ್ನಲಾಗಿದ್ದು, ಇದೊಂದು ‘ಪ್ಯಾಕೇಜ್ ಡೀಲ್’ ಎಂದು ಈ ಸರ್ಕಾರದ ಅಧಿಕಾರಿಗಳೇ ಹೇಳಿರುವುದಾಗಿ ವರದಿಯಾಗಿದೆ. ‘ಇವರಿಗೆ ಇಷ್ಟು, ನಮಗೆ ಇಷ್ಟು’ ಎಂದು ಪಾಲು ಹಂಚಿಕೆಯ ಬಗ್ಗೆ ಅಧಿಕಾರಿಗಳು ಮಾತನಾಡಿದ್ದಾರೆ. ಕೋಟಿಗಟ್ಟಲೆ ಹಣ ಲಂಚ ಕೇಳುವ ಧೈರ್ಯ ಅಧಿಕಾರಿಗಳಿಗೆ ಬಂತು ಎಂದರೆ ಅದರ ಹಿಂದಿರುವ ರಾಜಕೀಯ ಶ್ರೀರಕ್ಷೆ ಯಾರದ್ದು? ಎಂದು ವಿಜಯೇಂದ್ರ ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಲೋಕಸಭಾ ಎಲೆಕ್ಷನ್ ಪ್ರಚಾರಕ್ಕೆ ನಮಗೆ ಅವ್ರು ಜಾಗನೂ ನೀಡಿರಲಿಲ್ಲ : ರೆಡ್ಡಿ, ರಾಮುಲು ವಿರುದ್ಧ ಸಿದ್ದು ವಾಗ್ದಾಳಿ..
ಈ ಪ್ರಕರಣದ ಹಿಂದೆ ಕಾಂಗ್ರೆಸ್ ಅಬಕಾರಿ ಸಚಿವರ ಹೆಸರು ಬಹಿರಂಗವಾಗಿದ್ದು ಮೊದಲು ಅವರು ರಾಜೀನಾಮೆ ನೀಡಬೇಕು. ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ಕರಾಳ ಮುಖ ಈ ಬಾರಿ ಲೋಕಾಯುಕ್ತದಿಂದಲೇ ಬಹಿರಂಗವಾಗಿದ್ದರೂ, ಮುಖ್ಯಮಂತ್ರಿಗಳು ಸುಮ್ಮನಿದ್ದಾರೆ ಅಂದರೆ, ಇದಕ್ಕಿಂತಲೂ ಕಾಂಗ್ರೆಸ್ ಸರ್ಕಾರದ ನೈತಿಕ ಪತನಕ್ಕೆ ಬೇರೆ ಸಾಕ್ಷಿ ಬೇಕೆ? ಕಾಂಗ್ರೆಸ್ ಜನರ ಕಣ್ಣಿಗೆ ಮಣ್ಣೆರಚಿ, ಒಳಗಿನಿಂದ ರಾಜ್ಯದ ಬೊಕ್ಕಸವನ್ನು ಹೇಗೆ ಲೂಟಿ ಮಾಡುತ್ತಿದೆ ಎನ್ನುವುದು ಸಾಬೀತಾಗಿದೆ. ಸಚಿವ ತಿಮ್ಮಾಪುರ ಅವರು ಅಧಿಕಾರದಲ್ಲಿ ಮುಂದುವರಿಯುವ ನೈತಿಕ ಹಕ್ಕನ್ನು ಕಳೆದುಕೊಂಡಿದ್ದಾರೆ. ಮೊದಲು ಅವರು ರಾಜೀನಾಮೆ ನೀಡಿ ತನಿಖೆ ಎದುರಿಸಲಿ. ಇಲ್ಲದಿದ್ದರೆ ನಮ್ಮ ಹೋರಾಟ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಎಚ್ಚರಿಸಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ನಿಮ್ಮ ಸರ್ಕಾರದ ಭ್ರಷ್ಟ ಮುಖ ಬಟಾಬಯಲಾದ ಮೇಲೂ ಈಗ ಮತ್ತಿನ್ಯಾವ ನೆಪ ಹೇಳಿ ಕಾಲ ತಳ್ಳುವಿರಿ? ಅತ್ತ ರೈತರು ಸರ್ಕಾರದ ನೆರವಿಗಾಗಿ ಅಂಗಲಾಚುತ್ತಿದ್ದಾರೆ, ಜನರು ಅಭಿವೃದ್ಧಿ ಕಾಣದೆ ಬಸವಳಿದಿದ್ದಾರೆ. ನಿಮ್ಮ ಸಚಿವರು, ನಿಮ್ಮ ಸರ್ಕಾರ ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಜನರನ್ನು ಲೂಟಿ ಹೊಡೆಯುವುದರಲ್ಲಿ ನಿರತರಾಗಿದ್ದಾರೆ. ನಿಮ್ಮ ಬ್ರಹ್ಮಾಂಡ ಭ್ರಷ್ಟಾಚಾರಕ್ಕೆ ಇನ್ನ್ಯಾವ ಸಾಕ್ಷಿಗಾಗಿ ಕಾಯುತ್ತಿದ್ದೀರಿ? ನಿಮ್ಮ ಪ್ರತಿಯೊಂದು ಇಲಾಖೆಯೂ ನಿಮ್ಮ ಪಕ್ಷಕ್ಕೆ ಎಟಿಎಂ ಆಗಿ ಬದಲಾಗಿದೆ. ಈ ಪ್ರಕರಣವನ್ನು ಕೇವಲ ಅಧಿಕಾರಿಗಳಿಗೆ ಸೀಮಿತಗೊಳಿಸದೆ, ಇದರ ಬೇರು ಎಲ್ಲಿಯವರೆಗೆ ಹಬ್ಬಿದೆ ಎಂಬುದನ್ನು ತನಿಖೆ ಮಾಡಲೇಬೇಕು. ರಾಜ್ಯದ ಸ್ವಾಭಿಮಾನಿ ಜನತೆಗೆ ಉತ್ತರ ನೀಡುವ ಕಾಲ ಬಂದಿದೆ. ಭ್ರಷ್ಟ ಸಚಿವರನ್ನು ರಕ್ಷಿಸುವುದನ್ನು ಬಿಟ್ಟು, ನೈಜ ತನಿಖೆಗೆ ಆದೇಶಿಸಿ. ಇಲ್ಲವಾದರೆ ಜನರ ಆಕ್ರೋಶಕ್ಕೆ ಉತ್ತರಿಸಲು ಸಿದ್ದರಾಗಿ ಎಂದು ಬಿ.ವೈ. ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.













