ಪಶ್ಚಿಮ ಬಂಗಾಳ: ಭಾರತೀಯ ರೈಲ್ವೆ ಇತಿಹಾಸದಲ್ಲಿ ಇಂದು ಮತ್ತೊಂದು ಮಹತ್ವದ ದಿನವಾಗಿದೆ. ಇಂದು ಪಶ್ಚಿಮ ಬಂಗಾಳದ ಮಾಲ್ಡಾಕ್ಕೆ ಭೇಟಿ ನೀಡಿದ ಪ್ರಧಾನಿ ನರೇಂದ್ರ ಮೋದಿ(Narendra Modi) ಭಾರತದ ಮೊದಲ ವಂದೇ ಭಾರತ್ ಸ್ಲೀಪರ್ ರೈಲಿಗೆ( Vande Bharat Sleeper Train) ಹಸಿರು ನಿಶಾನೆ ತೋರಿಸಿ ಅಧಿಕೃತ ಚಾಲನೆ ನೀಡಿದ್ದಾರೆ.

ಈ ವಂದೇ ಭಾರತ್ ಸ್ಲೀಪರ್ ರೈಲು ಹೌರಾ ಮತ್ತು ಗುವಾಹಟಿ (ಕಾಮಾಕ್ಯ) ನಡುವೆ ಸಂಚರಿಸಲಿದೆ. ಆಧುನಿಕ ಭಾರತದ ಸಾರಿಗೆ ಅಗತ್ಯಗಳನ್ನು ಪೂರೈಸಲು ಆಧುನಿಕ ಸೌಲಭ್ಯಗಳೊಂದಿಗೆ ವಂದೇ ಭಾರತ್ ಸ್ಲೀಪರ್ ರೈಲನ್ನು ತಯಾರಿಸಲಾಗಿದೆ. ಇದು ಸಂಪೂರ್ಣ ಹವಾನಿಯಂತ್ರಿತ ಸ್ಲೀಪರ್ ರೈಲು ಆಗಿದ್ದು, ಕಡಿಮೆ ದರದಲ್ಲಿ ಪ್ರಯಾಣಿಕರಿಗೆ ವಿಮಾನಯಾನದಂತಹ ಅನುಭವವನ್ನು ನೀಡುತ್ತದೆ ಎನ್ನುವುದು ರೈಲ್ವೆ ಇಲಾಖೆ ಅಭಿಪ್ರಾಯವಾಗಿದೆ.

ಆಧುನಿಕ ತಂತ್ರಜ್ಞಾನ ಆಧಾರಿತ ವಿನ್ಯಾಸ, ಆರಾಮದಾಯಕ ಸ್ಲೀಪರ್ ವ್ಯವಸ್ಥೆ, ಸುಧಾರಿತ ಸುರಕ್ಷತಾ ವ್ಯವಸ್ಥೆಗಳು, ಸ್ವಚ್ಛತೆ ಹಾಗೂ ಪ್ರಯಾಣಿಕರ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಿರುವುದು ಈ ವಂದೇ ಭಾರತ್ ಸ್ಲೀಪರ್ ರೈಲಿನ ಪ್ರಮುಖ ವೈಶಿಷ್ಟ್ಯವಾಗಿದೆ. ಹೌರಾ–ಗುವಾಹಟಿ ನಡುವಿನ ಈ ಸೇವೆಯಿಂದ ಈಶಾನ್ಯ ಭಾರತದ ಸಂಪರ್ಕ ಮತ್ತಷ್ಟು ಬಲಪಡಿಸುವುದರ ಜೊತೆಗೆ ವ್ಯಾಪಾರ, ಪ್ರವಾಸೋದ್ಯಮ ಹಾಗೂ ಉದ್ಯೋಗಾವಕಾಶಗಳಿಗೆ ಇದು ದೊಡ್ಡ ಉತ್ತೇಜನ ನೀಡಲಿದೆ ಎಂಬ ನಿರೀಕ್ಷೆ ವ್ಯಕ್ತವಾಗಿದೆ.













