ಬೆಂಗಳೂರು: ಬೀದಿ ನಾಯಿಗಳ ಮೇಲೆ ಅಷ್ಟು ಪ್ರೀತಿ ಇದ್ದರೆ ನಿಮ್ಮ ಮನೆಯಲ್ಲಿ ಏಕೆ ಸಾಕುತ್ತಿಲ್ಲ..? ಎಂದು ಶ್ವಾನಪ್ರಿಯರು ಹಾಗೂ ನಾಯಿ ಪ್ರಿಯ ಸಂಸ್ಥೆಗಳನ್ನು ಸುಪ್ರೀಂ ಕೋರ್ಟ್ ಪ್ರಶ್ನಿಸಿದೆ. ಹಾಗೆ ಬೀದಿ ನಾಯಿಗಳ ದಾಳಿಗೆ ಒಳಗಾದವರಿಗೆ ಭಾರೀ ಪರಿಹಾರ ನೀಡುವಂತೆ ಸರ್ಕಾರಗಳಿಗೆ ಹಾಗೂ ಬೀದಿ ನಾಯಿಗಳಿಗೆ ಆಹಾರ ನೀಡುತ್ತಿರುವವರಿಗೆ ಆದೇಶಿಸುತ್ತೇವೆ ಎಂದು ಹೇಳಿದೆ.

ಬೀದಿ ನಾಯಿ ನಿಯಂತ್ರಣ ನಿಯಮವನ್ನು ಅನುಷ್ಠಾನಕ್ಕೆ ತರದೆ ಕಳೆದ 5 ವರ್ಷಗಳಿಂದ ಸುಮ್ಮನೆ ಕೂತಿರುವ ಸರ್ಕಾರಗಳ ವಿರುದ್ಧ ಹಾಗೂ ಕೆಲ ಸಂಘ ಸಂಸ್ಥೆಗಳು ಮತ್ತು ಶ್ವಾನಪ್ರಿಯರ ವಿರುದ್ಧ ಸುಪ್ರೀಂ ಕೋರ್ಟ್ ಮಂಗಳವಾರ ಗರಂ ಆಗಿದೆ.

ಬೀದಿನಾಯಿ ಹಾವಳಿಗೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸಿದ ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂದೀಪ್ ಮೆಹ್ರಾ ಮತ್ತು ಎನ್.ವಿ.ಅಂಜಾರಿಯಾ ಅವರ ನೇತೃತ್ವದ ನ್ಯಾಯಪೀಠವು, ಕಳೆದ ಐದು ವರ್ಷಗಳಿಂದ ಬೀದಿನಾಯಿ ಹಾವಳಿ ತಡೆಗಾಗಿ ನಿಯಮಗಳು ಸರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ ಎಂದು ಕಳವಳ ವ್ಯಕ್ತಪಡಿಸಿತು.

ನ್ಯಾಯಮೂರ್ತಿ ವಿಕ್ರಮ್ ನಾಥ್, ‘ನಾಯಿ ಕಡಿತದಿಂದ ಜನರಿಗೆ ಗಾಯವಾದಲ್ಲಿ ಅಥವಾ ಸಾವು ಸಂಭವಿಸಿದಲ್ಲಿ ರಾಜ್ಯ ಸರ್ಕಾರಗಳಿಂದ ಭಾರಿ ಪರಿಹಾರ ಕೇಳಬೇಕಾಗುತ್ತದೆ. ಅಂಥ ಪ್ರಕರಣಗಳಲ್ಲಿ ನಾಯಿಗಳಿಗೆ ಆಹಾರ ನೀಡುವವರು ಮತ್ತು ನಾಯಿ ಪ್ರೇಮಿಗಳನ್ನು ಹೊಣೆಗಾರರನ್ನಾಗಿ ಮಾಡಲಾಗುವುದು. ಬೀದಿನಾಯಿಗಳನ್ನು ಅಷ್ಟೊಂದು ಪ್ರೀತಿಸುವವರು, ಅವುಗಳನ್ನು ಮನೆಗೆ ಏಕೆ ಕೊಂಡೊಯ್ಯುವುದಿಲ್ಲ? ಆ ನಾಯಿಗಳೇಕೆ ಅಲೆದಾಡುತ್ತಾ ಜನರನ್ನು ಬೆದರಿಸುತ್ತವೆ ಮತ್ತು ಕಚ್ಚುತ್ತವೆ’ ಎಂದು ಪ್ರಶ್ನಿಸಿದರು.

ನ್ಯಾ. ವಿಕ್ರಮ್ ನಾಥ್ ಮಾತಿಗೆ ದನಿಗೂಡಿಸಿದ ನ್ಯಾಯಮೂರ್ತಿ ಮೆಹ್ರಾ, ‘ನಾಯಿಯೊಂದು ಒಂಬತ್ತು ವರ್ಷದ ಮಗುವಿನ ಮೇಲೆ ದಾಳಿ ನಡೆಸಿದಾಗ ಯಾರನ್ನು ಹೊಣೆಗಾರರನ್ನಾಗಿಸುವುದು? ನಾಯಿಗೆ ಅನ್ನ ಹಾಕಿದ ಸಂಸ್ಥೆಯನ್ನೇ? ಸಮಸ್ಯೆ ಹೀಗಿದ್ದರೂ ನಾವು ಕಣ್ಣುಮುಚ್ಚಿ ಕೂರಬೇಕೆಂದು ನೀವು ಬಯಸುತ್ತೀರಿ ಎಂದು ತರಾಟೆಗೆ ತೆಗೆದುಕೊಂಡರು.

ಗುಜರಾತ್‌ನಲ್ಲಿ ವಕೀಲರೊಬ್ಬರಿಗೆ ಬೀದಿ ನಾಯಿ ಕಚ್ಚಿದ್ದು, ಆ ನಾಯಿಗಳನ್ನು ಹಿಡಿಯಲು ಸಂಬಂಧಪಟ್ಟವರು ಹೋಗಿದ್ದರು. ಆಗ ಶ್ವಾನಪ್ರೇಮಿ ಎಂದು ಕರೆಸಿಕೊಂಡ ಕೆಲ ವಕೀಲರೇ ಸೇರಿಕೊಂಡು ಪ್ರಾಧಿಕಾರದವರಿಗೆ ಹಲ್ಲೆ ನಡೆಸಿದ್ದು ಬೇಸರದ ಸಂಗತಿ ಎಂದು ನ್ಯಾ. ಮೆಹ್ತಾ ಹೇಳಿದರು. ಶಿಕ್ಷಣ ಸಂಸ್ಥೆಗಳು ಸೇರಿದಂತೆ ಸರ್ಕಾರಿ ಸಂಸ್ಥೆಗಳ ಆವರಣದಲ್ಲಿ ಓಡಾಡುತ್ತಿರುವ ಬೀದಿ ನಾಯಿಗಳ ತೆರವುಗೊಳಿಸುವಂತೆ ಕಳೆದ ನ.7ರಂದು ತಾನು ಹೊರಡಿಸಿದ್ದ ಆದೇಶಕ್ಕೆ ಸಂಬಂಧಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ವೇಳೆ ನ್ಯಾಯಾಲಯವು ಈ ಅಭಿಪ್ರಾಯ ವ್ಯಕ್ತಪಡಿಸಿದೆ.












