ಬೆಂಗಳೂರು : ಈ ರಾಜಕಾರಣವೇ ಹೀಗೆ ಒಬ್ಬ ನಾಯಕ ಜನಪ್ರಿಯತೆಯ ಉತ್ತುಂಗದಲ್ಲಿದ್ದ, ಇನ್ನೊಬ್ಬ ನಾನಾ ಕಾರಣಗಳಿಗಾಗಿ ಪಾತಾಳಕ್ಕೂ ಇಳಿದಿರುವ ಸನ್ನಿವೇಶಗಳನ್ನು ಗಮನಿಸಿದ್ದೇವೆ. ಅದರಲ್ಲೂ ಕೆಲವರು ರಾಜಕೀಯದ ಆಟದಲ್ಲಿ ಹೇಳ ಹೆಸರಿಲ್ಲದಂತೆ ಮೂಲೆಗೂ ಸೇರಿದ್ದಾರೆ. ಇನ್ನೂ ಕೆಲವರು ಅಧಿಕಾರವಿದ್ದರೂ ಸಹ ಏನೂ ಮಾಡಲಾರದ ಸಂದಿಗ್ಧತೆಗೆ ಸಿಲುಕಿದ್ದಾರೆ. ಒಬ್ಬ ನಾಯಕನಿಗೆ ಅಪಾರ ಹೆಸರು, ವರ್ಚಸ್ಸನ್ನು ತಂದುಕೊಡುವ ಈ ರಾಜಕೀಯ ಒಂಥರಾ ಕಣ್ಣಾ ಮುಚ್ಚಾಲೆ ಆಟದಂತಾಗಿದೆ.
ಸಾಮಾನ್ಯವಾಗಿ ಬಲ್ಲವರು ಆಗಾಗ ಹೇಳುತ್ತಿರುತ್ತಾರೆ, ಕೆಲ ರಾಜಕೀಯ ನಾಯಕರು ಇದೇ ಮಂತ್ರವನ್ನು ಪಠಿಸುತ್ತಿರುತ್ತಾರೆ. ಅದೇನೆಂದರೆ ಅಧಿಕಾರ ಯಾರಿಗೂ ಶಾಶ್ವತವಲ್ಲ, ನಮಗೆ ಜನರ ಸೇವೆ ಮಾಡುವ ಅವಕಾಶ ದೊರೆತಾಗ ಅದನ್ನು ಅತ್ಯಂತ ಭಕ್ತಿ, ಶ್ರದ್ದೆ ಹಾಗೂ ಪ್ರಾಮಾಣಿಕ ಮಾಡಬೇಕು. ನಮ್ಮ ಅವಧಿಯಲ್ಲಿ ಜನರು ಎಷ್ಟು ನೆಮ್ಮದಿಯಿಂದ ಬದುಕಿದರು ಎನ್ನುವ ಅಂಶವೂ ಪರಿಗಣನೆಗೆ ಬರುತ್ತದೆ. ಆದರೆ ರಾಜಕೀಯ ಯಾವತ್ತೂ ನಿಂತ ನೀರಲ್ಲ, ಅದು ಹರಿಯುವ ನೀರಾಗಿದ್ದರೆ ಮಾತ್ರ ಒಬ್ಬ ರಾಜಕಾರಣಿಗೆ ಭವಿಷ್ಯ ನೀಡಬಲ್ಲದು ಎಂಬ ವಾದಗಳೂ ಇವೆ.
ಹೀಗೆಯೇ ಒಬ್ಬ ನಾಯಕ ಅಧಿಕಾರವಿದ್ದರೂ ಸಹ ಎಲ್ಲೋ ಒಂದು ಕಡೆ ಏಕಾಂಗಿಯಾದ್ರಾ..? ಎಂಬ ಪ್ರಶ್ನೆ ಮೂಡುತ್ತದೆ. ಈ ಮೊದಲು ಪ್ರಧಾನಿ ನರೇಂದ್ರ ಮೋದಿಯಿಂದ ಬಿಜೆಪಿಯ ಘಟಾನುಘಟಿ ನಾಯಕರೊಂದಿಗೆ ಉತ್ತಮ ಬಾಂಧವ್ಯ ಹೊಂದಿದ್ದ ನಾಯಕ. ಕೇಂದ್ರ ಗೃಹ ಸಚಿವ ಅಮಿತ್ ಶಾ ಜೊತೆ ವೇದಿಕೆ ಹಂಚಿಕೊಳ್ಳುತ್ತಿದ್ದ ಪ್ರಭಾವಿ.

ಈ ಹಿಂದೆ ವಿಧಾನಪರಿಷತ್ ಸದಸ್ಯರಾಗಿದ್ದ ಹಾಲಿ ಅಥಣಿಯ ಶಾಸಕ ಲಕ್ಷ್ಮಣ್ ಸವದಿ ಸಾಕಷ್ಟು ಜನಮನ್ನಣೆ ಗಳಿಸಿರುವ ನಾಯಕರಾಗಿದ್ದಾರೆ. ಕಳೆದ 2023ರಲ್ಲಿ ಬದಲಾದ ರಾಜಕೀಯ ಸನ್ನಿವೇಶದ ಕಾರಣಕ್ಕೆ ಕಮಲ ಬಿಟ್ಟು ಕೈ ಹಿಡಿದಿದ್ದರು. ರಾಜ್ಯ ರಾಜಕಾರಣದ ಹಾಟ್ ಸ್ಪಾಟ್ ಬೆಳಗಾವಿ ಜಿಲ್ಲೆಯ ರಾಜಕಾರಣ ಎನ್ನುವುದು ಈ ಹಿಂದಿನ ಹಲವು ಘಟನೆಗಳನ್ನು ಮೆಲುಕು ಹಾಕಿದಾಗ ಅದು ಅರ್ಥವಾಗುತ್ತದೆ. ಆದರೆ ರಾಜ್ಯದಲ್ಲಿಯೇ ದೊಡ್ಡ ಜಿಲ್ಲೆಯಾಗಿರುವ ಇಲ್ಲಿ ತಮ್ಮದು ಹಿಡಿತ ಹಾಗೂ ಪ್ರಭಾವ ಇರಬೇಕು ಎಂಬ ನಿಟ್ಟಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ರೂಪಿಸಿದ್ದ ತಂತ್ರಗಾರಿಕೆಯ ಫಲವೇ ಸವದಿ ಕಾಂಗ್ರೆಸ್ ಸೇರುವಂತಾಗಿತ್ತು.
ಈ ಮೊದಲು ವಿಧಾನ ಪರಿಷತ್ ಸದಸ್ಯರಾಗಿದ್ದ ಸವದಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಲು ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹಾಗೂ ಅವರ ಸಹೋದರ ಚೆನ್ನರಾಜ್ ಹಟ್ಟಿಹೊಳಿ ಪ್ರಯತ್ನವೂ ಇತ್ತು. ಹೀಗಾಗಿಯೇ ಬೆಳಗಾವಿ ಜಿಲ್ಲೆಯಲ್ಲಿ ಜಾರಕಿಹೊಳಿ ಸಹೋದರರ ಪರ್ಯಾಯ ಶಕ್ತಿಯಾಗಿ ಡಿಕೆಶಿ ಈ ಪ್ಲ್ಯಾನ್ ರೂಪಿಸಿದ್ದರು ಎನ್ನಲಾಗಿದೆ. ಆದರೆ ಪ್ರತಿಯಾಗಿ ಒಳ್ಳೆಯ ಸಮಯಕ್ಕಾಗಿ ಕಾಯುತ್ತಿದ್ದ ಎದುರಾಳಿ ಪಡೆಯು ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಸವದಿ ಸೋಲಿಸಲು ಹಲವು ರೀತಿಯ ಪ್ರಯತ್ನಗಳನ್ನು ಮಾಡಿತ್ತು. ಆದರೆ ಶಾಸಕ ಲಕ್ಷ್ಮಣ್ ಸವದಿ ಸಹಕಾರ ಕ್ಷೇತ್ರದಲ್ಲಿ ಸುದೀರ್ಘವಾದ ಸೇವೆ ಸಲ್ಲಿಸಿದ್ದಾರೆ. ಸಹಕಾರ ರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವ ಸವದಿ ಸಾಹುಕಾರ್ ವಿರೋಧಿಗಳ ಎಲ್ಲ ಲೆಕ್ಕಾಚಾರಗಳನ್ನು ತಲೆಕೆಳಗಾಗುವಂತೆ ಮಾಡುವಲ್ಲಿ ಯಶಸ್ವಿಯಾಗಿದ್ದರು.
ಒಳ್ಳೆಯ ಭಾಷಣ ಕೌಶಲ್ಯ, ಅದ್ಭುತ ಮಾತಿನ ಕಲೆ ಹಾಗೂ ಸಾಂದರ್ಭಿಕ ಹಾಸ್ಯ ಪ್ರಜ್ಞೆಯನ್ನು ಹೊಂದಿರುವ ಸವದಿ ಅಥಣಿ ಕ್ಷೇತ್ರವಲ್ಲದೆ ರಾಜ್ಯದಲ್ಲೂ ಗಮನ ಸೆಳೆಯುವ ನಾಯಕರಾಗಿದ್ದಾರೆ. ಬಿಜೆಪಿಯಲ್ಲಿದ್ದಾಗ ಪಕ್ಷದ ಪರವಾಗಿ ಗಟ್ಟಿಯಾಗಿ ನಿಲ್ಲುತ್ತಿದ್ದರು ಸವದಿ. ಕಳೆದ ಕೆಲ ತಿಂಗಳುಗಳಿಂದ ಡಿಸಿಸಿ ಬ್ಯಾಂಕ್ ಆಧಾರಿತವಾಗಿ ನಡೆಯುತ್ತಿರುವ ಬೆಳವಣಿಗೆಗಳನ್ನು ನೋಡಿದಾಗ ಸವದಿಗೆ ಯಾರ ಬೆಂಬಲವೂ ಇಲ್ಲದಾಯಿತೆ ಎಂಬ ಪ್ರಶ್ನೆ ಮೂಡುತ್ತದೆ.
ಇನ್ನೂ ಕಾಂಗ್ರೆಸ್ ಶಾಸಕರಾಗಿ ಆಯ್ಕಯಾದ ಬಳಿಕ ಸವದಿ ರಾಜಕಾರಣಕ್ಕೆ ಹೊಸ ದಿಕ್ಕು ಸಿಗಬಹುದು ಎಂಬ ನಿರೀಕ್ಷೆಯು ಹೆಚ್ಚಾಗಿತ್ತು. ಆದರೆ ಅದರ ನಂತರ ನಡೆದ ರಾಜಕೀಯ ಬೆಳವಣಿಗೆಗಳು ಆ ಎಲ್ಲ ಆಶಾಭಾವನೆಯನ್ನು ದೂರ ಮಾಡುತ್ತಿದ್ದು, ರಾಜ್ಯ ರಾಜಕಾರಣಕ್ಕೆ ಸೀಮಿತವಾಗಿದ್ದ ನಾಯಕನನ್ನು ಕೇವಲ ಕ್ಷೇತ್ರದ ಹಾಗೂ ಒಂದು ತಾಲೂಕಿನ ರಾಜಕಾರಣಕ್ಕೆ ಸೀಮಿತಗೊಳಿಸಲು ಯತ್ನಗಳು ನಡೆಯುತ್ತಿವೆ.
ಜಿಲ್ಲಾ ರಾಜಕಾರಣದಲ್ಲಿ ಹಿಡಿತ ಕಾಯ್ದುಕೊಳ್ಳುವುದರ ಭಾಗವಾಗಿ ನಡೆಯುತ್ತಿರುವ ಬೆಳವಣಿಗೆಗಳು ಅಥಣಿ ಕ್ಷೇತ್ರ, ಅದರಲ್ಲೂ ಲಕ್ಷ್ಮಣ್ ಸವದಿ ಕೇಂದ್ರಿತವಾಗಿಯೇ ನಡೆಯುತ್ತಿವೆ ಎನ್ನುವುದು ಗುಟ್ಟಾಗಿ ಉಳಿದಿಲ್ಲ. ಹೀಗಾಗಿಯೇ ಲಕ್ಷ್ಮಣ್ ಸವದಿ ಕಂಟ್ರೋಲ್ ಹೊಂದಿರುವ ಸಹಕಾರ ಕ್ಷೇತ್ರದಲ್ಲಿ ಅವರ ವಿರುದ್ಧವೇ ಅಪಪ್ರಚಾರ ನಡೆಯುತ್ತಿದೆಯಾ? ಅಥವಾ ನಿಜವಾಗಿಯೂ ಆ ರೀತಿಯ ಘಟನೆಗಳಿಗೆ ಸಹಕಾರ ಕ್ಷೇತ್ರ ಸಾಕ್ಷಿಯಾಗಿದೆಯಾ ಎಂಬುವುದು ಅಸ್ಪಷ್ಟ. ಆದರೆ ಇತ್ತೀಚೆಗೆ ಶಾಸಕ ಸವದಿ ಹಾಗೂ ಪುತ್ರ ಚಿದಾನಂದ ವಿರುದ್ಧ ಡಿಸಿಸಿ ಬ್ಯಾಂಕ್ ನೌಕರರ ಸಂಘದ ಅಧ್ಯಕ್ಷನ ಮೇಲೆ ಹಲ್ಲೆ ನಡೆಸಿರುವ ಆರೋಪದ ಕುರಿತು ದೂರು ಕೂಡ ದಾಖಲಾಗಿದೆ. ಮೇಲ್ನೋಟಕ್ಕೆ ಇದು ಜಿಲ್ಲಾ ಸಹಕಾರಿ ಬ್ಯಾಂಕ್ ವಿಚಾರದಲ್ಲಿನ ಆರೋಪವಿದ್ದರೂ, ಆದರೆ ಇದರ ಹಿಂದೆ ಹಲವು ಪ್ರಮುಖ ರಾಜಕೀಯ ದಾಳಗಳು ಉರುಳುವ ಸಾಧ್ಯತೆಗಳಿವೆ.

ಈ ಮೊದಲು ಬೂದಿ ಮುಚ್ಚಿದ ಕೆಂಡದಂತಿದ್ದ ಡಿಸಿಸಿ ಬ್ಯಾಂಕ್ ರಾಜಕೀಯ ಲಕ್ಷ್ಮಣ್ ಸವದಿ ಅಳಿಯನ ವರ್ಗಾವಣೆಯಿಂದ ಇನ್ನಷ್ಟು ಸ್ಫೋಟವಾಗುವಂತೆ ಮಾಡಿತು. ಈ ಹಿಂದೆ ಡಿಸಿಸಿ ಬ್ಯಾಂಕ್ ಚುನಾವಣೆಯ ಪ್ರಚಾರದ ಸಮಯದಲ್ಲಿ ಎದುರಾಳಿ ಬಣ ಈ ರೀತಿಯಾದ ಭರವಸೆಯನ್ನು ಜನರಿಗೆ ನೀಡಿತ್ತು. ಹೀಗಾಗಿಯೇ ಈ ವಿಚಾರ ಸವದಿ ಬಣದಲ್ಲಿ ಆಕ್ರೋಶಕ್ಕೆ ಕಾರಣವಾದಂತಾಗಿದೆ.
ಡಿಸಿಸಿ ಬ್ಯಾಂಕ್ ನೌಕರರಲ್ಲೇ ಒಡಕು ಮೂಡಿಸುವ ರಾಜಕೀಯಕ್ಕೆ ಬೆಳಗಾವಿ ಜಿಲ್ಲಾ ರಾಜಕಾರಣ ಈ ಬಾರಿ ಸಾಕ್ಷಿಯಾಗಿದೆ. ಇದರ ಪರಿಣಾಮ ಸವದಿ ವಿರೋಧವಾಗಿ ಒಂದಿಷ್ಟು ಬ್ಯಾಂಕ್ ನೌಕರರು ಪ್ರತಿಭಟಿಸಿದರೆ, ಸವದಿ ಪರವಾಗಿ ಸಾವಿರಾರು ಜನರು ಬೀದಿಗಿಳಿದು ನೈತಿಕ ಬೆಂಬಲ ನೀಡುವ ಮೂಲಕ ನಚ್ಚಿನ ನಾಯಕನ ಸಂಕಷ್ಟದಲ್ಲಿ ಭಾಗಿಯಾಗಿದ್ದರು. ಸವದಿ ಪರವಾಗಿರುವ ಡಿಸಿಸಿ ಬ್ಯಾಂಕ್ ನೌಕರರು ಕೂಡ ಅಥಣಿಯಲ್ಲಿ ಪ್ರತಿಭಟಿಸುವಂತಾಗಿತ್ತು.
ಆದರೆ ತಮ್ಮ ಮೇಲೆ ಹಲ್ಲೆಯ ಆರೋಪ ಕೇಳಿ ಬಂದ ತಕ್ಷಣ ಬೆಂಬಲಿಗರ ಸಭೆ ನಡೆಸಿದ್ದ ಲಕ್ಷ್ಮಣ್ ಸವದಿ ವಿರೋಧಿಗಳ ಗುಡುಗಿದ್ದರು. ಕಳೆದ ಕೆಲ ತಿಂಗಳಿನಿಂದ ನನ್ನ ವಿರುದ್ಧ ಷಡ್ಯಂತ್ರ ನಡೆಯುತ್ತಿದೆ. ಇದು ನನ್ನ ಗಮನಕ್ಕೆ ಇದೆ ಎಂದು ಪರೋಕ್ಷವಾಗಿ ಜಾರಕಿಹೊಳಿ ಬ್ರದರ್ಸ್ ವಿರುದ್ಧ ಕಿಡಿ ಕಾರಿದ್ದರು.
ಆದರೆ ಹೊಸ ವರ್ಷದ ಆರಂಭದಲ್ಲಿ ಸವದಿ ವಿರುದ್ಧದ ಈ ಆರೋಪ ಅವರಿಗೆ ರಾಜಕೀಯವಾಗಿಯೂ ಹಿನ್ನಡೆಯಾಗಲು ಕಾರಣವಾಗುತ್ತಾ ಎಂಬ ಪ್ರಶ್ನೆಯೂ ಉದ್ಭವಿಸುತ್ತದೆ. ಲಕ್ಷ್ಮಣ್ ಸವದಿಯ ಜೊತೆಗಿದ್ದ ಜಿಲ್ಲೆಯ ನಾಯಕರು ಈ ಸಂಕಷ್ಟದ ಸಮಯದಲ್ಲಿ ಬೆನ್ನಿಗೆ ನಿಲ್ಲಲು ಮುಂದಾಗಲಿಲ್ಲ. ಆದರೆ ಆಪ್ತಮಿತ್ರ ಹಾಗೂ ಕಾಗವಾಡ ಕ್ಷೇತ್ರದ ಶಾಸಕ ರಾಜು ಕಾಗೆ ಮಾತ್ರ ಗೆಳೆಯನನ್ನು ಬಿಟ್ಟುಕೊಡಲಿಲ್ಲ. ಕಾಂಗ್ರೆಸ್ ಪಕ್ಷದಲ್ಲಿನ ಯಾವೊಬ್ಬ ನಾಯಕರು ಈ ಬಗ್ಗೆ ಬಾಯಿ ಬಿಟ್ಟಿಲ್ಲ. ಇದಕ್ಕೆ ಕಾರಣ ಅಧಿಕಾರದ ವಿಚಾರವೂ ಇರಬಹುದೇನೋ, ಶಾಸಕರಾಗಿರುವ ಸವದಿ ಹತ್ತಿರ ಡಿಸಿಸಿ ಬ್ಯಾಂಕ್ ನಿರ್ದೇಶಕ ಸ್ಥಾನ ಬಿಟ್ಟರೇ ದೊಡ್ಡ ಅಧಿಕಾರ ಇಲ್ಲದಿರಬಹುದು ಇದಕ್ಕೆ ಕಾರಣವಿರಬಹುದು. ಆದರೆ ಸವದಿಗೆ ಶಾಕ್ ನೀಡುವ ನಿಟ್ಟಿನಲ್ಲಿ ಅಪೆಕ್ಸ್ ಬ್ಯಾಂಕ್‌ಗೆ ನಾಮ ನಿರ್ದೇಶನ ಮಾಡುವ ವಿಚಾರದಲ್ಲಿಯೂ ರಾಹುಲ್ ಜಾರಕಿಹೊಳಿಗೆ ಚಾನ್ಸ್ ಸಿಕ್ಕಿತ್ತು. ಇದು ಸವದಿ ಹಿಡಿತ ಕಳೆದುಕೊಳ್ಳುವಂತೆ ಮಾಡುವ ತಂತ್ರಗಾರಿಕೆಯ ಭಾಗವೂ ಆಗಿದೆ ಎನ್ನಲಾಗುತ್ತಿದೆ.
ಸಂಪುಟ ವಿಸ್ತರಣೆಯ ಚರ್ಚೆಯು ಮತ್ತೆ ಮುನ್ನೆಲೆಗೆ ಬರುವ ಈ ಸಂದರ್ಭದಲ್ಲಿ ಸವದಿ ಅವರಿಗೆ ಕಾಂಗ್ರೆಸ್ ಪಕ್ಷ ಸಚಿವ ಸ್ಥಾನಕ್ಕೆ ಮಣೆ ಹಾಕುತ್ತಾ ಎಂಬ ಚರ್ಚೆಯು ನಡೆಯುತ್ತಿದೆ. ಬೆಳಗಾವಿಗೆ ಈಗಾಗಲೇ ಎರಡು ಸಚಿವ ಸ್ಥಾನಗಳಿದ್ದು, ಆದರೆ ಡಿಕೆ ಶಿವಕುಮಾರ್ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಸವದಿ ಈ ಹಿಂದೆ ಜನವರಿಯಲ್ಲಿ ಶುಕ್ರದೆಸೆಯ ಮಾತುಗಳನ್ನಾಡಿದ್ದರು. ನಾವು ಯಾವುದೇ ಅಧಿಕಾರವನ್ನ ಕೇಳಿ ಪಡೆದವನಲ್ಲ. ಭಗವಂತನ ಆಶೀರ್ವಾದ ಹಾಗೂ ಹೈಕಮಾಂಡ್ ಇಚ್ಛೆ ಇದ್ರೆ ಸಚಿವ ಸ್ಥಾನ ನನಗೆ ತಾನಾಗಿಯೇ ಬರುತ್ತದೆ. ಹೈಕಮಾಂಡ್ ಕೊಟ್ಟ ಜವಾಬ್ದಾರಿಯನ್ನ ನಾವು ನಿಭಾಯಿಸಲು ಸಿದ್ಧ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ರಾಜಕಾರಣದಲ್ಲಿ ಯಾರಿಗೆ ಯಾವ ರೀತಿಯ ಪರಿಸ್ಥಿತಿಗಳು ಎದುರಾಗುತ್ತವೆ. ಅಧಿಕಾರ ಇದ್ದಾಗ ರಾಜಕಾರಣಿಗಳು ಹೇಗೆ ವರ್ತಿಸುತ್ತಾರೆ, ಜನರೊಂದಿಗೆ ಹೇಗೆಲ್ಲ ಸ್ಫಂದಿಸುತ್ತಾರೆ ಎನ್ನುವುದು ಬಹಳಷ್ಟು ಮುಖ್ಯ. ಹೀಗಾಗಿಯೇ ಸವದಿ ಇಲ್ಲದಿರುವ ಸಂದರ್ಭದಲ್ಲಿಯೂ ಸಾವಿರಾರು ಸಂಖ್ಯೆಯಲ್ಲಿ ಜನರು ಬೀದಿಗಿಳಿದು ನಾಯಕನ ಪರವಾಗಿ ಗಟ್ಟಿಯಾಗಿ ನಿಂತಿದ್ದರು. ರಾಜಕೀಯ ಷಡ್ಯಂತ್ರಗಳಿಂದ ನಿಜವಾಗಿಯೂ ಲಕ್ಷ್ಮಣ್ ಸವದಿ ಅವರಿಗೆ ಸ್ವಪಕ್ಷದಲ್ಲಿಯೇ ಹಿನ್ನಡೆಯಾಗುತ್ತಿದ್ದು, ಇದು ಸವದಿ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಸವದಿ ಎಲ್ಲ ಆರೋಪಗಳಿಂದ ಮುಕ್ತವಾಗಿ ಹೊರಬಂದು, ಒಂದು ವೇಳೆ ಸಂಪುಟ ವಿಸ್ತರಣೆಯಾದರೆ ಕಾಂಗ್ರೆಸ್‌ನ ಮಂತ್ರಿಯಾಗಿ ಆಯ್ಕೆಯಾಗುತ್ತಾರಾ? ಬೆಳಗಾವಿ ಜಿಲ್ಲಾ ರಾಜಕಾರಣದಲ್ಲಿ ಸವದಿಗೆ ಒಳ್ಳೆಯ ದಿನಗಳು ಬರುತ್ತವಾ ಕಾದು ನೋಡಬೇಕಿದೆ.











