ಚಾಮರಾಜನಗರ: 2021ರಲ್ಲಿ ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಚಾಮರಾಜನಗರ (Chamarajanagar) ಜಿಲ್ಲಾಸ್ಪತ್ರೆಯಲ್ಲಿ ಸಂಭವಿಸಿದ್ದ ಭೀಕರ ಆಕ್ಸಿಜನ್ ದುರಂತ ಪ್ರಕರಣದ ಸಂತ್ರಸ್ತ ಕುಟುಂಬಗಳಿಗೆ ಕೊನೆಗೂ ನ್ಯಾಯ ಸಿಕ್ಕಂತಾಗಿದೆ. ಆಕ್ಸಿಜನ್ ಕೊರತೆಯಿಂದ ಮೃತಪಟ್ಟ 36 ರೋಗಿಗಳ ಕುಟುಂಬದ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಜನವರಿ 26ರ ಗಣರಾಜ್ಯೋತ್ಸವದ ದಿನವೇ ನೇಮಕಾತಿ ಆದೇಶಗಳನ್ನು ವಿತರಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ. ವೆಂಕಟೇಶ್(K. Venkatesh) ತಿಳಿಸಿದ್ದಾರೆ.

ಚಾಮರಾಜನಗರದಲ್ಲಿ ಮಾತನಾಡಿದ ಸಚಿವ ಕೆ. ವೆಂಕಟೇಶ್, ʼಆಕ್ಸಿಜನ್ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ನ್ಯಾಯ ಒದಗಿಸುವುದು ಸರ್ಕಾರದ ನೈತಿಕ ಹೊಣೆ. ಸರ್ಕಾರ ನೀಡಿದ್ದ ಭರವಸೆಯನ್ನು ಈಡೇರಿಸುವ ನಿಟ್ಟಿನಲ್ಲಿ, ಸಂತ್ರಸ್ತ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ. ಗಣರಾಜ್ಯೋತ್ಸವದಂದು ಅಧಿಕೃತವಾಗಿ ನೇಮಕಾತಿ ಆದೇಶ ವಿತರಿಸಲಾಗುವುದುʼ ಎಂದು ಸ್ಪಷ್ಟಪಡಿಸಿದರು.

2021ರ ಮೇ 3ರಂದು, ಕೋವಿಡ್ ಸೋಂಕಿನ ತೀವ್ರತೆ ಹೆಚ್ಚಿದ್ದ ಸಂದರ್ಭದಲ್ಲಿ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸರಬರಾಜು ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದ ಚಿಕಿತ್ಸೆ ಪಡೆಯುತ್ತಿದ್ದ 36 ಕೋವಿಡ್ ರೋಗಿಗಳು ಕೆಲವೇ ಗಂಟೆಗಳ ಅಂತರದಲ್ಲಿ ಸಾವನ್ನಪ್ಪಿದ್ದರು. ಈ ಘಟನೆ ರಾಜ್ಯವಷ್ಟೇ ಅಲ್ಲದೆ ದೇಶಾದ್ಯಂತ ತೀವ್ರ ಆಕ್ರೋಶ ಮತ್ತು ದುಃಖಕ್ಕೆ ಕಾರಣವಾಗಿತ್ತು. ಆ ಸಮಯದಲ್ಲಿ ಆರೋಗ್ಯ ವ್ಯವಸ್ಥೆಯ ನಿರ್ಲಕ್ಷ್ಯ, ಆಕ್ಸಿಜನ್ ಸರಬರಾಜು ವ್ಯವಸ್ಥೆಯ ವೈಫಲ್ಯ ಮತ್ತು ಆಡಳಿತಾತ್ಮಕ ಲೋಪಗಳ ಕುರಿತು ಗಂಭೀರ ಆರೋಪಗಳು ಕೇಳಿಬಂದಿದ್ದವು.

ದುರಂತದ ಬಳಿಕ ಸಂತ್ರಸ್ತ ಕುಟುಂಬಗಳು ನ್ಯಾಯಕ್ಕಾಗಿ ಸತತ ನಾಲ್ಕು ವರ್ಷಗಳ ಕಾಲ ಹೋರಾಟ ನಡೆಸಿದ್ದವು. ಪರಿಹಾರ, ಉದ್ಯೋಗ ಮತ್ತು ಹೊಣೆಗಾರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರ್ಕಾರಗಳ ಮೇಲೆ ಒತ್ತಡ ಹೇರಲಾಗಿತ್ತು. ವಿವಿಧ ಹೋರಾಟಗಳು, ಮನವಿಗಳು ಮತ್ತು ಪ್ರತಿಭಟನೆಗಳ ನಂತರ ಇದೀಗ ಸರ್ಕಾರಿ ಉದ್ಯೋಗ ಘೋಷಣೆಯಾಗಿದೆ.











