ಚೆನ್ನೈ: ಯಾರ ಜೀವನದಲ್ಲಿ ಯಾರು, ಯಾವಾಗ ಹೀರೋಗಳಾಗುತ್ತಾರೆ ಎಂದು ಹೇಳುವುದು ಕಷ್ಟ. ಅದೇ ರೀತಿ ಡೆಲಿವರಿ ಬಾಯ್‌ಯೊಬ್ಬ ತನ್ನ ಸಮಯಪ್ರಜ್ಞೆಯಿಂದ ಮಹಿಳೆಯೊಬ್ಬರ ಪ್ರಾಣ ಉಳಿಸಿ ಆಕೆಗೆ ಮಾತ್ರವಲ್ಲ, ಸಮಾಜಕ್ಕೆ ಹೀರೋ ಆಗಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.

ಘಟನೆಯ ಹಿನ್ನೆಲೆ ಏನು..?
ಚೆನ್ನೈನಲ್ಲಿ ತಡರಾತ್ರಿ ಮಹಿಳೆಯೊಬ್ಬರು ಬ್ಲಿಂಕಿಟ್ ಮೂಲಕ ಮೂರು ಪ್ಯಾಕೆಟ್ ಇಲಿ ಪಾಷಾಣ ಆರ್ಡರ್ ಮಾಡಿದ್ದರು. ಆ ಸಮಯದಲ್ಲಿ ಸಾಮಾನ್ಯವಾಗಿ ಯಾರೂ ಪಾಷಾಣ ಆರ್ಡರ್ ಮಾಡುವುದಿಲ್ಲ. ಅದರಲ್ಲೂ ಮೂರು ಪ್ಯಾಕೆಟ್ ಪಾಷಾಣ ಆರ್ಡರ್ ಮಾಡಿರುವುದು ಡೆಲಿವರಿ ಬಾಯ್‌ಗೆ ಅನುಮಾನ ಮೂಡಿಸಿದೆ. ಆರ್ಡರ್ ಡೆಲಿವರಿ ನೀಡಲು ಮಹಿಳೆಯ ಮನೆಗೆ ಹೋದಾಗ, ಅಲ್ಲಿನ ವಾತಾವರಣ ಮತ್ತು ಮಹಿಳೆಯ ಸ್ಥಿತಿ ನೋಡಿ ಅವರಿಗೆ ಏನೋ ಅಸಹಜವಾಗಿ ಅನಿಸಿತು. ಮಹಿಳೆ ತುಂಬಾ ಅಳುತ್ತಿದ್ದುದನ್ನು ಕಂಡು, ಆತ್ಮಹತ್ಯೆಯ ಉದ್ದೇಶದಿಂದಲೇ ಪಾಷಾಣ ಆರ್ಡರ್ ಮಾಡಿರಬಹುದೆಂಬ ಶಂಕೆ ಡೆಲಿವರಿ ಬಾಯ್‌ಗೆ ದಟ್ಟವಾಯಿತು.

ಬಳಿಕ ಮಹಿಳೆಯೊಂದಿಗೆ ಮಾತನಾಡಿದ ಡೆಲಿವರಿ ಬಾಯ್ ನೀವು ಇದನ್ನು ಆತ್ಮಹತ್ಯೆ ಮಾಡಿಕೊಳ್ಳಲು ಆರ್ಡರ್ ಮಾಡಿದ್ದೀರಾ?” ಎಂದು ನೇರವಾಗಿ ಪ್ರಶ್ನಿಸಿದರು. “ನಿಜಕ್ಕೂ ಮನೆಯಲ್ಲಿ ಇಲಿ ಸಮಸ್ಯೆ ಇದ್ದರೆ ಸಂಜೆಯಲ್ಲೇ ಅಥವಾ ಬೆಳಗ್ಗೆ ಆರ್ಡರ್ ಮಾಡಬಹುದಿತ್ತು. ಇಷ್ಟು ತಡರಾತ್ರಿ ಯಾಕೆ? ಎಂದು ಕೇಳಿದ್ದಾರೆ. ಬಳಿಕ ಆರ್ಡರ್ ಅನ್ನು ಕ್ಯಾನ್ಸಲ್ ಮಾಡಿಸಿ, ಯಾವುದೇ ಸಮಸ್ಯೆಯಿದ್ದರೂ ಆತ್ಮಹತ್ಯೆ ಮಾರ್ಗವಲ್ಲ ಎಂದು ಮಹಿಳೆಗೆ ಧೈರ್ಯ ತುಂಬಿ ವಾಪಸ್ ಆಗಿದ್ದಾರೆ. ಈ ವಿಚಾರವನ್ನು ಡೆಲಿವರಿ ಬಾಯ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದ್ದು, ಡೆಲಿವರಿ ಬಾಯ್ ಅವರ ಮಾನವೀಯತೆ ಮತ್ತು ಜವಾಬ್ದಾರಿಯುತ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಘಟನೆ ನಿಜ ಜೀವನದ ಹೀರೋಗಳು ಯಾವಾಗ, ಯಾವ ರೂಪದಲ್ಲಿ ಬರುವರು ಎಂಬುದಕ್ಕೆ ಉತ್ತಮ ಉದಾಹರಣೆಯಾಗಿದೆ ಎಂದು ನೆಟ್ಟಿಗರು ಡೆಲಿವರಿ ಬಾಯ್ ಕಾರ್ಯವನ್ನು ಶ್ಲಾಘಿಸಿದ್ದಾರೆ.












