ಬೆಂಗಳೂರು : ಬಡತನದಲ್ಲಿ ಹುಟ್ಟಿ ಜೀವನದಲ್ಲಿ ಹೋರಾಡುವ ಮೂಲಕ ಬದುಕಿಗೊಂದು ಅರ್ಥಕಲ್ಪಿಸಿಕೊಟ್ಟು. ಹೆತ್ತವರಿಗೆ ನೆರವಾಗಬೇಕೆಂದು ಅದೆಷ್ಟೋ ಯುವ ಮನಸ್ಸುಗಳು ಕನಸು ಕಟ್ಟಿಕೊಂಡಿರುತ್ತವೆ. ಸಮಾಜದಲ್ಲಿ ಇತರರಂತೆ ಗೌರವ, ಘನತೆಯಿಂದ ಬಾಳಿ, ಆದರ್ಶ ಜೀವನ ನಮ್ಮದಾಗಿರಬೇಕೆಂದು ಸಾಕಷ್ಟು ಯುವಕರು ಗುರಿಗಳನ್ನು ಹೊಂದಿರುತ್ತಾರೆ. ಆದರೆ ಈ ಕನಸು, ಗುರಿಗಳ ಬೆನ್ನತ್ತಿ ಊರು ಬಿಟ್ಟು ನನ್ನವರು, ತನ್ನವರು ಎನ್ನುವುದನ್ನು ತೊರೆದು ಬಾಳ ಬಂಡಿ ಸಾಗಿಸಲು ದೂರದ ಊರಿಗೆ ವಲಸೆ ಬಂದವರು ಹೇಳದೇ ಕೇಳದೆಯೇ ಕಾಲನ ಕರೆಗೆ ಓಗೊಟ್ಟು ಬದುಕಿನ ಪಯಣ ಮುಗಿಸಿದ್ದಾರೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ಮರಕುಂಬಿಯಲ್ಲಿರುವ ಇನಾಮದಾರ್ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಸ್ಫೋಟವಾಗಿ ದಾರುಣ ಅಂತ್ಯಕಂಡ ಯುವ ಕಾರ್ಮಿಕರ ದುರಂತ ಕಥೆಯಾಗಿದೆ. ಕಳೆದ ಜನವರಿ 7ರಂದು ಬಾಯ್ಲರ್‌ನ ವಾಲ್ವ್ ರಿಪೇರಿ ಕಾರ್ಯ ಮಾಡುತ್ತಿದ್ದಾಗ ಏಕಾಏಕಿ ಬಾಯ್ಲರ್‌ನಲ್ಲಿ ಕಾದು ಕೆಂಡವಾಗಿದ್ದ ಕಬ್ಬಿನ ಹಾಲು ಹೊರಕ್ಕೆ ಸಿಡಿದು 8 ಜನ ಕಾರ್ಮಿಕರಲ್ಲಿ ಇಬ್ಬರು ಅದೇ ದಿನ ಅಸುನೀಗಿದ್ದರು. ಇನ್ನುಳಿದ ಆರು ಜನರನ್ನು ಬೆಳಗಾವಿ ಹಾಗೂ ಬೈಲಹೊಂಗಲದಲ್ಲಿ ಆಸ್ಪತ್ರೆಗಳಿಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.
ಆದರೆ ಕುದಿಯುವ ಕಬ್ಬಿನ ಹಾಲು ಬಿದ್ದ ಪರಿಣಾಮ ದೇಹವು ಸಂಪೂರ್ಣ ಸುಟ್ಟು ಹೋಗಿತ್ತು. ಹೀಗಾಗಿ ಡಿಸೆಂಬರ್ 8ರಂದು ಇನ್ನುಳಿದ 6ಜನ ಕಾರ್ಮಿಕರು ತಮ್ಮ ಕೊನೆಯುಸಿರೆಳೆದಿದ್ದಾರೆ. ಅದರಲ್ಲಿ ಬಲಿಯಾದ ಒಬ್ಬೊಬ್ಬ ಕಾರ್ಮಿಕನ ಹಿಂದೆ ಒಂದೊಂದು ಕಣ್ಣೀರ ಕಥೆಗಳಿರುವುದು ನಿಜಕ್ಕೂ ಎಂತವರ ಕಣ್ಣಲ್ಲೂ ನೀರು ತರಿಸುತ್ತದೆ.
ಇನ್ನೂ ಮೃತರಾದ ಕಾರ್ಮಿಕರನ್ನು 45 ವರ್ಷದ ಅಕ್ಷಯ್ ಚೋಪಡೆ, 31 ವರ್ಷದ ದೀಪಕ್ ಮುನ್ನೋಳ್ಳಿ, 25 ವರ್ಷದ ಸುದರ್ಶನ ಬನೋಶಿ. 27 ವರ್ಷದ ಭರತೇಶ್ ಸಾರವಾಡೆ, 26 ವರ್ಷದ ಗುರು ತಮ್ಮನ್ನವರ್ ಹಾಗೂ 26 ವರ್ಷದ ಮಂಜುನಾಥ ಕಾಜಗಾರ್ ಬಾಯ್ಲರ್ ದುರಂತದಲ್ಲಿ ಬದುಕಿನ ಪಯಣವನ್ನೇ ಮುಗಿಸಿದ್ದಾರೆ.
ಅಲ್ಲದೆ ಗೋಕಾಕ್ ತಾಲೂಕಿನ ಗೊಡಚಿನಮಲ್ಕಿ ಗ್ರಾಮದ ಭರತೇಶ ಸಾರವಾಡಿ, ಬಾಗಲಕೋಟ ಜಿಲ್ಲೆಯ ಮರೆಗುದ್ದಿ ಗ್ರಾಮದ ಗುರುಪಾದಪ್ಪ ತಮ್ಮನ್ನವರ್, ಅಥಣಿ ಪಟ್ಟಣದ ನಿವಾಸಿ ಮಂಜುನಾಥ್ ತೇರದಾಳ ಕೂಡ ಈ ದುರಂತದಲ್ಲಿ ದಾರುಣ ಅಂತ್ಯಕಂಡಿರುವುದು ವಿಪರ್ಯಾಸದ ಸಂಗತಿಯಾಗಿದೆ.
ಮೃತ ಕಾರ್ಮಿಕ 31 ವರ್ಷದ ಮಂಜುನಾಥ್ ತೇರದಾಳ ಸಾವು ಎಲ್ಲರಿಗೂ ಮರುಕ ಹುಟ್ಟಿಸುವಂತೆ ಮಾಡಿದೆ. ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದ ಮಂಜುನಾಥ್ ಪತ್ನಿ ಶೃತಿ ತುಂಬು ಗರ್ಭಿಣಿಯಾಗಿದ್ದು, ಇನ್ನೇನು ಜನವರಿ 16ರಂದು ಡೆಲಿವರಿಗೆ ವೈದ್ಯರು ದಿನಾಂಕ ನಿಗದಿ ಪಡಿಸಿದ್ದರು. ಆದರೆ ತಂದೆಯಾಗುವ ಕನಸು ಕಂಡಿದ್ದ ಮಂಜುನಾಥನ ಬಾಳಲ್ಲಿ ವಿಧಿ ಆಟ ಆಡಿದ್ದು, ಮಗುವಿನ ಮುಖ ನೋಡಬೇಕಿದ್ದ ಯುವಕ ಅನ್ಯಾಯವಾಗಿ ಜೀವ ಕಳೆದುಕೊಳ್ಳುವಂತಾಗಿದೆ.
ಕಾರ್ಖಾನೆಯ ನಿರ್ಲಕ್ಷ್ಯಕ್ಕೆ ಅಮಾಯಕ 8 ಜೀವಗಳು ಬಲಿಯಾಗಿದ್ದರೂ ಕೂಡ ಕಾರ್ಖಾನೆಯ ಆಡಳಿತ ಮಂಡಳಿ ಬೇಜವಾಬ್ದಾರಿ ನಡೆ ಅನುಸರಿಸಿದೆ. ಮುಖಂಡರಾದ ವಿಕ್ರಂ ಇನಾಮದಾರ್, ಪ್ರಭಾಕರ್ ಕೋರೆ, ವಿಜಯ್ ಮೆಟಗುಡ್ಡ ಮೂವರ ಸಹಭಾಗಿತ್ವದಲ್ಲಿ ಈ ಕಾರ್ಖಾನೆ ನಡೆಯುತ್ತಿದ್ದು, ಆದರೆ ಈ ನಾಯಕರ ಕಾರ್ಖಾನೆಯನ್ನು ನಂಬಿ ಕೆಲಸಕ್ಕೆ ಸೇರಿದ್ದ ಕಾರ್ಮಿಕರ ಕುಟುಂಬಗಳು ಅತಂತ್ರವಾಗಿವೆ. ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ನೀಡುವ ವಿಚಾರದಲ್ಲಿ ಮೌನ ಮುರಿಯದಿರುವ ಕಾರ್ಖಾನೆಯ ನಡೆಗೆ ಜಿಲ್ಲೆಯಾದ್ಯಂತ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಈ ದುರಂತದಿಂದ ದುಡಿಯುವ ಮಕ್ಕಳನ್ನೇ ನಂಬಿದ್ದ ಬಡ ಕುಟುಂಬಗಳು ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ರಾಜ್ಯ ಸರ್ಕಾರ ಹಾಗೂ ಸಂಬಂಧಪಟ್ಟವರು ಕಾರ್ಮಿಕರ ಕುಟುಂಬಗಳಿಗೆ ತಲಾ 1 ಕೋಟಿ ರೂಪಾಯಿಗಳಷ್ಟು ಪರಿಹಾರ ವಿತರಣೆ ಮಾಡಬೇಕೆಂದು ಒತ್ತಾಯಗಳು ಹೆಚ್ಚಿವೆ. ಇದೇ ವಿಚಾರಕ್ಕೆ ಕಾರ್ಖಾನೆಯ ಆಡಳಿತ ಮಂಡಳಿಯು ಇಬ್ಬಗೆಯ ನೀತಿಯನ್ನು ಅನುಸರಿಸಿ ಕೇವಲ ಒಂದು ಕುಟುಂಬಕ್ಕೆ 18 ಲಕ್ಷ ರೂಪಾಯಿಗಳನ್ನು ನೀಡುವ ಬಾಯಿ ಮಾತು ಆಡಿದೆ.
ಈ ಕೂಡಲೇ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ಹಾಗೂ ಕಾರ್ಖಾನೆಗಳು ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕಿದೆ. ಈ ಮೂಲಕ ತಮ್ಮವರಿಲ್ಲದೆ ಬೀದಿ ಪಾಲಾಗಿರುವ ಕುಟುಂಬಗಳ ಬೆನ್ನಿಗೆ ನಿಂತು ಆತ್ಮಸ್ಥೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಬೇಕಿದೆ.












