“ ಹೊಸತಾಗಿ ನಿರ್ಮಿಸಲಾದ ಬಂಗಲೆಯಿಂದ ಮೊದಲು ಹೊರಹಾಕಲ್ಪಡುವುದು ಅದರ ಕಾವಲುಗಾರ ” ಎಂಬ ಒಂದು ನಾಣ್ಣುಡಿಯನ್ನು ಆಂಗ್ಲ ಭಾಷೆಯ ಪ್ರಬಂಧ/ಕಥೆಯಲ್ಲಿ ಓದಿದ ನೆನಪು. ಇದು ನೆಲದ ವಾಸ್ತವ ಎನ್ನುವುದನ್ನು ಅರಿಯಲು ನಮ್ಮ ಮುಂದೆ ಹಿಮಾಲಯದಷ್ಟು ನಿದರ್ಶನಗಳಿವೆ. ಮಾನವ ಸಮಾಜದಲ್ಲಿ ಸಾಮಾಜಿಕ ಸ್ಥಾನಮಾನಕ್ಕೂ, ಆರ್ಥಿಕ ಅಂತಸ್ತಿಗೂ ನೇರ ಸಂಬಂಧ ಇರುವುದು ಚಾರಿತ್ರಿಕ ವಾಸ್ತವ. ಆರ್ಥಿಕ ಪ್ರಗತಿಯನ್ನು ನಗರೀಕರಣದ ಮೂಲಕ, ಅತ್ಯಾಧುನಿಕ ಸಾರಿಗೆ, ಸಂಚಾರ, ಮೂಲ ಸೌಕರ್ಯಗಳ ಮಸೂರದಿಂದಲೇ ನೋಡಲಾಗುತ್ತಿರುವ ಸಮಾಜದಲ್ಲಿ ನಗರೀಕರಣ ಏಕಾಂಗಿ ವಿದ್ಯಮಾನವಾಗುವುದಿಲ್ಲ. ಅದರೊಂದಿಗೆ ನಗರ ಸೌಂದರ್ಯೀಕರಣವೂ ಸಾಗುತ್ತದೆ. ಒಂದು ಪ್ರದೇಶದ ಸಾಮಾಜಿಕ-ಆರ್ಥಿಕ ಅಭಿವೃದ್ಧಿಯ ಪ್ರಮುಖ ಫಲಾನುಭವಿಗಳು, ಅಂದರೆ ಹಿತವಲಯದ/ಮಧ್ಯಮ ವರ್ಗದ ಜನರು, ಈ ಸೌಂದರ್ಯೀಕರಣದ ಪ್ರತಿಪಾದಕರಾಗಿರುವುದು ಸಾಮಾನ್ಯ ಸಂಗತಿ.

ಈ ಎರಡೂ ಪ್ರಕ್ರಿಯೆಗಳ ಹಿಂದೆ ಇರುವ ಶ್ರಮಿಕ ವರ್ಗ ಮತ್ತು ಸಣ್ಣ ವ್ಯಾಪಾರಿ ವರ್ಗಗಳು ಸದಾ ಕಾಲವೂ ಕಟ್ಟುವವರಾಗಿಯೇ ಜೀವ ಸವೆಸುತ್ತಾರೆಯೇ ಹೊರತು, ಕಟ್ಟಿದ ಸಮಾಜದಲ್ಲಿ ತಮ್ಮದೇ ಆದ ನೆಲೆಯನ್ನು ಸ್ಥಾಪಿಸಲಾಗುವುದಿಲ್ಲ. ಭಾರತದ ಸಂದರ್ಭದಲ್ಲಿ ಶ್ರೇಣೀಕೃತ ಜಾತಿ ವ್ಯವಸ್ಥೆ ಮತ್ತು ಇತ್ತೀಚಿನ ಬೆಳವಣಿಗೆಯಾದ ಮತೀಯ ವೈರುಧ್ಯ/ವೈಷಮ್ಯಗಳ ಪರಿಣಾಮ, ಆಧುನಿಕ ಕಾಸ್ಮೋಪಾಲಿಟನ್ ಎಂದು ಕರೆಯಲ್ಪಡುವ ನಗರಗಳಲ್ಲೂ ಸಹ ಅಗ್ರಹಾರಗಳು ಮತ್ತು ಪ್ರತ್ಯೇಕತೆಯ ಬೇಲಿಗಳು ಎದ್ದು ಕಾಣುತ್ತವೆ. ಈ ಗೋಡೆಗಳಿಗೆ ʼ ಆಹಾರ ಪದ್ಧತಿ ʼ ಮಾನದಂಡವಾಗುವುದು ಮುಂದುವರೆದ ನಾಗರಿಕತೆಯ ಅನಾಗರಿಕ ಲಕ್ಷಣ. ಇಲ್ಲಿ ಏರ್ಪಡುವ ಮೇಲು-ಕೀಳುಗಳನ್ನು ಸಮಾಜಶಾಸ್ತ್ರೀಯ ನೆಲೆಯಲ್ಲಿ ಛೇದಿಸಿ ನೋಡಿದಾಗ, ನಮ್ಮ ಸಮಾಜದಲ್ಲಿ ಅಂತರ್ಗತವಾಗಿರುವ ಭಿನ್ನಭೇದಗಳನ್ನೂ ಅರ್ಥಮಾಡಿಕೊಳ್ಳಲು ಸಾಧ್ಯ.

ಸುಂದರ ನಗರದ ಕಲ್ಪನೆಯಲ್ಲಿ
ಸಮಾಜಶಾಸ್ತ್ರೀಯ ಚೌಕಟ್ಟಿನಲ್ಲಿ ನೋಡಿದಾಗ ಸ್ವಚ್ಛತೆ ಮತ್ತು ಸೌಂದರ್ಯೀಕರಣ ಎರಡೂ ಕ್ರಿಯೆಗಳು ತಮ್ಮದೇ ಆದ ಬೌದ್ಧಿಕ ಮನಸ್ಥಿತಿಯ ನೆಲೆಯಲ್ಲಿ ರೂಪುಗೊಳ್ಳುವುದನ್ನು ಗಮನಿಸಬಹುದು. ಆರೋಗ್ಯ-ನೈರ್ಮಲ್ಯದ ದೃಷ್ಟಿಯಿಂದ ಸ್ವಚ್ಛತೆ ಕಾಪಾಡಿಕೊಳ್ಳುವುದು ಮಾನವ ಸಮಾಜಕ್ಕೆ ಅವಶ್ಯವೇ ಆದರೂ, ಭಾರತೀಯ ಸಮಾಜದ ಎಲ್ಲ ಸ್ತರಗಳಲ್ಲೂ ಈ ಅವಶ್ಯಕತೆಯೇ ಮೇಲರಿಮೆ ಮತ್ತು ಪ್ರತ್ಯೇಕತೆಯನ್ನು ಸೃಷ್ಟಿಸಿರುವುದು ವಾಸ್ತವ. ಸ್ವಚ್ಛತೆಯ ಕೊರತೆಯೇ ಇಡೀ ಸಮಾಜ/ಸಮುದಾಯಗಳನ್ನು ದೂರ ಇರಿಸಿರುವುದು ಒಂದೆಡೆಯಾದರೆ, ವ್ಯಕ್ಗಿಗತ ನೆಲೆಯಲ್ಲಿ ಅಂತರ ಕಾಪಾಡಿಕೊಳ್ಳುವ ಮನೋಭಾವವನ್ನೂ ಸೃಷ್ಟಿಸಿದೆ. ಮನುಷ್ಯ ಸಮಾಜದೊಳಗಿನ ಸಾಮೀಪ್ಯ ಮತ್ತು ಸಾಂಗತ್ಯಗಳನ್ನು ನಿರ್ಧರಿಸುವ ಮಾಪಕಗಳಾಗಿವೆ. ಆಧುನಿಕ ಅಗ್ರಹಾರ-ಕೊಳೆಗೇರಿಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಇದು ಸ್ಪಷ್ಟವಾಗುತ್ತದೆ.

ಇದರ ಮತ್ತೊಂದು ಆಯಾಮವನ್ನು ಆಧುನೀಕರಣ-ನಗರೀಕರಣ ಮತ್ತು ನಗರ ಬೆಳವಣಿಗೆಯ ಸೌಂದರ್ಯೀಕರಣ ಪ್ರಕ್ರಿಯೆಗಳಲ್ಲೂ ಗುರುತಿಸಬಹುದು. ಈ ಸೌಂದರ್ಯೋಪಾಸನೆಯ ಹಾದಿಯಲ್ಲಿ ನಗರಗಳ ಸೌಂದರ್ಯೀಕರಣ (Beautification) ಸಮಾಜದ ಮೇಲ್ವರ್ಗಗಳ, ಮೇಲ್ಪದರ ಸಮುದಾಯಗಳ (Elite communities) ಆಯ್ಕೆಯಾದಾಗ ಅಲ್ಲಿ ಆ ಹಿತವಲಯದ ಜೀವನಶೈಲಿಗೆ ಹೊಂದುವಂತಹ ವಾತಾವರಣ, ಪರಿಸರ, ಸೌಕರ್ಯಗಳು ಹಾಗೂ ಸಾರ್ವಜನಿಕ ಬಳಕೆಯ ಸ್ಥಳಗಳು ಅಪೇಕ್ಷಣೀಯವಾಗುತ್ತವೆ. ಇಲ್ಲಿ ಈ ವರ್ಗದ ಆಶೋತ್ತರಗಳೇ ನಗರಾಭಿವೃದ್ಧಿಯ ಮಾನದಂಡಗಳಾಗಿ ಪರಿಣಮಿಸುವುದರಿಂದ ಕೆಳಸ್ತರದ ಸಮಾಜಗಳನ್ನು, ವೃತ್ತಿ ಕಸುಬುಗಳನ್ನು ನಿಕೃಷ್ಟವಾಗಿ ನೋಡುವ ಶ್ರೇಣೀಕೃತ ಜಾತ್ಯಸ್ಥ ಮನಸ್ಥಿತಿ ಪ್ರಧಾನವಾಗಿ ಕಾಣುತ್ತದೆ. ನವ ಉದಾರವಾದಿ ಆರ್ಥಿಕತೆಯಲ್ಲಿ ನಗರೀಕರಣ ಮತ್ತು ಸೌಂದರ್ಯೀಕರಣ ಎರಡೂ ಸಹ ಒಟ್ಟೊಟ್ಟಿಗೇ ಸಾಗುತ್ತವೆ.

ವಿಪರ್ಯಾಸವೆಂದರೆ ಈ ಸ್ವಾಗತಾರ್ಹ ಕ್ರಮದ ನಡುವೆ ಗುರಿಯಾಗುತ್ತಿರುವುದು ರಸ್ತೆ ಬದಿಯ ಮತ್ತು ತಳ್ಳುಗಾಡಿಯ ಸಣ್ಣ ವ್ಯಾಪಾರಿಗಳು. ನಗರೀಕರಣದ ಒಂದು ಭಾಗವಾಗಿ ರಸ್ತೆ ಅಗಲೀಕರಣ ಈಗಾಗಲೇ ಲಕ್ಷಾಂತರ ಸಣ್ಣ ಪೆಟ್ಟಿಗೆ ಅಂಗಡಿಗಳನ್ನು ಬಲಿ ಪಡೆದಿದ್ದು, ಸಾವಿರಾರು ಕುಟುಂಬಗಳು ತಮ್ಮ ಜೀವನಾಧಾರವನ್ನೇ ಕಳೆದುಕೊಂಡಿವೆ. ಹಿತವಲಯದ ಜನತೆಗೆ ವಾಹನ ಬಳಕೆ ಅನಿವಾರ್ಯ ಎಂಬ ಭಾವನೆ ದಟ್ಟವಾಗುತ್ತಿರುವಂತೆಯೇ, ಈ ವಾಹನಗಳ ಸಂಚಾರಕ್ಕೆ ಸೂಕ್ತವಾದ ಅಗಲ ರಸ್ತೆಗಳೂ ಅನಿವಾರ್ಯವಾದವು. ಈಗ ರಾಜಕೀಯ ಅಸ್ತ್ರವಾಗುತ್ತಿರುವ ʼಬುಲ್ಡೋಜರ್ʼ ಸಂಸ್ಕೃತಿಯ ಮೂಲವನ್ನು ಇಲ್ಲಿ ಕಾಣಬಹುದು. ಬೆಟ್ಟಗುಡ್ಡ ಪ್ರದೇಶಗಳನ್ನು ಸಮತಟ್ಟು ಮಾಡಲು ಬಳಕೆಯಾಗುತ್ತಿದ್ದ ʼಜೆಸಿಬಿʼ ಎಂಬ ರಕ್ಕಸ ಯಂತ್ರಕ್ಕೆ ನಗರ ಪ್ರವೇಶದ ಅವಕಾಶ ಕಲ್ಪಿಸಿರುವುದೇ ಈ ಆಧುನಿಕ ನಗರೀಕರಣ ಪ್ರಕ್ರಿಯೆ.

ಬೀದಿ ವ್ಯಾಪಾರಿಗಳ ಜಗತ್ತಿನಲ್ಲಿ
ಈ ಹಿನ್ನೆಲೆಯಲ್ಲೇ ಎಲ್ಲ ಪ್ರಮುಖ ನಗರಗಳಲ್ಲಿ ರಸ್ತೆಬದಿ ವ್ಯಾಪಾರಿಗಳು ಎದುರಿಸುತ್ತಿರುವ ಆತಂಕಗಳನ್ನು ಗಮನಿಸಬೇಕಿದೆ. ಇತ್ತೀಚಿನ ದಿನಗಳಲ್ಲಿ ಮೈಸೂರಿನಲ್ಲೂ ಸಹ ನಾಗರಿಕ ಸಮಾಜದ ಕೆಲವು ಸಂಘಟನೆಗಳು ರಸ್ತೆ ಬದಿ ವ್ಯಾಪಾರಿಗಳನ್ನು ಸಮಸ್ಯಾತ್ಮಕ ನೆಲೆಯಲ್ಲಿ ನೋಡುತ್ತಿರುವುದು ವಿಪರ್ಯಾಸ. 2014ರಲ್ಲಿ ಜಾರಿಗೊಳಿಸಲಾದ ರಸ್ತೆಬದಿ ವ್ಯಾಪಾರಿಗಳ ಕಾಯ್ದೆ 2014, ಬೀದಿಬದಿ ವ್ಯಾಪಾರಿಗಳಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕಾನೂನಾತ್ಮಕ ನಿಬಂಧನೆಗಳನ್ನು ವಿಧಿಸುತ್ತದೆ. ಈ ವ್ಯಾಪಾರಿಗಳನ್ನು ಗುರುತಿಸಿ, ವ್ಯಾಪಾರ ನಡೆಸುವ ಪ್ರಮಾಣ ಪತ್ರಗಳನ್ನು ನೀಡಲು ಆದೇಶಿಸುತ್ತದೆ. ಹಾಗೆಯೇ ಅಧಿಕಾರಿಗಳಿಂದ ಕಿರುಕುಳ ಮತ್ತು ಏಕಾಏಕಿ ಎತ್ತಂಗಡಿ ಮಾಡುವುದನ್ನೂ ನಿರ್ಬಂಧಿಸುತ್ತದೆ. ಇಂತಹ ವ್ಯಾಪಾರಿಗಳಿಗೆ ಪ್ರತ್ಯೇಕವಾದ ಜಾಗವನ್ನು ಗುರುತಿಸುವ ಮೂಲಕ, ಸ್ಥಳೀಯ ಅಧಿಕಾರಿಗಳ ಮತ್ತು ಪೊಲೀಸರ ಕಿರುಕುಳದಿಂದ ತಪ್ಪಿಸುವ ನಿಯಮಗಳನ್ನೂ ಸಹ ಈ ಕಾಯ್ದೆ ಒಳಗೊಂಡಿದೆ.

ಈ ಕಾಯ್ದೆಯನ್ನು ಮತ್ತಷ್ಟು ಮಾನವೀಯಗೊಳಿಸಿರುವುದು ಸುಪ್ರೀಂಕೋರ್ಟ್ ನಿರ್ದೇಶನಗಳು. ಸಂಬಂಧಿಸಿದ ಮೊಕದ್ದಮೆಯೊಂದರಲ್ಲಿ ಸುಪ್ರೀಂಕೋರ್ಟ್, ಸಂವಿಧಾನದ ಅನುಚ್ಛೇದ 19 (1) (ಜಿ) ಅಡಿಯಲ್ಲಿ ಬೀದಿ ವ್ಯಾಪಾರವನ್ನು ಜೀವನೋಪಾಯದ ಮೂಲ ಹಕ್ಕು ಎಂದೇ ನಿರ್ವಚಿಸಿದೆ. ಜನಸಾಮಾನ್ಯರ ಕೈಗೆಟುಕುವ ಸರಕುಗಳನ್ನು, ಪದಾರ್ಥಗಳನ್ನು ಒದಗಿಸುವಲ್ಲಿ ಈ ವ್ಯಾಪಾರಿಗಳ ಪ್ರಾಮುಖ್ಯತೆಯನ್ನು ಗುರುತಿಸಿದ ನ್ಯಾಯಾಲಯವು , ಸಾರ್ವಜನಿಕ ಸ್ಥಳಗಳನ್ನು ಬಳಸುವ ನಿಟ್ಟಿನಲ್ಲಿ ಸಮತೋಲನದ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸುತ್ತದೆ. ಏಕಾಏಕಿ ಎತ್ತಂಗಡಿ ಮಾಡುವ ಅಥವಾ ಅನಿರ್ಬಂಧಿತ ನಿಯಮಗಳ ಮೂಲಕ ಉಚ್ಚಾಟಿಸುವ ಕ್ರಮಗಳ ವಿರುದ್ಧವೂ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ. ಆದರೆ ವಾಸ್ತವ ಪರಿಸ್ಥಿತಿಯನ್ನು ಗಮನಿಸಿದಾಗ, ನ್ಯಾಯಾಲಯದ ಈ ನಿರ್ದೇಶನಗಳನ್ನು ಪಾಲಿಸದಿರುವುದು ಎದ್ದು ಕಾಣುತ್ತದೆ.

ಬೀದಿ ವ್ಯಾಪಾರಿಗಳ ನಿತ್ಯ ಸಂಕಟಗಳು
ಇತ್ತೀಚಿನ ಉದಾಹರಣೆ ಮೈಸೂರಿನಲ್ಲೇ ಇದೆ. ಮೈಸೂರು ಅರಮನೆಯ ಸಮೀಪ ವ್ಯಾಪಾರಿಯೊಬ್ಬ ಬಲೂನಿಗೆ ಹೀಲಿಯಂ ತುಂಬುವ ಸಂದರ್ಭದಲ್ಲಿ ಸ್ಫೋಟಗೊಂಡು ಇಬ್ಬರು ಮೃತರಾಗಿದ್ದು, ಹಲವರು ಗಾಯಗೊಂಡಿದ್ದು ಗಂಭೀರ ಪ್ರಕರಣವಾಗಿ ದಾಖಲಾಗಿದೆ. ಎನ್‌ಐಎ ತನಿಖೆಯೂ ಜಾರಿಯಲ್ಲಿದೆ. ಈ ಘಟನೆ ನಡೆದ ದಿನವೇ ರಾತ್ರೋರಾತ್ರಿ ಅರಮನೆ ಸುತ್ತಲೂ ವ್ಯಾಪಾರ ಮಾಡುತ್ತಿದ್ದ ಎಲ್ಲ ಮಳಿಗೆಗಳನ್ನು, ಬೀದಿ ವ್ಯಾಪಾರಿಗಳನ್ನೂ ನಗರ ಪಾಲಿಕೆ ಎತ್ತಂಗಡಿ ಮಾಡಿದೆ. 196 ವ್ಯಾಪಾರಿಗಳು ಈ ಹಠಾತ್ ಕ್ರಮದಿಂದ ಏಕಾಏಕಿ ಬೀದಿಪಾಲಾಗುವಂತಾಗಿದೆ. ಈ ಅವಸರದ ಮತ್ತು ಅತಿರೇಕದ ಕ್ರಮದ ಔಚಿತ್ಯವನ್ನು ಬೀದಿ ಬದಿ ವ್ಯಾಪಾರಿಗಳ ಸಂಘ ಮಾತ್ರವೇ ಪ್ರಶ್ನಿಸಿದ್ದು, ಉಳಿದಂತೆ ನಾಗರಿಕ ಸಂಘಟನೆಗಳು ಬಹುತೇಕ ಮೌನ ವಹಿಸಿವೆ.

ಮೈಸೂರಿನ ಸಯ್ಯಾಜಿ ರಾವ್ ರಸ್ತೆ ಮತ್ತಿತರ ಬಡಾವಣೆಗಳ ಮುಖ್ಯ ರಸ್ಥೆಗಳಲ್ಲಿ ತಮ್ಮ ನಿತ್ಯ ವ್ಯಾಪಾರ ನಡೆಸುವ ತಳ್ಳುಗಾಡಿಗಳು ಮತ್ತು ಬೀದಿ ವ್ಯಾಪಾರಿಗಳನ್ನು ತೆರವುಗೊಳಿಸುವಂತೆ ಕೆಲವು ನಾಗರಿಕ ಸಂಸ್ಥೆಗಳು, ವ್ಯಕ್ತಿಗಳೂ ಸಹ ಆಗ್ರಹಿಸುತ್ತಿರುವುದನ್ನು ಗಮನಿಸಬಹುದು. ಈ ವ್ಯಾಪಾರಿಗಳು ಇರುವುದರಿಂದಲೇ ರಸ್ತೆ ಅಪಘಾತ ಹೆಚ್ಚಾಗುತ್ತಿದೆ ಎಂಬ ಕಾರಣವನ್ನೂ ಒಬ್ಬ ಮಹಾಶಯರು ವ್ಯಕ್ತಪಡಿಸಿದ್ದಾರೆ. ಈ ವ್ಯಾಪಾರಿಗಳ ಜೀವನೋಪಾಯ, ಬದುಕು ನಿರ್ವಹಣೆಯ ಒಳನೋಟಗಳನ್ನು ಗುರುತಿಸದೆ, ಪರ್ಯಾಯ ವ್ಯವಸ್ಥೆಯನ್ನೂ ಸೂಚಿಸದೆ ಈ ರೀತಿ ಆಗ್ರಹಿಸುವುದು ಹಿತವಲಯದ ಮನಸ್ಥಿತಿಯನ್ನು ( Comfort Zone Mindset) ತೋರಿಸುತ್ತದೆ. ಮಾನವೀಯ ನೆಲೆಯಲ್ಲಿ ನೋಡಿದಾಗ, ಈ ಸಣ್ಣ ವ್ಯಾಪಾರಿಗಳು ಎದುರಿಸುವ ನಿತ್ಯ ಸಂಕಟಗಳು ಮತ್ತು ಹಣಕಾಸು ಮುಗ್ಗಟ್ಟುಗಳು ನಮ್ಮ ಅಂತರ್ ಪ್ರಜ್ಞೆಯನ್ನು ಕದಡುತ್ತವೆ.

ತಮ್ಮ ನಿತ್ಯ ವ್ಯಾಪಾರಕ್ಕಾಗಿ ನಿತ್ಯ ಸಾಲ ತೆಗೆದುಕೊಳ್ಳುವ ಈ ವ್ಯಾಪಾರಿಗಳನ್ನು ಶೋಷಿಸುವ ಒಂದು ಮಾಫಿಯಾ ಸಹ ಮಾರುಕಟ್ಟೆಯಲ್ಲಿ ವ್ಯವಸ್ಥಿತವಾಗಿ ಕಾರ್ಯೋನ್ಮುಖವಾಗಿದೆ. ಮುಂಜಾನೆ 900 ರೂ ಸಾಲ ಪಡೆದು ಸಂಜೆ 1000 ರೂ ಮರುಪಾವತಿ ಮಾಡಬೇಕಾದ ಪರಿಸ್ಥಿತಿಯನ್ನು ಈ ವ್ಯಾಪಾರಿಗಳು ನಿರಂತರವಾಗಿ ಎದುರಿಸುತ್ತಲೇ ಇದ್ದಾರೆ. ಜೊತೆಗೆ ಮಾಮೂಲಿ ವಸೂಲಿ ಮಾಡುವ ಒಂದು ವೃತ್ತಿಪರ ವರ್ಗವೂ ನಮ್ಮ ನಡುವೆ ಇದೆ. ಈ ವ್ಯಾಪಾರಿಗಳು ತಮ್ಮ ವ್ಯಾಪಾರಿ ವಲಯದ ಸುತ್ತಮುತ್ತಲಿನ ಕೆಳಮಧ್ಯಮ ವರ್ಗಗಳಿಗೆ ಮತ್ತು ಬಡ ಜನತೆಗೆ ಕೈಗೆಟುಕುವ ಬೆಲೆಯಲ್ಲಿ ಸರಕುಗಳನ್ನು ಒದಗಿಸುತ್ತಾರೆ. ಆ ದಿನದ ವ್ಯಾಪಾರದಲ್ಲಿ ಬರುವ ಲಾಭ ಅವರ ಜೀವನ ನಿರ್ವಹಣೆಗೆ ಸರಿಹೋಗುತ್ತದೆ. ಅದೇ ಹಣವನ್ನು ಮರುದಿನ ಮತ್ತಷ್ಟು ಸರಕು ಖರೀದಿಗೆ ಬಳಸುತ್ತಾರೆ. ಈ ರೀತಿ ಬಂಡವಾಳದ ಆವರ್ತನವನ್ನು ಇಲ್ಲಿ ಗುರುತಿಸಬಹುದು. ಇಲ್ಲಿ ಸೃಷ್ಟಿಯಾಗುವ ಹೆಚ್ಚುವರಿ ಆದಾಯ ಅಥವಾ ಬಂಡವಾಳ ಪುನಃ ಮಾರುಕಟ್ಟೆ ಪ್ರವೇಶಿಸುತ್ತದೆ. ಕೆಳಸ್ತರದ ಆರ್ಥಿಕತೆಯನ್ನು ಚಾಲ್ತಿಯಲ್ಲಿಡುವ ಈ ಪ್ರಕ್ರಿಯೆಯಲ್ಲಿ ಬಂಡವಾಳ ಕ್ರೋಢೀಕರಣ ಅಥವಾ ಅಧಿಕ ಲಾಭ ಗಳಿಕೆ ಇರುವುದಿಲ್ಲ.
ವಿರೋಧಾಭಾಸಗಳ ಸಮಾಜದಲ್ಲಿ
ಇಲ್ಲೊಂದು ವಿರೋಧಾಭಾಸವನ್ನೂ ಸಹ ನಮ್ಮ ಸಮಾಜದಲ್ಲಿ ಗುರುತಿಸಬಹುದು. ಚೌಕಾಸಿ ಮಾಡುವ ಪ್ರವೃತ್ತಿ ಸ್ವಾಭಾವಿಕವಾದದ್ದು. ಅತ್ಯಂತ ಶ್ರೀಮಂತರಿಂದ ಕಡುಬಡವರವರೆಗೂ ಜನರು ತಾವು ಕೊಳ್ಳುವ ವಸ್ತುವಿನ ಬೆಲೆಯಲ್ಲಿ ಚೌಕಾಸಿ ಮಾಡುತ್ತಾರೆ. ವಿರೋಧಾಭಾಸ ಇರುವುದು ಈ ಪ್ರಕ್ರಿಯೆಯಲ್ಲಿ ಅಲ್ಲ. ಬಡಾವಣೆಗಳಲ್ಲಿ ನೆಲೆಸಿರುವ ಮಧ್ಯಮ ವರ್ಗಗಳು, ಹಿತವಲಯದ ಜನರು ಮನೆಯ ಮುಂದೆ ತಳ್ಳುಗಾಡಿಯಲ್ಲಿ ಸರಕುಗಳನ್ನು ತರುವವರ ಬಳಿ ಹೆಚ್ಚಿನ ಚೌಕಾಸಿ ಮಾಡುತ್ತಾರೆ. ಬೀದಿ ಬದಿ ವ್ಯಾಪಾರಿಗಳ ಹತ್ತಿರ ಚೌಕಾಸಿಯ ಪ್ರಮಾಣ ಕಡಿಮೆಯಾಗುತ್ತದೆ. ಸ್ಥಿರ ಮಳಿಗೆಗಳಲ್ಲಿ ಕೊಳ್ಳುವಾಗ ಬಹುತೇಕ ಚೌಕಾಸಿ ಇರುವುದೇ ಇಲ್ಲ. ( Fixed Rate ಎಂಬ ಫಲಕ ಸಾಮಾನ್ಯವಾಗಿ ಇರುತ್ತದೆ ). ಇನ್ನೂ ಮೇಲ್‌ಸ್ತರಕ್ಕೆ ಹೋದಂತೆ ಷಾಪಿಂಗ್ ಮಾಲ್‌ಗಳಲ್ಲಿ ದರದ ಬಗ್ಗೆ ಯೋಚಿಸುವುದೂ ಇಲ್ಲ. ತಳ್ಳುಬಂಡಿಯಲ್ಲಿ ತುಂಬಿಕೊಂಡು ಬಿಲ್ ಪಾವತಿ ಮಾಡುವುದು ಸಾಮಾನ್ಯ ಸಂಗತಿ.

ಅಂದರೆ ಅತಿ ಹೆಚ್ಚು ಪರಿಶ್ರಮದಿಂದ ತಮ್ಮ ನಿತ್ಯ ಬದುಕಿಗಾಗಿ ದಿನವಿಡೀ ಬೆವರು ಸುರಿಸುವ ವ್ಯಾಪಾರಿಗಳ ಬಳಿ ನಮ್ಮ ಚೌಕಾಸಿ ಹೆಚ್ಚಾಗಿರುತ್ತದೆ. ಈ ವ್ಯಾಪಾರಿ ವಲಯ ಮೇಲ್ ಮಟ್ಟಕ್ಕೆ ಹೋಗುತ್ತಿದ್ದಂತೆಯೇ ಗ್ರಾಹಕ ವಲಯದ ಚೌಕಾಸಿಯ ಪ್ರಮಾಣ ಕಡಿಮೆಯಾಗುತ್ತಾ ಹೋಗುತ್ತದೆ. ಮೊದಲನೆ ವರ್ಗದ ವ್ಯಾಪಾರಿಗಳಿಗೆ ತಾವು ಹೂಡಿದ ಬಂಡವಾಳ ಮರಳಿ ಗಳಿಸುವುದು , ಮರುದಿನದ ಜೀವನ ನಿರ್ವಹಣೆಗೆ ಮುಖ್ಯವಾಗುತ್ತದೆ. ಎರಡನೆ ವರ್ಗದ ವ್ಯಾಪಾರಿಗಳಿಗೆ ಒಟ್ಟು ವ್ಯಾಪಾರ ಮತ್ತು ಲಾಭ ಗಳಿಕೆಯ ಹೆಚ್ಚಳ ಮಾತ್ರವೇ ಪ್ರಧಾನವಾಗಿರುತ್ತದೆ. ಈ ವಿದ್ಯಮಾನವನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಬೀದಿ ಬದಿ ವ್ಯಾಪಾರಿಗಳ ಸಂಕಟಗಳನ್ನೂ ಅರ್ಥಮಾಡಿಕೊಳ್ಳುವುದು ಸುಲಭ.

ಇದರ ಮತ್ತೊಂದು ಮಾದರಿಯಲ್ಲಿ, ಹಿತವಲಯದ ಜನರ ಸಂಚಾರಕ್ಕೆ ಅಡ್ಡಿಯಾಗುತ್ತದೆ ಎಂಬ ಕಾರಣಕ್ಕೆ ರಸ್ತೆ ವ್ಯಾಪಾರಿಗಳನ್ನು ಎತ್ತಂಗಡಿ ಮಾಡುವುದು, ಈ ವ್ಯಾಪಾರಿಗಳು ದಿನದ ಕೆಲವು ಗಂಟೆಗಳ ಕಾಲ ಫುಟ್‌ಪಾತ್‌ಗಳನ್ನು ಬಳಸಿದರೆ ಅದನ್ನು ಅತಿಕ್ರಮಣ ( Encroachment ) ಎಂದು ಪರಿಗಣಿಸುವುದು ಅಮಾನುಷ ಎನಿಸುವುದಿಲ್ಲವೇ ? ಇವರಿಗಾಗಿ ಪ್ರತ್ಯೇಕ ವ್ಯಾಪಾರ ವಲಯವನ್ನು ಅದೇ ಪ್ರದೇಶದಲ್ಲೇ ಗ್ರಾಹಕರಿಗೆ ಸಮೀಪವಾಗಿರುವಂತೆ ರಚಿಸದೆ, ಅತಿಕ್ರಮಣದ ಹೆಸರಿನಲ್ಲಿ ಇವರನ್ನು ಉಚ್ಛಾಟಿಸುವುದು ಯಾರ ಪ್ರಯೋಜನಕ್ಕಾಗಿ. ಹೀಗೆ ಉಚ್ಛಾಟಿತರಾಗುವ ವ್ಯಾಪಾರಿಗಳು ತಮ್ಮ ಜೀವನೋಪಾಯಕ್ಕೆ ಏನು ಮಾಡಬೇಕು ? ಫುಟ್‌ಪಾತ್ ಮೇಲೆ ಗೋಲ್‌ಗಪ್ಪ, ಪಾನಿಪೂರಿ, ತರಕಾರಿ ವ್ಯಾಪಾರ ಮಾಡುವವರ ಬಳಿ , ತಮ್ಮ ಮನೆಯ ಮುಂದಿದೆ ಎಂಬ ಕಾರಣಕ್ಕೆ ಮಾಸಿಕ ಶುಲ್ಕ ವಸೂಲಿ ಮಾಡುವ ಸಮಾಜವೂ ನಮ್ಮ ನಡುವೆ ಇದೆ. ಇದು ಏನನ್ನು ಸೂಚಿಸುತ್ತದೆ ? ಈ ವ್ಯಾಪಾರಿಗಳಿಗಾಗಿಯೇ ಪ್ರತ್ಯೇಕ ವಲಯ ( vendor Zone) ರೂಪಿಸಿದರೂ ಅಲ್ಲಿ ಶೌಚಾಲಯ, ಕುಡಿಯುವ ನೀರು, ಓಡಾಡುವ ಜಾಗ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸಲಾಗುವುದೇ ? ಹಲವು ವರ್ಷಗಳ ವ್ಯಾಪಾರದಿಂದ ಇವರು ಸೃಷ್ಟಿಸಿಕೊಂಡಿರುವ ಗ್ರಾಹಕ ವರ್ಗಕ್ಕೆ ಈ ವಲಯಗಳು ಸಮೀಪದಲ್ಲಿರುವುದೇ ?

ನಾಗರಿಕತೆಯ ಉತ್ತರದಾಯಿತ್ವ
ಈ ಜಟಿಲ ಸವಾಲುಗಳಿಗೆ ಉತ್ತರದಾಯಿಯಾಗಬೇಕಾದುದು ನಗರ ಪಾಲಿಕೆಗಳು, ಪುರಸಭೆಗಳು, ಸರ್ಕಾರ ಮತ್ತು ವಿಶಾಲ ಸಮಾಜ. ಆದರೆ ಈ ವಿಶಾಲ ಸಮಾಜದ ಒಂದು ವರ್ಗವೇ ರಸ್ತೆ ವ್ಯಾಪಾರವನ್ನು ಒತ್ತುವರಿ/ಫುಟ್ ಪಾತ್ ಅತಿಕ್ರಮಣ ಎಂದು ಭಾವಿಸುತ್ತದೆ. ಮತ್ತೊಂದೆಡೆ ಇದೇ ಮಧ್ಯಮ ವರ್ಗದ ಜನರೇ ತಮ್ಮ ಮನೆಯ ಮುಂದಿನ ಫುಟ್‌ಪಾತ್ ಅತಿಕ್ರಮಿಸಿ, ಚರಂಡಿಯನ್ನೂ ಮುಚ್ಚಿಹಾಕಿ, ತಮ್ಮ ವಾಹನಗಳನ್ನು ನಿಲ್ಲಿಸಲು ಕಾಂಕ್ರೀಟ್ ಇಳಿಜಾರುಗಳನ್ನು ಕಟ್ಟಿರುತ್ತಾರೆ. ಅಧಿಕೃತವಾಗಿ ಮನೆ ಕಟ್ಟುವಾಗ ಕಾರ್ ಗ್ಯಾರೇಜ್ ಎಂದು ನೋಂದಣಿಯಾದ ಜಾಗವನ್ನು ಅಂಗಡಿಗಳಿಗೆ, ವೈದ್ಯರ ಕ್ಲಿನಿಕ್‌ಗಳಿಗೆ, ಬ್ಯೂಟಿ ಪಾರ್ಲರ್‌ಗಳಿಗೆ ಬಾಡಿಗೆಗೆ ಕೊಡುತ್ತಾರೆ. ಈ ಆಯಕಟ್ಟಿನ ವ್ಯಾಪಾರಿ ಸ್ಥಳಗಳಲ್ಲಿ ವಿದ್ಯುತ್ ಮೀಟರ್‌ಗಳು ಮತ್ತು ನಿಗದಿಪಡಿಸುವ ವಿದ್ಯುತ್ ಬಳಕೆಯ ದರವನ್ನು ವಾಣಿಜ್ಯ ಉದ್ದೇಶ ಎಂದು ಪರಿಗಣಿಸಲಾಗುತ್ತಿದೆಯೇ ?

ಈ ಒತ್ತುವರಿ ಮತ್ತು ಅತಿಕ್ರಮಣಗಳನ್ನು ಸಹಜ ಪ್ರಕ್ರಿಯೆಯಂತೆ ಪರಿಭಾವಿಸಿರುವ ಹಿತವಲಯದ ಸಮಾಜಕ್ಕೆ, ತಮ್ಮ ಕಣ್ಣೆದುರಿನಲ್ಲೇ ಜೀವನೋಪಾಯದ ಆಧಾರವನ್ನು ಕಟ್ಟಿಕೊಳ್ಳುವ ರಸ್ತೆ ವ್ಯಾಪಾರಿಗಳು ಹೇಗೆ ಕಾಣಬೇಕು. ಈ ವರ್ಗಗಳ ಮೋಟಾರು ವಾಹನಗಳ ವಿಹಾರಕ್ಕಾಗಿ, ರಸ್ತೆ ಬದಿ ವ್ಯಾಪಾರಿಗಳು ತಮ್ಮ ಬದುಕಿನ ಆಧಾರವನ್ನೇ ಕಳೆದುಕೊಂಡು ಪರಾವಲಂಬಿಗಳಾಗಬೇಕೇ ? ಈ ಅಭಾಗ್ಯರಿಗೆ ನಿತ್ಯ ಸಾಲ ನೀಡುವ ಮೂಲಕ ಶೋಷಣೆ ಮಾಡುವ ಮಾಫಿಯಾಗಳನ್ನು ನಿಯಂತ್ರಿಸಲು ಸರ್ಕಾರ ಯಾವ ಕ್ರಮಗಳನ್ನು ಕೈಗೊಂಡಿದೆ ? ಮಾಮೂಲಿ ವಸೂಲಿ ಮಾಡುವ ಪದ್ಧತಿಯನ್ನು ನಿಯಂತ್ರಿಸಲು ಯಾವ ನೀತಿಗಳನ್ನು ರೂಪಿಸಿದೆ ? ವ್ಯಾಪಾರಿಗಳ ವಲಯಗಳನ್ನು ( Vendor Zones) ನಿರ್ಮಿಸಲು ಎಷ್ಟು ಉತ್ಸುಕತೆ ತೋರಿದೆ ? ಈ ಜಟಿಲ ಪ್ರಶ್ನೆಗಳಿಗೆ ಉತ್ತರಿಸುವವರಾರು ?

ವಾಹನ ಚಾಲಕರ ಅಜಾಗರೂಕತೆಯಿಂದ ಸಂಭವಿಸುವ ಅಪರೂಪದ ಅಪಘಾತಗಳು, ಅಚಾತುರ್ಯದಿಂದ ಸಂಭವಿಸುವ ಅನಿಲ ಸ್ಫೋಟ, ಈ ಕಾರಣಗಳಿಗಾಗಿ, ಎಲ್ಲ ಬೀದಿ ವ್ಯಾಪಾರಿಗಳನ್ನೂ ಎತ್ತಂಗಡಿ ಮಾಡುವುದು ಸಾಮಾಜಿಕ ಕ್ರೌರ್ಯ ಅಲ್ಲವೇ ? ನಾಗರಿಕರಾಗಿ ನಾವು ಈ ರೀತಿಯಾಗಿ ಆಗ್ರಹಿಸುವುದು ಅಸೂಕ್ಷ್ಮ ಮತ್ತು ಸಂವೇದನಾರಹಿತ ನಡೆ ಅಲ್ಲವೇ ? ಪಾದಚಾರಿಗಳಿಗೆ ಓಡಾಡಲು ತೊಂದರೆಯಾಗುತ್ತದೆ ಎಂಬ ಕಾರಣಕ್ಕೆ ಈ ವ್ಯಾಪಾರಿಗಳ ಆದಾಯದ ಮೂಲವನ್ನೇ ಕಸಿದುಕೊಳ್ಳುವುದು ನಾಗರಿಕತೆ ಅಥವಾ ಆಧುನಿಕತೆ ಎನಿಸಿಕೊಳ್ಳುವುದೇ ? ಈ ಜಟಿಲ ಪ್ರಶ್ನೆಗಳಿಗೆ ಉತ್ತರ ಕೊಡುವುದು ಯಾರು ? ಒಂದು ನಾಗರಿಕತೆಯ ಪ್ರತಿನಿಧಿಗಳಾಗಿ, ಆರ್ಥಿಕ ಅಭಿವೃದ್ಧಿಯ ಪ್ರಧಾನ ಫಲಾನುಭವಿಗಳಾಗಿ, ಸಕಲ ಸವಲತ್ತುಗಳನ್ನೂ ಪಡೆದಿರುವ, ಫುಟ್‌ಪಾತ್ ಒತ್ತುವರಿಯ ಅವಕಾಶವನ್ನೂ ಪಡೆದುಕೊಂಡಿರುವ, ಹಿತವಲಯದ ಸಮಾಜ ಈ ದೃಷ್ಟಿಯಿಂದ ಯೋಚಿಸಬೇಕಲ್ಲವೇ ?

ಒಂದು ಸ್ವಾನುಭವದ ಪ್ರಸಂಗ
ಏಳೆಂಟು ವರ್ಷಗಳ ಹಿಂದೆ ನಡೆದ ಒಂದು ಪ್ರಸಂಗ. ಬೆಂಗಳೂರಿನಲ್ಲಿದ್ದ ನನ್ನ ಸೋದರಿ ಮಾನಸಿಕ ಕ್ಷೋಭೆಗೊಳಗಾಗಿ ಹಠಾತ್ತನೆ ಮನೆಯಿಂದ ಹೊರಟಿದ್ದಳು. ಅವಳಿಗಾಗಿ ಬೆಂಗಳೂರಿನ ಹಲವು ಪೊಲೀಸ್ ಠಾಣೆಗಳಲ್ಲಿ ದೂರು ಸಲ್ಲಿಸಿ, ಹುಡುಕುವ ಪ್ರಯತ್ನಗಳನ್ನು ಮಾಡಿ, ಹತ್ತಾರು ಕಿಲೋಮೀಟರ್ ಓಡಾಡಿದರೂ ರಾತ್ರಿ ಹತ್ತು ಗಂಟೆಯಾದರೂ ಸುಳಿವು ಸಿಗಲಿಲ್ಲ. ಹತ್ತೂವರೆ ಹೊತ್ತಿಗೆ ನನ್ನ ಸೋದರಿಯ ನಂಬರ್‌ನಿಂದಲೇ ಕರೆ ಬಂತು. ಫೋನ್‌ನಲ್ಲಿ ಮಾತನಾಡಿದ್ದು ಒಬ್ಬ ಮುಸ್ಲಿಂ, ತಳ್ಳುಗಾಡಿಯ ವ್ಯಾಪಾರಿ ತನ್ನನ್ನು ಪರಿಚಯಿಸಿಕೊಂಡು, ಸರ್ ಒಬ್ಬ ಮಹಿಳೆ ನನ್ನ ಬಳಿ ಇದ್ದಾರೆ, ಆಕೆಗೆ ಎಲ್ಲಿಗೆ ಹೋಗುವುದು ತೋಚುತ್ತಿಲ್ಲ, ಅವರ ನಂಬರ್‌ನಿಂದಲೇ ಕರೆ ಮಾಡುತ್ತಿದ್ದೇನೆ ಎಂದು ಸೋದರಿಯ ಹೆಸರು ಹೇಳಿದಾಗ, ನಮಗೆ ಖಚಿತವಾಯಿತು. ಸೋದರಿ ಅಲ್ಲೇ ಸುರಕ್ಷಿತವಾಗಿದ್ದಾಳೆ ಎಂದು. ಆ ಯುವಕನಿಗೆ ಮನವಿ ಮಾಡಿ ಮನೆಯ ವಿಳಾಸ ಹೇಳಿ ಆಟೋದಲ್ಲಿ ಬಿಟ್ಟುಬರಲು ಕೋರಿಕೊಂಡೆವು. ಸರಕುಗಳಿರುವ ಗಾಡಿಯನ್ನು ಆ ವೇಳೆಯಲ್ಲಿ ಹಾಗೆಯೇ ಬಿಟ್ಟು, ಆತ ನನ್ನ ಸೋದರಿಯನ್ನು ಮನೆ ಮುಟ್ಟಿಸಿದ್ದರು. ಇದು ಸಣ್ಣ ವ್ಯಾಪಾರಿಗಳಲ್ಲಿ, ಯಾವುದೇ ದುಡಿಯುವ ವ್ಯಕ್ತಿಯಲ್ಲಿ ಇರುವ ಅಂತಃಕರಣಕ್ಕೆ ಒಂದು ನೇರ ಸಾಕ್ಷಿ.

ಆಧುನಿಕತೆ, ನಗರೀಕರಣ, ನಗರ ಸೌಂದರ್ಯೀಕರಣ ಈ ಬೃಹದಾರ್ಥಿಕ ( Macro Economic) ನೀತಿಗಳು ಈಗಾಗಲೇ ದುಡಿಯುವ ಜನತೆಯ ಬದುಕುವ ಅವಕಾಶಗಳನ್ನು ಕಡಿಮೆ ಮಾಡುತ್ತಿದೆ. ಈ ನೊಂದ, ಶೋಷಿತ ಜನಸಮೂಹದ ನಿತ್ಯ ಸಂಕಟಗಳಿಗೆ ಸ್ಪಂದಿಸುವುದು ನಾಗರಿಕತೆಯ ಲಕ್ಷಣ ಅಲ್ಲವೇ ? ಅವರ ಭವಿಷ್ಯ ಮತ್ತು ನಿತ್ಯ ಬದುಕಿನ ಬಗ್ಗೆ ಅನುಕಂಪ ಬೇಕಿಲ್ಲ, ಅಂತಃಕರಣ ಇರಬೇಕಲ್ಲವೇ ? ( ಈ ದೃಷ್ಟಿಯಿಂದ ನನ್ನ ಸ್ವಾನುಭವದ ಪ್ರಸಂಗವನ್ನು ಬಾಕ್ಸ್‌ನಲ್ಲಿ ವಿವರಿಸಿದ್ದೇನೆ ). ಈ ಸಣ್ಣ ಪ್ರಮಾಣದ ರಸ್ತೆ ವ್ಯಾಪಾರಿಗಳನ್ನು ʼ ಸಮಸ್ಯೆ ʼ ಎಂದು ಭಾವಿಸುವುದು, ನಮ್ಮ ಹಿತಕ್ಕಾಗಿ ʼ ಸಮಸ್ಯಾತ್ಮಕ ʼ ದೃಷ್ಟಿಯಿಂದ ನೋಡುವುದು, ನಾಗರಿಕತೆ ಮತ್ತು ಮನುಜ ಸೂಕ್ಷ್ಮತೆಗೆ ನಾವು ಮಾಡುವ ಅಪಚಾರವಾಗುತ್ತದೆ. “Don’t throw the baby out with the bathwater” ಈ ಅಂಗ್ಲ ಗಾದೆಯನ್ನು ನೆನಪಿನಲ್ಲಿಡಬೇಕು.
ಸಮಾಜ ತನ್ನ ಆಲೋಚನಾ ವಿಧಾನಗಳನ್ನು ಸುಧಾರಿಸಿಕೊಳ್ಳಬೇಕಿದೆ.











