ಬೆಂಗಳೂರು: ಬಳ್ಳಾರಿಯಲ್ಲಿ (Ballari) ಬ್ಯಾನರ್ ವಿವಾದದಿಂದ ಉಂಟಾದ ಗಲಾಟೆಯಲ್ಲಿ ಕಾಂಗ್ರೆಸ್(Congress) ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿದ್ದ ಪ್ರಕರಣ ರಾಜ್ಯ ರಾಜಕಾರಣ ಹಾಗೂ ಪೊಲೀಸ್ ಇಲಾಖೆಯಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ರಾಜ್ಯ ಸರ್ಕಾರ, ಹಿರಿಯ ಪೊಲೀಸ್(Police) ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದ್ದು, ಇದರ ಪರಿಣಾಮವಾಗಿ ಪೊಲೀಸ್ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ.

ಆರಂಭದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡಿದ್ದ ಸರ್ಕಾರ, ಬಳಿಕ ಬಳ್ಳಾರಿ ವಲಯದ ಡಿಐಜಿಪಿಯಾಗಿದ್ದ ವರ್ತಿಕಾ ಕಟಿಯಾರ್ ಅವರನ್ನು ಸಿವಿಲ್ ರೈಟ್ಸ್ ಮತ್ತು ಎನ್ಫೋರ್ಸ್‌ಮೆಂಟ್ ವಿಭಾಗಕ್ಕೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿತು. ಈ ಕ್ರಮದಿಂದ ತೀವ್ರ ಬೇಸರಗೊಂಡಿರುವ ವರ್ತಿಕಾ ಕಟಿಯಾರ್, ತಮ್ಮ ಅಸಮಾಧಾನವನ್ನು ಬಳ್ಳಾರಿ ಉಸ್ತುವಾರಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಮುಂದೆ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

ಘಟನೆಯ ದಿನ ಹಾಗೂ ನಂತರದ ಬೆಳವಣಿಗೆಗಳ ವೇಳೆ ತಡರಾತ್ರಿಯವರೆಗೂ ಸ್ಥಳದಲ್ಲೇ ಇದ್ದು ಕಾನೂನು ಸುವ್ಯವಸ್ಥೆ ಕಾಪಾಡಲು ಶ್ರಮಿಸಿದ್ದೇನೆ. ಎಲ್ಲವೂ ನ್ಯಾಯಸಮ್ಮತವಾಗಿ ನಡೆಸಿದ್ದರೂ ನನ್ನ ವರ್ಗಾವಣೆ ಮೂಲಕ ಅನ್ಯಾಯ ಮಾಡಲಾಗಿದೆ ಎಂದು ವರ್ತಿಕಾ ಕಟಿಯಾರ್ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಮುಂದೆ ಕಣ್ಣೀರು ಹಾಕಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ ಎನ್ನಲಾಗಿದೆ. ಈ ವೇಳೆ ಸಚಿವ ಜಮೀರ್ ಅವರು ಧೈರ್ಯ ತುಂಬಿ, ಪರಿಸ್ಥಿತಿ ಮನವರಿಕೆ ಮಾಡಲು ಯತ್ನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬ್ಯಾನರ್ ವಿಚಾರವಾಗಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಬಲಿಯಾಗಿದ್ದು, ಪ್ರಕರಣದ ಹೊಣೆಗಾರಿಕೆ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಎಸ್ಪಿ ಪವನ್ ನೆಜ್ಜೂರು ಅವರನ್ನು ಅಮಾನತು ಮಾಡಿತ್ತು. ದುರ್ದೈವವೆಂದರೆ, ಬಳ್ಳಾರಿ ಎಸ್ಪಿಯಾಗಿ ಅಧಿಕಾರ ಸ್ವೀಕರಿಸಿದ ಒಂದೇ ದಿನದಲ್ಲೇ ಪವನ್ ನೆಜ್ಜೂರು ಅಮಾನತುಗೆ ಒಳಗಾಗಿದ್ದರು. ಈ ಪ್ರಕರಣದಲ್ಲಿ ಪೊಲೀಸ್ ಅಧಿಕಾರಿಗಳ ವಿರುದ್ಧ ಸರ್ಕಾರ ತೆಗೆದುಕೊಂಡಿರುವ ಕ್ರಮವನ್ನು ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸಿವೆ. ಬಳ್ಳಾರಿ ಬ್ಯಾನರ್ ಗಲಾಟೆ ಪ್ರಕರಣ ಇದೀಗ ಕಾನೂನು, ರಾಜಕೀಯ ಹಾಗೂ ಆಡಳಿತಾತ್ಮಕ ಮಟ್ಟದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.












