ಬೆಂಗಳೂರು: ಡಿಸೆಂಬರ್ 11ರಂದು ತೆರೆ ಕಂಡ ನಟ ದರ್ಶನ್(Darshan) ಅಭಿನಯದ ಬಹುನಿರೀಕ್ಷಿತ ಡೆವಿಲ್(Devil) ಸಿನಿಮಾಗೆ ನೆಗಟಿವ್ ವಿಮರ್ಶೆಗಳು ಮತ್ತು ದ್ವೇಷದ ಪ್ರಚಾರ ಹಾನಿ ಮಾಡಬಹುದು ಎಂಬ ಆತಂಕದಿಂದ ಚಿತ್ರತಂಡ ಕೋರ್ಟ್‌ನಿಂದ ಆದೇಶ ಪಡೆದು ಆನ್‌ಲೈನ್ ರೇಟಿಂಗ್‌ಗಳಿಗೆ ಬ್ರೇಕ್ ಹಾಕಿತ್ತು. ಕೋರ್ಟ್ ಆದೇಶದ ಮೇರೆಗೆ ಬುಕ್ ಮೈ ಶೋ ಆಪ್ ತಂಡವು ಡೆವಿಲ್ ಚಿತ್ರಕ್ಕೆ ರೇಟಿಂಗ್ ಮತ್ತು ರಿವ್ಯೂ ನೀಡುವ ಆಯ್ಕೆಯನ್ನು ತಾತ್ಕಾಲಿಕವಾಗಿ ನಿಷ್ಕ್ರಿಯಗೊಳಿಸಿತ್ತು.

ಈ ನಡೆ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಕಾರಣವಾಗಿತ್ತು. ಇದೀಗ ʼಮಾರ್ಕ್ʼ ಮತ್ತು ʼ45ʼ ಸಿನಿಮಾಗಳ ತಂಡಗಳು ಕೂಡ ಇದೇ ಮಾದರಿಯನ್ನು ಅನುಸರಿಸಿಸುತ್ತಿದೆ. ನೆಗೆಟಿವ್ ವಿಮರ್ಶೆಗಳು ಸಿನಿಮಾ ಹಾಗೂ ಬಾಕ್ಸ್ ಆಫೀಸ್ ಮೇಲೆ ಪರಿಣಾಮ ಬೀರುತ್ತದೆ ಎಂಬ ಆತಂಕದಿಂದ ಎರಡೂ ಚಿತ್ರತಂಡಗಳು ಕೋರ್ಟ್ ಮೊರೆ ಹೋಗಿ ರೇಟಿಂಗ್ ನೀಡಲು ಸ್ಟೇ ತಂದಿದ್ದಾರೆ ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಬುಕ್ ಮೈ ಶೋನಲ್ಲಿ ʼಮಾರ್ಕ್ʼ ಮತ್ತು ʼ45ʼ ಸಿನಿಮಾಗಳ ರೇಟಿಂಗ್‌ನನ್ನು ತಾತ್ಕಾಲಿಕವಾಗಿ ತೆಗೆದು ಹಾಕಲಾಗಿದೆ. ಬುಕ್ ಮೈ ಶೋ ರೇಟಿಂಗ್ ನೋಡಿ ಸಿನಿಮಾಗೆ ಬರುವವರ ಸಂಖ್ಯೆ ಹೆಚ್ಚಾಗಿರುವ ಕಾರಣ ಚಿತ್ರತಂಡ ಆನ್‌ಲೈನ್ ರೇಟಿಂಗ್‌ಗಳಿಗೆ ಬ್ರೇಕ್ ಹಾಕಿದೆ. ಸದ್ಯ ಕನ್ನಡ ಚಿತ್ರರಂಗದಲ್ಲಿ ಇದೊಂದು ಟ್ರೆಂಡ್ ಆಗಿದ್ದು, ಮುಂದಿನ ದಿನಗಳಲ್ಲಿ ತೆರೆಗೆ ಬರಲಿರುವ ಬಿಗ್ ಬಜೆಟ್ ಸಿನಿಮಾಗಳು ಕೂಡ ಇದೇ ದಾರಿ ಅನುಸರಿಸುವ ಸಾಧ್ಯತೆ ಇದೆ.






