ನವದೆಹಲಿ: ಏರ್ ಇಂಡಿಯಾ ಎಕ್ಸ್‌ಪ್ರೆಸ್(Air India Express) ಪೈಲಟ್‌ವೊಬ್ಬರು ಪ್ರಯಾಣಿಕನ ಮೇಲೆ ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ದೆಹಲಿ ವಿಮಾನ ನಿಲ್ದಾಣದ ಟರ್ಮಿನಲ್ 1ರಲ್ಲಿ ನಡೆದಿದೆ.

ಪ್ರಯಾಣಿರೊಬ್ಬರ ಈ ಆರೋಪ ಸಂಬಂಧ ವಿಮಾನಯಾನ ಸಂಸ್ಥೆ ತನಿಖೆಗೆ ಆದೇಶಿಸಿದ್ದು, ತನಿಖೆ ಪೂರ್ಣಗೊಳ್ಳುವವರೆಗೂ ಪೈಲಟ್ ವೀರೇಂದ್ರರನ್ನ ಅಮಾನತುಗೊಳಿಸಲಾಗಿದೆ.

ಘಟನೆ ಕುರಿತು ಅನುಭವವನ್ನು ಸಂತ್ರಸ್ತ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ʼನಾವು ನಾಲ್ಕು ತಿಂಗಳ ಮಗುವನ್ನು ಎತ್ತಿಕೊಂಡು ನಿಂತಿದ್ದೆವು. ಇದನ್ನು ಗಮನಿಸಿದ ವಿಮಾನ ನಿಲ್ದಾಣದ ಅಧಿಕಾರಿಗಳು ತಮ್ಮ ಸಿಬ್ಬಂದಿ ಬಳಸುವ ಭದ್ರತಾ ತಪಾಸಣೆ ನಿಯಮಗಳನ್ನು ಅನುಸರಿಸುವಂತೆ ನಮಗೆ ಮಾರ್ಗದರ್ಶನ ನೀಡಿದ್ದರು. ಸರತಿ ಸಾಲಿನಲ್ಲಿ ನಿಂತಿದ್ದಾಗ ಪೈಲಟ್ ವೀರೇಂದ್ರ ನನ್ನನ್ನು ‘ಅನ್ ಎಜುಕೇಟಡ್ ಎಂದು ನಿಂದಿಸಿದಾಗ ಇಬ್ಬರ ನಡುವೆ ಮಾತಿನ ಚಕಮಕಿ ನಡೆಯಿತು. ಪೈಲಟ್ ತನ್ನ ಮೇಲೆ ದೈಹಿಕ ಹಲ್ಲೆ ನಡೆಸಿದರುʼ ಎಂದು ತನ್ನ ಮುಖದಲ್ಲಿ ರಕ್ತ ಬರುತ್ತಿರುವ ಮತ್ತು ಪೈಲಟ್‌ನ ಫೋಟೊವನ್ನು ಸಹ ಸಂತ್ರಸ್ಥ ಹಂಚಿಕೊಂಡಿದ್ದಾರೆ.
ಘಟನೆಗೆ ಪ್ರತಿಕ್ರಿಯಿಸಿದ ವಿಮಾನಯಾನ ಸಂಸ್ಥೆ, ʼದೆಹಲಿ ವಿಮಾನ ನಿಲ್ದಾಣದಲ್ಲಿ ನಮ್ಮ ಸಿಬ್ಬಂದಿಯೊಬ್ಬರು ಪ್ರಯಾಣಿಕರೊಂದಿಗೆ ವಾಗ್ವಾದ ನಡೆಸಿರುವ ಬಗ್ಗೆ ಮಾಹಿತಿ ಪಡೆದುಕೊಂಡಿದ್ದೇವೆ. ನಾವು ಇಂತಹ ನಡವಳಿಕೆಯನ್ನು ಖಂಡಿಸುತ್ತೇವೆ. ಸಂಬಂಧಪಟ್ಟ ಉದ್ಯೋಗಿಯನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿದ್ದೇವೆ. ತನಿಖಾ ವರದಿ ಆಧರಿಸಿ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆʼ ಎಂದು ವಿಮಾನಯಾನ ಸಂಸ್ಥೆ ಹೇಳಿದೆ.


