ಬೆಳಗಾವಿ: ತಮ್ಮ ಕ್ಷೇತ್ರದಲ್ಲಿ ಸದಾ ಸಕ್ರೀಯರಾಗಿದ್ದುಕೊಂಡು ಬೇಜವಾಬ್ದಾರಿಯಿಂದ ನಡೆದುಕೊಳ್ಳುವ ಇಲಾಖೆ ಅಧಿಕಾರಿಗಳಿಗೆ ಕ್ಲಾಸ್ ತೆಗೆದುಕೊಳ್ಳುವ ಕಂದಾಯ ಸಚಿವ ಕೃಷ್ಣ ಭೈರೇಗೌಡ( (Krishna Byre Gowda) ವಿರುದ್ಧ ಗಂಭೀರ ಆರೋಪ ಕೇಳಿ ಬಂದಿದೆ.

ಸಚಿವರು ಅಧಿಕಾರ ದುರ್ಬಳಕೆ ಮಾಡಿಕೊಂಡು ನಕಲಿ ದಾಖಲೆ ಸೃಷ್ಟಿಸಿ ಬರೋಬ್ಬರಿ 21 ಎಕರೆ ಜಮೀನು ಕಬಳಿಸಿದ್ದಾರೆ ಎಂದು ಬಿಜೆಪಿ ಮುಖಂಡ ತಮ್ಮೇಶ್ ಗೌಡ ಬೆಳಗಾವಿಯಲ್ಲಿ ಆರೋಪ ಮಾಡಿದ್ದಾರೆ. ಅಲ್ಲದೇ ನಕಲಿ ದಾಖಲೆ ಸೃಷ್ಟಿಸಿ ಭೂ ಕಬಳಿಸಿರುವುದಕ್ಕೆ ಕೆಲ ದಾಖಲೆಗಳನ್ನು ಕೂಡ ಬಿಡುಗಡೆ ಮಾಡಿದ್ದಾರೆ.

ಕೋಲಾರ ಜಿಲ್ಲೆಯ ನರಸುಪುರ ಹೋಬಳಿ ಗರುಡನಪಾಳ್ಯದಲ್ಲಿ 21 ಎಕರೆ ಜಮೀನನ್ನು ಸಚಿವ ಕೃಷ್ಣ ಭೈರೇಗೌಡ ಕಬಳಿಸಿದ್ದಾರೆ. ಅಲ್ಲದೇ ತಮ್ಮ ಸಚಿವ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕರು ಗಂಭೀರ ಆರೋಪ ಮಾಡಿದ್ದಾರೆ.

ಈ ಬಗ್ಗೆ ಮಾಧ್ಯಮಗಳೊಂದಿಗೆ ಮಾತನಾಡಿದದ ಬಿಜೆಪಿ ಮುಖಂಡ ತಮ್ಮೇಶ್ ಗೌಡ ನಕಲಿ ದಾಖಲೆ ಸೃಷ್ಟಿಸಿ ಕಂದಾಯ ಸಚಿವರು ಖರಾಬ್ ಜಮೀನನ್ನು ಅವರ ಹೆಸರಿಗೆ ಮಾಡಿಕೊಂಡಿದ್ದಾರೆ. ಸರ್ಕಾರಿ ಜಮೀನು ಉಳಿಸಲು ಹೋರಾಟ ಮಾಡುತ್ತೇವೆ ಎಂದು ಹೇಳುವ ಅವರ ನಿಯತ್ತು ಏನು ಎಂಬುದು ಈಗ ಹೊರಗೆ ಬಂದಿದೆ. ಮೂಲ ದಾಖಲೆಗಳನ್ನೇ ಫೋರ್ಜರಿ ಮಾಡಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆ. ಈ ಹಗರಣಕ್ಕೆ ಕಂದಾಯ ಸಚಿವರು ಅವರ ಪ್ರಭಾವವನ್ನು ಹೇಗೆ ಬಳಸಿಕೊಂಡರು..? ಭೂ ಕಬಳಿಕೆ ಮಾಡಿರುವ ಕಂದಾಯ ಸಚಿವರು ಆ ಸ್ಥಾನದಲ್ಲಿ ಇರಲು ಅರ್ಹರೇ..? ಎಂದು ಪ್ರಶ್ನಿಸಿ ಕಂದಾಯ ಸಚಿವ ಕೃಷ್ಣ ಭೈರೇಗೌಡ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.












