ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಸದ್ಯ ಸಿಎಂ ಕುರ್ಚಿ ಕದನ ಕೋಲಾಹಲ ಸೃಷ್ಟಿಸಿದೆ. ಈ ಬೆನ್ನಲ್ಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ನಡುವಿನ ಶೀತಲ ಸಮರ ಈಗ ಪೋಸ್ಟರ್ ವಾರ್ ರೂಪ ಪಡೆದುಕೊಂಡಿದೆ.

ನಿನ್ನೆ ಬೆಳಗ್ಗೆ ತಮ್ಮ ಸಾಮಾಜಿಕ ಜಾಲತಾಣದಲ್ಲಿ ತಮ್ಮದೇ ಫೋಟೋ ಇರುವ ಪೋಸ್ಟರ್‌ವೊಂದನ್ನು ಹಂಚಿಕೊಂಡಿದ್ದ ಡಿ.ಕೆ ಶಿವಕುಮಾರ್, ‘ಕೊಟ್ಟ ಮಾತು ಉಳಿಸಿಕೊಳ್ಳುವುದೇ ವಿಶ್ವದಲ್ಲಿರುವ ದೊಡ್ಡ ಶಕ್ತಿ’ ಅಂತ ಬರೆದುಕೊಂಡಿದ್ದರು. ಈ ಮೂಲಕ ಅಧಿಕಾರ ಹಸ್ತಾಂತರದ ವಿಷಯವಾಗಿ ಪರೋಕ್ಷವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಕುಟುಕಿದ್ದರು.

ಡಿಸಿಎಂ ಡಿ.ಕೆ ಶಿವಕುಮಾರ್ ಹಂಚಿಕೊಂಡ ಪೋಸ್ಟರ್ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಈ ಪೋಸ್ಟರ್ ವಿಚಾರ ಎಲ್ಲೆಡೆ ಹರಿದಾಡುತ್ತಿದ್ದಂತೆ ನಿನ್ನೆ ಸಂಜೆ ಸಿಎಂ ಸಿದ್ದರಾಮಯ್ಯ ಅವರ ಖಾತೆಯಿಂದ ಡಿ.ಕೆ ಶಿವಕುಮಾರ್ ಪೋಸ್ಟ್‌ಗೆ ಕೌಂಟರ್ ಕೊಡುವ ರೀತಿ ಪೋಸ್ಟರ್‌ವೊಂದನ್ನು ಹಂಚಿಕೊಳ್ಳಲಾಗಿದೆ.

ʼನಾನು ಮಾತು ಕೊಟ್ಟಿದ್ದು ರಾಜ್ಯದ ಜನರಿಗೆ, ಅದನ್ನ ಈಡೇರಿಸಿದ್ದೇನೆ, ನುಡಿದಂತೆ ನಡೆದಿದ್ದೇನೆʼ ಎಂದಿರುವ ಸಿದ್ದರಾಮಯ್ಯ ʼಜನರ ಜಗತ್ತನ್ನು ಉತ್ತಮಗೊಳಿಸದಿದ್ರೆ ಯಾವ ಮಾತೂ ಶಕ್ತಿಯುತವಲ್ಲʼ ಎಂದಿದ್ದಾರೆ. ಅಲ್ಲದೇ ಚುನಾವಣೆಯ ಸಮಯದಲ್ಲಿ ನೀಡಿದ ಗ್ಯಾರಂಟಿ ಭರವಸೆಯನ್ನು ಉಳಿಸಿಕೊಂಡ ಬಗ್ಗೆ ವಿವರಿಸಿದ್ದು, ನನ್ನ ಮೊದಲ ಅವಧಿಯಲ್ಲಿ (2013-2018) ಕೊಟ್ಟಿದ್ದ 165 ಭರವಸೆಗಳಲ್ಲಿ 157ನ್ನ ಈಡೇರಿಸಿದ್ದೆ. 95ಶೇರಷ್ಟು ಭರವಸೆ ಈಡೇರಿಸಿದ್ದೆ. ಈ ಅವಧಿಯಲ್ಲಿ 593 ಭರವಸೆಗಳಲ್ಲಿ ಈಗಾಗಲೇ 243ಕ್ಕೂ ಹೆಚ್ಚು ಭರವಸೆಗಳನ್ನ ಈಡೇರಿಸಿದ್ದೇನೆ. ಉಳಿದ ಭರವಸೆಗಳನ್ನು ಅದೇ ವಿಶ್ವಾಸಾರ್ಹತೆಯೊಂದಿಗೆ ಈಡೇರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.






