ಬೆಂಗಳೂರು: ರಾಜ್ಯದಲ್ಲಿ ಸಿಎಂ ಕುರ್ಚಿಗಾಗಿ ಕದನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ದೇವರ ಮೊರೆ ಹೋಗಿದ್ದಾರೆ. ಕಳೆದ ವಾರವಷ್ಟೇ ಜೇನುಕಲ್ ಸಿದ್ದೇಶ್ವರಸ್ವಾಮಿ ಉತ್ಸವ ಮೂರ್ತಿಗೆ ಮನೆಯಲ್ಲಿ ಪೂಜೆ ಸಲ್ಲಿಸಿದ್ದ ಡಿ.ಕೆ ಶಿವಕುಮಾರ್ ಇದೀಗ ಹಂದನ ಕೆರೆ ಅಜ್ಜಯ್ಯನ ಗದ್ದುಗೆಗೆ ವಿಶೇಷ ಪೂಜೆ ಹಮ್ಮಿಕೊಂಡಿದ್ದಾರೆ.

ಈ ಹಿಂದೆ ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಮುನ್ನ ಪೂಜೆ ಸಲ್ಲಿಸಿದ್ದ ಹಾಸನದ ಅರಸೀಕೆರೆ ತಾಲೂಕಿನ ಯಾದಪುರದಲ್ಲಿರುವ ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿ ಮೊರೆ ಹೋಗಿದ್ದ ಡಿ.ಕೆ ಶಿವಕುಮಾರ್, ಶ್ರೀ ಜೇನುಕಲ್ ಸಿದ್ದೇಶ್ವರಸ್ವಾಮಿಯ ಉತ್ಸವಮೂರ್ತಿಯನ್ನು ಬೆಂಗಳೂರಿನ ನಿವಾಸಕ್ಕೆ ಕರೆಸಿಕೊಂಡು ಪೂಜೆ ಸಲ್ಲಿಸಿದ್ದರು.

ಈ ಬೆನ್ನಲ್ಲೇ ಇದೀಗ ತಮ್ಮ ಸದಾಶಿವನಗರದ ನಿವಾಸಕ್ಕೆ ಹಂದನ ಕೆರೆ ಅಜ್ಜಯ್ಯನ ಗದ್ದುಗೆಯನ್ನು ಕರೆಸಿಕೊಂಡಿರುವ ಡಿ.ಕೆ ಶಿವಕುಮಾರ್, ಕುಟುಂಬ ಸಮೇತರಾಗಿ ಪೂಜೆ ನೆರವೇರಿಸಿದ್ದಾರೆ. ಒಟ್ಟಾರೆಯಾಗಿ ತೆರೆ ಮರೆಯಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಪಟ್ಟು ಹಿಡಿದಿರುವ ಡಿ.ಕೆ ಶಿವಕುಮಾರ್, ತಮ್ಮ ಆಸೆಯ ಭಾರವನ್ನು ಕಾಂಗ್ರೆಸ್ ಹೈಮಾಂಡ್ ಹಾಗೂ ದೇವರ ಮೇಲೆ ಹಾಕಿದ್ದಾರೆ.











