ಬೆಂಗಳೂರು: ಮೆಟ್ರೋ ಟ್ರೈನ್ ಬ್ಲಾಸ್ಟ್ ಮಾಡುವುದಾಗಿ ಬೆದರಿಕೆ ಇಮೇಲ್ ಮಾಡಿದ್ದ ವ್ಯಕ್ತಿಯನ್ನು ವಿಲ್ಸನ್ ಗಾರ್ಡನ್ ಠಾಣಾ ಪೊಲೀಸರು ಬಂಧಿಸಿದ್ದಾರೆ.

ನಗರದ ಕಾಡುಗೋಡಿ ನಿವಾಸಿ B.S.ರಾಜು ಬಂಧಿತ ಆರೋಪಿಯಾಗಿದ್ದಾನೆ. ವಿಚಾರಣೆ ವೇಳೆ ಈತ ಮಾನಸಿಕ ಅಸ್ವಸ್ಥನಂತೆ ವರ್ತನೆ ಹಿನ್ನಲೆ, ನಿಮ್ಹಾನ್ಸ್ ಆಸ್ಪತ್ರೆಗೆ ಪರಿಶೀಲಿಸಿ ಚಿಕಿತ್ಸೆಗೆ ಕಳುಹಿಸಲಾಗಿದೆ. ಇನ್ನು
15 ವರ್ಷಗಳ ಹಿಂದೆ ಪತ್ನಿಯಿಂದ ವಿಚ್ಚೇದನ ಪಡೆದು ರಾಜು ಪ್ರತ್ಯೇಕವಾಗಿ ವಾಸವಿದ್ದ ಎನ್ನುವುದು ಗೊತ್ತಾಗಿದೆ.

ನವೆಂಬರ್ 14 ರ ರಾತ್ರಿ 11.30 ರ ಸುಮಾರಿಗೆ BMRCL ಅಧಿಕೃತ ಇಮೇಲ್ ಗೆ “ನನ್ನ ವಿಚ್ಛೇದಿತ ಪತ್ನಿಗೆ ಮೆಟ್ರೋ ಸಿಬ್ಬಂದಿ ಕಿರುಕುಳ ಕೊಡ್ತಿದ್ದಾರೆ. ನಿಮ್ಮ ಒಂದು ಮೆಟ್ರೋ ನಿಲ್ದಾಣ ಬ್ಲಾಸ್ಟ್ ಮಾಡಬೇಕಾಗುತ್ತೆ. ನಾನು ಒಬ್ಬ ಉಗ್ರಗಾಮಿ ಇದ್ದಂತೆ, ಅದರಲ್ಲೂ ಕನ್ನಡಿಗರ ವಿರುದ್ಧ ಎಂದು ಸಂದೇಶ ಬಂದಿತ್ತು. ಈ ಇಮೇಲ್ ಪರಿಶೀಲನೆ ನಡೆಸಿದ ಬಿಎಂಆರ್ ಸಿಎಲ್ ಅಧಿಕಾರಿ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿದ್ದ ಪೊಲೀಸರು ಆರೋಪಿ ಬಂಧಿಸಿದ್ದಾರೆ.












