
ವಾಸ್ತವದಲ್ಲಿ ಪ್ರತಿಯೊಬ್ಬರ ಬದುಕಿನ ನಿಜಗುಣವೇ ಬದಲಾವಣೆ. ಈ ಪ್ರಪಂಚದಲ್ಲಿ ನಮ್ಮ ನಿರೀಕ್ಷೆಗಳು ಅವು ಏನೇ ಇರಲಿ, ಅವು ಈಡೇರಲಿ ಅಥವಾ ಈಡೇರದೆಯೇ ಇರಲಿ ಅವುಗಳ ಮಧ್ಯೆ ಇದ್ದು ಅವುಗಳನ್ನು ಮೀರಿ ಸಾಗುವುದೇ ನಿಜವಾದ ಬದುಕು.
ಮನುಷ್ಯ ತನ್ನಲ್ಲಿ ತಾನು ಅಂತರ್ಮುಖಿಯಾಗಿದ್ದುಕೊಂಡು ತನ್ನನ್ನು ಮತ್ತು ತನ್ನ ಬದುಕನ್ನು ಸ್ಪಷ್ಟವಾಗಿ ಅರ್ಥ ಮಾಡಿಕೊಂಡಲ್ಲಿ, ಬಾಹ್ಯ ಪ್ರಪಂಚದಲ್ಲಿನ ಏಳುಬೀಳುಗಳು ಮನಸ್ಸನ್ನು ಎಂದಿಗೂ ವಿಚಲಿತಗೊಳಿಸುವುದಿಲ್ಲ.

ಸಾಮಾನ್ಯವಾಗಿ ಮನುಷ್ಯನಿಗೆ ಒಂಟಿತನ ಕಾಡುವಾಗ, ಮನಸ್ಸು ಬಾಹ್ಯ ಪ್ರಪಂಚದ ನಂಟಿಗಾಗಿ ಹಾತೊರೆಯುತ್ತಿರುತ್ತದೆ. ಇಂತಹ ಸ್ಥಿತಿಯಲ್ಲಿ ಒಂದುವೇಳೆ ಪ್ರಪಂಚ ನಮ್ಮನ್ನು ಕೈಬಿಟ್ಟಿದೆ ಅಂತ ಅನ್ನಿಸಿದರೆ ಸಾಕು ನಮ್ಮ ಮನಸ್ಸು ತೀವ್ರ ಹತಾಶೆಯಿಂದ ಖಿನ್ನತೆಗೆ ಒಳಗಾಗಬಹುದು.
ನಮಗೆ ಮೊದಲ ಹಾಗು ನಿಜವಾದ ಆಪ್ತ ಸ್ನೇಹಿತ ಎನ್ನಬಹುದಾದ ಪ್ರಕೃತಿಯಲ್ಲಿರುವ ಸಸ್ಯ ಮತ್ತು ಪ್ರಾಣಿ ಸಂಕುಲಗಳು ಕಲಿಸುವ ಅಮೂಲ್ಯ ಜೀವನಪಾಠಗಳನ್ನು ನಾವು ಸಂಪೂರ್ಣವಾಗಿ ಅರ್ಥ ಮಾಡಿಕೊಂಡಿಲ್ಲ. ನಮಗೆ ಪ್ರಕೃತಿ ಅನ್ನೋದು ಇನ್ನೂ ನಿಗೂಢವಾಗಿಯೇ, ವಿಸ್ಮಯವಾಗಿಯೇ ಉಳಿದಿದೆ.
ಜೀವನದುದ್ದಕ್ಕೂ ನಮ್ಮೆಡೆಗೆ ಬಂದದ್ದನ್ನು ಬಂದಹಾಗೆಯೇ ಸ್ವೀಕರಿಸಿ ಮುಂದುವರಿಯುವುದನ್ನು ಕಲಿಯಬೇಕು. ಎಲೆ ಉದುರುತ್ತದೆ. ಮರ ಸಂಪೂರ್ಣವಾಗಿ ಬೋಳಾಗುತ್ತದೆ. ಆದರೆ ವಸಂತದಲ್ಲಿ ಮತ್ತೆ ಚಿಗುರೊಡೆದು ನಳನಳಿಸುತ್ತದೆ. ಉದುರಿದ ಎಲೆಗಾಗಿ ಮರ ವ್ಯರ್ಥಾಲಾಪ ಮಾಡುವುದಿಲ್ಲ. ಕಾದು ನಿಂತು ವಸಂತದಲ್ಲಿ ಮತ್ತೆ ಚಿಗುರುತ್ತದೆ.
ನಮಗೆ ದುಃಖವಾದಾಗ ಅತ್ತು ಬಿಡಬೇಕು. ನಮಗೆ ದುಃಖವಾಗಿದೆ ಎಂದು ಒಪ್ಪಿಕೊಳ್ಳಬೇಕು. ಆಗ ನಮಗೆ ಮುಂದಿನ ದಾರಿ ಹೊಳೆಯುತ್ತದೆ. ಉದುರಿದ ಎಲೆ ಚಿಗುರೊಡೆಯುವುದಕ್ಕಾಗಿ ಕಾಯಬೇಕು ಎಂಬುದು ಅರಿವಾಗುತ್ತದೆ. ಇಲ್ಲವಾದರೆ ಸಾವಿಲ್ಲದ ಮನೆಯ ಸಾಸಿವೆಯ ಹುಡುಕಾಟದಲ್ಲಿ ನಮ್ಮನ್ನು ನಾವೇ ಕಳೆದುಕೊಳ್ಳುತ್ತೇವೆ.

ಜೀವನದಲ್ಲಿ ನೆಮ್ಮದಿಯಿಂದಿದ್ದರೆ, ನಮ್ಮ ಆರೋಗ್ಯವು ಉತ್ತಮವಾಗಿರುತ್ತದೆ. ಅಂದರೆ ನಮ್ಮ ಮಾನಸಿಕ ನೆಮ್ಮದಿ ಚೆನ್ನಾಗಿಲ್ಲದೆ ಹೋದಲ್ಲಿ ನಮ್ಮ ಆರೋಗ್ಯದ ಮೇಲೆ ಅದು ಕೆಟ್ಟ ಪರಿಣಾಮ ಬೀರುವುದರಲ್ಲಿ ಯಾವುದೇ ರೀತಿಯ ಸಂಶಯವಿಲ್ಲ. ನಮ್ಮ ಮಾನಸಿಕ ಸಮತೋಲನವನ್ನು ಕಾಪಾಡುವುದಕ್ಕೆ ಏನೇ ಆದರೂ ಜೀವನದಲ್ಲಿ ನಾವು ನೆಮ್ಮದಿಯಾಗಿರಬೇಕು.
ನಮ್ಮ ಜೀವನದಲ್ಲಿ ನಮ್ಮ ಗುರಿಯನ್ನು ತಲುಪಲು ಎಂತಹ ಸಾಹಸಕ್ಕಾದರುನಾವು ಕೈ ಹಾಕುತ್ತೇವೆ. ಕಷ್ಟ ಪಡುತ್ತೇವೆ. ಸಾಧಿಸುತ್ತೇವೆ ಕೂಡಾ. ಆ ಸಾಧನೆಗಾಗಿ ರಾತ್ರಿ ಹಗಲು ಶ್ರಮ ಪಡುತ್ತೇವೆ. ದಿನನಿತ್ಯ ಸಾಧನೆಗಾಗಿ ಒತ್ತಡ ಸಹಿತ ಬದುಕಿನ ಮಧ್ಯೆ ಜೀವಿಸುತ್ತಿದ್ದೇವೆ. ಆದರೆ, ಸಾಧಿಸಿದಾಗ ಅಂತಿಮವಾಗಿ ದೊರೆಯುವುದು ತೃಪ್ತಿಯೇ ಹೊರತು ನೆಮ್ಮದಿ ಮಾತ್ರ ಮರೀಚಿಕೆ.

ಆದುನಿಕ ಯುಗದಲ್ಲಿ ನಾವು ವ್ಯಕ್ತಿಗಳನ್ನು ಪ್ರೀತಿಸುವ ಬದಲು ವಸ್ತುಗಳನ್ನು ಪ್ರೀತಿಸುತ್ತಿದ್ದೇವೆ. ಸಂಬಂಧಗಳ ಪರಿಕಲ್ಪನೆ ಬದಲಾಗುತ್ತಿದೆ. ಎಲ್ಲರ ಜೀವನವೂ ಯಾಂತ್ರಿಕವಾಗುತ್ತಿದೆ. ನಮ್ಮ ಜೀವನದ ಸುಧೀರ್ಘ ಪ್ರಯಾಣದಲ್ಲಿ ನಾವು ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತೇವೆ ಎಂಬುವುದರ ಮೇಲೆ ನಮ್ಮ ನೆಮ್ಮದಿ ಇದೆ. ನಮ್ಮವರೊಂದಿಗೆ ಸಮಯ ಕಳೆದು ನಗುನಗುತ್ತಾ ಮಾತನಾಡಲು ನಮ್ಮಲ್ಲಿ ಸಮಯವಿಲ್ಲ. ನಮ್ಮವರಿಗೆ ನಾವೇ ಪರಕೀಯರಾಗುತ್ತಿದ್ದೇವೆ. ಯಾಂತ್ರಿಕ ಬದುಕಿನೊಂದಿಗಿನ ನಮ್ಮ ಜೀವನಕ್ಕೆ ನೆಮ್ಮದಿ ಸಿಗಲು ಸಾಧ್ಯವೇ?.

ನಮ್ಮ ಮನಸ್ಸಿನಲ್ಲಿ ಚಿಂತೆಗಳ ಸರಮಾಲೆಯ ಯುದ್ಧ ಸದಾ ನಡೆಯುತ್ತಿರುತ್ತದೆ. ಚಿಂತೆಗೆ ಕೊನೆ ಎಂಬುದಿದೆಯೇ? ಚಿಂತೆಗೂ ಚಿತೆಗೂ ಒಂದು ಸಣ್ಣ ವ್ಯತ್ಯಾಸ ಚಿತೆ ಇಡೀ ದೇಹವನ್ನು ಸುಟ್ಟರೆ, ಚಿಂತೆ ನಮ್ಮ ಇಡೀ ಜೀವನವನ್ನೇ ಹಂತ ಹಂತವಾಗಿ ನಾಶ ಮಾಡುತ್ತದೆ. ನಮ್ಮ ನಮ್ಮಲ್ಲೇ ಪರಕೀಯ ಭಾವನೆ. ಆಗೊಂದು ಕಾಲದಲ್ಲಿ ಕೂಡು ಕುಟುಂಬ ಪದ್ಧತಿ ಇತ್ತು. ಸಾಯಂಕಾಲ ಆದರೆ ಸಾಕು ಎಲ್ಲರೂ ಸೇರಿ ಕಷ್ಟ-ಸುಖಗಳನ್ನು ಹಂಚಿಕೊಳ್ಳುತ್ತಾ ಮನಸ್ಸಿಗೆ ಮುದ ನೀಡುವಂತಹ ಆಟಗಳನ್ನು ಆಡುತ್ತಾ ತಮ್ಮ ಜೀವನದಲ್ಲಿ ನೆಮ್ಮದಿ ಕಾಣುತ್ತಲಿದ್ದರು. ಆದರೆ ಕಾಲಕ್ರಮೇಣ ಅನೇಕ ಬದಲಾವಣೆಗಳು ಆಗುತ್ತಾ ಕೂಡು ಕುಟುಂಬ ಕಿರಿ ಕಿರಿ ಅನ್ನುವ ಮಟ್ಟಕ್ಕೆ ಇಂದು ಬಂದು ನಿಂತಿದ್ದೇವೆ.
ನೆಮ್ಮದಿ ಸಿಗುವಂತಹ ಅನೇಕ ಸೌಲಭ್ಯಗಳು ನಮ್ಮ ಸುತ್ತಮುತ್ತಲೇ ಇದೆ. ಆದರೆ, ಹುಡುಕುವ ಪ್ರಯತ್ನದಲ್ಲಿ ಹಾಗು ನಮ್ಮನ್ನು ನಾವು ಅರ್ಥ ಮಾಡಿಕೊಳ್ಳುವುದರಲ್ಲಿ ನಾವು ಸೋಲುತ್ತಾ ಇದ್ದೇವೆ. ನಮ್ಮ ಮನಸ್ಸನ್ನು ಕೆಟ್ಟ ಯೋಚನೆಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ. ನೆಮ್ಮದಿ ಸಿಗಲು ಹಲವಾರು ಅವಕಾಶಗಳು ನಮ್ಮ ಕಣ್ಣ ಮುಂದಿವೆ. ನಮ್ಮ ಮನಸ್ಸನ್ನು ಹಾಗು ನಮ್ಮ ಕಣ್ಣನ್ನು ತೆರೆದು ನೋಡಿದಾಗ ಪ್ರಪಂಚ ಎಷ್ಟು ಸುಂದರವಾಗಿದೆ ಎಂದು ಅನಿಸದೆ ಇರಲಾರದು.
ಬದಲಾಗಲೇಬೇಕು. ಬದಲಾವಣೆ ಜಗದ ನಿಯಮ. ನಾವು ನಮಗಾಗಿ, ನಮ್ಮವರಿಗಾಗಿ, ಬದಲಾವಣೆ ಆಗಲೇಬೇಕು. ನಮ್ಮನ್ನು ನಾವು ಪ್ರೀತಿಸಬೇಕು. ದಿನದಲ್ಲಿ ಸ್ವಲ್ಪ ತಾಸು ನಮ್ಮವರಿಗಾಗಿ ಮೀಸಲಿಡಬೇಕು ಮನಸ್ಸು ಬಿಚ್ಚಿ ಮಾತಾಡಬೇಕು ಹಾಗು ಮನಸ್ಸನ್ನು ಹಗುರವಾಗಿಸಿಕೊಳ್ಳಬೇಕು. ನೆಮ್ಮದಿ ಇರುವುದು ಪ್ರಾಪಂಚಿಕ ಸುಖಗಳಿಂದಲ್ಲ. ನಮ್ಮ ಮಾನಸಿಕ ಸ್ವಾಸ್ಥ್ಯದಿಂದ. ನಮ್ಮ ಸುತ್ತಮುತ್ತ ನಮ್ಮ ಮನಸ್ಸಿಗೆ ಕಿರಿಕಿರಿ ನೀಡುವಂತಹ ಹಲವಾರು ಘಟನೆಗಳು ಜರುಗುವ ಸಾಧ್ಯತೆಗಳಿವೆ. ಆದರೆ ನಾವು ಅದನ್ನು ನೋಡುವ ದೃಷ್ಟಿಕೋನಗಳು ಬದಲಾಗಬೇಕು. ಇಲ್ಲವೆಂದರೆ ಅದನ್ನು ಅಲ್ಲಿಯೇ ಮರೆತು ಮುಂದೆ ಸಾಗಬೇಕು. ನೆಮ್ಮದಿಯ ಹುಡುಕಾಟವನ್ನು ಹೊರಗಿನಿಂದ ಮಾಡುವುದು ವ್ಯರ್ಥ ಹಾಗಾಗಿ ಅದು ಕೊನೆಯಾಗಲಿ.
“ಮನುಷ್ಯ ನೆಮ್ಮದಿಯಿಂದ ಇರಬೇಕಾದರೆ ಆರ್ಥಿಕ ಸ್ಥಿತಿ ಚೆನ್ನಾಗಿ ಇರಬೇಕು ಅಂತ ಇಲ್ಲ. ಮನಸ್ಥಿತಿ ಚೆನ್ನಾಗಿದ್ದರೆ ಸಾಕು”
ಎಂತಹ ಕಷ್ಟದ ಪರಿಸ್ಥಿತಿಯ ಸುಳಿಗೆ ಸಿಲುಕಿಕೊಂಡರೂ ಸಹ ಬದುಕಿಗೊಂದು ಅರ್ಥ ಇದ್ದೇ ಇರುತ್ತದೆ. ಜೀವಿಸುವುದಕ್ಕೆ ಇರುವ ಪ್ರೇರಣೆಯೆಂದರೆ ಈ ಬದುಕಿನೊಳಗೆ ಅರ್ಥವನ್ನು ಹುಡುಕುವುದು. ಈ ಅರ್ಥ ಎಂಬುದು ಪ್ರತಿಯೊಬ್ಬರೂ ತಮ್ಮಲ್ಲಿ ತಾ ವುಕಂಡುಕೊಳ್ಳಬೇಕಾದದ್ದು. ಯಾರೋ ಕಂಡಿದ್ದನ್ನು ಇನ್ನೊಬ್ಬರು ಹಂಚಿಕೊಳ್ಳಲು ಆಗುವುದಿಲ್ಲ. ನಾವು ಏನು ಮಾಡುತ್ತೇವೆಯೇ, ಯಾವ ಅನುಭವಕ್ಕೆ ಪಕ್ವವಾಗುತ್ತೇವೆಯೋ ಅದರಲ್ಲಿ ಅರ್ಥವನ್ನು ಕಂಡುಕೊಳ್ಳುವ ಸ್ವಾತಂತ್ರ್ಯ ನಮಗಿರುತ್ತದೆ. ಕೊನೆಯ ಪಕ್ಷ ಆ ಸನ್ನಿವೇಶದ ಕುರಿತು ನಿಲುವು ತೆಗೆದುಕೊಳ್ಳುವ ಅವಕಾಶ ನಮಗಿರುತ್ತದೆ. ಅದನ್ನು ಬದುಕಿನ ಶೋಧನೆ ಎಂದು ತಿಳಿದುಕೊಳ್ಳಬೇಕು.

ಬದುಕಿನಲ್ಲಿ ನೆಮ್ಮದಿಯ ನಿಜವಾದ ಅರ್ಥದ ಹುಡುಕಾಟಕ್ಕೆ ತಡೆಯಾದರೆ ಮಾನಸಿಕ ಕುಸಿತವುಂಟಾಗುತ್ತದೆ. ಹಾಗಿದ್ದರೆ ಅದನ್ನು ಹುಡುಕಿಕೊಳ್ಳುವ ದಾರಿಗಳೇನು? ನಾವು ಮಾಡುವ ಕೆಲಸ ಹಾಗೂ ಮಾಡುವ ಕೆಲಸದ ಉದ್ದೇಶವನ್ನು ಸೃಷ್ಟಿಸಿಕೊಳ್ಳುವುದರ ಮೂಲಕ, ಯಾವುದೋ ಒಂದನ್ನು ಅನುಭವಿಸುವುದರ ಮೂಲಕ, ಮತ್ತೊಬ್ಬರಿಗೆ ಪ್ರೇರಣೆ ನೀಡುವುದರ ಮೂಲಕ ಬದುಕುವ ಬದುಕು ನಮ್ಮದಾಗಿರಬೇಕು. ಮನುಷ್ಯನಿಂದ ಎಲ್ಲವನ್ನೂ ಕಸಿದುಕೊಳ್ಳಬಹುದು ಆದರೆ ಒಂದು ಸಂದರ್ಭ/ಸನ್ನಿವೇಶದ ಕುರಿತು ನಾವು ತಳೆಯುವ ದೃಷ್ಟಿಕೋನವನ್ನು ಯಾರೂ ಕಸಿಯಲಾಗದು. ನೋವಿಗೆ, ಕಷ್ಟಪಡುವುದಕ್ಕೆ ಒಂದು ಉದ್ದೇಶವಿದೆ ಎಂದು ಅರಿವಾದ ಕೂಡಲೇ ಕಷ್ಟ ಅನ್ನೋದು ಕಷ್ಟಕರವಾಗಿದೆ ಎಂದೆನಿಸುವುದಿಲ್ಲ.
ನವೀನ ಹೆಚ್ ಎ
ಹನುಮನಹಳ್ಳಿ
ಕೆ ಆರ್ ನಗರ