ಇದೇ ವರ್ಷದ ನವೆಂಬರ್ ನಲ್ಲಿ ಬಿಹಾರದ (Bihar) ವಿಧಾನಸಭೆ ಚುನಾವಣೆ (Assembly election) ನಡೆಯಲಿದ್ದು, ಇದಕ್ಕೂ ಮುನ್ನ ಮತದಾರರ ಪಟ್ಟಿ (Voter list) ಪರಿಷ್ಕರಣೆಗೆ ಮುಂದಾಗಿದ್ದ ಚುನಾವಣಾ ಆಯೋಗದ ನಡೆಗೆ ಇಂಡಿಯಾ ಮೈತ್ರಿ ಕೂಟದ ಪಕ್ಷಗಳು ವ್ಯಾಪಕ ವಿರೋಧ ವ್ಯಕ್ತಪಡಿಸಿದ್ದವು.

ಇದಾದ ಬಳಿಕ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಬಿಜೆಪಿ ಹಾಗೂ ಚುನಾವಣಾ ಆಯೋಗದ ವಿರುದ್ಧ ಮತಗಳುವು ಆರೋಪ ಮಾಡಿ ಹೊಸ ಬಾಂಬ್ ಸಿಡಿದಿದ್ದರು. ಈ ಮಧ್ಯೆ ಇದೀಗ ಮತ್ತೊಂದು ವಿಲಕ್ಷಣ ಅಂಶ ಬೆಳಕಿಗೆ ಬಂದಿದೆ.

ಇನ್ನೂ ಜೀವಂತ ಇರುವ 7 ಮಂದಿ ಮತದಾರರನ್ನ ಚುನಾವಣಾ ಆಯೋಗ ಮತದಾರರ ಪಟ್ಟಿಯಿಂದ ಕೈಬಿಟ್ಟಿರುವುದಷ್ಟೇ ಅಲ್ಲದೇ ಅವರನ್ನು ಸತ್ತ ಮತದಾರ ಪಟ್ಟಿಗೆ ಸೇರಿಸಲಾಗಿದೆ. ಈ 7 ಮಂದಿಯನ್ನ ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ ಭೇಟಿ ಮಾಡಿದ್ದು, ಅವರೊಂದಿಗೆ ಚಹಾ ಸೇವಿಸಿ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ.

ನನಗೆ ಅನೇಕ ಆಸಕ್ತಿದಾಯಕ ಅನುಭವಗಳಿವೆ. ಆದರೆ ನಾನು ಸತ್ತ ಜನರೊಂದಿಗೆ ಹಿಂದೆಂದೂ ಚಹಾ ಸೇವಿಸಿಲ್ಲ. ಈ ವಿಶಿಷ್ಟ ಅನುಭವಕ್ಕಾಗಿ, ಚುನಾವಣಾ ಆಯೋಗಕ್ಕೆ ಧನ್ಯವಾದಗಳು ಎಂದು ರಾಹುಲ್ ಗಾಂಧಿ X ನಲ್ಲಿ ವ್ಯಂಗ್ಯವಾಡಿದ್ದಾರೆ.











